ತೇಜಸ್ವಿಯವರ ವೈಚಾರಿಕತೆ ( ಭಾಗ ೬ )
ತೇಜಸ್ವಿ

- ಬಿ ಆರ್ ಸತ್ಯನಾರಾಯಣ 

ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳು

ಚಿದಂಬರ ರಹಸ್ಯ ಕಾದಂಬರಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುವ ಸನ್ನಿವೇಶದ ಚಿತ್ರಣ ಬರುತ್ತದೆ. ನರಿ ಹೊಡೆಯಲು ಇಟ್ಟಿದ್ದ ಪಟಾಸು ಬಾಂಬು ಸಿಡಿದು ಪಾಟೀಲರು ಗಾಯಗೊಂಡ ಸಂದರ್ಭದಲ್ಲಿ ಜನ ಮಾತನಾಡುತ್ತಾರೆ. ಒಬ್ಬ ‘ಮಸೀದಿಗೆ ಹಿಂದೂಗಳು ನುಗ್ಗಬಹುದು ಅಂತ ಸಾಬರೇ ಬಾಂಬು ಇಟ್ಟಿದ್ದಾರೆ’ ಅನ್ನುತ್ತಾನೆ. ಇನ್ನೊಬ್ಬ ‘ಇಲ್ಲಾ ಮಸೀದಿಗೆ ಬರುವ ಸಾಬರು ಸಾಯಲಿ ಅಂತ ಹಿಂದೂಗಳು ಬಾಂಬು ಇಟ್ಟಿದ್ದು’ ಅನ್ನುತ್ತಾನೆ. ಹೀಗೆ ಘಟನೆ ಒಂದೇ ಆದರೂ ಅದನ್ನು ಗ್ರಹಿಸುವ ಮನಸ್ಸುಗಳಿಗೆ ಅನುಗುಣವಾಗಿ ಹೊಸ ಹೊಸ ಅರ್ಥಗಳನ್ನು, ಅನಾಹುತಗಳನ್ನು ಹುಟ್ಟು ಹಾಕುತ್ತಿರುತ್ತದೆ. ಆದರೆ ತೇಜಸ್ವಿಯವರದು ಅವರೇ ಹೇಳುವಂತೆ ಸಂಶ್ಲೇಷಣೆ ಮತ್ತು ವಿಶ್ಲೇಷಣೆ ವಿಧಾನ. ತೇಜಸ್ವಿ ಒಂದು ಸಮಸ್ಯೆಯನ್ನು ಅದು ಯಾವುದೇ ಆದರೂ ಅನೇಕ ಆಯಾಮಗಳಿಂದ ಪರಿಶೀಲಿಸುತ್ತಿದ್ದರು. ಕೇವಲ ಕೋಮುವಾದದ ಹಿನ್ನೆಲೆಯಲ್ಲಿ ನೋಡುತ್ತಿದ್ದ ಗೋಹತ್ಯೆ ನಿಷೇಧವನ್ನು ತೇಜಸ್ವಿ ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳಿಂದ ನೋಡಿದ್ದಾರೆ. ವಾಜಪೇಯಿವರಿಗೊಂದು ಬಹಿರಂಗ ಪತ್ರ ಬರೆದ ತೇಜಸ್ವಿ ಆದರಲ್ಲಿ ಗೋಹತ್ಯೆಯನ್ನು ನಿಷೇಧ ಮಾಡುವುದರಿಂದ ಆಗಬಹುದಾದ ಸಾಮಾಜಿಕ ದುಷ್ಪರಿಣಾಮಗಳು, ಅಶಾಂತಿ ಮತ್ತು ಆರ್ಥಿಕ ಅಸಮತೋಲನವನ್ನು ಎಳೆ‌ಎಳೆಯಾಗಿ ಬಿಡಿಸಿಟ್ಟಿದ್ದರು. ಇಂದು ರೈತರಿಗೆ ಆದಾಯ ಎಂಬುದೇ ಮರೀಚಿಕೆಯಾಗಿರುವಾಗ, ಮುದಿಯಾದ ಹಾಗೂ ಕೆಲಸಕ್ಕೆ ಯೋಗ್ಯವಲ್ಲದ ಜಾನುವಾರುಗಳನ್ನು ಇಟ್ಟುಕೊಂಡು