- ಶ್ರೀನಾಥ್ ಭಲ್ಲೆ
ನಾನಿಲ್ಲಿ ಹಿತೋಪದೇಶ ಅಥವ ಗೀತೋಪದೇಶಗಳ ಬಗ್ಗೆ ಹೇಳಹೊರಟಿಲ್ಲ, ಬದಲಿಗೆ ’ಶ್ರೀ ಸಾಮಾನ್ಯನ ಬಿಟ್ಟಿ ಉಪದೇಶ’ದ ಬಗ್ಗೆ. ದಿನೇ ದಿನೇ ಏರುತ್ತಿರುವ ಬೆಲೆಗಳ ನಡುವೆಯೂ, ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಅತ್ಯಂತ ಸುಲಭವಾಗಿ ಸಿಗುವ ’ಏಕಮೇವ’ ’ಅದ್ವಿತೀಯ’ ಎಂದರೆ ಉಪದೇಶ. ತಮಗೂ ತಿಳಿದಿದೆ ಎಂದು ತೋರ್ಪಡಿಸಿಕೊಳ್ಳುವ ಒಂದು ಕಾಯಿಲೆಯೇ ಈ ಉಪದೇಶ. ಈ Phobia ಇರುವ ಯಾರೇ ಆಗಲಿ ಇನ್ನೊಬ್ಬರಲ್ಲಿ ಬೇಸರ ತರಿಸುವಲ್ಲಿ ಯಶಸ್ವಿಯಾಗುತ್ತಾರೆ. "actually ನೀವು ಹಾಗೆ ಮಾಡಬಾರದಿತ್ತು", "ಇದನ್ನ ಹೀಗೆ ಯಾಕೆ ಮಾಡಲಿಲ್ಲ?" , "next time ನಿಂದ ಒಂದು ಕೆಲಸ ಮಾಡಿ" ಇವುಗಳು ಉಪದೇಶದ ಆರಂಭಿಕ ಸೂಚನೆಗಳು. ಅದು ಬೆಳೆಯುತ್ತ ಬೆಳೆಯುತ್ತ, ನೀವು ಏನೇ ಮಾಡಿದರೂ ಅವರುಗಳು ಹೇಳುವುದೊಂದೇ "ಛೇ ಛೇ ನನ್ನನ್ನು ಮೊದಲು ಕೇಳಬಾರದಿತ್ತೇ?" ಅವರು ಅದಕ್ಕಿಂತಾ ಹೆಚ್ಚು ಬೋಳಿಸಿಕೊಂಡಿರುತ್ತಾರೆ ಆದರೆ ಅದು ಬೇರೇ ವಿಷಯ. ನನಗಾಗಿರೋ ಅನುಭವದಷ್ಟು ನಿನಗೆ ವಯಸ್ಸಾಗಿಲ್ಲ ಅಂದರೆ ಯಾರಾದರೂ ತೆಪ್ಪಗಾಗಲೇ ಬೇಕಲ್ವೇ?
ಮಟ ಮಟ ಮಧ್ಯಾಹ್ನ ಪಾರ್ಕಿನ ಬೆಂಚಿನ ಮೇಲೆ ಮಲಗಿದ್ದ ನವ ಯುವಕನನ್ನು ಕಂಡು ರೇಗಿ ಹೋದ ಒಬ್ಬ ಹಿರಿಯರು ಅವನನ್ನು ಎಬ್ಬಿಸಿದರು. ಹಿರಿಯರ ಉಪದೇಶ ಶುರುವಾಯ್ತು ’ಹೀಗೆ ಹಾಡು ಹಗಲಿನಲ್ಲಿ ಮಲಗಿ ನಿದ್ರಿಸುತ್ತಿದ್ದೀಯಲ್ಲ ನಿನಗೆ ನಾಚಿಕೆ ಆಗೋಲ್ವೇ? ಎದ್ದು ಹೋಗಿ ಕೆಲಸ ಮಾಡು. ಸಂಪಾದನೆ ಮಾಡು. ಹಣವನ್ನು ಕೂಡಿಡು. ಮದುವೆ ಮಾಡಿಕೋ. ಮಕ್ಕಳು ಮರಿ ಮಾಡಿಕೋ. ಜೀವನ ಅನುಭವಿಸು...’ ಹೀಗೆ. ಯುವಕ ಕೇಳಿದ ’ಇವೆಲ್ಲ ಆದ ಮೇಲೆ ಎನು?’. ಇನ್ನೇನು ಹೇಳಬೇಕೆಂದು ತೋಚದೆ ಹಿರಿಯರು ಹೇಳಿದರು ’ನಂತರ ಆರಾಮವಾಗಿ ಕಾಲು ಚಾಚಿ ನಿದ್ದೆ ಮಾಡು’ ಎಂದರು. ಯುವಕ ಥಟ್ಟನೆ ಕೇಳಿದ ’ನಾನು ಇಷ್ಟು ಹೊತ್ತೂ ಮಾಡುತ್ತಿದ್ದು ಅದೇ ಅಲ್ವೇ? ಅಷ್ಟೆಲ್ಲ ಕಷ್ಟಪಟ್ಟು ಆಮೇಲೆ ನಿದ್ದೆ ಮಾಡಬೇಕೇ?’. ತಮ್ಮ ಪಾಡಿದೆ ತಾವಿರದೆ, ಮೈ ಬಗ್ಗದವನಿಗೆ ಒಣ ಉಪದೇಶ ನೀಡಿ, ಅನ್ನಿಸಿಕೊಳ್ಳುವುದು ಹೀಗೆ.
