ಮಲೆನಾಡು-ಎತ್ತ ಸಾಗುತ್ತಿದೆ?
malenadu.jpg

- ಅರ್ಶದ್ ಹುಸೇನ್ ಎಂ. ಹೆಚ್.

ಮೇಲಿನ ಚಿತ್ರ ಇತ್ತೀಚೆಗೆ ತೆಗೆದದ್ದು. ನೋಡಲು ಅತ್ಯಂತ ಸುಂದರವಾಗಿ ಕಂಡಿತಲ್ಲಾ. ನಮಗೂ ಹೀಗೇ ಕಂಡಿತ್ತು. ತೀರ್ಥಹಳ್ಳಿ - ಕೊಪ್ಪ ರಸ್ತೆಯ ನಡುವೆ ಕಂಡುಬಂದ ಒಂದು ದೃಶ್ಯವಿದು. ಇಡಿಯ ಮಲೆನಾಡಿನಲ್ಲೇ  ಕಂಡುಬರುವ ಯಾವುದೇ ಗದ್ದೆಯ ಸಾಮಾನ್ಯ ನೋಟವಿದು. ಅರೆ, ಸುಂದರವಾಗಿಯೇ ಇದೆಯಲ್ಲಾ, ಮಲೆನಾಡಿಗೇನಾಗುತ್ತಿದೆ?

ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಮಲೆನಾಡಿನ ಹಳೆಯ ತಲೆಗಳು ಏನೆನ್ನುತ್ತವೆ ಸ್ವಲ್ಪ ಕೇಳಬೇಕು. ಕುವೆಂಪುರವರ ಮಲೆನಾಡ ಚಿತ್ರಣಗಳಿಂದ ಚಿತ್ರಿತವಾದ ಕಾಲದಿಂದಲೂ ಮಲೆನಾಡಿನಲ್ಲಿ ಭತ್ತಕ್ಕೆ ಪ್ರಾಶಸ್ತ್ಯ ಹೆಚ್ಚು. ಆದರೆ ಭತ್ತ ಮಾತ್ರವಲ್ಲದೇ ಅಡಿಕೆ, ಕಾಳುಮೆಣಸು, ಕಾಫಿ, ಇತ್ಯಾದಿ ಉಪಬೆಳೆಗಳೂ ರೈತರನ್ನು ಸಾಕಷ್ಟು ಮಟ್ಟಿಗೆ ಸಮೃದ್ಧವಾಗಿಯೇ ಇರಿಸಿದ್ದವು.

ಕಳೆದ ವರ್ಷಗಳಲ್ಲಿ ನಗರ ಹಾಗೂ ವಿದೇಶಗಳಲ್ಲಿ ಪಾನ್ ಪರಾಗ್ ಗುಟ್ಕಾ ಸೇವನೆ ಹಾಗೂ ರಫ್ತು ಹೆಚ್ಚಾದ ಕಾರಣ ಮಲೆನಾಡಿನ ಅಡಿಕೆಗೆ ಉತ್ತಮ ಬೆಲೆ ದೊರಕಿತ್ತು. ಅಡಿಕೆ ಬೆಳೆದವರು ಧಿಢೀರ್ ಶ್ರೀಮಂತರಾಗಿ ಭತ್ತ ಬೆಳೆದವರ ಹೊಟ್ಟೆ ಉರಿಸಿದ್ದು ಇತಿಹಾಸ.  ಆದರೆ ಅಡಿಕೆ ನಮಗೆ ಮುಖ್ಯ ಆಹಾರವಲ್ಲ, ಕೇವಲ ಚಟವಷ್ಟೇ. ಹಾಗಾಗಿ ಹಿಂದಿನವರು ಅಡಿಕೆ ಬೆಳೆಯುತ್ತಿದ್ದರೂ ಭತ್ತಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದರು. ಬೆಲ್ಲ ಮಾಡಲು ಕಬ್ಬು, ಕಾಳುಮೆಣಸು, ಏಲಕ್ಕಿ ಇನ್ನಿತರ ಬೆಳೆಗಳನ್ನೂ ಉಪಬೆಳೆಯನ್ನಾಗಿ ಬೆಳೆಯುತ್ತಿದ್ದರೂ ಯಾವುದೇ ಬೆಳೆಗಾಗಿ ಭತ್ತವನ್ನು ಬಲಿಕೊಟ್ಟಿರಲಿಲ್ಲ.

