ಕಂ-ಪತಿಗಳು
 •    •  

ಕಂ-ಪತಿಗಳು (ಕಂಪ್ಯೂಟರ್ ಪತಿಗಳು)

-ಶ್ರೀನಾಥ್ ಭಲ್ಲೆ

ಪಾತ್ರಧಾರಿಗಳು:

ಮೂರು ಜನ ಹೆಂಗಸರು - ಶಾಂತ, ಮಾಲ, ಇಳ

ಮೂರು ಜನ ಗಂಡಸರು - ಪ್ರಶಾಂತ, ಬಾಲ, ನಳ

ಡಾಕ್ಟರ್ ಹಾಗೂ ಪೇಶಂಟ್/ಕಾಂಪೌಂಡರ್/ಟೆಲಿಫೋನ್ ರಿಪೇರ್ ಮಾಡುವವವ

ಶಾಂತ: (ಕಿಟಕಿ ಧೂಳು ಹೊಡೇಯುತ್ತ) ಇವರಿಬ್ರೂ ಬರೋದು ಇನ್ನೂ ಎಷ್ಟೊತ್ತು ಆಗ್ತದೋ ಏನೋ. ನಂಗೂ ಬೆಳಗಿಂದ ಮಾತಾಡ್ದ ಮಾತಾಡ್ದ ನಾಲಿಗಿ ತುರುಸ್ಲಿಕತ್ತದ. ನಾನೂ ಒಬ್ಬಾಕಿನ ಮತಾಡೋದು ಕೇಳಿ ಕೇಳಿ ಆ ಜಿಮ್ಮಿ ಸೈತ ಬಾಲಾ ಅಳಿಗ್ಯಾಡಿಸಿಕೋಂಡು ಹೊರಗ ಹೋತು. ನಮ್ಮನಿ ಗ್ವಾಡಿಗೋಳಿಗೆ ಕಾಲೇನರೆ ಇದ್ದಿದ್ದರ ಯಾವತ್ತೋ ರಾತ್ರೋರಾತ್ರಿ ಅವೂ... ಹೋಗೇ ಬಿಟ್ಟಿರ್ತಿದ್ದು. ಈ ನನ್ನ ಗೆಳತ್ಯಾರ್ದೊ..., ಇನ್ನೂ ಪತ್ತೇನ... ಇಲ್ಲ.

 

{ಯಾರೋ ಬಾಗಿಲ ಬಡಿದ ಸದ್ದು}

 

ಶಾಂತ: ಓ ಬಂದ್ರಂತ ಕಾಣ್ತದ

 

{ಇನ್ನಿಬ್ಬರು ಒಳಗೆ ಬರುತ್ತಾರೆ}

 

ಶಾಂತ: ಈಗ ಬಂದ್ರೆ, ಮಾಲಾ, ಇಳ, ಬರ್ರಿ, ಬರ್ರಿ. ಎಷ್ಟೊತ್ತಾತು ಯಾಕೋ ಬರ್ಲೇ ಇಲ್ಲಂತ ನಿಮ್ಮನ್ನ... ನೆನಸ್ಲಿಕ್ಕತ್ತಿದ್ದೆ.

 

ಮಾಲ: (ಕೈಯಲ್ಲಿದ್ದ ಬ್ಯಾಗನ್ನು ಬದಿಯಲ್ಲಿಡುತ್ತ) ಹಾಗೇನಿಲ್ಲ, ದಾರೀಲಿ ಬರ್ತಾ, ಹಾಗೇ ಅಂಗಡಿಗೆ ಹೋಗಿ ಬಂದ್ವಿ... ಅದಕ್ಕೇ ಲೇಟಾಯ್ತು

 

ಇಳ: (ಅಲ್ಲೇ ಇದ್ದ ಪೇಪರ್ ನೋಡುತ್ತ) ಓ! ಪೇಪರ್ ಓದ್ತಾ ಇದ್ರೇನ್ರೀ ಶಾಂತ? ಬರೀ ಮಾಮೂಲಿ ಸುದ್ದಿ. ಅವರು ಗೆದ್ದರು.. ಇವರು ಸೋತರು... ಇನ್ನೊಬ್ರು ಸತ್ರು... ಇಷ್ಟೇ ತಾನೇ?

 

ಶಾಂತ: (ಹೊಸದೇನೋ ಹೇಳುವಂತೆ) ಬ್ಯಾರೇ ಸುದ್ದಿರೀ. ನಮ್ಮ ಐಶ್ವರ್ಯ ಮದಿವಿ ಆಗ್ಯಾಳಂತ.

 

ಮಾಲ: (ನಿರ್ಲಕ್ಷೆಯಿಂದ) ಸಿನಿಮಾ ಮದುವೆ ಎಲ್ಲ ಒಂದು ಮದುವೇ ಏನ್ರೀ. ಹುಣ್ಣಿಮೆಗೆ ಕಟ್ಟಿಕೊಂಡ್ರೆ ಅಮಾವಾಸ್ಯೆಗೆ ಬಿಟ್ಟಿರ್ತಾರೆ

 

ಇಳ: (ಕುತೂಹಲದಿಂದ) ಓ! ಯಾರ ಜೊತೆಗೋ ಮದುವೆ?

 

ಶಾಂತ: ದಿನಾ ಬೆಳಗಾದ್ರ ಎಲ್ಲಾಕಡೇ ಅದ... ಮಾತ. ನಿಮಗ ಗೊತ್ತಿಲ್ಲೇನ್ರೀ? ಅಭಿಷೇಕ ಬಚ್ಚನ್ ಜೋಡೀ.

 

ಇಳ: (ಪ್ರಶ್ನಾರ್ಥಕವಾಗಿ) ಅಲ್ರೀ, ವಿವೇಕ್ ಜೊತೆ ಓಡಾಡ್ತಿದ್ಲು. ಈಗ ಅಭಿಷೇಕ್ ಜೊತೆ ಮದುವೇನಾ ?

 

ಮಾಲ: (ತಮಗೆಲ್ಲ ಗೊತ್ತು ಎನ್ನುವಂತೆ) ವಿವೇಕ್ ಜೊತೆ ಮದುವೆ ಆಗದೇ ಇರೋದಕ್ಕೂ ಒಂದು ಕಾರಣ ಇದೆ, ಗೊತ್ತಾ?

 

{ಇಬ್ಬರೂ ’ಏನದೂ’ ಅನ್ನುತ್ತಾರೆ}

 

ಮಾಲ: ಐಶ್ವರ್ಯನ ಹೆಸರು A ಇಂದ ಶುರು ಆಗುತ್ತೆ ಅಲ್ವಾ.. ಆದರೆ ವಿವೇಕ್ ದು V ಇಂದ. ಅದಕ್ಕೆ ಅವಳು ವಿವೇಕನಿಗೆ, ನಿನ್ನ ಹೆಸರಿನ ಮುಂದೆ A ಸೇರಿಸೂ, ಆಗ ’ಅವಿವೇಕ್’ ಅಂತ ಆಗುತ್ತೆ, ಆಗ ಸರಿ ಹೋಗುತ್ತೆ ಅಂದಳಂತೆ. ಅದಕ್ಕೆ ಅವನು ಮುಖಕ್ಕೆ ಮಂಗಳಾರತಿ ಮಾಡಿದ (ಮಂಗಳಾರತಿ ಎತ್ತುವ ಹಾಗೆ ಕೈ ತೋರಿಸಿ) ಅಂತ ಈಗ, ಅಭಿಷೇಕನ (ಅಭಿಷೇಕ ಮಾಡುವಂತೆ ಕೈ ತೋರಿಸಿ) ಜೊತೆ ಮದುವೆ.

 

ಇಳ: (ನಿರಾಳದಿಂದ) ಸಧ್ಯ ಅಮಿತಾಭ್ ಹೆಸರು A ಇಂದಲೇ ಶುರುವಾಗಿದೆ. mostly ಜಯಾಬಾಧುರಿ, ಇನ್ನು ಮುಂದೆ ’ಅಜಯಾಬಾಧುರಿ’ ಆಗಬಹುದು!

