- ಇರ್ಶಾದ್ ಮೂಡಬಿದ್ರಿ
ಇದೇ ಬರುವ ಎಪ್ರಿಲ್ ಹನ್ನೊಂದರಂದು ದುಬೈಯ ಅಲ್ ನಾಸರ್ ಲೀಶರ್ ಲ್ಯಾಂಡ್ ಐಸ್ ರಿಂಗ್ ನಲ್ಲಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ.ಇಲ್ಲಿ ತೂಗುದೀಪ ಶ್ರೀನಿವಾಸರ ಪುತ್ರ ನಟ ದರ್ಶನ್ ಅವರು ತನ್ನ ಜೊತೆಗೆ ಐವತ್ತಕ್ಕೂ ಹೆಚ್ಚಿನ ತಾರಾಬಳಗ ಹಾಗೂ ನೃತ್ಯ ತಂಡವನ್ನು ವೇದಿಕೆಗೆ ಕರೆ ತರಲಿದ್ದಾರೆ.
ಅತಿಥಿಗಳಾಗಿ ರವಿಚಂದ್ರ, ಅನಂತನಾಗ್, ಸುಧಾರಾಣಿ,ಆದಿತ್ಯ, ದೊಡ್ಡಣ್ಣ ಮುಂತಾದವರೂ ಭಾಗವಹಿಸುತ್ತಿದ್ದಾರೆ. ರಾಕ್ಲೈನ್ ವೆಂಕಟೇಶ್, ವಿಜಯರಾಘವೇಂದ್ರ, ವಿಜಯ ಸುಂದರರಾಜ್, ತಿಲಕ್,ಅನುಪ್ರಭಾಕರ್,ಶರ್ಮಿಳಾ ಸ್ಮಿತಾ, ಆಶಿತಾ, ನೀತಾ ಮುಂತಾದ ಪ್ರಮುಖರೂ ಕಾರ್ಯಕ್ರಮಕ್ಕೆ 'ಸ್ಟಾರ ನೈಟ್' ಕಳೆಯೇರಿಸಿಕೊಡಲಿದ್ದಾರೆ.
ದುಬೈ ಕರ್ನಾಟಕ ಸಂಘ ಮತ್ತು ಜೀ ಕನ್ನಡ ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿವೆ.ಈ ಕಾರ್ಯಕ್ರಮದ ಯೋಜನಾಬದ್ಧ ಸಿದ್ಧತೆಗಳು ಅದಾಗಲೇ ಪೂರ್ಣವೇಗದಿಂದ ಸಾಗುತ್ತಿವೆ. ವೇದಿಕೆಯ ನಿರ್ಮಾಣ, ಬೆಳಕು ಹಾಗೂ ಶಬ್ದದ ಜೋಡಣೆಗೆ ತಾಂತ್ರಿಕ ವರ್ಗ ಆಗಮಿಸಲಿದ್ದು ಶುಕ್ರವಾರದ ವೇಳೆಗೆ ಸರ್ವ ತಯಾರಿ ಪೂರ್ಣಗೊಂಡು ವೇದಿಕೆ ಸಿದ್ಧವಾಗಲಿದೆ.
ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸಿ ಆರ್ ಶೆಟ್ಟಿ ಹಾಗೂ ಸಂಘದ ಸದಸ್ಯರು ಈ ದೊಡ್ಡ ಸವಾಲಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಈಗಾಗಲೇ ಇಂತಹ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸಿದ ಅನುಭವವಿದ್ದರೂ ಒಮ್ಮೆಗೆ ನಾಲ್ಕು ಸಾವಿರ ಪ್ರೇಕ್ಷಕರನ್ನು ಬರಮಾಡಿಕೊಂಡು ಮನರಂಜನೆ ಉಣಬಡಿಸುವ ಸಾಹಸ ಇದೇ ಮೊದಲು. ಇದು ಸವಾಲು ಹಾಗೂ ಮುಂದೆ ಇದಕ್ಕಿಂತಲೂ ದೊಡ್ಡ ಕಾರ್ಯಕ್ರಮಗಳನ್ನು ನಡೆಸಲು ಸ್ಫೂರ್ತಿ ಮತ್ತು ಅಡಿಪಾಯ ಅನ್ನುತ್ತಾರೆ ಶ್ರೀ ಸಿ ಆರ್ ಶೆಟ್ಟಿ. ಇಂತಹ ದೂರದೃಷ್ಟಿ ಇಟ್ಟುಕೊಂಡು ತಯಾರಿ ಅಚ್ಚುಕಟ್ಟಾಗಿ ನಡೆಯುತ್ತಿದೆ.
