ನಮ್ಮ ಶೇಖರ ಶೆಟ್ಟಿಯವರಿಗೆ ಈ ಬಾರಿಯ ರಾಜ್ಯೋತ್ಸವದ ಪ್ರಶಸ್ತಿಯ ಗೌರವ
shekhar shetty


ಭಾರತದ ಅತ್ಯಂತ ವೈವಿಧ್ಯಮಯ ಪ್ರವಾಸಿ ತಾಣ, ಬೇರೆಲ್ಲೂ ಕಂಡು ಬಾರದ ಸೌಂದರ್ಯವಿರುವುದು ಕರ್ನಾಟಕದಲ್ಲಿ. ಇಂತಹ ನಮ್ಮ ತಾಯಿನಾಡಿನ ಪ್ರಕೃತಿ ಸೌಂದರ್ಯ, ಶಿಲ್ಪ ವೈಭವ, ಕಡಲ ಕಿನಾರೆ, ವನ - ವನ್ಯ ಸಂಪತ್ತು, ಜಲಧಾರೆಗಳು, ಜನಪದ ಆಚರಣೆ, ಸಾಂಪ್ರದಾಯಿಕ ಉತ್ಸವ ಇಂತಹ ಸ್ವರ್ಗರೂಪಿ ವೈಭವದ ನಮ್ಮೂರನ್ನು ಬಿಟ್ಟು ಗಲ್ಫ್ ನಾಡಿಗೆ ಬರುವಾಗ ಬರಿ ಮರಳುಗಾಡು ಎಂಬ ಭಾವನೆ. ಉದ್ಯೋಗವನ್ನು ಹರಸಿ ಬರುವ ಲಕ್ಷೋಪಲಕ್ಷ ಜನರಿಗೆ ಬಂದ ನಂತರ ಜಗತ್ತಿನಾದ್ಯಂತ ವೈವಿಧ್ಯಮಯ ಉದ್ಯಮಗಳ ಬೃಹತ್ ಸಂಕೀರ್ಣಗಳು, ಸ್ವಚ್ಛವಾದ ದಾರಿಗಳು, ರಾತ್ರಿಯಾದರೆ ನೂತನ ವರ್ಣಮಯ ಲೋಕವನ್ನು ಸೃಷ್ಟಿ ಮಾಡುವ ದಾರಿ ದೀಪಗಳು, ಭೂಮಿಯ ಮೇಲೆ ಸ್ವರ್ಗಲೋಕದ ಸೃಷ್ಟಿ, ರಸ್ತೆ ಮೇಲೆ ಶಿಸ್ತು ಬದ್ಧವಾಗಿ ಚಲಿಸುವ ವಾಹನಗಳು, ಇಕ್ಕೆಲಗಳಲ್ಲಿ ಹಸಿರು ಹುಲ್ಲಿನ ಹಾಸು, ವಿವಿಧ ಆಕರ್ಷಕ ಹೂರಾಶಿ, ಉದ್ಯಾನವನಗಳು, ಸಮಯ ನಿಷ್ಠ ಶಿಸ್ತಿನ ಕೆಲಸದಲ್ಲಿ ತೊಡಗಿರುವವರ ಮುಖದರ್ಶನ ಪ್ರತಿನಿತ್ಯದ ನೋಟ. ಪ್ರತಿಯೊಬ್ಬರು ಸುರಕ್ಷಿತರು, ಕಳ್ಳರ ಭಯವಿಲ್ಲ, ದರೋಡೆ ಕೊಲೆಯ ಅಂಜಿಕೆಯಿಲ್ಲ, ಬಂದ್-ಹರತಾಳದ, ಕಲ್ಲುತೂರಾಟದ ದೃಶ್ಯ ಇಲ್ಲ, ಸಾರ್ವಜನಿಕ ಆಸ್ತಿಪಾಸ್ತಿಗೆ ತೊಂದರೆಯಾಗುವುದಿಲ್ಲ. ಇಂತಹ ಈ ಗಲ್ಫ್ ನಾಡಿನಲ್ಲಿ ಭಾರತದ ವಿವಿಧ ಪ್ರದೇಶದವರಂತೆ ಕನ್ನಡಿಗರು ದಶಕಗಳಿಂದ ಗೌರವಯುತವಾಗಿ ಇಲ್ಲಿ ನೆಲೆಸಿದ್ದಾರೆ. ಈ ನಾಡಿನ ಶ್ರೀಮಂತಿಕೆಯಲ್ಲಿ ಭಾರತೀಯರ ಕೊಡುಗೆ ಅತ್ಯಮೂಲ್ಯವಾದದ್ದು. ಅದರಲ್ಲಿಯೂ ಕನ್ನಡಿಗರು ಬೃಹತ್ ಉದ್ಯಮ, ವ್ಯಾಪಾರ - ವಹಿವಾಟು ಮಾಡಿ ರಾಷ್ಟ್ರದ ವಿತ್ತ ಸಂಪತ್ತಿನಲ್ಲಿ ತಮ್ಮ ಪಾಲು ಸಿಂಹ ಪಾಲು ಎಂಬುದನ್ನು ಸಾಕ್ಷೀಕರಿಸಿದ್ದಾರೆ. ಇಂತವರ ಸಾಲಿನಲ್ಲಿ ಅಗ್ರ ಪಂಕ್ತಿಯಲ್ಲಿ ಬರುವವರು ನಮ್ಮ ಶೇಖರ ಬಾಬು ಶೆಟ್ಟಿಯವರು.