ಮತ್ತಷ್ಟು ನಷ್ಟಕ್ಕೆ ಒಳಗಾಗಬೇಕೆ? ಅವುಗಳನ್ನು ಮಾರಬಹುದು ಎಂದಾದರೆ ಯಾರಿಗೆ ಮಾರಿದರೇನಂತೆ. ಸಾಬರಿಗೆ ಮಾರಿದರೆ ಕೊಲ್ಲುತ್ತಾರೆ ಎಂಬ ಕಾರಣಕ್ಕೆ ಮಾರದಿದ್ದರೆ, ಮುದಿ ದನಗಳ ಸಂಖ್ಯೆಗೆ ನಿಯಂತ್ರಣವೇ ಇಲ್ಲದಂತಾಗುತ್ತದೆ. ಮೇವು ಸಮಸ್ಯೆ ಎದುರಾಗುತ್ತದೆ. ಜಾಗದ ಹಾಗೂ ಜಾನುವಾರುಗಳನ್ನು ನೋಡಿಕೊಳ್ಳಲು ಬೇಕಾದ ಮಾನವಸಂಪನ್ಮೂಲದ ಅಪವ್ಯವಯವೂ ಆಗುತ್ತದೆ. ಅವುಗಳನ್ನು ಮಾರದೇ ಧರ್ಮಬುದ್ಧಿಯಿಂದ ಎಲ್ಲಾದರೂ ಬದುಕಿಕೊಳ್ಳಲಿ ಎಂದು ಹಾಗೇ ಬೀದಿಗೆ ಬಿಟ್ಟು ಬಿಟ್ಟರೆ ಅವುಗಳ ಸಂಖ್ಯೆ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಂದರ್ಭ, ಅವುಗಳಿಂದ ಸಾಮಾಜಿಕ ಜನಜೀವನದ ಮೇಲೆ ಆಗಬಹುದಾದ ಪರಿಣಾಮ ಎಲ್ಲವನ್ನೂ ಎಳೆ‌ಎಳೆಯಾಗಿ ಬಿಡಿಸಿದ್ದರು. ಗೋಮಾಂಸ ಭಕ್ಷಣೆಯನ್ನು ನಿಷೇಧಿಸುವುದರಿಂದ ಬೇರೆ ರೀತಿಯ ಮಾಂಸಕ್ಕೆ ಹಾಗೂ ತರಕಾರಿಗಳಿಗೆ ಉಂಟಾಗುವ ಬೇಡಿಕೆ, ಅದರ ಪೂರೈಕೆಯಲ್ಲಾಗುವ ಗುಣಮಟ್ಟದ ಏರಿಳಿತ ಮೊದಲಾದವುಗಳ ಬಗ್ಗೆಯೂ ಗಮನ ಹರಿಸಿದ್ದರು. ಇದು ಒಂದು ಉದಾಹರಣೆ ಮಾತ್ರ. ತೇಜಸ್ವಿಯವರು ಬದುಕನ್ನು ನೋಡುತ್ತಿದ್ದ ರೀತಿಯೇ ಆಗಿತ್ತು. ಅಣ್ಣನ ನೆನಪು ಕೃತಿಯಲ್ಲಿನ ಸ್ಕೂಟರ್ ರಿಪೇರಿ ಅಧ್ಯಾಯದಲ್ಲಿ ವ್ಯಕ್ತವಾಗುವ ತೇಜಸ್ವಿಯವರ ಮನೋಭಾವ ಅತ್ಯಂತ ವಿಭಿನ್ನವಾದದ್ದು. ನಮಗೆ ತಲಪುವ ಗುರಿ ಮುಖ್ಯವಾಗಿದ್ದರೆ, ಅವರಿಗೆ ನಡೆಯುವ ದಾರಿಯೂ ಮುಖ್ಯವಾಗಿತ್ತು. ಅವರ ಏಕೈಕ ಪ್ರವಾಸ ಬರಹ ಎನ್ನಬಹುದಾದ ‘ಅಲೆಮಾರಿಯ ಅಂಡಮಾನ್’ನಲ್ಲಿಯೂ ಅವರು ಅಂಡಮಾನಿನ ಜನಪ್ರಿಯ ಸ್ಮಾರಕಗಳಿಗಿಂತ ಹೆಚ್ಚಾಗಿ ಗಮನಿಸಿದ್ದ ಅಲ್ಲಿಯ ಇಕಾಲಜಿಯನ್ನು. ಅದನ್ನು ಓದಿದ ಒಬ್ಬರು ‘ಏನ್ರಿ, ಮೀನು ಹಿಡಿಯಲು ತೇಜಸ್ವಿ ಅಂಡಮಾನಿಗೆ ಹೋಗಬೇಕಿತ್ತಾ’ ಎಂದು ತಮಾಷೆ ಮಾಡಿದ್ದರು.

