-ಜಯರಾಮ ಸೋಮಯಾಜಿ
ಪರದೇಶಗಳಿಗೆ, ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ನಿಮಿತ್ತ ಬಂದಿರುವವರ ಕನ್ನಡಿಗ ಮಕ್ಕಳ ವಿದ್ಯಾಭ್ಯಾಸದ ಮುಂದುವರಿಕೆ ಹೇಗೆ ಎಂಬುದು ಅವರವರ ಮಕ್ಕಳು ಇಲ್ಲಿನ ಶಾಲಾಭ್ಯಾಸ ಮುಗಿಯುವ ವೇಳೆಗೆ ಹೆತ್ತವರಿಗೆ ಬಿಸಿ ತಟ್ಟುತ್ತದೆ. ಮುಂದೇನು? ಎಲ್ಲಿಗೆ ಕಳುಹಿಸುವುದು? ಮಕ್ಕಳನ್ನು ಮಾತ್ರ ಕಳುಹಿಸುವುದೋ? ಅಥವಾ ತಾಯಿಯನ್ನು ಒಟ್ಟಿಗೆ ಕಳುಹಿಸುವುದೋ? ಯಾವ ಕಾಲೇಜಿನಲ್ಲಿ...? ಯಾವ ಊರಿನಲ್ಲಿ...? ಹೀಗೆ ನಾನಾ ವಿಧದ ಪ್ರಶ್ನೆಗಳು.
ಬಾಲವಾಡಿಯಿಂದ ಹತ್ತನೇ ತರಗತಿಯವರೆಗೆ ಬರುವ ತನಕ ಆ ಯೋಚನೆ
ಇರುವುದಿಲ್ಲ. ನಂತರ ಇನ್ನು ಮುಂದೇನು ಎಂಬ ಪ್ರಶ್ನೆ ಕಾಡುತ್ತದೆ. ಮಕ್ಕಳು ಹನ್ನೆರಡನೇ
ಕ್ಲಾಸು (ಪಿ.ಯು. ಸಿ) ಮುಗಿಸಿದ ನಂತರ ನಮ್ಮ ದೇಶದಲ್ಲಿ ವಿದ್ಯಾಭ್ಯಾಸ
ಮುಂದುವರಿಸಬಹುದು. ಆದರೆ ವೃತ್ತಿಪರ ಶಿಕ್ಷಣ- ತಾಂತ್ರಿಕ, ವೈದ್ಯಕೀಯ ಕಾಲೇಜುಗಳಿಗೆ ಹೆತ್ತವರು ಅವರನ್ನು ಪಿ.ಯು.ಸಿ.ಯ ಮೊದಲ ವರ್ಷದಲ್ಲಿ ಭಾರತಕ್ಕೆ ಕಳುಹಿಸಲು ಯೋಚಿಸುತ್ತಾರೆ. ಕಾರಣ- ಮಕ್ಕಳಿಗೆ ಇರುವ ಜಾಗದ ಹೊಂದಾಣಿಕೆ, ಅಲ್ಲಿಯ ಕಲಿಕೆಯ ಹೊಂದಾಣಿಕೆ, ಪರಿಸರದ ಹೊಂದಾಣಿಕೆ ಮತ್ತು ಕಲಿಯಲು ಬೇಕಾದ ತಕ್ಕ ವಾತಾವರಣ ಇದರ ಪರಿಚಯ ಓದುವ ಮಕ್ಕಳಿಗೆ ಇರುವುದು ಒಳ್ಳೆಯದೆ.... ಹೀಗೆ ವಿದ್ಯಾಭ್ಯಾಸದ ಮುಂದುವರಿಕೆಗೆ ಮಕ್ಕಳು ಪಡಬೇಕಾದ ಕಷ್ಟಗಳು ಹಲವು. ಬೇಕಾದ ಕಾಲೇಜು ಸಿಗದೇ ಇರುವುದು, ಇಲ್ಲಿಯೆ ಹುಟ್ಟಿ ಬೆಳೆದು ಸುಖ ಜೀವನಕ್ಕೆ ಅಂಟಿ ಕೊಂಡ ಇವರು ಭಾರತೀಯ ಜನಜೀವನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು. ಕಲಿಕೆಯು
ಹಾಗೆಯೇ. ಇಲ್ಲಿ ಆರಾಮದಲ್ಲಿ ಇದ್ದ ಅವರಿಗೆ ಪಾಠಕ್ಕೆ ಹೋಗುವುದು ಸ್ವಲ್ಪ
ಕಷ್ಟಕರವಾಗಿರುತ್ತೆ. ಸ್ವಲ್ಪ ಆಚೀಚೆ ನಡೆಯಲೇ ಬೇಕಾದ ಸಂದರ್ಭ. ಎಲ್ಲವನ್ನು
ಎದುರಿಸುವ ಸ್ಥೈರ್ಯ ಬೇಕಷ್ಟೆ...