ಉಡುಪಿ ಜಿಲ್ಲೆಯ ಶಿರ್ವದ ಕಳತ್ತೂರಿನ ಎಲ್ಲೂರು ಗುತ್ತು ಶ್ರೀ ಬಾಬು ಶೆಟ್ಟಿ ಹಾಗೂ ಶ್ರೀಮತಿ ಪದ್ದಕ್ಕ ಶೆಟ್ಟಿ ದಂಪತಿಗಳ ಮಗನಾಗಿ ೧೯೪೭ರಲ್ಲಿ ಜನಿಸಿದ ಶೇಖರ ಶೆಟ್ಟಿಯವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಿರ್ವದ ಎಂ.ಎಸ್.ಆರ್.ಎಸ್. ಕಾಲೇಜಿನಲ್ಲಿ ಮುಗಿಸಿ, ನಂತರದ ಶಿಕ್ಷಣ ಡಿಪ್ಲೋಮ ಇಂಜಿನಿಯರಿಂಗ್ ಮುಂಬೈನಲ್ಲಿ ಮುಗಿಸಿ, ದುಬಾಯಿಗೆ ಪಯಣಿಸಿದರು. ಮೊದಲು ಇನ್ಷುರೆನ್ಸ್ ಕಂಪೆನಿ, ಟೆಲಿಕಂಪೆನಿಗಳಲ್ಲಿ ಸೇವೆ ಸಲ್ಲಿಸಿದ ಇವರಿಗೆ ತನ್ನ ತಾಯಿನಾಡಿನ ಮಮತೆ ಗೌರವ, ನೆನಪು ಸದಾ ಮನದಲ್ಲಿ ಶಾಶ್ವತವಾಗಿ ಉಳಿಯುವಂತಹ ನಿರ್ಧಾರಕ್ಕೆ ಸಾಕ್ಷಿಯಾಗಿ ೧೯೭೮ರಲ್ಲಿ ತನ್ನ ಜನ್ಮಭೂಮಿ ಹಾಗು ನೆಲೆಸಿರುವ ಈ ನಾಡಿನ ಬಾಂಧವ್ಯದ ಬೆಸುಗೆಯಾಗಿ `ಅರಬ್ ಉಡುಪಿ' ಎಂಬ ನಾಮಾಂಕಿತದಲ್ಲಿ ಹೋಟೆಲ್ ಉದ್ಯಮ ಪ್ರಾರಂಭಿಸಿದರು. ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿ , ದುಬಾಯಿ, ಶಾರ್ಜ, ಅಲ್ ಐನ್, ಮಸಾಫಿಗಳಲ್ಲಿ ಮುನ್ನೂರಕ್ಕೂ ಮಿಕ್ಕಿ ವೈವಿಧ್ಯಮಯ ರುಚಿ ಶುಚಿಯ ಭಕ್ಷ-ಭೋಜನಗಳು, ಭೋಜನ ಪ್ರಿಯರ ಮನ ತೃಪ್ತಿ ಮಾಡಿ ಅರಬ್ ಉಡುಪಿಯ ಉತ್ಕೃಷ್ಟ ಸೇವೆ ದಾಖಲೆಯಾಗಿದೆ. ಕಡಲ ತಡಿಯ ತುಳುನಾಡಿನ ಉನ್ನತ ವ್ಯಕ್ತಿತ್ವದ ಶೇಖರ್ ಶೆಟ್ಟಿಯವರು ಅತ್ಯಂತ ಸರಳ ವ್ಯಕ್ತಿ. ತಮ್ಮ ಅಸಾಮಾನ್ಯ ಸಾಧನೆ ಮತ್ತು ಮಹೋನ್ನತ ವ್ಯಕ್ತಿತ್ವದಿಂದ ಜನಮನದಲ್ಲಿ ಮಾನ್ಯತೆಗಳಿಸಿದ್ದಾರೆ.