 

ಮಾಲ: (ಮತ್ತೆ ನಿರ್ಲಕ್ಷ್ಯದಿಂದ) ಅಯ್ಯೋ ಬಿಡಿ. ಅದೆಲ್ಲ ಹಳೇ ವಿಷಯ. ಏನು ನಿಮ್ಮಗಳ vacation ಪ್ಲಾನು? ಅದನ್ನ ಹೇಳಿ ಮೊದಲು.

 

ಶಾಂತ: (ಬೇಸರದಿಂದ) ಅಯ್ಯೋ ಸರೀರಿ. ನಮ್ಮಪಗೆ ಬಡ್ಕೊಂಡೆ. ಈ ಸಾಫ್ಟ್ ವೇರ್ ಮಂದೀನ್ನ ನನಗೆ ಕಟ್ಟಬೇಡ ಅಂತ. ಕೇಳಿದ್ನಾ ಅವ. ಅಂತಹವರನ್ನೇ ಹುಡಿಕಿದ, ಕಟ್ಟಿದ. ಇವರಿಗೆಲ್ಲದ ಟೈಮು? ಭಾಳ busy. ಮುಂದಿನ ವರ್ಷ ಹೋಗಲಿಕ್ಕೆಂತ ಈಗಿಂದನ ರಜಾ ಕೇಳಬೇಕೂ ಅಂತ ಅಂದಾರ.

 

ಮಾಲ: (ಅನುಕಂಪದಿಂದ) ಅಷ್ಟೋಂದು ಕೆಲಸ ಏನ್ರೀ?

 

ಶಾಂತ: (ಮುಂದುವರೆದ ಬೇಸರ) ಅದೇನ್ ರಿಲೀಸೋ ಏನೋ? ಅಲ್ಲಾ, ಇವರೇನು ಪ್ರೊಗ್ರಾಮ್ ಬರೀತಾರೋ, ಹೆರಿಗಿ ಮಾಡಸ್ತಾರೋ ಅಥವಾ ಸಿನಿಮಾನ ತಗೀತಾರೋ ಒಂದೂ ಗೊತ್ತಿಲ್ಲ. ಯಾವಾಗ ಕೇಳಿದ್ರುನೂ ರಿಲೀಸೂ, ಡೆಲಿವರೀ ಅಂತನ ಅಂತಾರ. ನೋಡ್ರಿ, ಮೊನ್ನೆ ಸೋಮಾರ ಹೋದಾವ್ರೂ ಬುಧ್ವಾರ ಮಧಾನ್ಹನ ಮನೀಗೆ ಬಂದ್ರು. ನನಗ ಅವರ್‍ನ working days ನ್ಯಾಗ ಬರೀ tube lightನ ಬೆಳಕಿನ್ಯಾಗ ನೋಡಿ, ನೋಡಿ ಬೆಳಗಿನ ಟೈಮಿನ್ಯಾಗ ಗುರ್ತ ಸಿಗಲಿಲ್ಲ. ಖಿಡಕಿ ಇಂದನ "ಅವರೂ ಮನ್ಯಾಗಿಲ್ಲ, weekend ಬರ್ರಿ" ಅಂತ ಹೇಳಿ ಬಿಟ್ಟೆ. ಆಮ್ಯಾಲ ಎಲ್ಲ್ಯೋ ನೋಡೇನಲಾ ಇವರ್ನ ಅಂತ ಅನಿಸಿ ಬಾಗಲ ತಗದ್ರ, ಇವರೇ ಇದ್ರು. "ಏನ್ರೀ, ಇಷ್ಟೊತ್ತಿನ್ಯಾಗ?" ಅಂತ ಕೇಳಿದೆ. ಮೈ ಗಬ್ಬ ನಾತು ಹೊಡೀಲಿಕತ್ತಿತ್ತಂತ ಸ್ನಾನ ಮಾಡ್ಲಿಕ್ಕೆ ಬಂದೇನಿ ಅಂದ್ರು. ಅಷ್ಟ ಬ್ಯುಸೀ ನೋಡ್ರಿ..., ಸ್ನಾನಕ್ಕೂ ಟೈಮಿಲ್ಲ.

 

ಮಾಲ: ಹಾಗೋ ವಿಷಯ?

 

ಶಾಂತ: (ಕೊಂಕಾಕಿ) ಮತ್ತ, ನಿಮ್ಮನಿಯವರು, ಇವತ್ತ ರಜಾ ಏನು? ಮನ್ಯಾಗ ಇದ್ದಂಗಿತ್ತೂ?

 

ಮಾಲ: {ನಗು ಬಂದದ್ದು ತಡೆದುಕೊಂಡು} ಹೌದ್ರೀ, ಅದೊಂದು ಕಥೆ. ಯಾವಾಗಲೂ ಅವರು ಮನೆಗೆ ಬರೋ ಹೊತ್ತಿಗೆ, ನಾನೊಬ್ಳೇ ಏನು, ನಮ್ಮ ನಾಯೀ ಟಾಮೀನೂ ಮಲಗಿರುತ್ತೆ. ಮೊನ್ನೆ ಏನೋ ಮರೆತು ಹೋಗಿದ್ರೂ ಅಂತ ಮಧ್ಯಾನ್ನ ಮನೆಗೆ ಬಂದರು. ನಮ್ಮ ಟಾಮೀ ಇವರನ್ನು ನೋಡಿ, ಕಳ್ಳ ಅಂದುಕೊಂಡು ಕಚ್ಚಿಬಿಡ್ತು....

 

ಇಳ: (ಕಳವಳದಿಂದ) ಅಯ್ಯೋ ಶಿವನೇ!... ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿದ್ರೀ ತಾನೇ’.

 

ಮಾಲ: (ಹೆಚ್ಚು ಕಳವಳವಿಲ್ಲದೇ) ಹೌದ್ರೀ, ಸರ್ಕಲ್ ಹತ್ತಿರ ಇರೋ veterinary doctor ಹತ್ತಿರ ತೋರಿಸಿದೆ. ಏನೋ ತೊಂದರೆ ಇಲ್ಲಾ ಅಂದರು

 

ಇಳ: (ಗಲಿಬಿಲಿಯಿಂದ) ಅಲ್ರೀ, ನಿಮ್ಮೆಜಮಾನ್ರನ್ನ veterinary doctor ಹತ್ತಿರ ತೋರಿಸಿದ್ರಾ?

 

ಮಾಲ: (ತಲೆ ಚಚ್ಚಿಕೊಳ್ಳುವಂತೆ ಮಾಡಿ) ಅಯ್ಯೋ ನಾನು ಹೇಳಿದ್ದು, ನಮ್ಮ ಟಾಮಿ ವಿಷಯ ರೀ... ಈ software ಜನನ್ನ ಕಚ್ಚಿದಾಗ ನಾಯಿಗೂ ಎಲ್ಲಿ ಹುಚ್ಚು ಹಿಡಿದು laptop ಮುಂದೆ ಕೂಡುತ್ತೋ ಅಂತ ಮೊದಲು ಡಾಕ್ಟರ್ ಹತ್ತಿರ ಓಡಿದೆ.. ನಮ್ಮೆಜಮಾನ್ರು ಬಿಡಿ.. ಚೆನ್ನಾಗೇ ಇದ್ದಾರೆ. ದಿನಾ ’ಬಾಸ್’ ಅನ್ನೋ ಪ್ರಾಣಿ ಕೈಯಲ್ಲಿ ಕಚ್ಚಿಸಿಕೊಳ್ಳೋ ಇವರಿಗೆ ಬೇರೇ ಏನು ಕಚ್ಚಿದರೂ ಏನೂ ಆಗಲ್ಲ.... ಅದ್ಸರೀ, ನಿಮ್ಮೆಜಮಾನ್ರು ನೆನ್ನೆ ಸಾಯಂಕಾಲ ವಾಕಿಂಗ್ ಹೋಗ್ತಿದ್ರು. ಪಾಪ, ಒಬ್ರೇ ಮಾತಾಡ್ಕೊಂಡು ಹೋಗ್ತಿದ್ರು. ಹುಷಾರಾಗಿದ್ದಾರೇ ತಾನೇ?

 

ಇಳ: (ಆರಾಮಾಗಿ) ಎಂಥದೂ ಇಲ್ಲ. ಅವರು ಒಂದು ವಾರ ರಜೆ ಹಾಕಿದ್ದಾರೆ. ಅದಕ್ಕೇ ಬೆಳಿಗ್ಗೆ 9:00ರಿಂದ ಸಂಜೆ 5:00 ಘಂಟೆ ತನಕ ಮಾತ್ರ ಮನೆಯಿಂದ ಕೆಲಸ ಮಾಡ್ತಾರೆ. ಮನೆ ಒಳಗಡೆ ಸಿಗ್ನಲ್ ಸಿಗಲಿಲ್ಲ ಅಂತ ಹೊರಗೆ ಬಂದು hands free set ನಲ್ಲಿ ಮಾತಾಡ್ಕೊಂಡು ಓಡಾಡ್ತಿದೃ ಅಷ್ಟೇ! (ಸಡಗರದಿಂದ) ಇವತ್ತು ಕೆಲಸ ಆದ ಮೇಲೆ ಸಿನಿಮಾಕೆ ಹೋಗಬೇಕೂ ಅಂತ ಇದ್ದೀವಿ, ಅದಕ್ಕೇ ಈಗ್ಲಿಂದಾನೇ ರೆಡಿ ಇದ್ದೀನಿ...

 

ಮಾಲ: (ಮೆಚ್ಚಿಗೆಯಿಂದ ನೋಡುತ್ತ) ’ಓ! ಅದಕ್ಕೇ ಇಷ್ಟು ಅಲಂಕಾರ. ಬೇಗ ರೆಡೀ ಇರದಿದ್ರೆ ನಿಮ್ಮೆಜಮಾನ್ರು ಬೈತಾರೇನೋ?

 

ಇಳ: (ಠೀವಿಯಿಂದ) ಹಾಗೇನಿಲ್ಲ. ನನ್ನ ಮೇಲೆ ಅವರು ಸಿಟ್ಟು ಮಾಡಿಕೊಳ್ಳೋದು, ಬೈಯ್ಯೋದೂ ಏನೂ ಮಾಡಲ್ಲ

 

ಶಾಂತ: (ಪ್ರಶಂಸೆಯಿಂದ) ಅಡ್ಡೀ ಇಲ್ರೀ ನೀವೂ, ಏನ ಮಾಟಾ ಮಾಡೀರೋ ನಮಗೂ ಒಂದ ಸ್ವಲ್ಪ ಹೇಳ್ರಿ ಮತ್ತ.

 

ಇಳ: ಒಂದು ಸಾರಿ ಏನಾಯ್ತು ಅಂದರೆ, ಏನೋ ಸಿಟ್ಟು ಮಾಡಿಕೊಂಡು ನನ್ನ ಜೊತೆ ಮಾತಾಡಲಿಲ್ಲ. ಮಾರನೇ ದಿನ 6:00 ಘಂಟೆಗೆ ಫ಼್ಲೈಟ್ ಇತ್ತು. 4:00 ಘಂಟೆಗೆ ಎಬ್ಬಿಸು ಅಂತ ಚೀಟಿ ಬರೆದು ನನ್ನ ದಿಂಬಿನ ಮೇಲೆ ಇಟ್ಟಿದ್ರು. ನಾನ್ಯಾಕೆ ಮೊದಲು ಮಾತ್ಡ್ಲಿ ಅಂತ, 4:00 ಘಂಟೆಗೆ ಎದ್ದು ಚೀಟಿ ಬರೆದೆ ’4:00 ಘಂಟೆ ಆಯಿತು ಏಳಿ’ ಅಂತ. ಅವರು ಆ ಚೀಟೀನ್ನ ಬೆಳಿಗ್ಗೆ ಎಂಟಕ್ಕೆ ಎದ್ದಾಗ ಓದಿದರು. ಫ಼್ಲೈಟ್ ಮಿಸ್ಸ್ ಆಯ್ತು. ಅವತ್ತಿಂದ ನನ್ನ ಮೇಲೆ ಸಿಟ್ಟೇ ಮಾಡಿಕೊಳ್ಳೊಲ್ಲ’

 

ಇಬ್ಬರೂ: ಓ! ’ಹಾಗೆ ವಿಷಯ’

 

ಇಳ: ಏನೇ ಆದರೂ ನಮ್ಮ ಮನೇಲಿ ಅವರದೇ ಕಡೆ ಮಾತು ರ್ರೀ

 

ಇಬ್ಬರೂ: (ಕುತೂಹಲದಿಂದ) ಅದು ಹೇಗೆ?

 

ಇಳ: ನಾನು ಏನೇ ಹೇಳಿದರೂ ಅವರು ಅದಕ್ಕೆ ಕೊನೇಲಿ ’ಸರಿ ಕಣೆ’ ಅಂತಾರೆ ಅದಕ್ಕೇ....

 

ಶಾಂತ: ಆದ್ರೂ, ಈ software ಮಂದಿ ಯಾವಾಗನೂ ಒಂದ ಥರಾನ ಮಾತಾಡ್ತಾರ. ಒಂಥರ, ಕೆಟ್ಟ ಮಿಕ್ಸೀ ಹಂಗ.

 

ಮಾಲ: (ಏನೋ ನೆನಪಿಸಿಕೊಂಡು) ಹೌದ್ರೀ... ವಿವಿಧಭಾರತಿ ಹಾಕಿದ್ರೆ ಧಾರವಾಡ ಸ್ಟೇಶನ್ ಬರೋ ಥರ ಯವುದೋ ಸಂದರ್ಭದಲ್ಲಿ ಏನೋ ಮಾತಾಡ್ತಾರೆ. ಮೊನ್ನೆ ಯಾವುದೋ ಮದುವೆ ಮನೆಗೆ ಹೋಗಿದ್ವಿ. ಯಾರೋ ಇವರ ಪಕ್ಕದಲ್ಲಿ ಕುಳಿತವರು, ಇವರಿಗೆ ಕೈಕುಲುಕಿ ’ನಾನು ಶ್ರೀಧರ್. ತಮ್ಮ ಪರಿಚಯ?’ ಅಂದರು. ಅದಕ್ಕೆ ಇವರು ’nice to meet you. i am baala.kumar@infosys.com ಅನ್ನೋದೇ?

 

ಇಳ: ಬುದ್ದಿ ಜಾಸ್ತಿ ಆದ್ರೂ ಪೆದ್ದು ಪೆದ್ದಾಗಿ ಆಡ್ತಾರಂತೆ ಅಲ್ವಾ? ಅದ್ದೂ.. ಒಂದು ಥರಾ ಸೊಪ್ಪಿನ ಹುಳಿಗೆ ಉಪ್ಪು ಜಾಸ್ತಿ ಹಾಕಿದರೆ ಹೇಗೋ ಹಾಗೆ.

 

ಶಾಂತ: ಯಾವುದುಕ್ಕೂ, ಒಂದ್ಸರೇ ಡಾಕ್ಟರ ಕಡೇ ಹೋಗಿ ತೋರಿಸಿಗೊಂಡು ಬರಬೇಕ್ರೀ.

 

ಮಾಲ: ನಾವೆಲ್ಲರೂ ಒಟ್ಟಿಗೆ ಹೋಗೋಣ ಕಣ್ರೀ! ಇಲ್ಲೇ ತಿಕ್ಕಲು ಡಾಕ್ಟರ್ ಯಮಸುತ ಇದ್ದಾರಲ್ಲ ಅವರ ಹತ್ತಿರ ಹೋಗೋಣ. ಅವರು ಒಂದು ಪ್ರಮೋಶನ್ ನೆಡೆಸ್ತಿದ್ದಾರಂತೆ.

