ತೇಜಸ್ವಿಯವರ ವೈಚಾರಿಕತೆ (ಕೊನೆಯ ಭಾಗ)
ತೇಜಸ್ವಿ


- ಬಿ ಆರ್ ಸತ್ಯನಾರಾಯಣ

ತೇಜಸ್ವಿ ಮಾರ್ಗಪ್ರವರ್ತಕನಲ್ಲ; ಅಭಿವ್ಯಕ್ತಿ ಮಾರ್ಗಗಳ ಅನ್ವೇಷಕ:


ಇಂದು ನಾವು ಸಾಹಿತ್ಯ ಚರಿತ್ರೆಯಲ್ಲಿ, ಸಾಹಿತಿಯ ಸ್ಥಾನ ನಿರ್ದೇಶನ ಮಾಡುವಾಗಲೆಲ್ಲಾ ಪ್ರವರ್ತಕ, ಆಚಾರ್ಯಪುರುಷ ಎನ್ನುವ ಮಾತನ್ನು ಬಳಸುತ್ತೇವೆ. ಷಟ್ಪದಿಯ ಬ್ರಹ್ಮ, ನವೋದಯ ಸಾಹಿತ್ಯದ ಆಚಾರ್ಯಪುರುಷ, ನವ್ಯಕಾವ್ಯದ ಪ್ರವರ್ತಕ ಇತ್ಯಾದಿ ಇತ್ಯಾದಿ. ತೇಜಸ್ವಿಯವರ ಬಗೆಗೂ ಅಂತಹ ಮಾತನ್ನು ಒಂದೆರಡು ಕಡೆ ಕೇಳಿದ್ದೇವೆ. ಮೈಸೂರಿನಿಂದ ಕಾಡಿನೆಡೆಗೆ ಹೋಗಿ ತಮ್ಮದೇ ಆದ ಹೊಸ ಮಾರ್ಗವೊಂದನ್ನು ಕಂಡುಕೊಂಡರು, ಕುವೆಂಪು ನೆರಳಿನಿಂದ ಹೊರಬಂದು ಹೊಸಮಾರ್ಗವೊಂದನ್ನು ಹಿಡಿದರು ಇತ್ಯಾದಿಯಾಗಿ ಕೇಳುತ್ತಿರುತ್ತೇವೆ. ವಿಚಾರಸಂಕಿರಣವೊಂದರಲ್ಲಿ ವಿದ್ವಾಂಸರೊಬ್ಬರು, ತೇಜಸ್ವಿ ಜನರಿಂದ ದೂರವಾಗಿ ಕಾಡು ಸೇರಿದರು ಎಂದು ಹೇಳಿದ್ದರು. ಬೆಂಗಳೂರು ನಿವಾಸಿಯಾದ ಈ ವಿದ್ವಾಂಸರಿಗೆ ನನ್ನ ಪ್ರಶ್ನೆ ಇಷ್ಟೆ. ಮೂಡಿಗೆರೆಯಲ್ಲಿ ಇರುವವರು ಮನುಷ್ಯರೇ ಅಲ್ಲವೇ? ತೇಜಸ್ವಿಯವರು ಯಾರಿಂದಲೂ ದೂರವಾಗಲಿಲ್ಲ. ಮೂಲಕ್ಕೆ ಹತ್ತಿತರವಾದರು ಅಷ್ಟೆ ಎಂಬುದು ನನ್ನ ಅನಿಸಿಕೆ. ತೇಜಸ್ವಿಯವರದು ಒಂದು ಮಾರ್ಗವನ್ನು ಕಂಡುಕೊಂಡು ಅದನ್ನು ಹಿಡಿದು ನೇರವಾಗಿ ನಡೆಯುವ ಪ್ರವೃತ್ತಿಯಲ್ಲ. ಅಬಚೂರಿನ ಪೋಸ್ಟಾಫೀಸು ಕಥಾಸಂಕಲನದ ಮುನ್ನುಡಿಯಲ್ಲಿ ಹೊಸದಿಗಂತದ ಕಡೆಗೆ ಹೋಗಬೇಕಾದ ಅನಿವಾರ್ಯತೆಯನ್ನು, ಹೋಗುತ್ತಿರುವ ಸೂಚನೆಯನ್ನೂ ತೇಜಸ್ವಿ ಕೊಟ್ಟಿದ್ದಾರೆ. ಅಷ್ಟನ್ನೇ ಹಿಡಿದುಕೊಂಡು ತೇಜಸ್ವಿಯನ್ನು ಟ್ರೆಂಡ್ ಸೆಟ್ಟರ್ ಎಂದು ಬ್ರಾಂಡ್ ಮಾಡುವುದು ಎಷ್ಟು ಸರಿ? ತೇಜಸ್ವಿಯವರದು ಪರಿವರ್ತನಶೀಲ ನವ್ಯ ಎಂದು ಕೆಲವರು ಕರೆದಿದ್ದರು. ಆ ರೀತಿ ಬ್ರಾಂಡ್ ಮಾಡಿ, ತೇಜಸ್ವಿಯವರ ಚಿಂತನೆಗಳಿಗೆ ಮಿತಿ ಏರುವ ಹುನ್ನಾರದಂತೆ ನನಗೆ ಕಾಣಿಸುತ್ತದೆ. ಅದೇನೆ ಇರಲಿ. ಅವರು ತಮಗೆ ಸರಿ ಎನಿಸಿದ ಮಾರ್ಗದಲ್ಲಿ ನಡೆದಿದ್ದೇನೋ ಸರಿ. ಆದರೆ ಪ್ರಾರಂಭದಲ್ಲಿ ಅಬಚೂರಿನ ಪೋಸ್ಟಾಫೀಸು ಕೃತಿಯಿಂದ - ಹಿಡಿದ ದಾರಿಯಲ್ಲೇ ನಡೆದರು ಎಂಬುದು ಸರಿಯಲ್ಲ. ಸಾಧಕನ ಬದುಕಿನಲ್ಲಿ ಸಾಹಿತ್ಯ ಒಂದು ಉಪ‌ಉತ್ಪನ್ನ ಅಷ್ಟೇ. ವಚನಕಾರರ ಉದ್ಧೇಶ ಸಾಹಿತ್ಯ ಸೃಷ್ಟಿಯಾಗಿರಲಿಲ್ಲ. ಕುವೆಂಪು ಅವರೇ ಸಾಹಿತ್ಯ ನನ್ನ ಪರಮ ಉದ್ದೇಶವಲ್ಲ. ಅಧ್ಯಾತ್ಮವೇ ನನ್ನ ಮೂಲ ಉದ್ದೇಶ ಎಂದು ಹೇಳಿಕೊಂಡಿದ್ದಾರೆ. ಹಾಗೇ ಜೀವಪರವಾದ, ಜೀವನಪರವಾದ ನಿಲುವನ್ನು ಹೊಂದಿದ್ದ ತೇಜಸ್ವಿ ಒಂದೇ ದಾರಿಯಲ್ಲಿ ನಡೆಯಲು ಹೇಗೆ ಸಾಧ್ಯ. ಆದ್ದರಿಂದಲೇ ಅವರ ದಾರಿ ಬದಲಾಗುತ್ತಲೇ ಇತ್ತು. ಆದರೆ ಈ ಬದಲಾವಣೆ ಉದ್ದೇಶಪೂರ್ವಕವಾಗಿರಲಿಲ್ಲ. ಅನಿವಾರ್ಯವಾಗಿತ್ತು. ಪ್ರತಿ ಕೃತಿಯ ಮುನ್ನುಡಿಯಲ್ಲಿ ನಿಂತು ನಾನು ನನ್ನ ದಾರಿಯನ್ನು ಬದಲಾಯಿಸಿದ್ದೇನೆ ಎಂದು ತೇಜಸ್ವಿ ಹೇಳದಿರಬಹುದು. ಆದರೆ ಅದು