ಕನ್ನಡ, ತುಳು, ಕೊಂಕಣಿ, ಬ್ಯಾರಿ, ಕೊಡವ ಪಂಚ ಭಾಷೆಯ ಕರ್ನಾಟಕದವರು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕನ್ನಡ ನಾಡು-ನುಡಿ, ಭಾಷೆ, ಕಲೆ, ಸಂಸ್ಕೃತಿಯನ್ನು ವಿವಿಧ ಸಂಘ ಸಂಸ್ಥೆಗಳು ವೈಭವಿಕರಿಸಿ ನವ ಜಾಗೃತಿ ಮೂಡಿಸಿದ್ದಾರೆ. ಕನ್ನಡ - ತುಳು ಭಾಷೆಯ ಕಂಪನ್ನು ಈ ನಾಡಿನಲ್ಲಿ ಪರಿಮಳಿಸುವಂತೆ ಮಾಡಿದ ಅಬುಧಾಬಿ ಕರ್ನಾಟಕ ಸಂಘ, ದುಬಾಯಿ ಕರ್ನಾಟಕ ಸಂಘ, ಶಾರ್ಜಾ ಕರ್ನಾಟಕ ಸಂಘ, ಅಲ್ ಐನ್ ಕರ್ನಾಟಕ ಸಂಘ, ಯು.ಎ.ಇ. ತುಳುಕೂಟ, ಜೆಬಲ್ ಆಲಿ ಕರ್ನಾಟಕ ಮಿತ್ರರು, ಯು.ಎ.ಇ. ಬಂಟ್ಸ್ , ಬಿಲ್ಲವರ ಬಳಗ, ಇತ್ಯಾದಿ ಐವತ್ತಕಿಂತಲೂ ಹೆಚ್ಚಿನ ವಿವಿಧ ಸಂಘಟನೆಗಳು ಕಳೆದ ಎರಡು ಮೂರು ದಶಕಗಳಿಂದ ನಡೆಸಿದ ವಿವಿಧ ವೈಭವದ ಕಾರ್ಯಕ್ರಮಗಳಿಗೆ ಪ್ರಾಯೋಜಕರಾಗಿರುವ ಕೆಲವು ಅಗ್ರಗಣ್ಯ ಉದ್ಯಮಿಗಳಲ್ಲಿ ಅರಬ್ ಉಡುಪಿ ಒಂದಾಗಿದೆ.

