ಚಾಂದ್ರಮಾನ - ಸೌರಮಾನ ಯುಗಾದಿ ಆಚರಣೆ
nalinisomayaji.jpg

-ನಳಿನಿ ಸೋಮಯಾಜಿ


ಯುಗ ಯುಗಾದಿ ಕಳೆದರೂ,
ಯುಗಾದಿ ಮರಳಿ ಬರುತಿದೆ,
ಹೊಸವರುಷಕೆ  ಹೊಸ ಹರುಷವ
ಹೊಸತು ಹೊಸತು ತರುತಿದೆ......
ಇದೊಂದು ಕವನದ ಸಾಲುಗಳು.  ಯುಗಾದಿ  ಕವನವೆ ತಿಳಿಸುವಂತೆ ಹೊಸ ವರುಷವನ್ನು  ಹಬ್ಬದ ಆಚರಣೆಯ ಮೂಲಕ ಹರ್ಷವನ್ನು ತರುತ್ತದೆ ಎಂದರೆ ತಪ್ಪಾಗದು. 
ಹೊಸ ವರುಷದ ಆಚರಣೆಯು ಎರಡು  ಬಗೆಗಳಾಗಿವೆ.
ಚಾಂದ್ರಮಾನ ಪಂಚಾಂಗ ವನ್ನು ಅನುಸರಿಸುವ ಮಂದಿ ಚಾಂದ್ರಮಾನ ಯುಗಾದಿಯನ್ನೂ,
(ಚಂದ್ರನ ಚಲನೆಯನ್ನು ಆಧರಿಸಿ ಮಾಡಿದಂಥ ಪಂಚಾಂಗ ಅನುಕರಣೆ) ಹಾಗು ಸೌರ ಪಂಚಾಂಗವನ್ನು ಅನುಸರಿಸುವ ಮಂದಿ ಸೌರ ಯುಗಾದಿಯನ್ನು  ಆಚರಿಸುತ್ತಾರೆ. (ಸೂರ್ಯನ ಚಲನೆಯನ್ನು ಅನುಸರಿಸಿ ಮಾಡಿದಂಥ ಪಂಚಾಂಗ) ಈ ಪಂಚಾಂಗಗಳ ಅನುಕರಣೆ ನಮ್ಮಲ್ಲಿದ್ದ ರಾಜ್ಯವಿಂಗಡಣೆಯು ಕಾರಣವಗಿರಬಹುದೇನೊ? ನಮ್ಮ ಕರ್ನಾಟಕದ ಕೆಲವು ಭಾಗ ಮುಂಚೆ ಆಂದ್ರಪ್ರದೇಶಕ್ಕೆ ಸೇರಿದ್ದರೆ ಕೆಲವು ಭಾಗ ಆಗಿನ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತಂತೆ. ಹೀಗೆಂದು ನನ್ನ ದೊಡ್ಡಮ್ಮ ಹೇಳಿದ್ದಿದೆ.  ಹಾಗಾಗಿ  ಮೈಸೂರು, ಬೆಂಗಳೂರು ಮಡಿಕೇರಿ ಯವರೆಗೆ ಚಾಂದ್ರಮಾನ ಯುಗಾದಿ ಆಚರಣೆ ಕಂಡುಬರುತ್ತದೆ. ದಕ್ಷಿಣಕನ್ನಡದಲ್ಲಿಯು ಕೆಲವಾರು ಮಂದಿ ಚಾಂದ್ರಮನ ಯುಗಾದಿ ಆಚರಿಸುವವರೂ ಇದ್ದಾರೆ.
ಚಾಂದ್ರಮಾನ ಯುಗಾದಿಯಂದು ಬೆಳಿಗ್ಗೆ ಮನೆಯ ಮುಂದಿನ ಬಾಗಿಲಿಗೆ ಮಾವು- ಬೇವು ಎಲೆಗಳನ್ನು ಸೇರಿಸಿ ಮಾಡಿದ ತೋರಣ ಕಟ್ಟುತ್ತಾರೆ. ತಲೆಗೆ  ಎಣ್ಣೆ ಹಾಕಿಕೊಂಡು ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ,  ದೇವರ ಪೂಜೆ ಮಾಡುತ್ತಾರೆ. ಪೂಜೆಯ ನಂತರ ಬೇವಿನಹೂವು ಮತ್ತು ಬೆಲ್ಲದ ಪುಡಿ ಸೇರಿಸಿ ಮಾಡಿದ ವಿಶೇಷ ಪ್ರಸಾದವನ್ನು ತಿನ್ನುತ್ತಾರೆ. ಬೇವು-ಬೆಲ್ಲ ತಿಂದು ಒಳ್ಳೆ ಮಾತಾಡು ಎಂಬ ನುಡಿಮುತ್ತು ನಮಗೆ ಒಳ್ಳೆಯ ಮಾತನಾಡ ಬೇಕೆನ್ನುವುದನ್ನು ತಿಳಿಸುತ್ತದೆ. ಬೇವು-ಬೆಲ್ಲದ ರುಚಿ ಕಹಿ ಮತ್ತು ಸಿಹಿ. ಹಾಗೆಯೆ ನಮ್ಮ ಬಾಳು ಕಷ್ಟ ಸುಖಗಳಿಂದ ಕೂಡಿರುತ್ತದೆ. ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಸಮನಾಗಿ ಬಾಳಬೇಕೆಂಬುದೇ ಬೇವು -ಬೆಲ್ಲ ತಿನ್ನುವುದರ ಸಂಕೇತ. ಯುಗಾದಿಯ ಮರುದಿನ ವರುಷದ ತೊಡಗು ( ಪ್ರಾರಂಭ) ಎಂದೇ ಆಚರಿಸುತ್ತಾರೆ. ಆ ದಿನ ಮಾಡುವ ಕೆಲಸಗಳು ಮತ್ತೆ ಮತ್ತೆ ನಾವು ಮಾಡುತ್ತಿರುತ್ತೇವೆ ಎನ್ನುವ ನಂಬಿಕೆ ಇದೆ. ಹಾಗಾಗಿ ವರ್ಷದ ತೊಡಗಿನಂದು ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಜನ ಪ್ರಯತ್ನಿಸುತ್ತಾರೆ. ಇವು ಚಾಂದ್ರಮಾನ ಯುಗಾದಿಯ ವಿಶೇಷತೆಗಳು.
ಸೌರಮಾನ ಯುಗಾದಿಯ ವಿಶೇಷತೆಯೆ ಮತ್ತೊಂದು ವಿಧ. ಮುಂಚೆಯೆ ಹೇಳಿದಂತೆ ಸೌರಮಾನ ಪಂಚಾಂಗವು ಸೂರ್ಯನ ಚಲನೆಯನ್ನು ಆಧರಿಸಿ ಮಾಡಲಾಗುತ್ತದೆ. ದಕ್ಷಿಣಕನ್ನಡ ಜಿಲ್ಲೆಯ ಹೆಚ್ಚಿನ ಜನ ಸೌರ ಪಂಚಾಂಗವನ್ನು ಅನುಸರಿಸುತ್ತಾರೆ. ಕಾರಣ ಈ ಮೊದಲು ಮದ್ರಾಸ್ ಪ್ರಾಂತ್ಯ ದಲ್ಲಿ ಸೇರಿ ಹೋಗಿದ್ದುದೇ ಇರಬಹುದೇನೊ. ಸೌರ -ಯುಗಾದಿಯ ವಿಶೇಷತೆ ಖಣಿ ಇಡುವುದರಿಂದ ಪ್ರಾರಂಭವಾಗುತ್ತದೆ. ಖಣಿ ಎಂದರೆ ಒಂದು ಬಾಳೆ ಎಲೆ ಅಥವಾ ಹರಿವಾಣ (ತಟ್ಟೆ) ದಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ತೆಂಗಿನಕಾಯಿ ,ಊರ ಸೌತೆಕಾಯಿ,  ಒಂದು ರವಿಕೆ ಕಣ ಅಥವ ಹೊಸ ಬಟ್ಟೆ ಇಟ್ಟು ಮೇಲಿನಿಂದ ಚಿನ್ನ ಇಟ್ಟು ಹರಿವಾಣದ ಮುಂಭಾಗದಲ್ಲಿ ದೇವರ ಪ್ರತಿಮೆ ಅಥವಾ ದೇವರ ಫೋಟೊ ಇಟ್ಟು ಅದರ ಮುಂದೆ ಒಂದು ಕನ್ನಡಿ ಇಟ್ಟು, ಕನ್ನಡಿಯಲ್ಲಿ ದೇವರು ಮತ್ತು ಅಲ್ಲಿ ಇಟ್ಟಂತಹ ವಸ್ತುಗಳು ಕಾಣುವ ಹಾಗೆ ಜೋಡಿಸಿ ಇಡಬೇಕು. ಕೆಲವುಕಡೆ  ಬತ್ತದತೆನೆ ಹಾಗು ಹಲವಾರು ಬಗೆ ಹಣ್ಣು- ತರಕಾರಿಗಳನ್ನು ಇಡುವ ಪದ್ದತಿ ಸಹ ಇದೆ. ತಮ್ಮ ಭೂಮಿಯಲ್ಲಿ ಬೆಳೆದ  ಬೆಳೆಗಳನ್ನು ದೇವರಿಗೆ ಅರ್ಪಿಸುವ ಪರಿ(ಬಗೆ) ಇದೇನೊ?