ಬಳಿಕ ಬಂದ ಸರಕಾರಗಳು ಬಡವರಿಗೆ ಅಕ್ಕಿ ನೀಡುವ ಉದ್ದೇಶದಿಂದ ಹಾಕಿದ ಲೆವಿ, ಅಕ್ಕಿಯ ಬೆಲೆಯೇರಿಕೆಗೆ ಕಡಿವಾಣ ಇತ್ಯಾದಿಗಳು ಭತ್ತದ ಬೆಲೆಯನ್ನು ನೆಲಮಟ್ಟದಲ್ಲಿಯೇ ಇರಿಸಿದ್ದವು. ಆದರೆ ಅಡಿಕೆಗೂ ಅಂತಹ ಶುಕ್ರದೆಸೆ ಬಂದಿರದ ಕಾರಣ ಅಡಿಕೆಗೆ ಕೆಲಸ ಕಡಿಮೆ ಎಂಬ ಕಾರಣಕ್ಕಾಗಿ ಮಾತ್ರ ಕೊಂಚ ಮಟ್ಟಿನ ಭತ್ತದ ಗದ್ದೆಯನ್ನು ಅಡಿಕೆ ತೋಟವನ್ನಾಗಿ ಪರಿವರ್ತಿಸುವುದು ಮಾಮೂಲಾಗಿತ್ತು. ಸುಮಾರು ಆರು ಎಂಟು ವರ್ಷಗಳ ಹಿಂದೆ ಧಿಡೀರ್ ಏರಿದ ಬೇಡಿಕೆ ಹಾಗೂ ಅದಕ್ಕನುಗುಣವಾದ ವಿಪರೀತ ಏರಿದ ಬೆಲೆ ಮಲೆನಾಡಿನವರನ್ನು ಬೆಚ್ಚಿ ಬೀಳಿಸಿತ್ತು. ಆ ದಿನಗಳಲ್ಲಿ ಅಡಿಕೆ ಬೆಳೆಗಾರರು ಪಡೆದ ಲಕ್ಷಗಟ್ಟಲೆ ಹಣ ಉಳಿದವರನ್ನೂ ಅಡಿಕೆ ಬೆಳೆ ಬೆಳೆಯುವತ್ತ ವಾಲಿಸಿದ್ದು ಅಕ್ಷರಶಃ ಸತ್ಯ.

ಇನ್ನೇನಾಗಬೇಕು, ಅಂದಿನಿಂದ ಪ್ರತಿವರ್ಷ ನೂರಾರು ಎಕರೆ ಭತ್ತದ ಗದ್ದೆ ಅಡಿಕೆ ತೋಟಗಳಾಗಿ ಪರಿವರ್ತಿತವಾಗುತ್ತಿವೆ. ಮೇಲೆ ನೋಡಿದ ಚಿತ್ರ ಕೂಡಾ ಅಂತಹದ್ದೊಂದು ಭತ್ತದ ಗದ್ದೆ ಅಡಿಕೆ ತೋಟವಾಗಿ ಪರಿವರ್ತಿತವಾಗುತ್ತಿರುವ ದೃಶ್ಯ.  ಹಿಂದೊಂದು ದಿನ ಇಡಿಯ ಭತ್ತದ ಗದ್ದೆಯೇ ಆಗಿತ್ತು. ಸೂಕ್ಷ್ಮವಾಗಿ ಗಮನಿಸಿದರೆ ಭತ್ತದ ಹಿಂದೆ ಅಡಿಕೆ ಗಿಡಗಳು ಭತ್ತದ ಗದ್ದೆಯನ್ನು ಆಕ್ರಮಿಸಿರುವುದನ್ನು ಕಾಣಬಹುದು. ಅದರ ಹಿಂದಿರುವ ಸುಮಾರು ಹತ್ತು ಅಡಿ ಎತ್ತರದ ಅಡಿಕೆ ಮರಗಳು ಕಳೆದ ವರ್ಷಗಳಲ್ಲೆ ನೆಟ್ಟವು. ಇನ್ನೂ ಹಿಂದೆ ಫಸಲಿಗೆ ಬಂದ ಮರಗಳಿವೆ (ಚಿತ್ರದಲ್ಲಿ ಕಾಣುತ್ತಿಲ್ಲ)

ಪರೋಕ್ಷವಾಗಿ ಭತ್ತ ಬೆಳೆಯುವುದೇ ಮಲೆನಾಡಿನಲ್ಲಿ ವಿರಳವಾಗುತ್ತಿದೆ. ಏನೇ ಆದರೂ ಊಟ ಮಾಡುವ ಭತ್ತಕ್ಕೆ ತಿಲಾಂಜಲಿ ನೀಡಲು ನಿರಾಕರಿಸಿರುವ ಹಿರಿಯರ ಗದ್ದೆಗಳಲ್ಲಿ ಮಾತ್ರ ಭತ್ತ ಕಾಣಬರುತ್ತಿದೆ. ಹಣಕ್ಕೆ ಪ್ರಾಮುಖ್ಯತೆ ನೀಡುವವರು ಅಡಿಕೆಯ ಬೆಲೆಗೆ ಮನಸೋಲುತ್ತಿದ್ದಾರೆ.