 

ಇಬ್ಬರೂ: (ಕುತೂಹಲದಿಂದ) ಏನದೂ

 

ಮಾಲ:ಇಬ್ಬರು ಪೇಷಂಟ್ಸ್ ಒಟ್ಟಿಗೆ ಬಂದರೆ ಮೂರನೆಯವರಿಗೆ ಇಂಜೆಕ್ಷನ್ ಫ಼್ರೀ ಅಂತೆ

 

ಇಳ: ಸರಿ ಹಾಗಿದ್ರೆ. ಅಪಾಯಿಂಟ್ಮೆಂಟ್ ತೊಗೊಂಡು ಬಿಡಿ. ಒಟ್ಟಿಗೆ ಹೋಗೋಣ!!

 

ಶಾಂತ: ಹೆಂಗೊ ಏನೊ, ಇ ತಿಕ್ಕಲು ಬರೊಬ್ಬರಾದ್ರ ಸಾಕು! ಮದ್ಲ ಫೋನು ಮಾಡಿ appointment ತೊಗೋಳೋಣು.

 

 

{ಅವರೆಲ್ಲ ಆ ಕಡೆ ಹೋಗುತ್ತಾರೆ. ನಂತರ ಪರದೆ ....}

 

{ಪ್ರಶಾಂತ ಹಾಗೂ ನಳ ಸ್ಟೇಜಿನ ಮೇಲೆ ಬರುತ್ತರೆ}

 

ನಳ: (ಕೂಗುತ್ತ) ಬಾಲಾ.. ಲೋ! ಬಾಲಾ {ಒಂದು ಕೈಯಲ್ಲಿ ಬಾಲ ಅಲ್ಲಾಡಿಸುವಂತೆ ತೋರುತ್ತ}

 

{ಬಾಲ ಧುಮ ಧುಮ ಅಂತ ಒಳಗಿನಿಂದ ಹೊರ ಬರುತ್ತಾನೆ}

 

ನಳ: (ಕುಶಲೋಪರಿ) ಏನೋ ಬಾಲಾ! ನಾಯಿ ಕಚ್ಚಿತಂತೆ? ನಾಯಿ ಹುಷಾರಾಗಿದ್ದ್ಯೇನೋ?

 

ಪ್ರಶಾಂತ: (ಎಲ್ಲರನ್ನೂ ಮಾತಿಗೆಳೆಯುತ್ತ) ಅದಿರ್ಲೋ! ಏನೋ ನಮ್ಮ ಹೆಂಗಸರುಗಳು ಏನೋ ಡಿಸೈನ್ ಹಾಕ್ತಿದ್ದಾರಂತೇ?

 

ಬಾಲ: (ರೇಗುತ್ತ) ನಮ್ಮನ್ನ ಇವರುಗಳು ಏನು ಅಂದುಕೊಂಡಿದ್ದಾರೆ? ನಾವೇನು ತಲೆಕೆಟ್ಟ ರೋಬೋ ಗಳಾ?

 

ಪ್ರಶಾಂತ: (ಸಿಡುಕುತ್ತ) ಅಥವಾ corrupt ಆಗಿರೋ harddisk’ಗಳೇ?

 

ನಳ: (ಸಮರ್ಥಿಸುತ್ತ) ಅಥವಾ ರೀಡ್ ಆಗಾದೇ ಇರೋ CD’ ನೇ?

 

ಪ್ರಶಾಂತ: ನಾವು ಇಷ್ಟು ಹೊತ್ತೂ ಹೇಳಿದ್ದು computer examples. ಅದಕ್ಕೇ ಅವರು ಹೇಳೊದು ನಮಗೆ ಅದೊಂದು ಬಿಟ್ಟರೆ ಬೇರೆ ಏನೂ ಬರೋಲ್ಲಾ ಅಂತ.

 

ಬಾಲ: (ಪ್ರಶ್ನೆ ಮಾಡುವವನಂತೆ) ಅವರು ಮಾತ್ರ ಅಡುಗೆ ಮನೆ examples ಕೊಡಬಹುದು... ನಾವು computer examples ಕೊಟ್ಟ್ರೆ ತಪ್ಪಾ?

 

ನಳ: ಅಲ್ವೋ, ನೀನು ಯಾವಾಗ್ಲಾದ್ರೂ ಅದು ಬಿಟ್ಟು ಬೇರೇ ತರಹ ಮಾತಾಡೋದಕ್ಕೆ ಟ್ರೈ ಮಾಡಿದ್ಯಾ?

 

ಬಾಲ: ಅಯ್ಯೋ, ನಾನು ಒಂದು ಸಾರಿ ನಾರ್ಮಲ್ ಭಾಷೆ ಆಡಬೇಕೂ ಅಂತ ಟ್ರೈ ಮಾಡಿದ್ದೆ.

 

ಪ್ರಶಾಂತ: (ಅಚ್ಚರಿಯಿಂದ) ಯಾವಾಗ್ಲೋ?

 

ಬಾಲ: ನಾನು ಮದುವೆಗೆ ಹುಡುಗೀನ್ ನೋಡೊಕ್ ಹೋಗಿದ್ದಾಗ ಇವಳ ಅಜ್ಜೀನ ನೋಡೋಕೆ ಹೋಗಿದ್ದೆ....

 

ನಳ: ಲೋ! ಲೋ! ಮನೆಹಾಳಾ!! ಹುಡುಗೀ ನೋಡೋ ಅಂದರೆ ಅವರ ಅಜ್ಜೀನ ಯಾಕೋ ನೋಡೋಕ್ ಹೋಗಿದ್ದೇ?

 

ಬಾಲ: (ರೇಗುತ್ತ) ಅಯ್ಯೋ, ಅದು ಹಂಗಲ್ವೋ! ನಿನಗೊಳ್ಳೇ ಟೀವೀ ಸೀರಿಯಲ್ಲಿನ ತರಹ ಬಿಡಿಸೀ ಬಿಡಿಸೀ ಹೇಳಬೇಕು... ನಾನು ಇವಳನ್ನ ನೋಡಿದ್ ಮೇಲೆ, elderly personಉ ಅಂತ ಇವಳ ಅಜ್ಜೀನ್ ನೋಡೋಕ್ ಹೋಗಿದ್ದೆ. ಆಗ ಅವರು ಕೇಳಿದ್ರು ’ಏನು ಮಾಡ್ಕೊಂಡಿದ್ದೀಯಾ ಅಂತ. ನಾನು ಅವರಿಗೇನು ಪಾಪ ಅರ್ಥ ಆಗುತ್ತೆ ಅಂತ ಸಿಂಪಲ್ಲಾಗಿ ಕಂಪ್ಯೂಟರ್ ಮಾಡಿಕೊಂಡಿದ್ದೀನಿ ಅಂದೆ. ಆಮೇಲೆ 'oracle developer' ಅಂತ ಸೇರಿಸ್ದೆ. ಅದಕ್ಕೆ ಅವರು ’ಅಯ್ಯಾ! ಎಲ್ಲರ ಮನೆಯಲ್ಲೊ ಮಿಕ್ಸೀ ಇರೋ ಈ ಕಾಲದಲ್ಲಿ ಒರಳಕಲ್ ವ್ಯಾಪಾರವೇ!! ’ ಅಂತ insult ಮಾಡಿದ್ರು

 

ಪ್ರಶಾಂತ: ನಂದೂ ಹೆಚ್ಚು ಕಮ್ಮಿ ಅದೇ ಕೇಸು. ಇವಳ ಅಜ್ಜಿ ’ಏನು ಮಾಡಿಕೊಂಡಿದ್ದೀಯಾ’ ಅಂತ ಕೇಳಿದ್ದಕ್ಕೆ ನಾನು ’ಕಂಪ್ಯೂಟರ್ ಮಾಡಿಕೊಂಡಿದ್ದೀನಿ’ ಅಂದೆ. ಅವರು ಅದಕ್ಕೆ ’ಕಂಪ್ಯೂಟರ್ ಮಾಡಿಕೊಂಡಿದ್ದೀನಿ ಅಂದರೆ ಅರ್ಥ ಏನು? 'dont talk nonsense. thats ok. When are you flying to America? ' ಅಂತ ಉಗಿದು ಕೇಳಿದ್ರು.... ಮಾಡರ್ನ್ ಅಜ್ಜಿ!!

