- ಗೋಪೀನಾಥ ರಾವ್
ಗಲ್ಫ್ ನಾಡಿನಲ್ಲಿ ವಿಶಿಷ್ಟ ಕನ್ನಡ ಕಾರ್ಯಕ್ರಮಗಳಿಂದಾಗಿ ತನ್ನೇ ಆದ ಛಾಪು ಬೆಳೆಸಿಕೊಂಡಿರುವ ಧ್ವನಿ ಪ್ರತಿಷ್ಠಾನ ಈ ಬಾರಿ ಶೇಖರ್ ಬಿ. ಶೆಟ್ಟಿ ಹಾಗು ಅವರ ಪತ್ನಿ ಶ್ರೀಮತಿ ಕುಶಲ ಶೆಟ್ಟಿಯವರಿಗೆ ಸನ್ಮಾನ, ಹಿಟ್ಟಿನ ಹುಂಜ ನಾಟಕದ ಮುಹೂರ್ತ ಹಾಗೂ ಅನಿವಾಸಿ ಆತ್ಮಾವಲೋಕನ ಹೀಗೆ ಮೂರು ಕಾರ್ಯಕ್ರಮಗಳನ್ನು ಕಳೆದವಾರ ಒಂದೇ ವೇದಿಕೆಯಲ್ಲಿ ಹಮ್ಮಿಕೊಂಡಿತ್ತು.
ಕನ್ನಡಿಗರಲ್ಲಿ ಹಾಗೂ ಕನ್ನಡ ಸಂಘಟನೆಗಳಲ್ಲಿ ಒಗ್ಗಟ್ಟಿಲ್ಲ... ಎಲ್ಲ ಕನ್ನಡ ಸಂಘಗಳಿಗೂ ಅವರದ್ದೇ ದಾರಿ. ಇದಲ್ಲದೆ ಜಾತಿವಾರು ಸಂಘಟನೆಗಳು.. ಇದರಿಂದಾಗಿ ನಮ್ಮ ಶಕ್ತಿ ಅಲ್ಲಲ್ಲಿ ಹರಿದು ಹಂಚಿ ಹೋಗಿದೆ. ಎಲ್ಲರೂ ಒಗ್ಗಟ್ಟಾಗಬೇಕು, ಹಾಗಿದ್ದರೆ ಮಾತ್ರ ಗಲ್ಫ್ ಕನ್ನಡಿಗರ ಎಲ್ಲಾ ತೊಂದರೆಗಳಿಗೆ ಕರ್ನಾಟಕ ಸರಕಾರ ಸರಿಯಾಗಿ ಸ್ಪಂದಿಸುವ ಹಾಗೆ ಮಾಡಲು ಸಾಧ್ಯ ಎಂದು ಅಬುದಾಭಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿಯವರು ಅಭಿಪ್ರಾಯಪಟ್ಟರು. ಅವರು ಎಪ್ರಿಲ್ 4 ರಂದು ಧ್ವನಿ ಪ್ರತಿಷ್ಠಾನದ ವಿಚಾರಗೋಷ್ಠಿ ಹಾಗೂ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಈ ಮಾತನಾಡಿದರು.
ಧ್ವನಿ ಪ್ರತಿಷ್ಠಾನವು ಆಯೋಜಿಸಿದ್ದ ನಾಟಕ ಮೂಹರ್ತ, ಅಭಿನಂದನಾ ಸಮಾರಂಭ, ಹಾಗೂ ಅನಿವಾಸಿ ಆತ್ಮಾವಲೋಕನ ವಿಚಾರಗೋಷ್ಠಿಯು ಶಾರ್ಜಾ ಇಂಡಿಯನ್ ಅಸೋಸಿಯೇಷನ್ ನ ಸಭಾಗೃಹದಲ್ಲಿ ನೆರವೇರಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಧ್ವನಿ ಬಳಗದ ಪ್ರಪ್ರಥಮ ಕಾರ್ಯಕ್ರಮ 15-05-1985 ರಲ್ಲಿ ಮುಂಬೈಯಲ್ಲಿ ನಡೆದಾಗ ಅತಿಥಿಗಳಾಗಿ ಆಗಮಿಸಿ ಹರಸಿದ್ದು ಇತ್ತೀಚೆಗೆ ದೈವಾಧೀನರಾಗಿರುವ ಖ್ಯಾತ ಸಾಹಿತಿ ಶ್ರೀ ವ್ಯಾಸರಾಯ ಬಲ್ಲಾಳ್ ಮತ್ತು ಮುಂಬೈಯ ತಾಯಿನುಡಿ ಪತ್ರಿಕೆಯ ಸಂಪಾದಕ ಡಿ.ಕೆ. ಮೆಂಡನ್ ರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು.