ಅವರ ಕೃತಿಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಅಬಚೂರು ಪೋಸ್ಟಾಫೀಸು ಕೃತಿಯಿಂದ ಹಿಡಿದು ಮಾಯಾಲೋಕದವರೆಗಿನ ಅವರ ಎಲ್ಲ ಕೃತಿಗಳನ್ನು, ಅನುವಾದ ಕೃತಿಗಳನ್ನು ಸೇರಿಸಿ ಕಾಲಾನುಕ್ರಮದಲ್ಲಿ ಇಟ್ಟು ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಮಾಯಾಲೋಕದ ಕಿರು ಮುನ್ನುಡಿಯಲ್ಲಿ 'ನಮ್ಮೆದುರು ಬದಲಾವಣೆಗಳ ಮಹಾಪೂರವೇ ಹರಿಯುತ್ತಿದೆ. ಹೊಸ ನುಡಿಗಟ್ಟುಗಳು, ಹೊಸ ಉಕ್ತಿಭಂಗಿ, ಹೊಸ ಅಭಿವ್ಯಕ್ತಿ ವಿಧಾನಗಳ ಬಗ್ಗೆ ನಾವೀಗ ಗಮನ ಹರಿಸಿ ಹೊಸ ದಿಗಂತಗಳತ್ತ ಅನ್ವೇಷಣೆ ಹೊರಡಬೇಕಾಗಿದೆ' ಎಂದು ಘೋಷಿಸುತ್ತಾರೆ. ಸಂದರ್ಶನವೊಂದರಲ್ಲಿ ತೇಜಸ್ವಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. 'ಬರೆಯುವ ಸಾಹಿತಿಯಾಗಿ ನನಗಿರುವ ಸಮಸ್ಯೆಗಳು ಯಾವ ಪ್ರಾಕಾರದ ಹಣೆಪಟ್ಟಿ ಹಚ್ಚಿಕೊಂಡು ಬರೆಯಲಿ ಎಂಬುದು ಖಂಡಿತಾ ಅಲ್ಲ. ನನ್ನ ಅನುಭವ ಮತ್ತು ಆಲೋಚನೆಗಳನ್ನು ಇತರರಿಗೆ ವರ್ಗಾಯಿಸುವ ಅತ್ಯಂತ ಕ್ಷಿಪ್ರ ಮತ್ತು ಸಮರ್ಥ ಮಾರ್ಗ ಯಾವುದು ಎಂದು'. ಅವರ ಪ್ರತಿಯೊಂದು ಕೃತಿಯೂ ಹೊಸ ಮಾರ್ಗದ ಅನ್ವೇಷಣೆಯಲ್ಲಿಯೇ ತೊಡಗಿವೆಯೆಂದು ನಿಮಗೆ ಅನ್ನಿಸಿದರೆ ಅದು ಖಂಡಿತ ಅತಿಶಯೋಕ್ತಿಯಲ್ಲ. ನಮ್ಮ ಗ್ರಂಥಾಲಯದಲ್ಲಿ ಅವರ ಎಲ್ಲಾ ಪುಸ್ತಕಗಳನ್ನು ಯಾವ ವಿಭಾಗಕ್ಕೂ ಸೇರಿಸಿದೆ, ತೇಜಸ್ವಿ ಪುಸ್ತಕಗಳು ಎಂಬ ಹಣೆಪಟ್ಟಿಯೊಂದಿಗೆ ಸಂಗ್ರಹಿಸಿದ್ದೇವೆ. ಆ ದೃಷ್ಟಿಯಿಂದ ತೇಜಸ್ವಿಯವರನ್ನು ಹೊಸ ಮಾರ್ಗಗಳ ಅನ್ವೇಷಕ ಅನ್ನಬಹುದು. ಹುಡುಕಾಟ ಅವರ ಸಾಹಿತ್ಯದ ಪ್ರಧಾನ ನೆಲೆ. ಆ ಹುಡುಕಾಟ ಕೇವಲ ಓತಿ ಹಕ್ಕಿಗಳ ಹುಡುಕಾಟವಲ್ಲ. ಅವುಗಳಲ್ಲಿ ಅಭಿವ್ಯಕ್ತಿ ಮಾರ್ಗಗಳ ಹುಡುಕಾಟವೇ ಪ್ರಧಾನವಾಗಿರುವುದು ಸ್ಪಷ್ಟವಾಗಿದೆ. ಅವರ ಅಭಿವ್ಯಕ್ತಿ ಮಾಧ್ಯಮಗಳು, ಮಾರ್ಗಗಳು ಕೃತಿಯಿಂದ ಕೃತಿಗೆ ಬದಲಾಗತ್ತಲೂ, ಹೆಚ್ಚೆಚ್ಚು ಪರಿಣಾಮಕಾರಿಯಾಗುತ್ತಲೂ ಇರುವುದನ್ನು ನಾವು ಕಾಣಬಹುದಾಗಿದೆ. ನವಮಾರ್ಗಕಾರನಿಗೆ ತನ್ನ ಮಾರ್ಗದಲ್ಲಿ ಜನ ಬರಬೇಕು ಎನ್ನುವ ಸ್ವಾರ್ಥದ ಎಳೆ ಕಾಣುತ್ತದೆ. ಆದರೆ ತೇಜಸ್ವಿಯವರದ್ದು ಆ ದೃಷ್ಟಿಯಲ್ಲ. ಹೊಸದಿಗಂತಗಳತ್ತ ಅನ್ವೇಷಣೆ ಹೊರಡಬೇಕಾಗಿದೆ ಅನ್ನುತ್ತಾರೆಯೇ ಹೊರತು, ಹೊರಡುತ್ತಿದ್ದೇನೆ ನೀವು ಬನ್ನಿ ಎನ್ನುವುದಿಲ್ಲ. ಇದು ಅನ್ವೇಷಕನ ಮೂಲಗುಣ. ಹೊಸ ಅನ್ವೇಷಣೆಗಳಿಗೆ ದಾರಿ ತೋರುವುದೇ ಆತನ ಮೊದಲ ಆದ್ಯತೆಯಾಗಿರುತ್ತದೆ.

ಕೂದಲು ಸೀಳದ ಪ್ರವೃತ್ತಿ

ಯಾವುದೇ ವಿಷಯವಾದರೂ ತೇಜಸ್ವಿಯವರದು ಕೂದಲು ಸೀಳುವ ಪ್ರವೃತ್ತಿಯಲ್ಲ. ನೇರ ನುಡಿ, ನುಡಿಯಂತೆ ನಡೆ ಇದು ಅವರ ಅರ್ಥಪೂರ್ಣ ಬದುಕಿನ ಭದ್ರ ಬುನಾದಿ. ಸಾಹಿತ್ಯದಲ್ಲಿಯಂತೆಯೇ ಬದುಕಿನಲ್ಲೂ ಅದನ್ನು ಅವರು ಪ್ರತಿಪಾದಿಸಿದ್ದಾರೆ. ಅವರು ನಿತ್ಯ ವಿದ್ಯಾರ್ಥಿ. ಯಾವುದೇ ವಿಷಯವಾದರೂ ಆಸಕ್ತಿಯಿಂದ ಕೇಳಿ ಗಂಭೀರವಾಗಿ ಚಿಂತಿಸುತ್ತಿದ್ದರು. ಬೆಂಗಳೂರಿನ ಯವನಿಕಾದಲ್ಲಿ ನಡೆದ, ಅಂತರ್ಜಾತಿ ವಿವಾಹವಾದವರಿಗೆ ಮೀಸಲಾತಿ ನೀಡುವ ಬಗೆಗಿನ ಸಂವಾದ ಕಾರ್ಯಕ್ರಮದಲ್ಲಿ ತೇಜಸ್ವಿಯವರಿಗೆ ನಾನು ಕೇಳಿದ್ದ ಪ್ರಶ್ನೆ ಹೀಗಿತ್ತು. 'ಹೀಗೆ ಒಬ್ಬೊಬ್ಬರಿಗೂ ಮೀಸಲಾತಿ ಕೊಡುತ್ತಾ ಹೋದರೆ, ಮುಂದೊಂದು ದಿನ ಈ ಮೀಸಲಾತಿ ಪಡೆದವರದೇ ಒಂದೊಂದು ಗುಂಪಾಗಿ ಹೊಸದೊಂದು ಜಾತಿ ಹುಟ್ಟಿಕೊಳ್ಳುವ ಅಪಾಯವಿಲ್ಲವೇ?' ಅದಕ್ಕೆ ತೇಜಸ್ವಿ ಉಡಾಫೆಯಿಂದ 'ಮೊದಲು ಮೀಸಲಾತಿ ಕೊಡಲಿ ಬಿಡ್ರಿ. ಅಮೇಲೆ ನೋಡೋಣ' ಎಂದಿದ್ದರು. ನನಗೆ ಇದೇನು ತೇಜಸ್ವಿ ಇಷ್ಟೊಂದು ಉಡಾಪೆಯಿಂದ ಮಾತನಾಡುತ್ತಿದ್ದಾರೆ ಎನ್ನಿಸಿ ಪೆಚ್ಚಾಗಿತ್ತು. ಕಾರ್ಯಕ್ರಮದ ನಂತರ ಸಂಘಟಕರು ತೇಜಸ್ವಿಯವರೊಂದಿಗೆ ಫೋಟೊ ತೆಗೆಸಿಕೊಳ್ಳುವ ಉತ್ಸಾಹದಲ್ಲಿದ್ದಾಗ 'ಇಷ್ಟೊತ್ತು ಕ್ರಾಂತಿ ಮಾಡ್ತೀವಿ ಅಂದು ಈಗ ಫೋಟೊ ಅಂತ ಒದ್ದಾಡ್ತಿದ್ದೀರಲ್ರಿ' ಎಂದು ಬಯ್ಯುತ್ತಿದ್ದವರು ನನ್ನನ್ನು ಹತ್ತಿರ ಕರೆದು 'ನೀವು ಕೇಳಿದ ಪ್ರಶ್ನೆ ನಿಜವಾಗಿಯೂ ಗಂಭೀರವಾದದು ಕಣ್ರಿ. ಆ ನಿಟ್ಟಿನಿಂದಲೂ ನಾವು ಯೋಚನೆ ಮಾಡಬೇಕು. ಆದ್ರೆ ಆ ಸಮಸ್ಯೆ ಈಗಿನಷ್ಟು ಜಟಿಲವಾಗಲ್ಲ ಅಂದ್ಕೋತಿನಿ. 'ಅಂತರ್ಜಾತಿ ಮದುವೆಯಾಗೋದು ತಪ್ಪಲ್ಲ' ಅನ್ನುವಷ್ಟರ ಮಟ್ಟಿಗೆ ಬದಲಾಗಿರೂ ಈ ಗುಂಪನ್ನು ಹೇಗ್ಬೇಕಾದ್ರೂ ಕನ್ವಿನ್ಸ್ ಮಾಡ್ಬೌದು. ಆದ್ರೆ ನಮ್ಮ ಡಿಮ್ಯಾಂಡ್ ಈಡೇರಿದ ಮೇಲಲ್ವ ಈ ಪ್ರಶ್ನೆ. ನೋಡೋಣ ಬಿಡಿ' ಅಂದ್ರು.