ಹತ್ತನೇ ತರಗತಿಯ ನಂತರ ಹೋದರೂ ಒಳ್ಳೆಯ ಕಾಲೇಜುಗಳಲ್ಲಿ ಸೀಟು ಸಿಗುವುದು ಕಷ್ಟವಾಗಬಹುದು. ಅಲ್ಲಿಯ ಮಕ್ಕಳೊಡನೆ ಹೊಂದಾಣಿಕೆ, ಎಲ್ಲವನ್ನೂ
ಕಲಿಯಬೇಕಾಗುತ್ತದೆ ಮತ್ತು ಇಲ್ಲಿಯ ನೆನಪುಗಳು ಕಾಡಲೂಬಹುದು. ಸಣ್ಣ ಕಾಲೇಜುಗಳು ಸಾಕಷ್ಟು ಡೊನೇಶನ್ ಕೇಳಬಹುದು. ಹನ್ನೊಂದು ಹನ್ನೆರಡು ತರಗತಿ ಮುಗಿಸಿದ ನಂತರ ಅವರು ಸಿ. ಇ.ಟಿ ಗೆ ಕುಳಿತು ಪರೀಕ್ಷೆ ಬರೆಯಬಹುದು. ಆದರೆ ಅವರೆಲ್ಲರಿಗೆ ಒಳ್ಳೆಯ ಕಾಲೇಜಿನಲ್ಲಿ ಪ್ರವೇಶ ಸಿಗುವುದು ಕಷ್ಟದ ಮಾತು.ಇನ್ನು ಇಲ್ಲಿ ಹನ್ನೆರಡು ಮುಗಿಸಿ ವಿದ್ಯಾಭ್ಯಾಸಕ್ಕೆ ಭಾರತಕ್ಕೆ ಹೋಗುವ ಮಕ್ಕಳ ಪರಿಸ್ಥಿತಿ... ಅಲ್ಲಿ ಎಂಟ್ರೆನ್ಸ್ ಪರೀಕ್ಷೆ ಬರೆದರೂ ಸಾಕಷ್ಟು ಹಣ ಕೊಡದಿದ್ದರೆ ಒಳ್ಳೆಯ ಕಾಲೇಜು ಸಿಗದೇ ಮೇನೇಜಮೆಂಟಿನ ಸೀಟಿನ ಮೊರೆ ಹೋಗಬೇಕಾಗಬಹುದು.
ಉನ್ನತ ವಿದ್ಯಾಬ್ಯಾಸಕ್ಕಾಗಿ ಪ್ರಪಂಚದ ಎಲ್ಲಾಕಡೆಗಳಿಗಿಂತ ( ಅಮೇರಿಕಾ
ಮತ್ತು ಯುರೋಪ್ ರಾಷ್ಟ್ರ ಗಳು ) ಭಾರತವೇ ಉತ್ತಮ ದೇಶ ಎಂಬ ಮಾತಿದ್ದರೂ, ಭಾರತದಲ್ಲಿ ಕೊಡಬೇಕಾದ ಡೊನೇಶನ್ ಲೆಕ್ಕಚಾರ ಹಾಕಿ ಹೊರದೇಶಗಳೇ ಉತ್ತಮ ಎಂದು ಬೇರೆ ದೇಶಗಳಿಗೆ ಹೋಗುವ ವಿದ್ಯಾರ್ಥಿ ಗಳೂ ಇಲ್ಲದಿಲ್ಲ. ಯು.ಎ. ಇ. (ಯುನ್ಯೆಟೆಡ್ ಅರಬ್ ಎಮಿರೆಟ್ಸ್) ಇದು ನಾವಿರುವ ಸ್ಥಳ.ಇಲ್ಲಿ ಕೆಲವಾರು ವಿಶ್ವ ವಿದ್ಯಾಲಯ ಗಳು ತಮ್ಮ ಶಾಖೆ ಗಳನ್ನು ತೆರೆದಿವೆ. ಉದಾಹರಣೆಗೆ ಬಿಟ್ಸ್ ಪಿಲಾನಿ, ಮಾಹೆ ,ಡೆಲ್ಲಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಶಾಖೆಗಳು ಮತ್ತು ಕೇರಳದ ಕೆಲವಾರು ಎಂಜಿನಿಯರಿಂಗ್ ಕಾಲೇಜುಗಳ ಶಾಖೆ ಗಳು ಡೆಲ್ಲಿ ಒಪನ್ ಯೂನಿವರ್ಸಿಟಿ ಹೀಗೆ ಭಾರತದಲ್ಲಿನ ಹಲವಾರು ಕಾಲೇಜುಗಳ ಶಾಖೆಗಳನ್ನು ನಾವು ನೋಡಬಹುದು.