ಕ್ರೀಡಾ ಮನೊಲ್ಲಾಸದ ಮಹತ್ವವನ್ನು ಅರಿತ ಶೇಖರ್ ಶೆಟ್ಟಿಯವರು ಯು.ಎ.ಇ. ಯಲ್ಲಿ ನಡೆಯುವ ವಿವಿಧ ಸಂಘಟನೆಗಳ ಕ್ರೀಡೋತ್ಸವ, ಕ್ರಿಕೆಟ್ ಪಂದ್ಯಾಟ, ವಾಲಿಬಾಲ್-ಥ್ರೋಬಾಲ್ ಪಂದ್ಯಾಟ ಮೂಲಕ ನೂರಾರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ ಕ್ರೀಡಾ ಪ್ರೇಮಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅರಬ್ ಉಡುಪಿ ಕ್ರಿಕೆಟ್ ತಂಡ ಯು.ಎ.ಇ. ಯಲ್ಲಿ ನಡೆಯುವ ಹಲವಾರು ರಾಷ್ಟ್ರ ಮಟ್ಟದ ಟೂರ್ನಮೆಂಟ್ ಗಳಲ್ಲಿ ಪ್ರಥಮ ಸ್ಥಾನದಲ್ಲಿದ್ದು ಹಲವಾರು ರೋಲಿಂಗ್ ಟ್ರೋಫಿಗಳನ್ನು ತನ್ನ ಸಂಗ್ರಹದಲ್ಲಿರಿಸಿಕೊಂಡಿದೆ.

ಶ್ರೀ ಶೇಖರ ಶೆಟ್ಟಿಯವರ ಹೃದಯ ವೈಶಾಲ್ಯ ನಿರಾಡಂಬರ "ತುಂಬಿದ ಕೊಡ ತುಳುಕುವುದಿಲ್ಲ" ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನ. ಅವರ ಬಳಿಗೆ ಹೋದವರು ಯಾರೂ ನಿರಾಶರಾಗಿ ಮರಳಿದ್ದಿಲ್ಲ.