ಉತ್ತರಾಧಿಕಾರಿ

ತೇಜಸ್ವಿಯವರು ನಿಧನರಾದಾಗ ಸುಧಾ ವಾರಪತ್ರಿಕೆಯಲ್ಲಿ ಶಿವರಾಮ ಕಾಡನಕುಪ್ಪೆಯವರು ಒಂದು ಲೇಖನ ಬರೆದಿದ್ದರು. ಅದರಲ್ಲಿ 'ಕುವೆಂಪು ಮತ್ತು ಕಾರಂತರ ನಿಜವಾದ ಉತ್ತರಾಧಿಕಾರಿಯಂತೆ ತೇಜಸ್ವಿ ಬದುಕಿದರು, ಬರೆದರು' ಎಂದಿದ್ದಾರೆ. ಈ ಕಲ್ಪನೆ ಹಲವಾರು ಕಡೆ ವ್ಯಕ್ತವಾಗಿದೆ. ಅಬಚೂರಿನ ಪೋಸ್ಟಾಫೀಸು ಕೃತಿಯ ಮುನ್ನುಡಿಯ ನಂತರವೇ ತೇಜಸ್ವಿ ಯಾರೂ ರಿಲವೆಂಟಾಗಿ ಉಳಿದಿಲ್ಲ ಎಂದಿದ್ದನ್ನೂ ನೋಡಿದ್ದೇವೆ. ನಾಯಕರುಗಳನ್ನು ನಂಬಿ ಚಳುವಳಿ ಮಾಡಿ ನಾವು ಬಫೂನ್ಗಳಾದೆವು ಎಂದೂ ಅವರು ಹೇಳಿದ್ದಾರೆ. ಜುಗಾರಿ ಕ್ರಾಸ್ನಲ್ಲೂ ಗಂಗೂಲಿಯ ಕ್ರಾಂತಿಕಾರಕತನವನ್ನು ಅವರು ಗೇಲಿ ಮಾಡಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಈ ಉತ್ತರಾಧಿಕಾರಿ ಎಂಬ ಪರಿಕಲ್ಪನೆಯೇ ಎಲ್ಲೋ ಒಂದು ಕಡೆ ಪರಂಪರೆ, ಸಂಪ್ರದಾಯ, ಮಠ ಇವುಗಳ ಕಡೆಗೆ ಮುಖ ಮಾಡಿ ನಿಲ್ಲುತ್ತದೆ ಅಲ್ಲವೆ. ಈ ಮಠಾಧಿಪತಿಗಳಿಗೆ ವಿಶೇಷವಾಗಿರುವ ಬೆಳ್ಳಿ ಕೀರೀಟ, ಅಡ್ಡಪಲ್ಲಕ್ಕಿ ಉತ್ಸವ, ಉತ್ತರಾಧಿಕಾರತ್ವ ಇವುಗಳ ಪ್ರಬಲ ವಿರೋಧಿಯಾಗಿದ್ದರು ಎಂಬುದಕ್ಕೆ ಅವರ ಬದುಕಿನ ಹಲವಾರು ಘಟನೆಗಳು, ಸಾಹಿತ್ಯದ ನಿಲುವುಗಳು ಜೀವಂತ ಸಾಕ್ಷಿಯಾಗಿವೆ. ಇವುಗಳನ್ನೆಲ್ಲಾ ಮೀರಿ ಬೆಳೆದ ತೇಜಸ್ವಿಯಂತಹ ಅಪ್ರತಿಮ ಸಾಹಸಿಗೆ ಖಂಡಿತಾ ಇದು ಸಲ್ಲುವುದಿಲ್ಲ. ನೀವು ಕುವೆಂಪು ಕಾರಂತರ ಉತ್ತರಾಧಿಕಾರಿ, ತೇಜಸ್ವಿಯವರ ಉತ್ತರಾಧಿಕಾರಿ ಎಂದೊಡನೆ ಒಬ್ಬರನ್ನು ನೀವು ನೋಡಲು ಒಂದು ಸಿದ್ಧ ಚೌಕಟ್ಟನ್ನು ಹಾಕಿಕೊಂಡ ಹಾಗೆ. ಅದೇ ಒಂದು ಮಿತಿ. ತಮ್ಮ ಮೊತ್ತಮೊದಲ ವೈಚಾರಿಕ ಬರವಣಿಗೆ 'ವ್ಯಕ್ತಿ ವಿಶಿಷ್ಟ ಸಿದ್ಧಾಂತ'ದಲ್ಲಿಯೇ ತಮ್ಮ ಅನುಮಾನವನ್ನು