 

ನಳ: ನನ್ನ ಕಥೆ ಸ್ವಲ್ಪ ಡಿಫ಼ೆರೆಂಟು. ಇವರ ಅಜ್ಜಿ ನನಗೆ ಇಂಟರ್ವ್ಯೂ ಮಾಡಿದ್ದು!

 

ಬಾಲ : (ಮಧ್ಯೆ ಬಾಯಿ ಹಾಕಿ) ನೀನು ಹುಡುಗೀನ್ನೇ ಮದುವೆ ಆದಿ ತಾನೇ?

 

ನಳ: ಥತ್! ಸುಮ್ಮನೆ ಕೇಳೋ! ಅವರ ಪ್ರಶ್ನೆ ಆದ ಮೇಲೆ ನಿಮಗೇನಾದ್ರೂ ಕೇಳೋದಿದ್ರೆ ಕೇಳಿ ಅಂದರು. ನಮ್ಮ ಕಡೆಯವರು ಯಾರೋ ಕೇಳಿದ್ರು ’ಹುಡುಗೀಗೆ ಏನೇನು ಬರುತ್ತೆ’ ಅಂತ. ಅಜ್ಜೀಗೆ ಪಿತ್ತ ನೆತ್ತಿಗೇರಿಬಿಡ್ತು ! ’ಅದೆಲ್ಲ ಏನು ಪ್ರಶ್ನೆ ಅಂತ ಕೇಳ್ತೀರಾ. ಚಳಿಗಾಲದಲ್ಲಿ ನೆಗಡಿ ಬರುತ್ತೆ. ಬೇಸಿಗೇಲಿ ತಲೆನೋವು ಬರುತ್ತೆ. ಅದ್ದೊ ಒಂದು ಪ್ರಶ್ನೇನೇ? ಅಲ್ಲದೇ, ಅಮೇರಿಕಕ್ಕೆ ಹೋದ ಮೇಲೆ ಬೆಳಿಗ್ಗೆ bagelಉ, ಮಧ್ಯಾನ್ನ McDonaldಉ, ಸಂಜೆ salaad ತಿನ್ನೋ ದನದ್ ನಾಲಿಗೆಗೆ ಏನು ಮಾಡಿಹಾಕಿದ್ರೂ ಅಮೃತವೇ’ ಅಂದು ಬಿಟ್ಟ್ರು !!

 

ಪ್ರಶಾಂತ: ಅಂತೂ ಸಕತ್ತಾಗಿ ಉಗುದ್ರ್‍ಊ ಅನ್ನು !

 

ಬಾಲ: ಎಲ್ಲರ ಕೈಯಲ್ಲೂ, ಐ ಮೀನ್ ಬಾಯಲ್ಲೂ ಉಗಿಸಿಕಿಳ್ಳೋದೇ ಆಯಿತು... I pity myself, I say..

 

ನಳ: ಅಲ್ಲದೇ, ಡಾಕ್ಟರ್’ನ ಬೇರೆ consult ಮಾಡಬೇಕಂತೆ.

 

ಪ್ರಶಾಂತ: ಅಲ್ಲಿ ಕೂತುಕೊಂಡು ಅವರ ಲೆಕ್ಚರ್ ಬೇರೆ ಕೇಳಬೇಕು

 

ಬಾಲ: ಮೊದಲೇ ನಾಯಿ ಹತ್ತ್ರ ಕಚ್ಚಿಸಿಕೊಂಡಿದ್ದೀನಿ. ಈಗ ಅವರ ಹತ್ತಿರ ಬೇರೆ ಕಚ್ಚಿಸಿಕೊಳ್ಳಬೇಕು

 

ನಳ: ನಿಜ. ನಡೀರಿ.. ಅದೂ ಆಗಲಿ. ಅವರು ನಮ್ಮನ್ನ ಕಚ್ಚ್ತಾರೋ, ನಾವೇ ಅವರನ್ನ ಕಚ್ಚ್ತೀವೋ ನೋಡೋಣ

 

{ ಪರದೆ }

 

{ಡಾಕ್ಟರ್ ಕ್ಲಿನಿಕ್. ಡಾಕ್ಟರ್ ಸೀರಿಯಸ್ಸಾಗಿ.. ಸುಮ್ಮನೆ ಕೂತಿದ್ದಾರೆ. ಹೊರಗೆ ಯಾರೋ ಡಾಕ್ಟ್ರೇ ಅಂತ ಕರೀತಾರೆ}

 

ಡಾಕ್ಟರ್: (ಧಡಗುಟ್ಟಿಕೊಂಡು) ಹೊರಗೆ ಯಾರೋ ಬಂದಿರೋ ಹಾಗಿದೆ. {ಟೆಲಿಫ಼ೋನ್ ಕೈಗೆ ತೆಗೆದುಕೊಂಡು ಮಾತು ಶುರು}

 

{ಒಳಗೆ ಬಂದೋನು ಹಾಗೆ ನಿಲ್ತಾನೆ}

 

ಡಾಕ್ಟರ್: ಹಾ! ಇರಲೀ. ನಾನು ಹೇಳಿದ ಮೆಡಿಸಿನ್ ಡೊಸೇಜ್ ಕೊಡಿ.... ರ್ರೀ! ದೋಸೆ ಅಲ್ರೀ.. ಡೋಸೇಜ್.. ಥತ್! ನಾನು ಈಗ ಬಹಳ ಬಿಜ಼ಿ ಇದ್ದೀನಿ. ಮುಂದಿನ ವಾರ ಅಮೇರಿಕಕ್ಕೆ ಹೋಗ್ತಿದ್ದೀನಿ. ಬಂದ ಮೇಲೆ ಪೇಷಂಟ್ ಇದ್ದರೆ ನೋಡ್ತೀನಿ. ಸರಿ ಇಡ್ಲಾ!! {ಫ಼ೋನ್ ಇಡುತ್ತಾರೆ} ತುಂಬಾ ಬಿಜ಼ಿ ಇದ್ದೆ. ನಿಮಗೇನು ಪ್ರಾಬ್ಲಂ?

 

ಪೇಶಂಟ್: ಡಾಕ್ಟ್ರೇ.. ಅದೂ

 

ಡಾಕ್ಟರ್: ಓ! ಸಾರಿ.. ಒಂದು ನಿಮಿಷ, ಕೂತ್ಕೊಳ್ಳಿ! ಅರ್ಜಂಟ್ ಕಾಲ್ ಮಾಡಬೇಕು ... {ಮತ್ತೆ ಫ಼ೋನ್ ಕೈಗೆ ತೆಗೆದುಕೊಂಡು ಯಾರಿಗೋ ಡಯಲ್ ಮಾಡ್ತಾರೆ} ಹಲೋ! ನಾನು ಡಾಕ್ಟರ್ ಯಮಸುತ. ನಿಮಗೆ ಮುಂದಿನ ವಾರ ಅಪಾಯಿಂಟ್ಮೆಂಟ್ ಕೊಟ್ಟಿದ್ನಲ್ಲಾ, ಅದನ್ನ ಮುಂದಿನ ತಿಂಗಳು ಇಪ್ಪತ್ತನೆಯ ತಾರೀಖಿಗೆ ಹಾಕಿದ್ದೀನಿ. ಏನು? ಉಸಿರಾಡೊದು ಕಷ್ಟಾ ಅಂದ್ರಾ? ಅದನ್ನ ಹೋಗೋದಕ್ಕೆ ಮುಂಚೆ ನಿಲ್ಲಿಸಿಬಿಡ್ತೀನಿ ಬಿಡಿ..... ಅಯ್ಯೋ! ಹಂಗಲ್ಲಾ ನಾನು ಹೇಳಿದ್ದು. ಉಸಿರಾಟದ ತೊಂದರೆ ನಿಲ್ಲಿಸ್ತೀನಿ ಅಂತ. ನೀವುಗಳೇ ಹೊರಟು ಹೋದ್ರೆ ನಾವು ಬದುಕಿರೋದು ಹೇಗೇ? ಸರಿ ಹಾಗಿದ್ರೆ, ಇಡ್ಲಾ {ಫ಼ೋನ್ ಇಡ್ತಾರೆ} ಏನು ವಿಷಯಾ? ನಿಮಗೇನು ತೊಂದರೇ?

