ಗೋವುಗಳಿಗೆ ಇ-ಬೇಲಿ
-ಅರ್ಶದ್ ಹುಸೇನ್ ಎಂ.ಹೆಚ್.
ಬೆಳೆಗಾರರಿಗೆ, ರೈತರಿಗೆ ಬೆಳೆ ಬೆಳೆಯುವುದಕ್ಕಿಂತ ಬೆಳೆದ ಬೆಳೆಯ ರಕ್ಷಣೆಯ ಹೊರೆಯೇ ಹೆಚ್ಚು. ಗದ್ದೆ-ತೋಟಗಳಿಗೆ ಧಾಳಿಯಿಡುವ ಪ್ರಾಣಿಗಳನ್ನು ತಡೆಯಲು ರೈತರು ತೆಗೆದುಕೊಳ್ಳುವ ಕ್ರಮ ಒಂದೆರೆಡಲ್ಲ. ಮುಳ್ಳು ಬೇಲಿ, ತಂತಿ ಬೇಲಿ, ಕಲ್ಲಿನ ಬೇಲಿ, ಪಾಪಾಸುಕಳ್ಳಿಯ ಬೇಲಿ ಇನ್ನೂ ಹತ್ತು-ಹಲವಾರು ತರಹದ ರಕ್ಷಣಾ ಕೋಟೆಗಳನ್ನು ಕಟ್ಟಿದರೂ ಕೆಲವೊಮ್ಮೆ ಜಾನುವಾರುಗಳು ಎಲ್ಲೋ ಒಂದೆಡೆ ನುಸುಳಲು ಮಾರ್ಗ ಹುಡುಕಿ ನುಗ್ಗಿಯೇ ನುಗ್ಗುತ್ತವೆ. ತೋಟಗಳಿಗೆ ಧಾಳಿಯಿಡುವ
ಮಂಗಗಳಿಗಂತೂ ಎಷ್ಟೆತ್ತರ ಬೇಲಿಯಿದ್ದರೂ ನಿರರ್ಥಕ. ಎಷ್ಟೆಂದರೂ ಮಂಗ, ಯಾವ ಮರವನ್ನಾದರೂ ಏರಿ ತೋಟಕ್ಕೆ ನುಗ್ಗಿ
ಬೆಳೆ ಹಾಳುಮಾಡುವುದರಲ್ಲಿ ಎತ್ತಿದ ಕೈ. ಕಾಡುಹಂದಿಗಳು ಗದ್ದೆಗೆ ನುಗ್ಗಿ ತಿನ್ನುವುದಕ್ಕಿಂತ ಹೊರಳಾಡಿ ಬೆಳೆಯ ನಾಶ ಮಾಡುವುದೇ ಹೆಚ್ಚು. ರೈತರು ತಮ್ಮ ಸಾಮರ್ಥ್ಯಕ್ಕೆ ಸಾಧ್ಯವಾದಷ್ಟು ಪ್ರಯತ್ನ ನಡೆಸಿದ್ದರೂ ಕಡೆಗೆ ಕೈಗೆ ಬರುವ ಬೆಳೆ ಇವು ತಿಂದು ಉಳಿಸಿದ್ದು ಮಾತ್ರ. ಗದ್ದೆಗೆ ಧಾಳಿಯಿಡುವ ಪ್ರಾಣಿಗಳನ್ನು ಹೆದರಿಸಿ ಓಡಿಸಲು ಹೂಡುವ ತಂತ್ರಗಳು ಒಂದೇ ಎರೆಡೇ? ಹಳೆಯ ಅಂಗಿಯೊಳಕ್ಕೆ ಹುಲ್ಲು ತುಂಬಿ ಮಡಕೆಮುಖವಿಟ್ಟು ಹೆದರಿಸುವ ಬೆರ್ಚಪ್ಪ ಮಾಡುವುದು, ಉದ್ದನೆಯ ತಂತಿಯೊಂದನ್ನು ಹೊಲದ ನಡುವೆ ನೆಟ್ಟಿರುವ ಕಂಬಕ್ಕೆ ಕಟ್ಟಿ ಕಂಬದ ತುದಿಯಲ್ಲೊಂದು ಹಳೆ ಸೀಮೆಯೆಣ್ಣೆ ಡಬ್ಬ ಕಟ್ಟಿ ಅದರೊಳಕ್ಕೆ ಒಂದು ಕಲ್ಲಿಟ್ಟು ಪ್ರಾಣಿ ಬಂದಿರುವ ಅನುಮಾನ ಬಂದರೆ ತಂತಿಯನ್ನು ಅಲ್ಲಾಡಿಸಿ ಡಬ್ಬದಲ್ಲಿರುವ ಕಲ್ಲು ಡಬಡಬ ಶಬ್ದ ಬರುವಂತೆ ಮಾಡಿ ಪ್ರಾಣಿಗಳನ್ನು ಓಡಿಸುವುದು, ಉರುಳು ಹಾಕುವುದು, ಸಿಡಿ ಕಟ್ಟುವುದು ಮುಂತಾದ ಹಿಂಸಾತ್ಮಕ ಮಾರ್ಗಗಳು ಪ್ರಾಣಿಗಳನ್ನು ಒಳಬರದಂತೆ ತಡೆಯುವಲ್ಲಿ ಫಲಕಾರಿಯಾದರೂ ಬೆಳೆದವನಿಗೆ ನಿರಾತಂಕ ನಿದ್ದೆ ಕೊಡುವಲ್ಲಿ ಸಫಲವಾಗಿಲ್ಲ.