ಅತಿಥಿಗಳಾದ ಅಖಿಲ ಭಾರತ ಅಯುರ್ವೇದ ವೈದ್ಯಕೀಯ ಕಾಲೇಜುಗಳ ಮಹಾಮಂಡಲಿಯ ಆಧ್ಯಕ್ಷ ಡಾ. ಕರಿಬಸವ ನಾಗೂರ್, ಶ್ರೀ ಸರ್ವೋತ್ತಮ ಶೆಟ್ಟಿ, ಶ್ರೀ ಶೇಖರ್ ಬಿ ಶೆಟ್ಟಿ ದೀಪ ಬೆಳಗಿ ನಾಟಕದ ಹಸ್ತಪ್ರತಿಯನ್ನು ನಾಟಕ
ನಿರ್ದೇಶಿಸಲಿರುವ ಪ್ರಕಾಶ್ ರಾವ್ ಪಯ್ಯಾರ್ ಹಾಗು ಪ್ರಮುಖ ಭೂಮಿಕೆಯನ್ನು ನಿರ್ವಹಿಸುತ್ತಿರುವ ಶ್ರೀ ಡೊನಾಲ್ಡ್ ಕೊರಿಯ ಮತ್ತು ಆಶಾ ಕೊರಿಯ ಅವರಿಗೆ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರ್ ಬಿ. ಶೆಟ್ಟಿ ಹಾಗೂ ಅವರ ಪತ್ನಿ ಶ್ರೀಮತಿ ಕುಶಲ ಶೆಟ್ಟಿಯವರಿಗೆ ಶಾಲು ಹೊದಿಸಿ, ಫಲಪುಷ್ಪಗಳನ್ನಿತ್ತು, ಅಭಿನಂದನಾ ಪತ್ರವನ್ನಿತ್ತು ಸನ್ಮಾನಿಸಲಾಯಿತು.
ಅಭಿನಂದನೆಗೆ ಉತ್ತರಿಸುತ್ತಾ ಶ್ರೀ ಶೆಟ್ಟಿಯವರು ಧ್ವನಿ ಪ್ರತಿಷ್ಠಾನವು ಹಲವಾರು ವರ್ಷಗಳಿಂದ ನಡೆಸುತ್ತಾ ಬಂದಿರುವ ಕನ್ನಡ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿರುವೆನು; ಧ್ವನಿ ಬಳಗದಂತೆ ಯುಎಇ ಯಲ್ಲಿರುವ ಎಲ್ಲಾ ಕನ್ನಡ ಪರ ಸಂಘಟನೆಗಳೂ ವಿಭಿನ್ನ ರೀತಿಯ ಚಟುವಟಿಕೆಗಳನ್ನು ಹಮ್ಮಿ ಕೊಂಡು ಮುನ್ನಡೆದರೆ ಕನ್ನಡ ತಾಯಿಯ ನಿತ್ಯಪೂಜೆ ನಡೆದಂತಾಗುತ್ತದೆ ಎಂದು ಹೇಳಿ ಧ್ವನಿ ಬಳಗವು ಸಲ್ಲಿಸಿದ ಅಭಿನಂದನೆಗೆ ತಾನು ಚಿರ ಋಣಿಯಾಗಿದ್ದೇನೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ| ಕರಿಬಸವ ನಾಗೂರು ಅವರು ವಿದೇಶದಲ್ಲಿ ಇಷ್ಟು ಸುಂದರವಾಗಿ ಕನ್ನಡ ಕಾರ್ಯಕ್ರಮ ನಡೆಯುವುದನ್ನು ಕಂಡು ನಾನು ಮೂಕವಿಸ್ಮಿತನಾಗಿದ್ದೇನೆ. ಕನ್ನಡಿಗರು ಒಗ್ಗಟ್ಟಿನಿಂದ ಕಾರ್ಯ ಗೈದರೆ ಏನನ್ನಾದರೂ ಸಾಧಿಸಲು ಸಾಧ್ಯವೆಂದು ಹೇಳಿ ಕರ್ನಾಟಕದಲ್ಲಿರುವ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಅನಿವಾಸಿ ಕನ್ನಡ ಮಕ್ಕಳಿಗೆ ಸಹಾಯ ಸಹಕಾರವನ್ನು ಕೋರಿದರೆ ನೀಡಲು ಸದಾ ಸಿದ್ಧನೆಂದರು.