 

ಪೇಶಂಟ್: {ಸಿಡುಗುಟ್ಟುತ್ತ} ತೊಂದರೆ ನನಗೆ ಅಲ್ಲ ಡಾಕ್ಟರ್ರೇ, ನಿಮಗೇ.

 

ಡಾಕ್ಟರ್: {ಆಶ್ಚರ್ಯದಿಂದ} ನಾನು ಇಲ್ಲಿ ಡಾಕ್ಟರ್. ನನಗೆ ಎಂಥಾದ್ದಯ್ಯಾ ತೊಂದರೆ ?

 

ಪೇಶಂಟ್: ನಾನು ಖಂಡಿತಾ ನಿಮ್ಮ ಪೇಷಂಟ್ ಅಲ್ಲ. ಅಂಥಾ ಸಂದರ್ಭ ಬಂದರೆ ಆಗೋದೂ ಇಲ್ಲ ಬಿಡಿ. ನೀವು complaint ಕೊಟ್ರಲ್ಲ ಅಂತ ಬಂದೆ ಅಷ್ಟೇ !.

 

ಡಾಕ್ಟರ್: ನಾನು complaint ಕೊಟ್ಟಿದ್ನಾ? ಯಾವಾಗ? ಏನಂತ? ಸ್ವಲ್ಪ ಸರಿಯಾಗಿ ಹೇಳಪ್ಪಾ...

 

ಪೇಶಂಟ್: (ಇನ್ನೂ ಸಿಡುಗುಟ್ಟುತ್ತ) ನೀವು ಅಂದರೆ, ನಿಮ್ಮ ಮನೆ ಯಜಮಾನ್ರು... ಅದೇ ಮೇಡಮ್ಮೂ... ಫ಼ೋನ್ ಸರಿ ಇಲ್ಲ, ನಮ್ಮೆಜಮಾನ್ರ ತರಹ ಆಡುತ್ತೆ.. ಬಂದು ರಿಪೇರಿ ಮಾಡು ಅಂತ. ಅಲ್ರೀ, ಕಿತ್ತೋದ್ ಫ಼ೋನ್ ಹಿಡಿಕೊಂಡು ನೀವು ನನ್ನ ಮುಂದೇನೇ ರೀಲ್ ಬಿಡ್ತೀರಲ್ರೀ!!! ಏನು ಡಾಕ್ಟರ್ರೋ!!

 

ಡಾಕ್ಟರ್: (ಸಿಕ್ಕಿ ಬಿದ್ದವನಂತೆ) ಅಲ್ಲಯ್ಯ, ನಾನು ಅಷ್ಟು ಹೊತ್ನಿಂದ ಬಡ್ಕೊತಾ ಇದ್ದೀನಿ.. ಹೇಳಬಾರದೇ?

 

ಪೇಶಂಟ್: ಮಾತಾಡ್ಲಿಕ್ಕೆ ಬಿಟ್ರೇ ತಾನೇ?

 

{ಹೊರಗೆ ಸದ್ದು... ಯಾರೋ ಹೇಳ್ತಾರೆ ’ಡಾಕ್ಟರು ಇದ್ದಾರೆ ಅಂತ ಕಾಣುತ್ತೆ’..}

 

ಡಾಕ್ಟರ್: ಅಯ್ಯಾ!! ಒಂದು ಉಪಕಾರ ಮಾಡ್ತೀಯಾ! ಸ್ವಲ್ಪ ಹೊತ್ತು ನನ್ನ ಕಾಂಪೌಂಡರ್ ತರಹ ಆಕ್ಟ್ ಮಾಡ್ತೀಯಾ?... ಇವತ್ತು ಕಾಂಪೌಂಡರ್ ಇಲ್ಲ... ಇವತ್ತೇನು ಪರ್ಮನೆಂಟಾಗೇ ಇಲ್ಲ...

 

ಪೇಶಂಟ್: ನನ್ನ ಕರ್ಮ! ಯಾಕಾದ್ರೂ ಬಂದನೋ! (ಜೇಬಿನ ಕಡೆ ಸನ್ನೆ ಮಾಡಿ ತೋರಿಸ್ತಾನೆ)

 

ಡಾಕ್ಟರ್:ಅಯ್ಯೋ! ಅನುಮಾನಾ ಬೇಡಯ್ಯಾ... ದುಡ್ಡು ಕೊಡ್ತೀನಿ... ದುಡ್ಡಿಲ್ಲದೆ ಏನು ನೆಡೆಯುತ್ತೆ ಈ ಲೋಕದಲ್ಲಿ...

 

ಪೇಶಂಟ್: (ಸಮಾಧಾನದಿಂದ) ಹೋಗ್ಲಿ, ಬಿಟ್ಟೀ ದುಡ್ಡಾದ್ರೂ ಸಿಗುತ್ತಲ್ಲಾ..

 

{ಮೂರು ಜನ ಹೆಂಗಸರು ಒಳಗೆ ಪ್ರವೇಶ ಮಾಡ್ತಾರೆ.. ಡಾಕ್ಟರ್ ಬೆಚ್ಚಿ ಬೀಳ್ತಾರೆ.. ಪೇಶಂಟ್ ಮತ್ತೊಂದು ಕಡೆ ಓಡುತ್ತಾನೆ}

 

ಡಾಕ್ಟರ್: ಅಯ್ಯೋ! ಅಯ್ಯೋ! ಏನ್ರಮ್ಮ ಇದು... ಹಿಂಗೆ ಎಲ್ರೂ ಒಟ್ಟಿಗೆ ನುಗ್ತಾ ಇದ್ದೀರಾ? ನಾನೇನಾದ್ರೂ ಡಿಸ್ಕೌಂಟ್ ನಲ್ಲಿ ಸೀರೆ ವ್ಯಾಪಾರ ಮಾಡ್ತಿದ್ದೀನಾ? ಇದು ನನ್ನ ಕ್ಲಿನಿಕ್ಕು. ನಾನೊಬ್ಬ ಡಾಕ್ಟೃ.

 

ಶಾಂತ: (ಸಿಡುಗುಟ್ಟುತ್ತ) ಗೊತ್ತದರೀ ಡಾಕ್ಟರ..., appointment ಬೇಕಂತ ಫೋಮಾಡಿದ್ರ ಯಾರೂ ಎತ್ಲೇ ಇಲ್ಲ. ಹಾಗಂತ ಕ್ಲಿನ್ಕ್’ಗೆ ಬಂದ್ವಿ. ಹೊರಗ receptionistಊ ಇರಲಿಲ್ಲ, ಅದಕ್ಕ ಒಳಗ ಬಂದಬಿಟ್ಟೇವಿ.

 

ಡಾಕ್ಟರ್: (ಸಮಾಧಾನ ಮಾಡುವವನಂತೆ) ಇರ್ಲಿ ಬಿಡೀಮ್ಮ. ನೋಡೀ, receptionist ಈಗ ನನ್ನ ಬಾಸ್. ಅದಕ್ಕೆ ಹೊರಗೆ ಯಾರೂ ಇಲ್ಲ. ಇನ್ಮೇಲೆ ಈ ಕ್ಲಿನಿಕ್’ನಲ್ಲಿ ಎಲ್ಲಾ ನಾನೇ. {ಟೆಲಿಫೋನ್ ರಿಪೈರ್ ಮಾಡುವವನು ದಿಟ್ಟಿಸಿ ನೋಡುತ್ತಾನೆ} ಓ! ಮತ್ತೆ ಈ ನನ್ನ ಕಾಂಪೌಂಡರ್ರು.