ಕಳೆದ ಐದಾರು ವರ್ಷಗಳಿಂದ ಫಲಕಾರಿಯಾಗುತ್ತಿರುವ ಐಬೆಕ್ಸ್ ಬೇಲಿ ಪ್ರಾಣಿಗಳನ್ನು ಓಡಿಸಲು ಒಂದು ಸೂಕ್ತ ಉಪಕರಣ. ಡಿ.ಸಿ. ಬ್ಯಾಟರಿಗಳಿಂದ ವಿದ್ಯುತ್ ಸಂಪರ್ಕ ಪಡೆದಿರುವ ಬೇಲಿ ಪ್ರಾಣಿಗಳ ಸ್ಪರ್ಶವಾಗುತ್ತಲೇ ಒಂದು ಚಿಕ್ಕ ವಿದ್ಯುತ್ ಆಘಾತ ನೀಡಿ ಓಡಿಸುವಂತೆ ಮಾಡುತ್ತದೆ. ಪ್ರಯೋಜನಕಾರಿ ವಿಧಾನವಾದರೂ ಇದರ ಅಳವಡಿಸುವಿಕೆ ಮತ್ತು ನಿರ್ವಹಣೆ ದುಬಾರಿ. ಇದಕ್ಕೆಂದೇ ಪ್ರತ್ಯೇಕವಾದ ಕಲ್ಲುಕಂಭಗಳನ್ನು ನೆಟ್ಟು ಪ್ರತ್ಯೇಕ ತಂತಿಗಳನ್ನೆಳೆದು, ಅಪಾಯದ ಫಲಕಗಳನ್ನು ಅಳವಡಿಸಿ ಬ್ಯಾಟರಿಗಳನ್ನು ಜೋಡಿಸುವ ವೇಳೆಗೆ ತಗಲುವ ಖರ್ಚು ಹೆಚ್ಚೇ ಆಗಿರುತ್ತದೆ. ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಸಾಕು ಪ್ರಾಣಿಗಳು, ಮಕ್ಕಳು ಅರಿವಿಲ್ಲದೆ ಮುಟ್ಟಿ ಆಘಾತ ತಗಲುವ ಅಪಾಯವಿರುತ್ತದೆ. ಅದೂ ಅಲ್ಲದೆ ದಿನಕ್ಕೆ ಹದಿನಾರು ಘಂಟೆ ವಿದ್ಯುತ್ ತೆಗೆಯುವ ನಮ್ಮ ಗ್ರಾಮಗಳಲ್ಲಿ ಬ್ಯಾಟರಿ ಚಾರ್ಜ್ ಮಾಡಲು ವಿದ್ಯುತ್ ಎಲ್ಲಿಂದ?
ಇಂತಹ ಸಮಸ್ಯೆಗಳು ಆಸ್ಟ್ರೇಲಿಯಾದ ಬೆಳೆಗಾರರಿಗೂ ಕಾಡಿರಬೇಕು. ಭಾರತದಂತೆಯೇ ಆಸ್ಟ್ರೇಲಿಯಾದ ಗೋಸಂಪತ್ತು ಸಮೃದ್ಧ. ಅಲ್ಲಿಯೂ ಗೋವುಗಳು ಬೇರೆಯವರ ಬೇಲಿಗೆ ನುಗ್ಗಿ ಹಾವಳಿ ಮಾಡುವುದನ್ನು ತಪ್ಪಿಸಿಕೊಳ್ಳಲು ಸಂಶೋಧಕರು ಆಧುನಿಕ ತಂತ್ರಜ್ಞಾನ ಬಳಸಿ ಒಂದು ಹಂತದಲ್ಲಿ ಫಲಕಾರಿಯಾಗಿದ್ದಾರೆ. ಈ ತಂತ್ರಜ್ಞಾನ ಬಳಸಿ ತಮ್ಮ ಗೋವುಗಳ ಓಡಾಟವನ್ನು ಒಂದು ನಿರ್ದಿಷ್ಟ ವಲಯದೊಳಕ್ಕೆ ಮಾತ್ರ ಸೀಮಿತಗೊಳಿಸುವಂತೆ ಮಾಡುವುದೇ ಇದರ ವೈಶಿಷ್ಟ್ಯ. ಇದಕ್ಕೆ ಅದೃಶ್ಯ ಬೇಲಿ (virtual fence) ಎಂದು ಹೆಸರಿಟ್ಟಿದ್ದಾರೆ.
ಆಸ್ಟ್ರೇಲಿಯಾದ CSIRO ಸಂಶೋಧನಾ ಸಂಸ್ಥೆ ಈ ತಂತಜ್ಞಾನ ರೂಪಿಸಿದೆ. ಈ ತಂತಜ್ಞಾನದ ಮುಖ್ಯ ಬಳಕೆ ಜಿ.ಪಿ.ಎಸ್. (Global Positioning System) ಉಪಗ್ರಹ. ಗ್ರಾಹಕ ತನ್ನ ಹಸುಗಳನ್ನು ಯಾವ ಯಾವ ವಲಯಗಳಲ್ಲಿ ಮಾತ್ರ ಸಂಚರಿಸುವಂತೆ ಮಾಡಬೇಕೋ ಆ ಎಲ್ಲೆಗಳನ್ನು ಜೀ.ಪಿ.ಎಸ್. ಉಪಗ್ರಹ ಭೂಪಟದ ಮೇಲೆ ಗೆರೆಗಳನ್ನೆಳೆದು ಗುರುತಿಸಿಕೊಳ್ಳಬೇಕಾಗುತ್ತದೆ. ನಂತರ ತನ್ನ ಮಂದೆಯ ಪ್ರತಿ ಗೋವಿನ ಕುತ್ತಿಗೆಗೆ ಜಿ.ಪಿ.ಎಸ್. ಎಲೆಕ್ಟ್ರಾನಿಕ್ ಕುತ್ತಿಗೆಪಟ್ಟಿಗಳನ್ನು ಕಟ್ಟಬೇಕಾಗುತ್ತದೆ. ಗೋವುಗಳು ಓಡಾಡುತ್ತಾ ಎಲೆಕ್ಟ್ರಾನಿಕ್ ಬೇಲಿ (ಅದೃಶ್ಯ ಬೇಲಿ) ಇರುವ ಎಲ್ಲೆಯ ಬಳಿ ಬರುತ್ತಿದ್ದಂತೆ ಜಿ.ಪಿ.ಎಸ್. ಒಂದು ಸದ್ದು ಹೊರಡಿಸಿ ಗೋವು ಹಿಂತಿರುಗುವಂತೆ ನಿರ್ದೇಶಿಸುತ್ತದೆ. ಒಂದು ವೇಳೆ ಗೋವು ಇನ್ನೂ ಮುಂದುವರೆದರೆ ಒಂದು ಚಿಕ್ಕ ವಿದ್ಯುತ್ ಆಘಾತ ನೀಡಿ ಮುಂದುವರೆಯದಂತೆ ತಡೆಯುತ್ತದೆ. ಈ ಕುತ್ತಿಗೆಪಟ್ಟಿಯಲ್ಲಿ ಒಂದು ಮೈಕ್ರೊಕಂಟ್ರೋಲರ್ ಚಿಪ್, ಮೆಮೋರಿ ಕಾರ್ಡ್, ಜಿ.ಪಿ.ಎಸ್. ಕಾರ್ಡ್, ರೇಡಿಯೋ ಫ್ರೀಕ್ವೆನ್ಸಿ ಚಿಪ್, ಇತ್ಯಾದಿ ಉಪಕರಣಗಳಿರುತ್ತವೆ. ಈ ಕಾಲರ್ ನಿರಂತರವಾಗಿ ಉಪಗ್ರಹದೊಡನೆ ಸಂಪರ್ಕ ಹೊಂದಿರುತ್ತದೆ. ಮಂದೆಯ ಮಾಲಿಕ ನಿರಾತಂಕವಾಗಿ ತನ್ನ ಮನೆಯಲ್ಲಿಯೇ ಕುಳಿತು ತನ್ನ ಅಷ್ಟೂ ಗೋವುಗಳೆಲ್ಲಿವೆ ಎಂಬ ಸ್ಥಿತಿಯನ್ನರಿಯಬಹುದು.