ದಾಖಲಿಸುತ್ತಾರೆ. ಒಬ್ಬ ಮನುಷ್ಯ ಸಾಮಾಜಿಕವಾಗಿ ಸ್ವಲ್ಪ ಗುರುತಿಸಲ್ಪಟ್ಟರೆ ಸಾಕು. ಅವನನ್ನು ಒಂದು ಪಂಥಕ್ಕೆ, ಒಂದು ಮಠಕ್ಕೆ ಸೀಮಿತಗೊಳಿಸಿ ಅವನ ಪ್ರಗತಿಪರವಾದ, ಜೀವಪರವಾದ ಚಿಂತನೆಗಳನ್ನು ಮೂಲೆಗುಂಪು ಮಾಡುವ ಪ್ರತಿಗಾಮಿತನದ ಶಕ್ತಿಮೂಲ ಯಾವುದು? ಎಂಬ ಪ್ರಶ್ನೆ ಹಾಕಿಕೊಳ್ಳುತ್ತಾರೆ. ಅಂತಹ ಪ್ರತಿಗಾಮಿತನದ ಶಕ್ತಿಗೆ ತಮ್ಮ ಬದುಕಿನುದ್ದಕ್ಕೂ ಮುಖಾಮುಖಿಯಾಗಿಯೇ ತೆಜಸ್ವಿ ನಿಲ್ಲುತ್ತಾರೆ. 'ಕುವೆಂಪು ಅವರ ಶವಸಂಸ್ಕಾರ ಮಾನಸಗಂಗೋತ್ರಿಯಲ್ಲಿಯೇ ಆಗಬೇಕು, ಅಲ್ಲಿಯೇ ಸ್ಮಾರಕ ನಿರ್ಮಿಸಬೇಕು' ಎಂದು ಒಂದು ಗುಂಪು (ಅವರ ದೃಷ್ಟಿಯಲ್ಲಿ ಒಳ್ಳೆಯ ಉದ್ದೇಶದಿಂದ) ಒತ್ತಾಯಿಸುತ್ತಿದ್ದಾಗ ತೇಜಸ್ವಿ ಒಂದೇ ಮಾತಿನಲ್ಲಿ ಆ ಸಮಸ್ಯೆಯನ್ನು ನಿವಾರಿಸುತ್ತಾರೆ. 'ಹೇಳ್ರಿ ಹೇಳ್ರಿ. ವಿಶ್ವವಿದ್ಯಾಲಯ ಗೋರಿಗಳ ತಾಣವಾಗಬೇಕೇನ್ರಿ. ಒಬ್ಬ ಕುಲಪತಿಯನ್ನು ಇಲ್ಲಿ ಮಲಗಿಸಿದ್ರೆ ಮುಂದೆ ಇನ್ನೊಬ್ಬನದು, ಇದು ಆಗಬೇಕೇನ್ರಿ' ಎಂದು ಮರುಮಾತಿಗೆ ಅವಕಾಶವೇ ಇಲ್ಲದಂತೆ ಮಾಡಿಬಿಡುತ್ತಾರೆ. ತೇಜಸ್ವಿ ಅಲ್ಲಿ ಏನಾದರೂ ತಮ್ಮ ನಿರ್ಧಾರವನ್ನು ತಾವೇ ತಗೆದುಕೊಳ್ಳದಿದ್ದರೆ, ಜನ ಮತ್ತು ಸರ್ಕಾರದ ಹೆಗಲಿಗೆ ಜವಾಬ್ದಾರಿಯನ್ನು ವಹಿಸಿದ್ದರೆ ಏನಾಗುತ್ತಿತ್ತು ಎಂಬುದನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಬಹುಶಃ ಕುವೆಂಪು ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರದ ದಿನಾಂಕವನ್ನು ಮತ್ತೆ ಮತ್ತೆ ಮುಂದೂಡುವ ಸಂದಿಗ್ಧತೆ ಬಂದಿರುತ್ತಿತ್ತೋ ಏನೋ. ಇರಲಿ. ಕುವೆಂಪು ಅವರನ್ನು ಕೆಲವರು ಒಕ್ಕಲಿಗರ ನಾಯಕರಾಗಬೇಕು ಎಂದು ಕೇಳಲು ಹೋದಾಗ, ಪ್ರಪಂಚದ ಭೂಪಟವನ್ನು ತೋರಿಸಿ ತಾವೆಷ್ಟು ಅಲ್ಪರೆಂಬುದನ್ನು ಮನನ ಮಾಡಿಕೊಟ್ಟ ಸಂಗತಿ ನೆನಪಿನ ದೋಣಿಯಲ್ಲಿ ಬರುತ್ತದೆ. ಹಾಗೇಯೇ ಇಲ್ಲಿ ತೇಜಸ್ವಿ ಸಭೆ ಸಮಾರಂಭಗಳಿಂದ ಪ್ರಶಸ್ತಿಗಳಿಂದ ಸನ್ಮಾನಗಳಿಂದ ದೂರವುಳಿದುದ್ದು ಏಕೆ ಎಂಬುದು ಅರ್ಥವಾಗುತ್ತದೆ. 