ದರ್ಶನ್ ಅವರಿಗೂ ಇದೊಂದು ಸತ್ವ ಪರೀಕ್ಷೆ. ಬೇರೆ ಭಾಷೆಯಲ್ಲಿ ಇಂತಹ ತಾರಾ ಮಹೋತ್ಸವಗಳು ಸಾಮಾನ್ಯವಾದರೂ ಕನ್ನಡದ ಒಂದು ತಂಡ ಐವತ್ತಕ್ಕೂ ಮಿಕ್ಕಿ ಕಲಾವಿದರೊಂದಿಗೆ ಕಡಲು ಹಾರಿ ವಿದೇಶದಲ್ಲಿ ಕಾರ್ಯಕ್ರಮ ನೀಡಿದ ಉದಾಹರಣೆಗಳು ಕಡಿಮೆ. ಇಲ್ಲಿ ಇವರ ಈ ಕಾರ್ಯಕ್ರಮ ಭರ್ಜರಿ ಯಶಸ್ಸು ಅನ್ನಿಸಿದರೆ ಮುಂದೆ ಹಲವು ಸಾಗರೋಲ್ಲಂಘನ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿದಂತೆಯೇ ಸರಿ! ದುಬೈಯಲ್ಲಿ ಈ ಕಾರ್ಯಕ್ರಮದ ಉಸ್ತುವಾರಿ ಹೊಣೆ ಹೊತ್ತ ಸೂತ್ರಧಾರಿ ಕನ್ನಡಿಗ ಶ್ರೀ ಪ್ರಭು ಅವರು.
ಟಿಕೇಟು ಮಾರಾಟ ಆರಂಭವಾಗಿದೆ. ರೇಡಿಯೊ ಜಾಹೀರಾತು ಬರಲಿದೆ. ಕರ್ನಾಟಕ ಸಂಘದ ಸದಸ್ಯರು ಮತ್ತು ಪ್ರಮುಖ ಕನ್ನಡಿಗ ಹೊಟೆಲುಗಳಿಂದ ಟಿಕೇಟು ಪಡಕೊಳ್ಳಬಹುದು. ದರ: ನೂರು, ಐವತ್ತು ಮತ್ತು ಮೂವತ್ತು ದಿರಹಾಂ
ಎಪ್ರಿಲ್ ಹನ್ನೊಂದರಂದು ಸಂಜೆ ನಾಲ್ಕೂವರೆಗೆ ಆರಂಭವಾಗಿ ಸುಮಾರು ನಾಲ್ಕು ಘಂಟೆಗಳ ಕಾಲ ಸಾಗುವ ಈ ವಿಶೇಷ ತಾರಾ ಸಂಗೀತ ಸಂಜೆ ನಿಮ್ಮೆಲ್ಲರ ಉಪಸ್ಥಿತಿಯಲ್ಲಿ ಹೊಸ ದಾಖಲೆ ಮಾಡಲೆಂಬುದೇ ನಮ್ಮ ಆಶಯ. ಯು ಎ ಇಯ ಸಮಸ್ತ ಕನ್ನಡಿಗರ ಬೆಂಬಲದೊಂದಿಗೆ ಯಶಸ್ವಿಯಾಗಿ ಕಾರ್ಯಕ್ರಮ ದಾಖಲೆಯಾಗಲಿ. ಬನ್ನಿ ಅದನ್ನು ಸಾಧಿಸಿ ತೋರಿಸೋಣ.









All the best for Dubai
All the best for Dubai Kannada Sangha.
Irshad avara chutukugalu churukagi mudibaruttive.
I lekhanada muraneya paradalli jan'ti' ennuvudara badalu jan'thi' emba typing tappu bandide
atmiyateyinda
surabi