ನಾನೊಮ್ಮೆ ಸಿಗ್ನಲ್ ಲೈಟ್’ನಲ್ಲಿ ನಿಂತಿದ್ದೆ. ಅರ್ಥಾತ್, ಗಾಡಿ ಮೇಲೆ ಕುಳಿತು, ಸಿಗ್ನಲ್ ಬರುವದಕ್ಕಾಗಿ ಕಾದಿದ್ದೆ. ನನ್ನ ಬದಿಯಲ್ಲಿ ಬುಲೆಟ್ ಒಂದು ನಿಂತಿದ್ದು ಗಡ ಗಡ ಗಡ ಎಂದು ಒಂದೇ ಸಮನೆ ಸದ್ದು ಮಾಡುತ್ತಿತ್ತು. ಹಿಂಸೆಯಾದರೂ ತಡೆದುಕೊಳ್ಳಲೇಬೇಕಾಯ್ತು. ನನ್ನ ಇನ್ನೊಂದು ಬದಿಯಲ್ಲಿದ್ದ ಕಡ್ಡಿ ಪೈಲ್ವಾನ್ ಒಬ್ಬ ಉಪದೇಶ ಮಾಡಿಯೇ ಬಿಟ್ಟ ’ಸ್ವಲ್ಪ ಗಾಡಿ ಅಫ್ ಮಾಡಿ. ಸುಮ್ಮನೆ ಯಾಕೆ ಪೆಟ್ರೋಲ್ ದಂಡ’ ಅಂತ. ಬುಲೆಟ್ ಬೈಕಿನ ಭರ್ಜರಿ ಸವಾರ ಅವನನ್ನು ಕೆಕ್ಕರಿಸಿ ನೋಡಿ ನುಡಿದ ’ನಾನು ಗಾಡಿ ಆಫ್ ಮಾಡ್ತೀನಿ ಆದರೆ ಅದನ್ನು ಮತ್ತೆ ಕಿಕ್ ಹೊಡೆದು ಸ್ಟಾರ್ಟ್ ಮಾಡೋ ತಾಕತ್ತು ನಿಮಗೆ ಇದ್ದರೆ’. ದೊಡ್ಡವರು (ಗಾತ್ರದಲ್ಲಿ) ಚಿಕ್ಕವರ ಉಪದೇಶ ಬಯಸುವುದಿಲ್ಲ ಎಂಬುದು ತಿಳಿದಿರಲಿ ! (ಇದು, ನನ್ನ ಬಿಟ್ಟಿ ಉಪದೇಶ !)
ಹೆರಿಗೆ ಆಸ್ಪತ್ರೆಯಲ್ಲಿ ನೋವಿನಿಂದ ನರಳುತ್ತಿದ್ದ ಒಬ್ಬ ಹೆಂಗಸಿಗೆ ಮತ್ತೊಬ್ಬ ಹೆಂಗಸು ಉಪದೇಶ ಮಾಡಿದಳಂತೆ ’ಸ್ವಲ್ಪ ನೋವು ಬರುತ್ತೆ ತಡೆದುಕೋ. ಸರಿ ಹೋಗುತ್ತೆ’. ಅದಕ್ಕೆ ಆ ಹೆಂಗಸು ಕೇಳಿದಳು ’ನಿಂದು ಎಷ್ಟನೇದು ?’. ಉಪದೇಶ ಮಾಡಿದವಳು ನಾಚುತ್ತಾ ’ಇದು ನನಗೆ ಚೊಚ್ಚಲು’ ಅಂದಳು. ಅದಕ್ಕೆ ಆ ಹೆಂಗಸು ನುಡಿದಳು ’ನನಗೆ ಇದು ಆರನೆಯದು’. ಪೂರ್ವಾಪರ ತಿಳಿಯದೆ ಉಪದೇಶ ಮಾಡಿದಲ್ಲಿ ಹೀಗೇ ಆಗೋದು.