ಅನಿವಾಸಿ ಅತ್ಮಾವಲೋಕನ ವಿಚಾರಗೋಷ್ಠಿಯು ಯು.ಎ.ಇ.ಕನ್ನಡಿಗರಿಗೆ ವಿಶಿಷ್ಟ ಅನುಭವ ನೀಡಿತು. ಅನಿವಾಸಿ ಯು.ಎ.ಇ. ಕನ್ನಡಿಗರು ತಮ್ಮ ಮನದಾಳದ ಅಭಿಪ್ರಾಯವನ್ನು ಬಿಚ್ಚಿ ಜಿಜ್ಞಾಸೆಗೆ ಒಳಪಡಿಸಿ ಪ್ರಶ್ನೋತ್ತರಕ್ಕೆ ಅಸ್ಪದ ನೀಡಿದ್ದು ಒಂದು ಹೊಸ ಅನುಭವ.
ಶ್ರಿ ಮನೋಹರ್ ತೊನ್ಸೆ ಯು.ಇ.ಇ. ಕನ್ನಡಿಗ ಸಂಘಟನೆಗಳ ಗೊತ್ತು ಗುರಿ ಬಗ್ಗೆ ಮಾತಾಡುತ್ತ ವಿವಿಧ ಗುಂಪುಗಳಾಗಿ ಹರಿದು ಹಂಚಿ ಹೋದ ಕನ್ನಡಿಗರು ಒಂದೇ ವೇದಿಕೆಯಲ್ಲಿ ನಿಂತು ಒಕ್ಕೊರಲಿನಲ್ಲಿ ಕಾರ್ಯ ನಡೆಸುವ ಅವಶ್ಯಕತೆಯನ್ನು ಒತ್ತಿ ಹೇಳಿದರು.
ಅನಿವಾಸಿ ಕನ್ನಡ ಸಾಹಿತ್ಯದ ಬಗ್ಗೆ ಮಾತಾಡಿದ ಪ್ರಕಾಶ್ ರಾವ್ ಪಯ್ಯಾರ್ ಅವರು, ಹಿಂದೆ ಅನಿವಾಸಿ ಕನ್ನಡಿಗರೆಂದರೆ ಅಮೆರಿಕದಲ್ಲಿ ನೆಲೆಸಿದವೆರೆಂಬ ಭಾವನೆ ಇತ್ತು, ಇಂದು ವಿಶ್ವದ ಎಲ್ಲೆಡೆ ಕನ್ನಡಿಗರು ನೆಲೆಸಿ ಸಂಘ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಸಾಹಿತ್ಯ ರಚನೆಯನ್ನು ವಿದೇಶ ದಿಂದಲೆ ಮಾಡುತ್ತಿರುವವರಿಂದ ಕನ್ನಡದಲ್ಲಿ ಅನಿವಾಸಿ ಕನ್ನಡ ಸಾಹಿತ್ಯ ಎಂಬ ಪ್ರಭೇದ ಹುಟ್ಟಿಕೊಂಡಿದೆ, ಅದಿನ್ನೂ ಬೆಳೆಯ ಬೇಕಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಹಾಗು ಗಡಿ ನಾಡು ಗಳಿಗೆ ಸೀಮಿತವಾಗಿರದೆ ವಿದೇಶಗಳಿಗೂ ತಮ್ಮ ಚಟುವಟಿಕೆಗಳನ್ನು ಪಸರಿಸ ಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳಿದರು.
ಶಿಕ್ಷಣದ ಬಗ್ಗೆ ವಿಷಯ ಮಂಡಿಸಿದ ಜಯರಾಮ್ ಸೊಮಯಾಜಿ ಅವರು. ಗಲ್ಫ್ ನಲ್ಲಿ ವಿದ್ಯಾಭ್ಯಾಸ ನಡೆಸಿ ಕರ್ನಾಟಕಕ್ಕೆ ಉಚ್ಚ ಶಿಕ್ಷಣಕ್ಕೆ ಹೋಗುವ ವಿದ್ಯಾರ್ಥಿಗಳು ಪಡುವ ಬವಣೆಯನ್ನು ವಿಶ್ಲೇಷಿಸಿದರು. ಸರಕಾರದಿಂದ ಮೀಸಲಿಟ್ಟ ಶೇಕಡ 5% ಸೀಟುಗಳು ವಿದ್ಯಾರ್ಥಿಗಳಿಗೆ ದೊರೆಯದೆ ಇರುವುದರ ಬಗ್ಗೆ ವಿಶಾದ ವ್ಯಕ್ತ ಪಡಿಸಿದರು.