ಸಧ್ಯಕ್ಕೆ ಇದರ ಮಾತೃಕೆ (ಪ್ರೋಟೋಟೈಪ್) ಸಾದರಪಡಿಸಿರುವ CSIRO ಮುಖ್ಯಸ್ಥೆ ಡಾ. ಕೆರೋಲಿನ್ ಲೀ ಯವರು ‘ಗೋವು ಅದೃಶ್ಯಬೇಲಿಯ ಬಳಿ ಬರುತ್ತಿದ್ದಂತೆ ಎಂತಹ ಸಂಜ್ಞೆಗಳನ್ನು ಕೊಡಬೇಕೆನ್ನುವುದನ್ನು ಇದಕ್ಕೆಂದೇ ವಿಶೇಷವಾಗಿ ರಚಿಸಲಾದ ಸಾಫ್ಟ್‌ವೇರ್ ಮೂಲಕ ನಿರ್ಧರಿಸಲಾಗುತ್ತದೆ. ಸಂಜ್ಞೆಗಳು ಗೋವಿನ ನಡುವಳಿಕೆ ಹಾಗೂ ಅದರ ನಡಿಗೆಯ ವೇಗ ಇತ್ಯಾದಿಗಳನ್ನು ಅವಲಂಬಿಸಿದೆ. ಗೋವುಗಳು ಒಂದು ಘಂಟೆಯಲ್ಲಿಯೇ ತಮ್ಮ ವ್ಯಾಪ್ತಿಯ ಒಳಗಡೆಯೇ ಮೇಯುವುದನ್ನು ಅಭ್ಯಾಸ ಮಾಡಿಕೊಳ್ಳುತ್ತವೆ’ ಎನ್ನುತ್ತಾರೆ. ಇದೇ ಸಂಸ್ಥೆಯ ಸಂಶೋಧಕರಾದ ಡಾ. ಟಿಮ್ ವಾರ್ಕ್ ಅವರು ಗೋವುಗಳನ್ನು ಒಂದು ನಿರ್ಧಿಷ್ಟ ವ್ಯಾಪ್ತಿಯೊಳಕ್ಕೆ ಪ್ರತಿಬಂಧಿಸುವುದು ಮಾತ್ರವಲ್ಲ, ಸೂಕ್ತ ಸಂಜ್ಞೆಗಳನ್ನು ನೀಡುವುದರ ಮೂಲಕ ಅವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಗಳಿಗೆ ಸ್ಥಳಾಂತರಿಸುವುದೂ ಸಾಧ್ಯ ಎನ್ನುತ್ತಾರೆ. ಒಂದು ವೇಳೆ ಬೇಲಿಯನ್ನು ಬದಲಿಸಬೇಕಾದರೆ ಜಿ.ಪಿ.ಎಸ್. ಪರದೆಯ ಮೇಲಿನ ಗೆರೆಗಳನ್ನು ಮಾತ್ರ ಬದಲಿಸಿದರೆ ಸಾಕು ಎನ್ನುತ್ತಾರೆ. ಈ ತಂತ್ರಜ್ಞಾನದಿಂದ ಸಕಲ ಗೋವುಗಳಿಗೆ ಸರಿಯಾದ ಮೇವು ನೀಡುವಲ್ಲಿ, ಇನ್ನೂ ಬೆಳೆದಿರದ ಹುಲ್ಲುಗಾವಲಿಗೆ ಇವುಗಳ ಪ್ರವೇಶ ತಡೆಗಟ್ಟಿ ಸರಿಯಾಗಿ ಬೆಳೆದ ನಂತರವೇ ಗೋವುಗಳ ಪ್ರವೇಶ ನೀಡಿ ಈಗಾಗಲೇ ಮೇದು ಖಾಲಿಯಾದ ಜಾಗಗಳನ್ನು ಪ್ರತಿಬಂಧಿಸಿ ಮೇವು ಬೆಳೆಯುವಂತೆ ಮಾಡುವಲ್ಲಿ ತನ್ಮೂಲಕ ಹೈನು ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸಬಹುದಾಗಿದೆ. ಸಧ್ಯಕ್ಕೆ ಬ್ಯಾಟರಿಗಳಿಂದ ನಡೆಯುವ ಈ ಕುತ್ತಿಗೆಪಟ್ಟಿಗಳು ಬ್ಯಾಟರಿ ಕಳಿಗುಂದಿದಾಗ ಕಾರ್ಯನಿರ್ವಹಿಸದೆ ಗೋವು ಆರಾಮವಾಗಿ ಬೇಲಿ ದಾಟಬಹುದಾಗಿದೆ. ಆದ್ದರಿಂದ ತನ್ನಿಂತಾನೇ ರೀಚಾರ್ಜ್ ಆಗುವ ಸೋಲಾರ್ ಫಲಕಗಳನ್ನು ಅಥವಾ ಗೋವಿನ ಚಲನೆಯನ್ನು ಉಪಯೋಗಿಸಿ ಉತ್ಪಾದಿಸಬಹುದಾದ ವಿದ್ಯುತ್ತನ್ನು ಉಪಯೋಗಿಸಿ ಕಾರ್ಯವೆಸಗುವಂತೆ ಮಾಡುವಲ್ಲಿ ಇನ್ನೂ ಅಭಿವೃದ್ಧಿ ಕಾಣಬೇಕಾಗಿದೆ.