ಸ್ವಂತ ಬದುಕು; ಸ್ವಂತ ಚಿಂತನೆ - ಇದು ತೇಜಸ್ವಿಯವರ ಮಂತ್ರ

ತೇಜಸ್ವಿಯವರ ವೈಚಾರಿಕ ಚಿಂತನೆ ಸ್ವಂತಿಕೆಯದು. ಅದು ಯಾರಿಂದಲೂ ಎರವಲು ಪಡೆದಿದ್ದಲ್ಲ. ಅಬಚೂರಿನ ಪೋಸ್ಟಾಫೀಸು ಕೃತಿಯ ಮುನ್ನುಡಿಯಲ್ಲಿ ‘ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನ ದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು’ ಎಂದು ಹೇಳಿದ್ದರೂ, ನಂತರದ ವರ್ಷಗಳಲ್ಲಿ ‘ಈಗ ಅವರ್ಯಾರೂ ಪ್ರಸ್ತುತರಲ್ಲ’ ಎನ್ನುವ ಮಾತುಗಳನ್ನು ತೇಜಸ್ವಿ ಹೇಳಿದ್ದರು. ಹಾಗೆಂದು ಸುಮ್ಮನೆ ಕುಳಿತುಕೊಳ್ಳದೆ ಹೊಸಹೊಸ ಮಾರ್ಗಗಳ ಅನ್ವೇಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಡಿದ್ದವರು. ಅದು ಅವರ ಬದುಕಿನ ಹಾಗೆಯೇ ಸಮೃದ್ಧವಾದುದ್ದು. ಇಲ್ಲಿಯೂ ತೇಜಸ್ವಿಯವರದ್ದು ಸರ್ವತೋಮುಖವಾದ ಹಾಗೂ ಸಮಷ್ಠಿಪರವಾದ ನಿಲುವು. ಇತರರೂ ತನ್ನಂತೆಯೇ ಅವರದೇ ಆದ ಯೋಚನೆಗಳನ್ನು ನೆಚ್ಚಿಕೊಳ್ಳಬೇಕು. ಅವರದೇ ಆದ ಬದುಕನ್ನು ಕಟ್ಟಿಕೊಳ್ಳಬೇಕು. ಬೇರೆಯವರಿಗೋಸ್ಕರ ಬದುಕುವವನಿಗೆ, ಬೇರೆಯವರು ಏನೆಂದುಕೊಳ್ಳುತ್ತಾರೋ ಎಂಬ ಅಂಜಿಕೆ ಇರುವವನಿಗೆ ಸ್ವಂತಿಕೆಯಿರಲಾರದು, ಸ್ವತಂತ್ರವೂ ಇರದು ಎಂಬ ಆಶಯವನ್ನು ಹೊಂದಿರುವವರು. ಬುದ್ಧನ ಉಪದೇಶವೊಂದರ ಪ್ರಸಂಗವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಬುದ್ಧ ತನ್ನ ಉಪದೇಶದಲ್ಲಿ ‘ಅವರಿವರು ಹೇಳಿದ್ದಾರೆ ಎಂಬ ಕಾರಣಕ್ಕೆ, ಪರಂಪರಾಗತವಾಗಿ ಬಂದದ್ದೆಂಬ ಕಾರಣಕ್ಕೆ, ಶಾಸ್ತ್ರಗಳಲ್ಲಿ ಹೇಳಿದೆ ಎಂಬ ಕಾರಣಕ್ಕೆ, ಆಚಾರ್ಯರು ಹೇಳಿದ್ದಾರೆಂಬ ಕಾರಣಕ್ಕೆ ಒಪ್ಪಬೇಡ. ಆದರೆ ಯಾವುದು ಮೌಲಿಕವಾದುದ್ದು, ಉಪಯುಕ್ತವಾದುದ್ದು ಎಂದು ನಿನಗೆ ಅನಿಸುತ್ತದೋ ಅದನ್ನು ಒಪ್ಪಿಕೊ.’ ಎಂದು ಹೇಳುತ್ತಾನೆ. ಆಗ ಒಬ್ಬ ಶ್ರಾವಕ ‘ಬುದ್ಧ ಹೇಳಿದ್ದನ್ನು ಮಾತ್ರ ಒಪ್ಪಿಕೊಳ್ಳಬೇಕೆ?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಬುದ್ಧ ‘ನಾನು ಹೇಳಿದ್ದನ್ನು ಕೂಡ ಒಪ್ಪಬೇಕಾಗಿಲ್ಲ.’ ಎನ್ನುತ್ತಾನೆ. ತೇಜಸ್ವಿಯವರದೂ ಅದೇ ನಿಲುವು. ಆದರೆ ಇಲ್ಲಿ ತೇಜಸ್ವಿ ಉಪದೇಶ ನೀಡುವುದಿಲ್ಲ. ನೇರವಾಗಿ ಹೇಳುತ್ತಾರೆ. ‘ಮನುಷ್ಯನ ಬದುಕು, ಪ್ರಯತ್ನ, ಕಾರ್ಯವಿಧಾನ ಎಲ್ಲವೂ ಪರಿಸರದಿಂದಲೇ ನಿಯಂತ್ರಿತವಾಗುತ್ತಿರುತ್ತವೆ’ ಎಂಬ ನಂಬಿಕೆಯಿಂದ ತೇಜಸ್ವಿ ಮಾಯಾಲೋಕದಲ್ಲಿ ದೃಶ್ಯಕಾವ್ಯವನ್ನೇ ತೆರೆದಿಟ್ಟಿದ್ದಾರೆ. ಮಳೆಯ ವಿಷಯವನ್ನು ಪ್ರಸ್ತಾಪಿಸದೇ ಕೇವಲ ರೈತ ಚಳುವಳಿಯ ಬಗ್ಗೆ ಪ್ರಕಾಶವಾಣಿ ಪತ್ರಿಕೆಗೆ ವರದಿ ಬರೆಯುವ ಕರಾಟೆ ಮಂಜನಿಗೆ ‘ಹಂಗಾದರೆ ಇದ್ದಕ್ಕಿದ್ದಂತೆ ಆಕಾಶ ಕಪ್ಪಾಗಿ ದೋರ್ದಂಡ ಮಳೆ ಹಿಡಿದುಕೊಂಡಿದ್ದು, ರೈತಸಂಘದವರ ರಸ್ತೆರೋಕೊಗೆ ಆಸ್ಪದ ಕೊಡದೆ ಮಳೆಯೇ ಅವರ ಕೆಲಸ ಮಾಡಿದ್ದು, ಒಂದೇ ಮಳೆಗೆ ನಿನ್ನೆಯ ಸಮಸ್ಯೆಗಳೆಲ್ಲಾ ಅಪ್ರಸ್ತುತವಾಗಿದ್ದು ಇವ್ಯಾವುವೂ ನಿನ್ನ ದೃಷ್ಟಿಯಲ್ಲಿ ಸುದ್ದಿಯೇ ಅಲ್ಲವಾ?’ ಎಂದು ಕೇಳುತ್ತಾರೆ. ಆಗ ಕರಾಟೆ ಮಂಜ ‘ಹಂಗಾದರೆ ಇದನ್ನೆಲ್ಲಾ ವರದಿಯಲ್ಲಿ ಬರೀಬೌದ? ಪ್ರಕಾಶಣ್ಣ ರೈತ ಚಳುವಳಿ ಬಿಟ್ಟು ಇದನ್ನೆಲ್ಲಾ ಬರ್ದಿದ್ದೀಯಾ ಅಂದರೆ?’ ಎಂದು ಕೇಳುತ್ತಾನೆ. ಆಗ ತೇಜಸ್ವಿ ಹೇಳುವ ಮಾತುಗಳು ಮೇಲೆ ಬುದ್ಧ ಹೇಳಿದ ಮಾತುಗಳಿಗೆ ಸಂವಾದಿಯಾಗಿ ನಿಲ್ಲುತ್ತವೆ. ‘ಅವನು ಏನಾದರೂ ಅಂದುಕೊಳ್ಳಲಿ. ಬೇಕಾದರೆ ಪ್ರಕಟಿಸಲಿ, ಬೇಡದಿದ್ದರೆ ಬಿಡಲಿ. ಇಲ್ಲಿ ಮುಖ್ಯ ನೀನು ಹೇಗೆ ಯೋಚನೆ ಮಾಡ್ತೀಯ ಅನ್ನೋದು’ ಎನ್ನುತ್ತಾರೆ. ಹಾಗೇ ಚಿದಂಬರ ರಹಸ್ಯದಲ್ಲಿ ಜಯರಾಮ ಹೇಳುವ ‘ಈಗ ನಾವೆಲ್ಲಾ ನಮಗೆ ಹೇಗನ್ನಿಸುತ್ತದೋ ಹಾಗೆ ವರ್ತಿಸೋಣ’ ಎನ್ನುವ ಮಾತೂ ಕೂಡ. ಪ್ರತಿಯೊಂದಕ್ಕೂ ಪರಂಪರೆ, ಸಂಪ್ರದಾಯ ಪುರಾಣಗಳ ಹೆಸರು ಹೇಳಿಕೊಳ್ಳುತ್ತಿದ್ದರೆ, ನಮ್ಮ ಯೋಚನೆಗಳಿಗೆ, ನಮ್ಮ ಮುಂದುವರಿಕೆಗೆ ನಾವೇ ನಿರ್ಬಂಧ ಹೇರಿಕೊಂಡಂತೆ ಅಲ್ಲವಾ? ಒಂದು ಸಮಾರಂಭದ ನಂತರ, ಬೆಂಗಳೂರಿನ ಒಬ್ಬ ಮಹಿಳೆ ತೇಜಸ್ವಿಗೆ, ದತ್ತಪೀಠ ವಿವಾದದ ಹಿನ್ನೆಲೆಯಲ್ಲಿ ನಡೆದ ಘಟನೆಗಳ ಬಗ್ಗೆ ಹೇಳುತ್ತಿದ್ದರು. ‘ಇಂದು ಪ್ರತಿಯೊಂದು ಘಟನೆಯನ್ನೂ ಕೋಮುದೃಷ್ಟಿಯಿಂದಲೇ ನೋಡಲಾಗುತ್ತಿದೆ. ತೀರಾ ವೈಯಕ್ತಿಕ ಎನ್ನಬಹುದಾದ ಸಮಸ್ಯೆಗೂ ಕೋಮುವಾದದಿಂದಲೇ ಪರಿಹಾರ ಕಂಡುಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವುದರಿಂದ ಮನುಷ್ಯ ಮನುಷ್ಯನನ್ನು ನಿರ್ದಯವಾಗಿ ಕೊಲ್ಲುತ್ತಿದ್ದಾನೆ. ನಮ್ಮ ಪರಂಪರೆಗೆ ಇದೆಲ್ಲ ಹೊಸತು. ಇದಕ್ಕೆಲ್ಲಾ ಏನಾದರೂ ಮಾಡಬೇಕು. ನೀವು ಅಲ್ಲಿಯೇ ಇರುವವರು. ಏನಾದರೂ ಮಾಡಬೇಕು.’ ಎಂದು. ಆಗ ತೇಜಸ್ವಿ ಹೇಳಿದ್ದು ಚೆನ್ನಾಗಿ ನೆನಪಿದೆ. ‘ನೋಡ್ರಿ, ಮನುಷ್ಯ ಮನುಷ್ಯನನ್ನು ಕೊಲ್ಲಬಾರದು ಅಂತ ಹೇಳೋದಿಕ್ಕೆ ಭಗವದ್ಗೀತೆ ಖುರಾನು ಬೈಬಲ್ ಪುರಾಣ ಇವು ಬೇಕಿಲ್ಲಾರಿ. ವೇದದಲ್ಲಿ ಹಾಗೆ ಹೇಳಿದೆ, ಪುರಾಣದಲ್ಲಿ ಹೀಗೆ ಹೇಳಿದೆ. ಭಗವದ್ಗೀತೆಯಲ್ಲ್ಲಿ ಅದನ್ನು ಹೇಳಿಲ್ಲ ಖುರಾನಿನಲ್ಲಿ ಇದನ್ನು ಹೇಳಿಲ್ಲ ಅಂದ್ರೆ, ‘ವೇದ ಹೇಳೊಕೆ ಬದನೆಕಾಯಿ ತಿನ್ನೋಕೆ’ ಎಂಬ ಜೀವಪರವಾದ ಗಾದೆಯನ್ನೂ ಸವಕಲು ನಾಣ್ಯ ಮಾಡಿಬಿಡುತ್ತಾನೆ. ‘ಕೊಲೆ ಎಂಬ ಕಲ್ಪನೆಯೇ ತಪ್ಪು’ ಎಂಬುದು ಆತನ ಒಳಗಿನಿಂದ ಬರಬೇಕು.’ ಅಂದಿದ್ದರು. ಈ ದೃಷ್ಟಿಯಿಂದಲೇ ತೇಜಸ್ವಿ ‘ಬುದ್ಧ, ಗಾಂಧಿ, ಲೋಹಿಯಾ ಯಾರೂ ರಿಲವೆಂಟ್ ಆಗಿ ಉಳಿದಿಲ್ಲ’ ಎಂದು ಹೇಳಿದ್ದು. ತೇಜಸ್ವಿಯವರ ದೃಷ್ಟಿಯಲ್ಲಿ ಮನುಷ್ಯ ತನ್ನನ್ನು ತಾನು ನೋಡಿಕೊಳ್ಳುವುದಲ್ಲ, ಕಂಡುಕೊಳ್ಳುವುದು. ಆಗ ಮಾತ್ರ ಬದುಕು ಹಸನಾದೀತು. ಇಲ್ಲಿ ಮತ್ತೆ ನನಗೆ ನೆನಪಾಗುವುದು ತೇಜಸ್ವಿಯವರ ಕ್ರಾಸ್-ಬಾರ್ಡರ್ ಗುಣ. ಆದರೆ ಈ ಕ್ರಾಸ್ ಬಾರ್ಡರ್ ಗುಣ ಹುಲಿಯೂರಿನ ಸರಹದ್ದನ್ನು ದಾಟಲು ವಿಫಲನಾದ ಸೋಮುವಿನ ಹಪಾಹಪಿಯಂತಹುದಲ್ಲ. ‘ಅಣ್ಣನ ನೆನಪು’ ಕೃತಿಯಲ್ಲಿ ಅವರೇ ವಿವರಿಸಿರುವ ಒಂದು ಘಟನೆಯನ್ನು ಇಲ್ಲಿ ಹೇಳಿದರೆ ಮೇಲಿನ ವಿವರಣೆಗೆ ಅಧಿಕೃತ ಪರಿಸಮಾಪ್ತಿಯೂ ಆಗುತ್ತದೆ ಹಾಗೂ ತೇಜಸ್ವಿಯವರ ಸಾಹಿತ್ಯ ಮತ್ತು ಬದುಕು ಏಕವಾಗಿತ್ತು ಎಂಬುದಕ್ಕೂ ಸಾಕ್ಷಿಯಾಗುತ್ತದೆ. ಕುವೆಂಪು ಅವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶವಾಗುವ ಮುಂಚೆ ನಡೆದ ಘಟನೆಯಿದು. ಗಂಧದ ಚಕ್ಕೆಯೊಂದನ್ನು ತೇಜಸ್ವಿ ಬಲಗೈಯಲ್ಲಿ ಇಡುತ್ತಿರುತ್ತಾರೆ. ಅದನ್ನು ಕಂಡ ಜಾತ್ಯಾತೀತ ಪಕ್ಷದ ನಾಯಕರೊಬ್ಬರಾದ ಚಂದ್ರೇಗೌಡರು ‘ಅಯ್ಯೊಯ್ಯೊ ಬಲಗೈಯಲ್ಲಿ ಇಡಬಾರದು. ಎಡಗೈಯಲ್ಲಿ ಇಡಬೇಕು’ ಎನ್ನುತ್ತಾರೆ. ಆಗ ತೇಜಸ್ವಿ ‘ಚಂದ್ರೇಗೌಡರೇ, ಕುವೆಂಪು ಇಡೀ ಜೀವಮಾನ ಹೇಳಿದ್ದೆಲ್ಲಾ ನಿರರ್ಥಕ, ನಾನೀಗ ಎಡಗೈಯಲ್ಲಿ ಇಟ್ಟರೆ! ಏನು ಮಾಡಲಿ ಹೇಳಿ’ ಎನ್ನುತ್ತಾರೆ. ಇದು ಚಂದ್ರೇಗೌಡರ ಆಕ್ಷೇಪಣೆಗೆ ತೇಜಸ್ವಿ ಯೋಚಿಸಿ ನೀಡಿದ ಉತ್ತರವಲ್ಲ. ತತ್ ಕ್ಷಣಕ್ಕೆ ಹೇಳಿದ್ದು. ಯೋಚಿಸಿ ಹೇಳಿದ್ದಾಗಿದ್ದರೆ, ಅದಕ್ಕೊಂದು ಉದ್ದೇಶವನ್ನು ಆರೋಪಿಸಬಹುದಿತ್ತು. ಅವರ ಬದುಕೇ ಅಂತಹ ಒಂದು ವೈಚಾರಿಕ ಪ್ರಯೋಗಶೀಲತೆಯಾಗಿದ್ದರಿಂದ ಮಾತ್ರ ದಿಢೀರನೆ ಅಂತಹ ಹೇಳಿಕೆ ಕೊಡಲು ಸಾಧ್ಯವಾಗಿತ್ತು. ಇಂತಹ ಹಲವಾರು ಸಂಗತಿಗಳನ್ನು ತೇಜಸ್ವಿಯವರ ಸಾಹಿತ್ಯವನ್ನು ಓದಿರುವವರಿಗೆ ಮತ್ತೆ ಮತ್ತೆ ವಿವರಿಸಬೇಕಾದ ಅಗತ್ಯವಿಲ್ಲವೆಂದುಕೊಳ್ಳುತ್ತೇನೆ.

(ತೇಜಸ್ವಿಯವರ ವಿಚಾರಧಾರೆಯ ಬಗೆಗೆ ಸತ್ಯನಾರಾಯಣರ ಅವಲೋಕನ ಬರುವ ವಾರ ಕೂಡ ಮುಂದುವರೆಯಲಿದೆ)
ಸತ್ಯನಾರಾಯಣ ಬಿ.ಆರ್.ಗ್ರಂಥಪಾಲಕರು, ಸುರಾನ ಕಾಲೇಜುಸೌತ್ ಎಂಡ್ ರಸ್ತೆ, ಬಸವನಗುಡಿಬೆಂಗಳೂರು - 560 004ದೂರವಾಣಿ: 0 99645 90246ಈ-ಮೇಲ್: satya_nbr@yahoo.com

 

Syndicate

Syndicate content