ಮುಂಚಿನ ದಿನ ರಾತ್ರಿ ಮಲಗುವ ಮುನ್ನ ದೇವರ ಮುಂದೆ ಖಣಿ ಇಟ್ಟು  ಮಲಗುವರು. ಯುಗಾದಿ ಹಬ್ಬದ ದಿನ ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲ್ಲಿ ದೇವರ ದರ್ಶನ ಪಡೆಯುವರು. ಮನೆಯ ಪ್ರತಿಯೊಬ್ಬರೂ ಏಳುತ್ತಿದ್ದಂತೆ ಕಣ್ಣು ಮುಚ್ಚಿಕೊಂಡು ಖಣಿಯ ಬಳಿ ಬಂದು ದೇವರನ್ನು ಪ್ರಾರ್ಥಿಸುತ್ತಾ ಕನ್ನಡಿಯಲ್ಲಿ ದೇವರ ದರ್ಶನ ಪಡೆಯುವುದು ಅಂದಿನ ವಿಶೇಷ. ದೇವರೇ ಸೃಷ್ಟಿಸಿದ ಪ್ರಕೃತಿಯಲ್ಲಿ ಸಿಗುವ ಈ ಎಲ್ಲ ಬಗೆಗಳನ್ನು ನೋಡುತ್ತಾ ದೇವರಿಗೆ ವಂದನೆ ಸಲ್ಲಿಸುವ ಈ ಪದ್ದತಿ ನಮಗೆ ಒಂದು ರೀತಿಯ ಭಕ್ತಿಯನ್ನು ಮತ್ತು ಸಾತ್ವಿಕತೆಯನ್ನು ಮನದಲ್ಲಿ ಮೂಡಿಸುತ್ತದೆ ಎಂದರೆ ತಪ್ಪಾಗದೇನೋ ?
ದೇವರ ದರ್ಶನದ ನಂತರ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ದೇವಸ್ತಾನಕ್ಕೆ ಭೇಟಿ ಕೊಟ್ಟು ಮನೆಯಲ್ಲಿ ಹಬ್ಬದ ಊಟ ( ಹೋಳಿಗೆ,ಚಿತ್ರಾನ್ನ ಮತ್ತು ಪಾಯಸಗಳ ಮೃಷ್ಟಾನ್ನ ಭೋಜನ) ಮಾಡಿ ಆ ವರ್ಷದ ಪಂಚಾಂಗ ಶ್ರವಣ ಮಾಡಿ ರಾಶಿ ಫಲಗಳನ್ನು ತಿಳಿದುಕೊಳ್ಳುವುದು ವಾಡಿಕೆ. ಚಾಂದ್ರಮಾನ ಯುಗಾದಿಯಲ್ಲಿ ಇರುವಂತೆ , ಸೌರ ಯುಗಾದಿಯ ಮರುದಿನ ವರ್ಷದ ತೊಡಕು  ಅಥವಾ ತೊಡಗು ಆಚರಣೆ ಉಂಟು.
ಮೊದಲೇ ಹೇಳಿದಂತೆ ದಕ್ಷಿಣ ಕನ್ನಡದ ಹೆಚ್ಚಿನ ಜನ ಸೌರ ಯುಗಾದಿಯನ್ನು ಆಚರಿಸುತ್ತಾರೆ. ಕೆಲವರು  ಈ ದಿನವನ್ನು ಬಿಸುಪರ್ಬ ಎಂತಲೂ ಕರೆಯುತ್ತಾರೆ. ಖಣಿ ಇಟ್ಟರೂ ಅದರಲ್ಲಿನ ಕನ್ನಡಿಯಲ್ಲಿ ತಮ್ಮ ಮುಖವನ್ನೆ ಬೆಳಗೆದ್ದು ನೋಡಿಕೊಳ್ಳುವುದು ವಾಡಿಕೆಯಲ್ಲಿದೆ ಎಂದು , ನೆನ್ನೆಯಷ್ಟೆ ದೂರದರ್ಶನ ದಲ್ಲಿ  ನೋಡಿ ತಿಳಿದೆ.