ನಮ್ಮ ತಾಯಿನಾಡಿನ ಕಲೆ, ಭಾಷೆ, ಸಂಸ್ಕೃತಿಯ ಮೇಲಿರುವ ಗೌರವ ತಮ್ಮ ಸಾಮಾಜಿಕ ಸೇವೆಯಿಂದ ಜನರ ಗೌರವ ಗೆದ್ದ ಶೇಖರ್ ಶೆಟ್ಟಿಯವರು ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ಪಡೆದು ಅರಬ್ ಸಂಯುಕ್ತ ಸಂಸ್ಥಾನದ ಕನ್ನಡಿಗರ, ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಭಾರತದ ಪ್ರತಿಷ್ಠಿತ "ಹಿಂದ್ ರತನ್" ಪ್ರಶಸ್ತಿ, ೧೯೯೮ರಲ್ಲಿ ಯು.ಎ.ಇ. ಬಂಟ್ಸ್ ಕೂಡುಕಟ್ಟಿನಲ್ಲಿ ಸನ್ಮಾನ, ೨೦೦೨ರಲ್ಲಿ ವಿಶ್ವ ಬಂಟರ ಸಮಾವೇಶದಲ್ಲಿ ಸನ್ಮಾನ, ೨೦೦೫ರಲ್ಲಿ ಅಖಿಲ ಭಾರತದ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ನೊಬೆಲ್ ಮಾನ್ಯ ಪ್ರಶಸ್ತಿ, ರೆಸ್ಟೋರೆಂಟ್ ಉದ್ಯಮದಲ್ಲಿ ಸಾಧನೆಗೆ ಪ್ರಶಸ್ತಿ. ಮಂಗಳೂರಿನಲ್ಲಿ ಬಂಟರ ಸಂಗಾತಿ ಪ್ರಶಸ್ತಿ, ಅರಬ್ ಸಂಯುಕ್ತ ಸಂಸ್ಥಾನದಲ್ಲಿ ವಿದ್ಯಾ ಕ್ಷೇತ್ರ, ಸಾಂಸ್ಕೃತಿಕ, ಕೈಗಾರಿಕಾ, ಸಮಾಜಸೇವೆಯಲ್ಲಿ ಸಾಧಿಸಿರುವ ಕನ್ನಡಿಗರಿಗೆ ನೀಡಲಾಗುವ ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ "ಮಯೂರ" ಪ್ರಶಸ್ತಿ ೨೦೦೬ ರಲ್ಲಿ ಇವರ ಪಾಲಾಗಿವೆ. ೨೦೦೬ ಜೂನ್ ತಿಂಗಳಲ್ಲಿ ಅಬುಧಾಬಿ ಕರ್ನಾಟಕ ಸಂಘದ ರಜತ ಮಹೋತ್ಸವದ ಸಮಾರಂಭದಲ್ಲಿ ಆಗ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಹೆಚ್. ಡಿ. ಕುಮಾರಸ್ವಾಮಿಯವರು ಮತ್ತು ವೈದ್ಯಕೀಯ ಹಾಗೂ ಪಶು ಸಂಗೋಪನ ಸಚಿವರಾಗಿದ್ದ ಶ್ರೀ ವಿ. ಎಸ್. ಆಚಾರ್ಯ ರವರ ಸಮ್ಮುಖದಲ್ಲಿ ೨೫ ವರ್ಷಗಳಿಂದ ಕರ್ನಾಟಕ ಸಂಘದ ಯಶಸ್ವಿ ಪಯಣದಲ್ಲಿ ಸಲಹೆ, ಸಹಕಾರ, ಪ್ರಾಯೋಜಕರಾಗಿ ಸೇವೆ ಸಲ್ಲಿಸಿದ ಶೇಖರ್ ಶೆಟ್ಟಿ ಯವರನ್ನು ಗೌರವಪೂರ್ವಕವಾಗಿ ಸಹಸ್ರಾರು ಕನ್ನಡಿಗರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದ್ದು ವಿದೇಶದಲ್ಲಿ ನೆಲೆಸಿರುವ ಕನ್ನಡಿಗನಿಗೆ ದೊರೆತ ಉನ್ನತ ಮಟ್ಟದ ಗೌರವವಾಗಿದೆ. ಯು.ಎ.ಇ. ತುಳುಕೂಟದ ಆಶ್ರಯದಲ್ಲಿ ಅರಬ್ ಸಂಯುಕ್ತ ಸಂಸ್ಥಾನದ ತುಳುವರೆಲ್ಲರೂ ಮತಭೇದವಿಲ್ಲದೆ ದುಬೈ ಅಲ್ ನಾಸರ್ ಲೀಷರ್ ಲ್ಯಾಂಡ್ ಐಸ್ ರಿಂಕ್ ನಲ್ಲಿ ಸಮಾವೇಶಗೊಂಡು ನಡೆಸುವ ತುಳು ಸಾಂಸ್ಕೃತಿಕ ಹಬ್ಬದ ಆಚರಣೆ, ಸಾಂಸ್ಕೃತಿಕ ಮೆರವಣಿಗೆ, ಕ್ರೀಡಾಕೂಟ, ನಾಟಕ, ಇತ್ಯಾದಿ ಸಾಂಸ್ಕೃತಿಕ ಸಮ್ಮೇಳನಕ್ಕೆ ಕಳೆದ ಎರಡು ದಶಕಗಳಿಂದ ಪ್ರಾಯೋಜಕರಾಗಿ ನಾಡಿನ ಸಂಸ್ಕೃತಿಯ ವೈಭವಕ್ಕೆ ತನ್ನ ಮನ ಪೂರ್ವಕ ಬೆಂಬಲ ನೀಡಿರುವುದು ಶೇಖರ್ ಶೆಟ್ಟಿಯವರ ಹೃದಯವಂತಿಕೆಗೆ ಸಾಕ್ಷಿಯಾಗಿದೆ.