ಇಷ್ಟು ಮಾತ್ರವಲ್ಲದೆ ಪ್ರಪಂಚದ ಇತರ ರಾಷ್ಟ್ರಗಳಾದ ಆಸ್ಟ್ರೇಲಿಯ,
ಅಮೇರಿಕಾ, ಇಂಗ್ಲೆಂಡ್.....ಹೀಗೆ ನಾನಾದೇಶ ಗಳು ತಮ್ಮ ವಿದ್ಯಾಲಯಗಳ
ಶಾಖೆಗಳನ್ನು ಇಲ್ಲಿ ತೆರೆದಿವೆ. ಹಣ ವಿದ್ದಲ್ಲಿ ನಾವು ಮಕ್ಕಳನ್ನು ನಮ್ಮೊಡನೆ ಇಟ್ಟುಕೊಂಡು ಓದಿಸಬಹುದಾಗಿದೆ.
ಏನೇ ಆದರೂ ನಮ್ಮ ದೇಶದಲ್ಲಿ ಅನಿವಾಸಿ ಮಕ್ಕಳಿಗೆ ಪ್ರಧಾನತೆ
ಸಿಗುತ್ತಾ ಇಲ್ಲ ಅನ್ನೋದೆ ನಮ್ಮ ಕೊರಗು. ಅದೂ ನಮ್ಮ ಮಕ್ಕಳ ಸರದಿ ಬಂದಾಗ
ಸರಿಯಾದ ಕಾಲೇಜ್ ಸಿಕ್ಕದೇ ಇದ್ದಾಗ ಈ ಕೊರಗು ಸ್ವಲ್ಪ ಮಟ್ಟಿಗೆ ಬೇಸರ ತರುತ್ತೆ.. ೫ ವರುಷ ದ ಹಿಂದೆ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪ್ರವೇಶಕ್ಕೆ ಸಿ ಇ ಟಿ ಬರೆಯಬೆಕಾದರೆ ಇಲ್ಲಿನ ಮಕ್ಕಳು ಕರ್ನಾಟಕದಲ್ಲಿ ಕಡ್ಡಾಯವಾಗಿ ೫ ವರ್ಷ
ಕಲಿತಿರಬೇಕೆಂಬ ಕಾನೂನಿತ್ತು. ಆಗೆಲ್ಲ ತಮ್ಮ ಮಕ್ಕಳನ್ನು ಅಗಲಿ ಇರಬೇಕಾದ
ಕಷ್ಟ ಅನುಭವಿಸಿದವರಿಗೇ ಗೊತ್ತು. ಈಗ ಈ ಅವಧಿಯು ೨ ವರುಷ ಕ್ಕೆ ಬಂದಿದೆ.