ಒಬ್ಬ ಹೀಗೆ ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟನಂತೆ "ಒಂದು ವಾರದಲ್ಲಿ ಲಕ್ಷಾಧೀಶ್ವರರಾಗಬೇಕೇ? ಹಾಗಿದ್ದಲ್ಲಿ ಈ ಕೆಳಕಂಡ ವಿಳಾಸಕ್ಕೆ ಕೂಡಲೆ ಹತ್ತು ರೂಪಾಯಿ ಮನಿ ಆರ್ಡರ್ ಮಾಡಿ. ನಿಮಗೆ ಸೂಕ್ತ ಸಲಹೆ ನೀಡಲಾಗುತ್ತದೆ" ಎಂದು. ಬಿಟ್ಟಿ ಅಲ್ಲದಿದ್ದರೂ ಹತ್ತು ರೂಪಾಯಿ ತಾನೇ, ಉಪದೇಶ ಉಪಯುಕವಾದಲ್ಲಿ ತಾವೂ ಲಕ್ಷಾಧೀಶ್ವರರಾಗಬಹುದು ಎಂಬ ಆಸೆಯಿಂದ ಸಾಕಷ್ಟು ಜನ ಮನಿ ಆರ್ಡರ್ ಮಾಡಿದರು. ಹಲವು ದಿನದ ನಂತರ ಅವನು ಮತ್ತೆ ಪ್ರಕಟಣೆ ಕೊಟ್ಟ "ಒಂದೇ ವಾರದಲ್ಲಿ ನನ್ನನ್ನು ಲಕ್ಷಾಧೀಶ್ವರನನ್ನಾಗಿ ಮಾಡಿದ್ದಕ್ಕೆ ನಿಮಗೆಲ್ಲ ಅಭಿನಂದನೆಗಳು" ಎಂದು. ಸಲಹೆ ನೀಡುತ್ತೇವೆ ಎಂದರೆ ಉಪದೇಶ ಮಾಡುತ್ತೇವೆ ಎಂದೇ ಅರ್ಥ ಅಲ್ಲವೇ?
ಮಕ್ಕಳಿಗೆ ಉಪದೇಶ ಮಾಡದ ತಂದೆ-ತಾಯಿಗಳು ಈ ಲೋಕದಲ್ಲೇ ಇಲ್ಲ ಅನ್ನಿಸುತ್ತೆ. ಹಾಗಿರಬೇಕು, ಹೀಗಿರಬೇಕು, ಅದು ಮಾಡಬಾರದು, ಇದು ಮಾಡಬಾರದು ಇತ್ಯಾದಿ ಕೇಳೀ ಕೇಳೀ ಮಕ್ಕಳೂ ರೋಸಿ ಹೋಗಿರುತ್ತಾರೆ. ಅಪ್ಪನಾದವನು ಶಾಲೆಗೆ ಹೊರಟ ಮಗನಿಗೆ ಹೇಳಿದನಂತೆ ’ಗಮನ ಇಟ್ಟು ಪಾಠ ಕೇಳು. ಸರಿಯಾಗಿ ಅರ್ಥ ಮಾಡಿಕೋ......’ ಇತ್ಯಾದಿ. ಮಗ ಕೇಳಿದ ’ಅಪ್ಪಾ, ನೀವು ಕೆಲಸಕ್ಕೆ ಹೊರಟಾಗ ನಾನು ಯಾವತ್ತಾದರೂ ಆಫೀಸಿನಲ್ಲಿ ಚೆನ್ನಾಗಿ ಕೆಲಸ ಮಾಡಿ ಅಂತ ಹೇಳಿದ್ದೀನಾ?’.