 

ಮಾಲ: (ಅರ್ಥವಾಗದೆ) receptionist’ಊ ಬಾಸ್ ಆಗಿದ್ದಾರಾ? ಏನು ಹಾಗೆಂದ್ರೇ?

 

ಡಾಕ್ಟರ್: ಏನೂ ಇಲ್ಲಮ್ಮ.. ಸಿಂಪಲ್ಲೂ... receptionist’ನ ನಾನು ಮದುವೆ ಆದೆ.. ಅಷ್ಟೇ!

 

ಇಳ: ಓಹೋ! ಹಂಗೆ ವಿಷಯ. ಇನ್ನೊಬ್ರನ್ನ ತಂದ್ರೆ ಅವರನ್ನೂ ಮದುವೆ ಆಗಿಬಿಡ್ತೀರಾ ಅಂತ ಇನ್ಮೇಲೆ ಎಲ್ಲ ನೀವೇ ಇಲ್ಲಿ ಅನ್ನಿ !

 

ಡಾಕ್ಟರ್: ಮುಂಚೆ ಅವಳು can I help you ಅಂತಿದ್ಲು.. ಈಗ ಆ ಮಾತು ದಿನಾ ನಾನು ಅವಳಿಗೆ ಕೇಳ್ತಿದ್ದೀನಿ. ಥತ್! ಬಿಡೀಮ್ಮಾ. ಅದನ್ಯಾಕೆ ಮತ್ತೆ ಮತ್ತೆ ಜ್ಞ್ನಾಪಿಸ್ತೀರಾ. ಇರಲೀ, ನಿಮಗೆಲ್ಲಾ ಏನು ಆಗಿದೆ ?

 

{ಮೂರೂ ಹೆಂಗಸರು ಒಟ್ಟಿಗೆ}: ನಮಗಲ್ಲಾ ಡಾಕ್ಟ್ರೇ! ನಮ್ಮ ಹಸ್ಬೆಂಡ್’ಗೆ

 

ಡಾಕ್ಟರ್: (ಗಾಬರಿಯಿಂದ) ಏನು? ಮೂರೂ ಜನಕ್ಕೂ ಒಬ್ಬನೇ ಗಂಡನಾ? ಪಾಪ ...

 

ಇಳ: (ರೇಗುತ್ತ) ಅಯ್ಯೋ! ಅಲ್ಲಾ ಡಾಕ್ಟ್ರೇ! ನೀವು ಯಾಕೆ ಹೀಗೆ ಪೆದ್ದು ಪೆದ್ದಾಗಿ ಆಡ್ತೀರಾ?

 

ಡಾಕ್ಟರ್: (ಮತ್ತೆ ಸಮಾಧಾನ ಮಾಡುತ್ತ) ಅದು ಹಾಗಲ್ಲಾ... ನೆನ್ನೆ ಒಬ್ಬ ಸಾಫ್ಟ್  ವೇರ್ ಇಂಜಿನಿಯರ್ ಪೇಷಂಟ್’ನ ನೋಡಿದೆ.. ಆಮೇಲಿಂದ ನನ್ನ ತಲೆ ಹೀಗೆ ಕೆಟ್ಟು ಹೋಗಿದೆ .. ಸರಿ, ಸರಿ, ನೀವೆಲ್ಲಾ ಹೊರಗೆ ಹೋಗಿ, ಮೂರೂ ಜನನ್ನ ಒಳಗೆ ಕಳಿಸಿ

 

ಮಾಲ: (ಅನುಮಾನದಿಂದ) ಒಟ್ಟಿಗೇನಾ ಡಾಕ್ಟ್ರೇ ?

 

ಡಾಕ್ಟರ್: ಮೂರೂ ಜನಕ್ಕೆ ಒಂದೇ ಕಾಯಿಲೆ ಅಲ್ವೋ! ಟ್ರೀಟ್ಮೆಂಟ್ ಒಂದೇ... ಫೇಸ್ ಮಾತ್ರ ಬೇರೆ ಬೇರೆ

 

ಇಳ: ಸರಿ ಹಾಗಿದ್ರೆ.. ನಾವು ಹೊರಗೆ ಇದ್ದು.. ಅವರನ್ನು ಒಳಗೆ ಕಳಿಸ್ತೀವಿ.

 

ಡಾಕ್ಟರ್: ಸರಿಯಮ್ಮ... ನೋಡೀ ಒಂದು ನಿಮಿಷ ತಡೀರಿ... ಹೊರಗೆ, ಸ್ವಲ್ಪ ಮೆತ್ತಗೆ ಮಾತಾಡಿಕೊಳ್ಳಿ, ಪಕ್ಕದ ಬಿಲ್ಡಿಂಗ್’ನಲ್ಲಿ ಹುಚ್ಚಸ್ಪತ್ರೆ ಇದೆ ... ಅಲ್ಲಿನವರಿಗೆ ಕನ್ಫ್ಯೂಸ್ ಆಗಿಬಿಟ್ಟೀತು

 

ಮೂರು ಹೆಂಗಸರು : ಬಿಡ್ರೀ ಡಾಕ್ಟ್ರೇ.. ಗೊತ್ತಿದೆ

 

{ಅವರು ಹೊರಗೆ ಹೋಗುತ್ತಾರೆ... ಸ್ವಲ್ಪ ಹೊತ್ತು ಬಿಟ್ಟಿ ಮೂವರು ಗಂಡಸರು ಒಳಗೆ ಬರ್ತಾರೆ}

 

ಡಾಕ್ಟರ್: ಹೀಗೆ, ಬನ್ನಿ. {ಸೂಕ್ಷ್ಮವಾಗಿ ನೋಡಿ} ನಿಮ್ಮ ಮನೆಯವರು ನಿಮ್ಮ ಬಗ್ಗೆ ಹೇಳಿದ್ದಾರೆ. ಮೊದಲು ನಿಮ್ಮ ದಿನಚರಿ ಸ್ವಲ್ಪ ಹೇಳಿ

 

{ಅರ್ಥವಾಗದವರಂತೆ ನಟನೆ ಮಾಡುತ್ತಾ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾರೆ}

 

ಪ್ರಶಾಂತ: what do u mean by that Doc?

 

ಡಾಕ್ಟರ್: {ಕಾಂಪೌಂಡರ್ ಕಡೆ ತಿರುಗಿ} ಕಾಯಿಲೆ ನಂಬರ್ ೧: ಕನ್ನಡ ಮಾತಾಡಲಿಕ್ಕೆ ಬಂದರೂ ತಾವು ಇಂಗ್ಲೀಷಿನವರು ಅಂತ ತೋರಿಸಿಕೊಳ್ಳೋದು...ಬರೆದುಕೋ. (ಈ ಕಡೆ ತಿರುಗಿ) ದಿನಚರಿ ಅಂದರೆ ನಿಮ್ಮ daily activities. ತೀರಾ ಡೀಟೈಲ್ಸ್’ಗೆ ಹೋಗಬೇಡಿ.. ಡೀಸೆಂಟ್ ಆಗಿ ಶಾರ್ಟ್ ಆಗಿ ಹೇಳಿ..