ಸಧ್ಯಕ್ಕೆ ಆಸ್ಟ್ರೇಲಿಯಾದ ಶ್ರೀಮಂತ ರೈತರಿಗೆ ಮಾತ್ರ ಸಾಧ್ಯವಾಗುವಂತೆ ತೋರುವ ಇವು ನಮ್ಮ ರೈತರಿಗೆ ಸರಿಯಾದ ವಿಧಾನವಲ್ಲ. ಈ ವಿಧಾನದಿಂದ ನಮ್ಮ ಗೋವುಗಳಿಗೆ ಕುತ್ತಿಗೆಪಟ್ಟಿ ಹಾಕಿ ಹೊರಹೋಗುವುದನ್ನು ತಡೆಗಟ್ಟಬಹುದೇ ವಿನಃ ಹೊರಗಿನ ಜಾನುವಾರುಗಳಿಗೆ ಕುತ್ತಿಗೆ ಪಟ್ಟಿ ಕಟ್ಟಿ ನಮ್ಮ ಬೇಲಿಯೊಳಕ್ಕೆ ಬರದಂತೆ ತಡೆಗಟ್ಟುವುದು ಅಸಾಧ್ಯವಾದ ಮಾತು. ಆದರೆ ಈ ವಿಧಾನ ನ್ಯಾಶನಲ್ ಪಾರ್ಕ್, ಪ್ರಾಣಿ ಸಂಗ್ರಹಾಲಯ, ಅಭಯಾರಣ್ಯ ಇತ್ಯಾದಿ ಸಂರಕ್ಷಿತ ವಲಯಗಳೊಳಕ್ಕೆ ಪ್ರಾಣಿಗಳನ್ನು ಗುರುತಿಸಿ ಈ ವಿಧಾನ ಅಳವಡಿಸಿಕೊಂಡರೆ ಪ್ರಾಣಿಗಳ ಚಲನೆವಲನೆ ಹಾಗೂ ಸಂರಕ್ಷಣೆ ಸಾಧ್ಯ. ಉಲ್ಲಾಸ ಕಾರಂತರು ರೇಡಿಯೋ ಕಾಲರ್ ಉಪಯೋಗಿಸಿ ಹುಲಿ ಸಂಶೋಧನೆ ನಾಗರಹೊಳೆಯಲ್ಲಿ ನಡೆಸಿದ್ದು ನೆನಪಿರಬೇಕಲ್ಲ, ಒಂದು ವೇಳೆ ಈ ವಿಧಾನ ಅಳವಡಿಸಿದ್ದರೆ ಆರಾಮವಾಗಿ ಬೆಂಗಳೂರಿನಲ್ಲಿ ಕುಳಿತೇ ಹುಲಿಯ ಯೋಗಕ್ಷೇಮ ನೋಡಿಕೊಳ್ಳಬಹುದಿತ್ತು. ಈ ಸಂಶೋಧನೆ ಬೇಗನೇ ಭಾರತಕ್ಕೂ ಬಂದು ನಮ್ಮ ರೈತರೂ ಇದರ ಪ್ರಯೋಜನ ಪಡೆಯುವಂತಾಗಲಿ ಎಂದು ಹಾರೈಸೋಣ.