ಆದರೂ ಸಿ.ಇ.ಟಿ ಅ ಮೂಲಕ ಆರಿಸುವಾಗ ಎನೇನೋ ತಕರಾರು...ಹಾಗಾಗಿ ಇತ್ತೀಚೆಗೆ ಪೋಷಕರು ಆದಷ್ಟೂ ಮ್ಯಾನೇಜ್ ಮೆಂಟ್ ಸೀಟಿಗೆ ಮೊರೆ ಹೋಗುತ್ತಾರೆ. ಖಾಸಗಿ ಕಾಲೇಜಿನವರು ದುಡ್ಡು ಮಾಡಿಕೊಳ್ಳುವ ಒಂದು ಸುಸಂದರ್ಭ. ಪೋಷಕರಿಗೂ ಮಕ್ಕಳ ವಿಧ್ಯಾಬ್ಯಾಸ ವೇ ಮುಖ್ಯವಾದ್ದರಿಂದ ಆದಷ್ಟೂ ಮ್ಯಾನೇಜ್ ಮೆಂಟ್ ಸೀಟಿಗೇ ಶರಣಾಗುವ ಸಾಧ್ಯತೆಯೇ ಹೆಚ್ಹು. ಇದಲ್ಲದೆ ಸಿ ಇ ಟಿ ಬರೆಯುವವರಿಗೆ ಸ್ವಲ್ಪ ಕನ್ನಡ ಗೊತ್ತಿರಬೇಕು
ಎಂಬ ಕಾರಣವು ಸೇರಿದೆಯೇನೊ? ಕೆ.ಜಿ ತರಗತಿಯಿಂದ ಹಿಡಿದು ಹನ್ನೆರಡನೆ
ತರಗತಿಯವರೆಗೆ ಹೊಮ್ ವರ್ಕ್ , ಟ್ಯೂಶನ್ ಮತ್ತು ಟೆಸ್ಟ್ ಎಂದು ಶಾಲೆಯ ಕೆಲಸದಲ್ಲಿಯೆ ಮುಳುಗಿದ ಮಕ್ಕಳಿಗೆ ಕನ್ನಡ ಕಲಿಯಲು ಮತ್ತು ಅವರದ್ದೆ ಆದ ಕೆಲಸ ಮತ್ತು ಅವರ ಪುರುಸೊತ್ತು ಇಲ್ಲದ ದಿನಚರಿಯಲ್ಲಿ ಪೋಷಕರಿಗೆ ಕನ್ನಡ ಕಲಿಸಲು
ಸಮಯವಾದರೂ ಎಲ್ಲಿದೆ? ಇಷ್ಟೆಲ್ಲಾ ಇದ್ದರೂ ಪ್ರತಿ ವರ್ಷ ಸಾಧಾರಣ ವಾಗಿ ೫ ರಿಂದ ೬ ಸಾವಿರ ಭಾರತೀಯ ಮಕ್ಕಳು ಹತ್ತನೆ ತರಗತಿಯ ಪರೀಕ್ಷೆ ಹಾಗು ೩ ರಿಂದ ೪ ಸಾವಿರ ಮಕ್ಕಳು ಹನ್ನೆರಡನೆ ತರಗತಿಯ ಪರೀಕ್ಷೆ ಬರೆಯುತ್ತಾರೆ.. ಮುಂದಿನ ವಿದ್ಯಾಭ್ಯಾಸ ಅವರವರ ಶಕ್ತಿಗೆ ಅನುಸಾರವಾಗಿ. ಇಲ್ಲಿಯೆ ವಿದ್ಯಾಭ್ಯಾಸ ಮುಂದುವರಿಸುವವರು ಇದ್ದಾರೆ. ಮಕ್ಕಳು ತಮ್ಮ ಕಣ್ಣುಮುಂದೆ ಇರುತ್ತಾರಲ್ಲ ಎಂಬ ಸಮಾಧಾನ..ಕಷ್ಟ ಪಟ್ಟಾದರೂ ಇಲ್ಲಿ ತಗಲುವ ವಿದ್ಯಾಭ್ಯಾಸದ ಖರ್ಚನ್ನು ತುಂಬಲು ಒದ್ದಾಡುತ್ತಾರೆ. ಕೆಲವರು ಭಾರತಕ್ಕೆ ವಾಪಸಾಗುವರು. ಕೆಲವರು ಮಕ್ಕಳನ್ನು ಹಾಸ್ಟೆಲ್ ನಲ್ಲಿ ಬಿಡುವರು.
ಈಗ ಸರಕಾರದಿಂದ ನಾವು ಬಯಸುವ ಸಹಾಯವೆಂದರೆ
೧.ಅನಿವಾಸಿ ಭಾರತೀಯ ಮಕ್ಕಳಿಗೂ ಶಾಲಾ ಕಾಲೇಜುಗಳಲ್ಲಿನ ಪ್ರವೇಶ,
ಭಾರತದಲ್ಲಿನ ಮಕ್ಕಳಿಗೆ ಇರುವಂತೆ ಅವಕಾಶಗಳು ಮುಕ್ತವಾಗಿ ಸಿಗುವಂತಾಗಲಿ.