ಬೆಲ್ಲ ತಿನ್ನುವ ಖಯಾಲಿ ಇದ್ದ ಒಂದು ಮಗುವಿಗೆ ತಾಯಿ ಏನು ಮಾಡಿದರೂ ದುರಭ್ಯಾಸ ಬಿಡಿಸಲಾಗಲಿಲ್ಲ. ಹಾಗೆಂದು ಆಕೆ ಮಗುವನ್ನು ರಾಮಕೃಷ್ಣ ಪರಮಹಂಸರ ಬಳಿ ಕರೆದೊಯ್ದು ಬುದ್ದಿ ಹೇಳುವಂತೆ ಕೇಳಿದಳು. ರಾಮಕೃಷ್ಣರು ಆಕೆಯನ್ನು ಎರಡು ದಿನ ಬಿಟ್ಟು ಬರುವಂತೆ ತಿಳಿಸಿದರು. ಆಕೆ ಎರಡು ದಿನ ಬಿಟ್ಟು ಬಂದಾಗ ಅವರು ಮಗುವಿಗೆ ಹೇಳಿದರಂತೆ "ಮಗೂ ಹೆಚ್ಚು ಬೆಲ್ಲ ತಿಂದರೆ ಆರೋಗ್ಯ ಕೆಡುತ್ತದೆ. ಇನ್ನು ಮುಂದೆ ತಿನ್ನಬೇಡ" ಅಂತ. ಅವರ ಮಾತುಗಳನ್ನು ಕೇಳಿ ಆ ತಾಯಿ ಅವಕ್ಕಾದಳು. ಈ ಮಾತನ್ನು ಅಂದೇ ಹೇಳಬಹುದಿತ್ತಲ್ಲವೇ ಎಂದು ಕೇಳಿದಾಗ ಅವರು ನಸುನಗುತ್ತ ನುಡಿದರಂತೆ "ನನಗೂ ಬೆಲ್ಲ ತಿನ್ನುವ ಅಭ್ಯಾಸ ಇತ್ತು. ಮಗುವಿಗೆ ಉಪದೇಶ ಮಾಡುವ ಮೊದಲು ನಾನು ಅಭ್ಯಾಸ ನಿಲ್ಲಿಸಬೇಕಿತ್ತು. ಅದಕ್ಕೇ ಎರಡು ದಿನಗಳ ಅವಕಾಶ ಕೇಳಿದೆ" ಅಂತ. ಇನ್ನೊಬ್ಬರಿಗೆ ಉಪದೇಶ ಹೇಳುವ ಮೊದಲು ತಾವು ಅದನ್ನು ಪಾಲಿಸಬೇಕು ಎನ್ನುವ ಗುಣವಿದ್ದುದರಿಂದಲೇ ಅವರು ಮಹಾತ್ಮರಾಗಿದ್ದು.
ಮನೆಯ ಹಿರಿಯರು ಕಾಲವಾದಾಗ ಯಾರೋ ಹೀಗೇ ಉಪದೇಶ ಮಾಡಿದರು ’ಒಂದು ವರ್ಷ ಕಾಲ ಹಬ್ಬಗಳ ಆಚರಣೆ ಇಲ್ಲ. ಹೊಸ ಬಟ್ಟೆ ಬರೆ ಅಥವಾ ಹೊಸ ವಸ್ತುಗಳನ್ನೇನೂ ಖರೀದಿ ಮಾಡಬಾರದು’ ಇತ್ಯಾದಿ. ನಾನು ಕೇಳಿದೆ "ಯಾಕೆ?". ಸ್ವಲ್ಪ ತಡಬಡಾಯಿಸಿ "ಹೋದವರ ಆತ್ಮಕ್ಕೆ ಶಾಂತಿ ಸಿಗೋದಿಲ್ಲ. ಅವೆಲ್ಲ ಹಾಗೆ ಪ್ರಶ್ನೆ ಕೇಳಬಾರದು, ತಿಳಿಯಿತೇ? ". ಉಪದೇಶ ಮಾಡುವ ಮೊದಲು ಅರ್ಥ ತಿಳಿದುಕೊಂಡಿದ್ದರೆ ಒಳ್ಳೆಯದು. ಹಿಂದಿನ ಕಾಲದಲ್ಲಿ ಜನರು ಒಟ್ಟು ಸಂಸಾರದಲ್ಲಿದ್ದರು. ಹಿರಿಯರು ಹೋದ ಮೊದಲ ವರ್ಷ, ತಿಂಗಳಿಗೆ ಎರಡು ಬಾರಿ ಕರ್ಮಗಳನ್ನು ಆಚರಣೆ ಮಾಡಬೇಕಾಗುತ್ತದೆ. ಅದು ಖರ್ಚಿನ ಮಾತು ತಾನೆ. ಹಬ್ಬ ಹಾಡಿ, ಬಟ್ಟೆ ಬರೆ ಅಂತ ಖರ್ಚು ಮಾಡಿದರೆ ತಿಥಿ ಖರ್ಚಿಗೆ ದುಡ್ಡು ಯಾರು ಕೊಡುತ್ತಾರೆ? ಅದಕ್ಕೇ ಬಹುಶ: ಹಿಂದಿನ ಕಾಲದವರು ನಿಯಮ ಅಂತ ಹಾಕಿರಬೇಕು. ಇದು ನನ್ನ ಸಿದ್ದಾಂತ. ನೀವೇನಂತೀರಾ?