ದುಬಾಯಿಯ ಕಳೆದ ಕ್ರೆಲವು ವರ್ಷಗಳಿಂದ ನಡೆಯುತ್ತಿರುವ ಯಕ್ಷಗಾನ ಪ್ರಸಂಗಗಳಿಗೆ ಪೂರ್ಣ ಬೆಂಬಲ ನೀಡಿ ಗಲ್ಫ್ ನಾಡಿನ ಕಾನೂನು ಕಟ್ಟಲೆಗಳಿಗೆ ಯಾವುದೆ ರೀತಿಯ ಧಕ್ಕೆ ಬಾರದ ರೀತಿಯಲ್ಲಿ ಹಲವು ಕಥಾಪ್ರಸಂಗಗಳ ವರ್ಣರಂಜಿತ ಯಕ್ಷಗಾನ, ನಾಡಿನ ಹರಕೆಯಾಟವನ್ನು ನೋಡುವ ಭಾಗ್ಯ ಇಲ್ಲಿಯ ಯಕ್ಷಗಾನ ಪ್ರೇಮಿಗಳಿಗೆ ಶೇಖರ್ ಶೆಟ್ಟಿ ಮತ್ತು ಕೆಲವು ಹೃದಯವಂತಿಕೆಯ ಪ್ರಾಯೋಜಕರಿಂದ ಮಾತ್ರ ಸಾಧ್ಯವಾಗಿದೆ. ಹತ್ತು ಹಲವು ರೀತಿಯಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಶೇಖರ್ ಶೆಟ್ಟಿಯವರು ನೂರಾರು ಕನ್ನಡಿಗರ ಮಾತ್ರವಲ್ಲದೆ ಶ್ರೀಲಂಕಾ, ನೇಪಾಳ, ಫಿಲಿಪೈನ್ಸ್, ಇನ್ನಿತರ ಭಾರತೀಯರ ಸಂಸಾರಗಳಿಗೆ ಆಶ್ರಯದಾತರಾಗಿದ್ದಾರೆ.

ತನ್ನ ಜನ್ಮ ಸ್ಥಾನವಾದ ಕಳತ್ತೂರನ್ನು ತನ್ನ ಹೃದಯ ಸ್ಥಾನದಲ್ಲಿಟ್ಟುಕೊಂಡಿರುವ ಇವರು ಕಳತ್ತೂರು ಬಸ್ ನಿಲ್ದಾಣ, ಶಾಲೆಯ ಸಭಾಂಗಣ, ವೇದಿಕೆ, ಶಾಲೆಗೆ ಕಂಪ್ಯೂಟರ್ ನೀಡಿ, ಮಂಗಳ ಸೇವಾ ಸಮಿತಿಯ ಆಶ್ರಯದಲ್ಲಿ ತಂದೆತಾಯಿ ಬಂಧು ಮಿತ್ರರಿಂದ ವಂಚಿತರಾದಂಥ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಮಣ್ಣಿನ ಮಗನಾದ ಶೇಖರ್ ಶೆಟ್ಟಿಯವರನ್ನು ಹುಟ್ಟೂರಿನವರು ಗೌರವದಿಂದ ಬರಮಾಡಿಕೊಂಡು, ಉಡುಪಿ ಕೃಷ್ಣ ಮಠದ ಶ್ರೀ ಶ್ರೀ ಶ್ರೀ ವಿದ್ಯಾಧೀಶ ಪ್ರಸನ್ನ ಸ್ವಾಮಿಜಿ, ಕಟೀಲು ದೇವಾಲಯದ ಮೋಕ್ತೆಸರ ಅನಂತ ಪದ್ಮನಾಭ ಹಯಗ್ರೀವ ತಂತ್ರಿ, ನಿಟ್ಟೆ ವಿದ್ಯಾಸಂಸ್ಥೆ ಯ ಮುಖ್ಯಸ್ಥರು ಶ್ರೀ ವಿನಯ ಹೆಗ್ಗಡೆ, ಯು.ಎ.ಇ.ಯ ಉದ್ಯಮಿ ಡಾ. ಬಿ. ಆರ್.ಶೆಟ್ಟಿ, ಶಾಸಕರಾದ ಶ್ರೀ ಲಾಲಾಜಿ ಮೆಂಡನ್, ಮಾಜಿ ಸಚಿವರಾದ ಶ್ರೀ ವಸಂತ ವಿ ಸಾಲಿಯಾನ್, ಶಾರ್ಜಾ ಕರ್ನಾಟಕ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈ ಮತ್ತು ಸಮಸ್ತ ಬಂಧು ಬಾಂಧವರ ಸಮ್ಮುಖದಲ್ಲಿ ಸನ್ಮಾನಿಸಿರುವುದು ಶ್ರೀಯುತರ ನಿಸ್ವಾರ್ಥ ಸೇವೆಗೆ ಲಭ್ಯವಾದ ಅತ್ಯುನ್ನತ ಮಟ್ಟದ ಗೌರವವಾಗಿದೆ.