ನಮ್ಮ ಮಕ್ಕಳೂ ಭಾರತೀಯರೇ. ಪ್ರವೇಶ ಶುಲ್ಕ ಅತೀ ದುಬಾರಿಯಗಿರದೇ ಅತೀ ಸಾಮಾನ್ಯ ಅನಿವಾಸಿ ಭಾರತೀಯನಿಗೆ ಸಹಕಾರಿಯಾಗಿರಲಿ. ಕಾರಣ ಎಲ್ಲರ
ಗಳಿಕೆ ಒಂದೇ ಮಟ್ಟದಲ್ಲಿ ಇರುವುದಿಲ್ಲ.
೨. ಆನಿವಾಸಿ ಭಾರತೀಯ ಮಕ್ಕಳಿಗೆ ನೇರವಾಗಿ ಸಿ.ಇ ಟಿ ಬರೆಯುವ
ಅವಕಾಶವಿರಲಿ. ಎನ್. ಅರ್. ಐ ಎಂದು ಪಟ್ಟಿ ಹಚ್ಚಿದರೂ ತೆಗೆದು ಕೊಳ್ಳುವ ಶುಲ್ಕ ಕಡಿಮೆ ಯಾಗಿರಲಿ.
೩. ಮೆರಿಟ್ ನಲ್ಲಿ ಮುಂದೆ ಬರುವ ಮಕ್ಕಳಿಗೆ ಪ್ರೋತ್ಸಾಹ ಕೊಡುವ ಮನೋಭಾವನೆ
ರಾಜ್ಯ ಸರಕಾರಗಳಿಗೆ ಇರಲಿ..
೪.ಕನ್ನಡ ಕಲಿಯಲೇ ಬೇಕಾದರೂ... ಅದನ್ನು ಒಂದೇ ಬಾರಿ ಮಕ್ಕಳ ಮೇಲೆ
ಹೇರುವುದಲ್ಲ. ಸ್ವಲ್ಪ ಕಾಲಾವಕಾಶ ಕೊಡುವುದು ಒಳ್ಳೆಯದು.
೫. ಆನಿವಾಸಿ ಭಾರತೀಯ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಕರ್ನಾಟಕ
ಸೇರಿದಂತೆ ಎಲ್ಲ ರಾಜ್ಯಗಳ ಶಾಲಾ ಕಾಲೇಜುಗಳಿಗೆ ಸುಲಭವಾಗಿ
ಸೇರ್ಪಡೆಯಾಗುವಂತ ನೀತಿಯನ್ನು ಅಳವಡಿಸಿ ಅನುಕೂಲ ಮಾಡಿಕೊಡಿ ಎಂದೇ ಭಾರತ ಸರ್ಕಾರಕ್ಕೆ ನಮ್ಮೇಲ್ಲರ ಕಳಕಳಿಯ ವಿನಂತಿ.
೬. ಶಿಕ್ಷಣ ಕ್ಷೇತ್ರ ದಲ್ಲಿ ಪದೇ ಪದೇ ರೀತಿ ನೀತಿ ಗಳನ್ನು ಕಾನೂನು ಗಳನ್ನು
ಮಕ್ಕಳ ಕಾಲೇಜು ಪ್ರವೇಶದ ಸಂದರ್ಭದಲ್ಲಿ ಬದಲಾವಣೆ ಮಾಡಬೇಡಿ
೭.ಭಾರತದ ಎಲ್ಲ ರಾಜ್ಯಗಳ ಶಿಕ್ಷಣ ರೀತಿ ನೀತಿ , ಶಾಲಾ ಕಾಲೇಜಿಗೆ
ಸೇರಬೇಕಾದರೆ ಇರುವಂಥ ನಿಯಮಗಳ ಪಟ್ಟಿ , ಬೇಕಾದ ಅರ್ಹತೆ, ತಗಲುವ
ವೆಚ್ಚ...ಹೀಗೆ ಎಲ್ಲಾ ವಿವರಗಳನ್ನು ಆಗಾಗ್ಗೆ ಇಲ್ಲಿಯ ಜನರಿಗೆ ಮನದಟ್ಟು ಆಗುವಂತೆ ವಿವರಣೆ ಗಳು ವೆಬ್ ಸೈಟ್ ನಲ್ಲಿ ತಿಳಿಸುವಂತಹ ವ್ಯವಸ್ಥೆ ಮಾಡಿಕೊಡಬೇಕು.