ಎಷ್ಟೋ ಬಾರಿ ಈ ಉಪದೇಶಗಳು ತಮಗೂ ತಿಳಿದಿದೆ ಎನ್ನುವುದನ್ನು ತೋರಿಸಿಕೊಳ್ಳಲು ಎಂದು ಅನ್ನಿಸಿದರೆ ಕೆಲವೊಮ್ಮೆ ಅದು ಮಾರಕವಾಗಿರುತ್ತದೆ. ಮಂಥರೆಯು ಕೈಕೇಯಿಗೆ ನೀಡಿದ ಉಪದೇಶ ರಾಮಾಯಣದ ಮುಖ್ಯ ಭಾಗದಲ್ಲೊಂದು. ವೈದ್ಯರಲ್ಲದ ಕೆಲವರು ತಮಗೆ ತಿಳಿದ ವೈದ್ಯಕೀಯವನ್ನು ಇನ್ನೊಬರಿಗೆ ಪ್ರಯೋಗಿಸಲು ಹೇಳಿ ಪ್ರಾಣಕ್ಕೇ ಕುತ್ತು ತಂದಿರುವ ಉದಾಹರಣೆಗಳೂ ಬಹಳ ಇವೆ.
ಉಪದೇಶ ಮಾಡಲು ಇರಬೇಕಾದ ಅರ್ಹತೆ ಏನು? ಸರ್ವಕಾಲಕ್ಕೂ ಶ್ರೇಷ್ಟವಾದ ಉದಾಹರಣೆ ’ಗೀತೋಪದೇಶ’. ಉಪದೇಶ ಮಾಡುತ್ತಿದವನು ಎಲ್ಲವನ್ನೂ ಬಲ್ಲ ಸರ್ವೋತ್ತಮ. ಉಪದೇಶ ಮಾಡಿಸಿಕೊಂಡವನು ಮುಂದೆ ದಾರಿಕಾಣದೆ ಹಸ್ತ ಚೆಲ್ಲಿ ಕುಳಿತ ನಿಸ್ಸಹಾಯಕ. ಕಿರಾತಕನೊಬ್ಬ ನಾರದ ಮುನಿಗಳ ಉಪದೇಶದಿಂದ ರಾಮಾಯಣವನ್ನೇ ರಚಿಸಿದ ವಾಲ್ಮೀಕಿಯಾಗಲಿಲ್ಲವೇ?
ಉಪದೇಶವು ಏಕಮಾರ್ಗವಾದರೆ ಅದಕ್ಕೆ ಬೆಲೆ ಇರುವುದಿಲ್ಲ. ಉಪದೇಶ ಕೇಳುವವರಿದ್ದರೆ ಮಾಡುವವರಿಗೂ ಬೆಲೆ ಇರುತ್ತದೆ. ವಿದುರನ ಉಪದೇಶ ಕೌರವರ ಕಿವಿ ತಲುಪಿತೇ? ಕುಬೇರನ ಉಪದೇಶವು ರಾವಣನ ತಲೆಗೇರಿತೇ? ವಿನಾಶ ಕಾಲದಿ ಯಾವ ಉಪದೇಶಗಳೂ ಕೆಲಸಕ್ಕೆ ಬಾರವು.
ಉಪದೇಶ ಎನ್ನುವುದು ಏಕೆ ಇಷ್ಟು ಪ್ರಸಿದ್ದಿ ಎಂದು ಕೇಳುವಿರಾ? ಉಪದೇಶ ಮಾಡುವವರು ಅದನ್ನು ಪಾಲಿಸಲೇ ಬೇಕು ಎಂದೇನಿಲ್ಲ, ಅದಕ್ಕೇ. ಆಚಾರ ಹೇಳೋಕೆ ಬದನೇ ಕಾಯಿ ತಿನ್ನೋಕೆ !!