ಸರ್ಕಾರದ ಬಡವರಿಗೆ ಅಕ್ಕಿ ಯೋಜನೆಗಳಿಂದ ಭತ್ತ ಹಾಗೂ ಅದರ ಅವಲಂಬಿತ ಉದ್ಯಮಗಳು ಈಗಾಗಲೇ ಅವನತಿ ಕಾಣುತ್ತಿವೆ. ಕುಚ್ಚಿಗೆ ಅಕ್ಕಿ ಬೇಯಿಸುವುದು ಮಲೆನಾಡಿನಿಂದಲೇ ಮರೆಯಾಗಿದೆ. ಒಟ್ಟಾರೆ ಭತ್ತ ನಂಬಿದವ ಕೆಟ್ಟ ಎಂಬ ಭಾವನೆ ಮಲೆನಾಡಿನಲ್ಲಿ ದಟ್ಟವಾಗಿ ಬೆಳೆಯತೊಡಗಿದೆ.

ವಾಸ್ತವದಲ್ಲಿ ಅಡಿಕೆಗೆ ಬೇಡಿಕೆ ಕಡಿಮೆಯಾಗಿರುವುದು ಅದರ ಬೆಲೆ ಇಳಿಯುವ ಮುಖ್ಯ ಕಾರಣವಾಗಿದೆ. ಹಿಂದಿನ ವಾರ ಮಹಾರಾಷ್ಟ್ರದಲ್ಲಿ ಗುಟ್ಕಾ ಸೇವನೆ ನಿಷಿದ್ಧವೆಂಬ ಸುದ್ದಿಯಿಂದಲೇ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಒಂದು ವೇಳೆ ಇದು ಕಡ್ಡಾಯವಾಗಿ ಅನುಷ್ಠಾನಕ್ಕೆ ಬಂದರೆ ಅಡಿಕೆಯ ಬೆಲೆ ಪಾತಾಳಕ್ಕಿಳಿಯುತ್ತದೆ. ಅಕಾಲಿಕ ಮಳೆ, ಹಳದಿ ರೋಗ ಇತ್ಯಾದಿಗಳು ಈಗಾಗಲೇ ಅಡಿಕೆ ಬೆಳೆಗಾರರನ್ನು ಸಾಕಷ್ಟು ದಂಡಿಸಿದೆ. ಭತ್ತ ಬಲಿ ಕೊಟ್ಟು ಅಡಿಕೆ ಬೆಳೆದದ್ದು ಸರಿಯೇ ಎಂದು ಚಿಂತಿಸುವ ದಿನಗಳು ಹತ್ತಿರವಾಗಿವೆ. ಸುಮಾರು ಆರು ಎಂಟು ವರ್ಷಗಳ ಹಿಂದೆ ನೆಟ್ಟಿದ್ದ ಅಡಿಕೆ ಮರಗಳೂ ಈಗ ಫಸಲು ನೀಡಲು ತಯಾರಾಗಿದ್ದು ಬೇಡಿಕೆಗಿಂತಲೂ ಹೆಚ್ಚಿನ ಉತ್ಪಾದನೆಯಾಗಿರುವುರು ಇನ್ನೂ ಬೆಲೆ ಇಳಿಸಲು ಕಾರಣವಾಗಬಹುದು.

ಕುಸಿದ ಅಡಿಕೆ ಬೆಲೆ ಮೇಲೇರಬಹುದೇ? ಭತ್ತದ ಗದ್ದೆಯನ್ನು ಸ್ವಾಹಾ ಮಾಡಿ ಮೇಲೆದ್ದು ಬಂದ ಅಡಿಕೆ ಭತ್ತದ ತ್ಯಾಗವನ್ನು ಸಮರ್ಪಕವಾಗಿ ತೂಗಿಸಬಲ್ಲುದೇ?

ಕಾದು ನೋಡಬೇಕು. ಆದರೆ ಸುಂದರ ಭತ್ತದ ಗದ್ದೆ ಅಡಿಕೆಯಾಗಿ ಪರಿವರ್ತಿತವಾಗಿರುವುದು ಮತ್ತೆ ಭತ್ತದ ಗದ್ದೆಯಾಗಲು ಸಾಧ್ಯತೆಗಳು ಕಡಿಮೆ ಎಂಬುದೇ ಆಭಾಸ.

Beautiful! vastava chitraNa

Beautiful!
vastava chitraNa from arshad Saaheb! Who always keeps thinking of his roots.

Best of luck!

Syndicate

Syndicate content