ಇನ್ನು ನಮ್ಮ ಮಲೆಯಾಳಿ ಸ್ನೇಹಿತರು ಹೇಳುವಂತೆ  ಖಣಿ ಇಡುವ ಪದ್ದತಿ ಅವರಲ್ಲಿ ಇದೆಯಾದರೂ ಅಲ್ಲಿಯ ಹಿರಿಯರು ಮಕ್ಕಳನ್ನು ಎಬ್ಬಿಸಿ ಕಣ್ಣುಮುಚ್ಚಿ ದೇವರ  ಮುಂದೆ  ಕರೆತರುತ್ತಾರೆ. ಮೊದಲು ದೇವರ ದರ್ಶನ ನಂತರ ಮನೆಯ ಹಿರಿಯರಿಗೆಲ್ಲ ನಮಸ್ಕಾರ.  ಮನೆಯ ಹಿರಿಯರು ಕಿರಿಯರಿಗೆ ಹೊಸ ಬಟ್ಟೆ ಮತ್ತು ದುಡ್ಡು ( ಹಣ ) ಕೊಟ್ಟು ಆಶೀರ್ವದಿಸುತ್ತಾರೆ. ತಮಿಳರು ಹೊಸವರ್ಷ ಎಂದು ಕರೆದರೆ ಮಲಯಾಳಿಗಳು ವಿಶು ಎಂದು ಹಬ್ಬ ಆಚರಿಸುತ್ತಾರೆ.
ಗುಜರಾತಿ ಮಹಾರಾಷ್ಟ್ರದ ಜನ ಕುಡಿ-ಪಾವಡ ಅಥವಾ ಗುಡಿ-ಪಾವಡ ಎಂದು ಕರೆಯುತ್ತಾರೆ.
ಹೀಗೆ ಆಚರಣೆಗಳು ಅಲ್ಲಿ - ಇಲ್ಲಿ ಸ್ವಲ್ಪ ಬದಲಾವಣೆ ಇದ್ದರೂ, ನಾವೆಲ್ಲರೂ ಒಂದೇ. ಮಾನವ ಜನಾಂಗ ಮಾಡಿಕೊಂಡು ರೂಢಿಸಿಕೊಂಡ ಪದ್ದತಿಗಳು ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ಹಬ್ಬಗಳ ಆಚರಣೆ ಹೆಚ್ಚು ಕಡಿಮೆ ಒಂದೇ ಆಗಿದೆ.
ಇದು ನನಗೆ ಗೊತ್ತಿದ್ದ ರೀತಿಯಲ್ಲಿ ಯುಗಾದಿ ಹಬ್ಬದ ಆಚರಣೆಯ  ಮೂಲಕ ಹೊಸ ವರ್ಷದ ಸ್ವಾಗತ. ಸೌರ ಯುಗಾದಿಯು ಸಾದಾರಣವಾಗಿ ಎಪ್ರಿಲ್ ೧೪ ರಂದು ಆಚರಿಸಲಾಗುತ್ತದೆ. ಚಾಂದ್ರಮಾನ ಯುಗಾದಿಯು ಎಪ್ರಿಲ್ ೬ ಅಂದು ಆಚರಿಸಲಾಯಿತು
ಎಲ್ಲರಿಗೂ ಈ ವರ್ಷದ ಸರ್ವಧಾರಿ ಸಂವತ್ಸರದ  ಹಾರ್ದಿಕ ಶುಭಾಶಯಗಳನ್ನು ಹಾರೈಸುವೆವು.
                  ಶುಭ ಹಾರೈಕೆ
       ಸರ್ವಧಾರಿ ಸಂವತ್ಸರದ ಈ ಹೊಸ ವರ್ಷ
       ಸರ್ವರಿಗೂ ನೀಡಲಿ ಸದಾ ಹರ್ಷ
       ಆಚರಿಸೋಣ ಹಬ್ಬಗಳನ್ನು ಕೂಡಿ ಸಂಭ್ರಮದಿಂದ
       ಬೆರೆತು ಬಾಳೋಣ ಸುಖ ಸಂತೋಷದಿಂದ.

                ****

Syndicate

Syndicate content