ಇನ್ನು ನಮ್ಮ ಅನಿವಾಸಿ ಕನ್ನಡಿಗರಲ್ಲಿ ಒಂದು ಕಿವಿ ಮಾತು. ಸಾಧ್ಯವಾದಷ್ತು
ಕನ್ನಡ ವನ್ನು ಮಕ್ಕಳಿಗೆ ಕಲಿಸಿ. ಓದಲು,ಬರೆಯಲು ಹೇಳಿಕೊಡಿ. ಕನ್ನಡದಲ್ಲಿಯೇ
ಅವರೊಡನೆ ಮಾತನಾಡಿ.
ಇಲ್ಲಿ ನೆಲೆಸಿರುವ ವರದಿಗಾರರಿಗೊಂದು ಮಾತು. ಸಾಧ್ಯವಾದಷ್ತೂ ಶಿಕ್ಷಣ
ಕ್ಷೇತ್ರ ದಲ್ಲಿನ ಇತ್ತೀಚಿನ ವರದಿಗಳನ್ನು ಅನಿವಾಸಿ ಭಾರತೀಯರಿಗೆ ನಿಮ್ಮ
ವರದಿಗಳ ಮೂಲಕ ತಿಳಿಸುವ ಪ್ರಯತ್ನ ಮಾಡಿ. ವಿವರಣೆಗಳು ಇಲ್ಲಿನ ಅಂತರಜಾಲ
ಪತ್ರಿಕೆಗಳಲ್ಲಿ ಆಗಾಗ್ಗೆ ಪ್ರಕಟಗೊಳ್ಳುತ್ತಿರಲಿ.
ಹೊಸ ಮತ್ತು ಚಾಲನೆಯಲ್ಲಿ ಇರುವಂಥ ಮಾಹಿತಿಗಳನ್ನು ತಿಳಿಸುವುದರಿಂದ
ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯ ನಿರ್ಧರಿಸಲು ತುಂಬಾ ಸಹಾಯ ವಾಗುತ್ತದೆ
ಎಂದರೆ ತಪ್ಪಾಗದು.
ಪ್ರಪಂಚದಲ್ಲಿಯ ಎಲ್ಲಾ ಭಾಗಗಳಿಗಿಂತ ಭಾರತ ದಲ್ಲಿ ಸಿಗುವಂಥ
ಶಿಕ್ಷಣ ಅತೀ ಉತ್ತಮ ವಾಗಿದೆ ಎನ್ನುವ ವಿಷಯ ಅತಿಶಯೋಕ್ತಿ ಅಲ್ಲ. ಉದಾಹರಣೆಗೆ... ಇತ್ತೀಚಿನ ವರದಿ ಪ್ರಕಾರ.. ಭಾರತದಲ್ಲಿ ಗುಜರಾತ್ ಮತ್ತಿತರ ಕಡೆಗಳಲ್ಲಿ ಕಲಿಯುವ ಎನ್. ಅರ್. ಐ. ಗಳ ಮಕ್ಕಳ ಸಂಖೈ ಕ್ರಮೇಣವಾಗಿ ಹೆಚ್ಚುತ್ತಿದೆ.
ಈಲ್ಲಿನ ಕೆಲವಾರು ಶಾಲಾ ಕಾಲೇಜುಗಳು ತಮ್ಮದೆ ಆದ ರೀತಿಯಲ್ಲಿ ರಿಯಾಯಿತಿ
ಶುಲ್ಕ ಗಳನ್ನು ಪ್ರೋತ್ಸಾಹದಾಯಕವಾಗಿ ನೀಡುತ್ತಿದ್ದಾರೆ.
ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಈ ರೀತಿಯ ಪ್ರೋತ್ಸಾಹ ನೀಡಿ ನಮ್ಮ
ಮಕ್ಕಳು ಕನ್ನಡ ನಾಡಿನಲ್ಲಿಯೆ ತಮ್ಮ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ
ಮಾಡಿಕೊದಲಿ ಎಂದು ಆಶಿಸೋಣ.