'ಲೋಹಿಯಾ ಅವರ ತತ್ವಚಿಂತನೆ, ಕುವೆಂಪು ಅವರ ಕಲಾಸೃಷ್ಟಿ, ಕಾರಂತರ ಪ್ರಯೋಗಶೀಲತೆ ಇವು ನನ್ನ ಬದುಕು ಮತ್ತು ಬರಹದ ಮೇಲೆ ಪ್ರಭಾವ ಬೀರಿವೆ ಎನ್ನಬಹುದು.' ಎಂದು ಅಬಚೂರಿನ ಪೋಸ್ಟಾಫಿಸಿನಲ್ಲಿ ಹೇಳಿರುವ ತೇಜಸ್ವಿ ಮುಂದುವರೆದು ಸಂದರ್ಶನವೊಂದರಲ್ಲಿ 'ಈ ಮೂರು ಅಂಶಗಳು ಮುಂಬರುವ ಕನ್ನಡದ ಹೊಸ ಪೀಳಿಗೆಯ ಬರಹಗಾರರಿಗೂ ಅತ್ಯಂತ ಉಪಯುಕ್ತವಾಗಬಹುದು ಎಂದೆನ್ನಿಸುತ್ತದೆ.' ಎನ್ನುತ್ತಾರೆಯೇ ಹೊರತು, ಅವರ ಪರಂಪರೆಯನ್ನು ಮುಂದುವರೆಸುತ್ತಿದ್ದೇನೆ ಎಂದು ತೇಜಸ್ವಿ ಹೇಳುವುದಿಲ್ಲ. ಕಾರಂತ, ಕುವೆಂಪು ಮತ್ತು ತೇಜಸ್ವಿ ಮೂವರೂ ಪರಿಸರದ ಬಗ್ಗೆ ಬರೆದವರು ಹಾಗೂ ಕಾಳಜಿ ಇದ್ದವರು. ಆದರೆ ಪ್ರಕೃತಿಯನ್ನು ಅವರುಗಳು ನೋಡಿದ ರೀತಿ ಬೇರೆಬೇರೆಯಾಗಿತ್ತು. ಕಾರಂತರು ಪರಿಸರವನ್ನು ಮನುಷ್ಯನ ಪ್ರತಿಸ್ಪರ್ಧಿಯಾಗಿ ನೋಡಿದರೆ ಕುವೆಂಪು ಆರಾಧನಾ ಭಾವದಿಂದ ನೋಡಿದರು. ಆದರೆ ತೇಜಸ್ವಿ ಪರಿಸರವನ್ನು ಮನುಷ್ಯನ ಆತ್ಮದ ಮತ್ತು ಸಮಾಜದ ದುರಂತದ ಸಂಕೇತವಾಗಿ ನೋಡುತ್ತಾರೆ. ಆದ್ದರಿಂದಲೇ ನನಗನ್ನಿಸಿದ್ದು, ಅವರು ಯಾರಿಗೂ ಉತ್ತರಾಧಿಕಾರಿ ಆಗಿರಲಿಲ್ಲ. ಹಾಗೇ ಅವರಿಗೂ ಯಾರೂ ಉತ್ತಾರಾಧಿಕಾರಿ ಇರಲು ಸಾಧ್ಯವಿಲ್ಲ ಎಂದು.  

 

The article is good. it

The article is good. it gives total insight on Tejasvi, his writing and point of view towards the life.

Syndicate

Syndicate content