 

ನಳ: ok..ok..everyday routine.. go ahead man

 

ಪ್ರಶಾಂತ: (ವಿವರಣೆ ಕೊಡುತ್ತಾನೆ) ಟ್ರಾಫಿಕ್ ಜಾಸ್ತಿ ಅಂತ ಬೆಳಿಗ್ಗೆ ಬೇಗ ಆಫೀಸಿಗೆ ಹೋಗೋದು. ಈ ಮೈಲ್ಸ್ ಚೆಕ್ ಮಾಡೋದು. we speak to the Onsite group ಕಾಫಿ ಕುಡಿದು, ಈ ಮೈಲ್ಸ್ ಚೆಕ್ ಮಾಡಿ, ಮೀಟಿಂಗ್ಸ್ ಅಟೆಂಡ್ ಮಾಡೋದು. we speak to onsite group again ಆಮೇಲೆ ಊಟ ಆದ ಮೇಲೆ ಈ ಮೈಲ್ ಚೆಕ್ ಮಾಡೋದು, ಮೀಟಿಂಗ್ಸ್, ಸಂಜೆಗೆ ತಿಂಡಿ ಕಾಫಿ then again talk to our onsite group. ಬೇಗ ಆದರೆ ಮನೆಗೆ ಬರೋದು, if the talk continues for long, then we will have dinner at the office. come back home early morning

 

(ಇನ್ನಿಬ್ಬರೂ ಅವನು ಹೇಳಿದ್ದಕ್ಕೆಲ್ಲ ತಲೆ ಆಡಿಸುತ್ತಾರೆ)

 

ಡಾಕ್ಟರ್: {ಕಾಂಪೌಂಡರ್ ಕಡೆ ತಿರುಗಿ} ಕಾಯಿಲೆ ನಂಬರ್ ೨: ಅಮೇರಿಕದವರ ವಿಷಯ ಹೇಳಬೇಕಾದರೆ ಭಾಷೆ ಇಂಗ್ಲೀಷಿಗೆ ತಿರುಗುತ್ತೆ. (ಈ ಕಡೆ ತಿರುಗಿ) ಅದು ಬಿಟ್ಟು ಬೇರೆ ಏನಾದ್ರು ಮಾಡ್ತೀರಾ?

 

ಬಾಲ: (ಮಹತ್ಕಾರ್ಯ ಸಾಧನೆ ಮಾಡಿರುವಂತೆ) Doc, we play games

 

ಡಾಕ್ಟರ್: ಓಹೋ! ಗುಡ್. ದೇಹಕ್ಕೆ ವ್ಯಾಯಾಮನೂ ಬೇಕು ಅಂತ ತಿಳಿದುಕೊಂಡಿದ್ದೀರಲ್ಲಾ! ಯಾವ ಆಟ ಆಡ್ತೀರಾ

 

ಬಾಲ: nintendo, gameboy, game cube and other computer games

 

ಡಾಕ್ಟರ್: {ಕಾಂಪೌಂಡರ್ ಕಡೆ ತಿರುಗಿ}ಕಾಯಿಲೆ ನಂಬರ್ ೩: ಆಟ ಅಂದರೆ ಏನೂ ಅಂತಲೇ ಗೊತ್ತಿಲ್ಲ. (ಆ ಕಡೆ ತಿರುಗಿ) ಮತ್ತೆ ಮನೆಯವರ ಜೊತೆ ಕೂತು ಮಾತೇ ಆಡೋದಿಲ್ವಾ ಏನು?

 

ನಳ: we speak very often... ನಾನು ನನ್ನ ಆಫೀಸ್ ಕಂಪ್ಯೂಟರ್ ಮುಂದೆ ಕೂತಿರ್ತೀನಿ... ಅವಳು ಮನೆಯ ಕಂಪ್ಯೂಟರ್ ಮುಂದೆ ಕೂತಿರ್ತಾಳೆ.. ಇಬ್ಬರೂ ಕೂತು ಚ್ಯಾಟ್ ಮಾಡ್ತೀವಿ ... ಐದು ನಿಮಿಷ

 

ಡಾಕ್ಟರ್: {ಸ್ವಗತ} ಬರೀತಾ ಹೋಗ್ತಿದ್ರೆ, ನನಗೆ ತಲೆ ಕೆಟ್ಟು ಹೋಗುತ್ತೆ. {ಜೋರಾಗಿ} ನಿಮ್ಮ ಜೀವನದಲ್ಲಿ ಕಂಪ್ಯೂಟರ್ ಬಿಟ್ರೆ ಬೇರೇ ಎನಾದ್ರೂ ಗೊತ್ತಾ?

 

ಪ್ರಶಾಂತ: (ಇನ್ನೂ ತಲೆ ತಿನ್ನುತ್ತ) ನಾವು ಮ್ಯೂಸಿಕ್ ಕೇಳ್ತೀವಿ... musicindiaonline.com ನಲ್ಲಿ

 

ಬಾಲ: ಪೇಪರ್ ಓದ್ತೀವಿ, ಫ್ರೆಂಡ್ಸ್ ಜೊತೆ ಮಾತಡ್ತೀವಿ .... ಕಂಪ್ಯೂಟರ್ ಮೇಲೆ

 

ನಳ: ನಾಟಕ, ಸಿನಿಮಾ ಎಲ್ಲ ನೋಡ್ತೀವಿ ..... ಕಂಪ್ಯೂಟರ್ ಮೇಲೆ

 

ಡಾಕ್ಟರ್: {ತಲೆ ಕೆಟ್ಟು} ನಿಮಗೆಲ್ಲಾ personal life ಬೇಡ, social life ಬೇಡ ಅಂದ ಮೇಲೆ ಮದುವೆ ಯಾಕ್ರಯ್ಯಾ ಆದ್ರೀ?

 

ನಳ: {ನಾಚುತ್ತಾ} ಓ! ಅದಾ! ಅದರ ವಿಷಯನೇ ಬೇರೆ ಬಿಡಿ

 

ಪ್ರಶಾಂತ: (ಗುಟ್ಟಾಗಿ) ಆ ವಿಷಯ ನಮ್ಮ ಹೆಂಡತೀರಿಗೂ ಗೊತ್ತಿಲ್ಲಾ....

 

ಡಾಕ್ಟರ್: ಅದೇನ್ರಯ್ಯಾ ಅದೂ ...ಕುತೂಹಲ ಕೆರಳಿಸಬೇಡ್ರಿ... ಬೇಗ ಹೇಳ್ರಿ ಏನು ವಿಷಯ ಅಂತ...

 

ಬಾಲ: (ಹಿಡಿದೂ ಹಿಡಿದೂ) ವಿಷಯ ಏನೂ ಅಂದರೆ, ನಮ್ಮ ಮಾವಂದಿರು ಅವರ ಹೆಣ್ಣು ಮಕ್ಕಳನ್ನ ಮದುವೆ ಆದರೆ laptop free ಅಂದರೂ ಅದಕ್ಕೇ !!!!!!!!!!!!!!!!!

 

ಡಾಕ್ಟರ್: ಈ ಕೆಟ್ಟಿರೋ ತಲೆಗಳನ್ನು ಸರಿ ಮಾಡಕ್ಕೆ ಹೋಗಿ ನನ್ನ system crash ಆಗ್ತಿದೆ.. ಯಾರಾದ್ರೂ ಕಾಪಾಡಿ...

 

{ಡಾಕ್ಟರ್ ಧೊಪ್ಪನೆ ಕುಸಿದು ಕುಳಿತುಕೊಳ್ತಾರೆ}

 

ಪೇಶಂಟ್: ಡಾಕ್ಟ್’ರು ಹೋಗ್ಬುಟ್ರಾ ಸಾರ್... ಮತ್ತೆ ನನ್ನ ದುಡ್ಡೂ?

 

ಬಾಲ: ಇನ್ನೂ ಹೋಗಿಲ್ಲಪ್ಪ...virus attack ಆಗಿರಬೇಕು ಅಷ್ಟೇ!

 

ಪ್ರಶಾಂತ: ನಮ್ಮನ್ನ ಸರಿ ಮಾಡೊದಿರ್ಲಿ.. ನಾವೇ ಈ ಡಾಕ್ಟ್ರನ್ನ ಸರಿ ಮಾಡಬೇಕು ಈಗ

 

ನಳ: (ಒದೆಯುವವನಂತೆ ತೋರಿಸುತ್ತ) reboot ಮಾಡಿದರೆ ಎಲ್ಲ ಸರಿಹೋಗುತ್ತೆ... ನಡೀರ್ರೋ!

 

{ಡಾಕ್ಟರ್ ಅನ್ನು ಎತ್ತಿಕೊಂಡು ಹೋಗ್ತಾರೆ}

 

{ಪರದೆ}

Syndicate

Syndicate content