ಇದೀಗ ೫೧ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ೨೦೦೭ ನೇ ನವೆಂಬರ್ ೧ ರಂದು ಕರ್ನಾಟಕ ಸರ್ಕಾರದಿಂದ ಪಡೆಯುತ್ತಿರುವ ಹೊರನಾಡ ಕನ್ನಡಿಗರಾದ ಶ್ರೀ ಶೇಖರ್ ಬಾಬು ಶೆಟ್ಟಿ ಯವರಿಗೆ ಅರಬ್ ಸಂಯುಕ್ತ ಸಂಸ್ಥಾನದ ಸಮಸ್ತ ಕನ್ನಡಿಗರ ಪರವಾಗಿ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ಹರ್ಷಿಸುತ್ತೇವೆ.

ಶೇಖರ್ ಶೆಟ್ಟಿಯವರು ತಮ್ಮ ಮಡದಿ, ಸಜ್ಜನಿಕೆಯ ಸಾಕಾರ, ಸ್ನೇಹಶೀಲರಾಗಿರುವ - ಶ್ರೀಮತಿ ಕುಶಲಾ ಶೆಟ್ಟಿ ಹಾಗು ಪುತ್ರಿಯರಾದ ಕು|| ರೋಶನಿ ಮತ್ತು ಕು|| ಚಾಂದಿನಿ ಯವರೊಂದಿಗೆ ಸುಸಂಸ್ಕೃತ ಬದುಕಿನಲ್ಲಿ ಸುಖ ಸಂಪತ್ತು, ನೆಮ್ಮದಿ, ಆರೋಗ್ಯ, ಮನಶಾಂತಿಯನ್ನು ಕಾಣಲಿ, ಅವರ ಸಮಸ್ತ ಕುಟುಂಬವನ್ನು ದೇವರು ಸದಾ ಅನುಗ್ರಹಿಸಲಿ ಎಂದು ಆಶಿಸುತ್ತಾ ಶ್ರೀಯುತರ ಸಮಾಜಸೇವೆ ನಿರಂತರವಾಗಿ ಸುಗಮವಾಗಿ ನಡೆಯುತ್ತಿರಲಿ ಎಂದು ಸಮಸ್ತರ ಪರವಾಗಿ ಶುಭವನ್ನು ಹಾರೈಸುತ್ತೇವೆ.

ಬಿ. ಕೆ. ಗಣೇಶ್ ರೈ
ನಿಕಟಪೂರ್ವ ಅಧ್ಯಕ್ಷರು
ಕರ್ನಾಟಕ ಸಂಘ ಶಾರ್ಜಾ

 

 

Syndicate

Syndicate content