ಮಾಧ್ಯಮದ ಬಗ್ಗೆ ಬಿ.ಜಿ.ಮೋಹನ್ ದಾಸ್ ಅವರು ವಿಶ್ಲೇಷಿಸಿ ಗಲ್ಫ್ ಕನ್ನಡಿಗರಿಗೆ ಒಂದು ದಿನಪತ್ರಿಕೆಯ ಅಗತ್ಯವನ್ನು ಒತ್ತಿ ಹೇಳಿದರು. ಹಾಗೆಯೇ ಕನ್ನಡ ವೆಬ್ ಸೈಟುಗಳನ್ನು ಪ್ರೋತ್ಸಾಹಿಸಬೇಕೆಂದು ನಿವೇದಿಸಿದರು.
ಗಣೇಶ್ ರೈ ಅವರು ಕನ್ನಡಿಗರ ಸಾಮಾನ್ಯ ಕೊರತೆ ಗಳನ್ನು ಹೇಳುತ್ತಾ ಕನ್ನಡಿಗರ ಅಭಿಮಾನ ಶೂನ್ಯತೆ, ಒಗ್ಗಟ್ಟಿನ ಕೊರತೆ, ವಿಚಾರ ವಿನಿಮಯದಲ್ಲಿನ ಅಹಮ್ ಇವು ನಮ್ಮ ಕೈಯಿಂದಲೆ ನಮ್ಮ ಕಾಲಿಗೆ ಬೀಳುವ ಕೊಡಲಿ ಏಟು ಎಂದು ಒತ್ತಿ ಹೇಳಿದರು.
ಪ್ರಶ್ನೋತ್ತರ ಸಂದರ್ಭದಲ್ಲಿ ಯು.ಎ.ಇ. ಯಲ್ಲಿರುವ ಸಕಲ ಕನ್ನಡ ಪರ ಸಂಘಟನೆಗಳು ಸೇರಿ ಕನ್ನಡ ಸಾಹಿತ್ಯ ಸಮ್ಮೇಳನವೊಂದನ್ನು ನಡೆಸಬೇಕೆಂದು ಪ್ರಕಾಶ್ ಪಯ್ಯಾರ್ ಅಬಿಪ್ರಾಯ ಪಟ್ಟರು. ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಪ್ರಭಾಕರ ಅಂಬಲೆತರೆ ಅವರು ವಿದೇಶದಲ್ಲಿರುವ ಕನ್ನಡ ಚಟುವಟಿಕೆಗಳನ್ನು ಸರಕಾರ ಅಥವ ಸರ್ಕಾರ ನೇಮಿಸಲ್ಪಟ್ಟ ಪ್ರಾಧಿಕಾರಗಳು ಗಮನಿಸುತ್ತಿಲ್ಲವೆಂದು ಖೇದ ವ್ಯಕ್ತ ಪಡಿಸಿದರು. ನವಿನ್ ಸಿಕ್ವೇರರವರು ಕನ್ನಡಿಗರ ಒಗ್ಗಟ್ಟಿನ ಕೊರತೆ ಬಗ್ಗೆ ಅಭಿಪ್ರಾಯಸಿದರು.
ಮನೋರಂಜನೆಯ ಅಂಗವಾಗಿ ಈರಣ್ಣ ಮೂಲೀಮನಿ ಮತ್ತು ಬಳಗದವರು ಕನ್ನಡ ಹಾಡುಗಳನ್ನು ಹಾಡಿದರು.
ಕಾರ್ಯಕ್ರಮವನ್ನು ಅರ್ಥರ್ ಪಿರೇರ ಹಾಗೂ ರಜನಿ ಭಟ್ ಅವರು ನಿರ್ವಹಿಸಿದ್ದರು ಹಾಗೂ ಕೊನೆಯಲ್ಲಿ ತಿಮ್ಮಪ್ಪ ಪೂಜಾರಿ ವಂದನಾರ್ಪಣೆಗೈದರು.








