ಬಿಸಿ ಬಿಸಿ ಪ್ರಶ್ನೆಗಳಿಗೆ ಬಿಸಿಯಾರದ ಉತ್ತರಗಳು !!
ಗೋಪಿನಾಥ್ ರಾವ್

 - ಗೋಪೀನಾಥ ರಾವ್

ಮನಸ್ಸಿನಲ್ಲಿ ಎದ್ದ ಪ್ರಶ್ನೆಗೆ ಉತ್ತರ ಸಿಗದೇ ಇದ್ದರೆ ಏನು ಮಾಡ್ತೀರಾ? ತಲೆ ಕೆಡಿಸಿಕೊಳ್ಳುತ್ತೀರಾ? ಸತ್ತುಹೋಗಲಿ ಎಂದು ಮರೆತು ಬಿಡ್ತೀರಾ? ಛೆ.. ಹಾಗೆ ಮಾಡಬೇಡಿ. ಅದೂ ನಿಮ್ಮ ಮನಸ್ಸಿನ ಮೂಲೆಯಲ್ಲಿರಲಿ. ಒಂದಲ್ಲ ಒಂದು ದಿನ ಅದಕ್ಕೆ ಉತರ ಸಿಕ್ಕಿಯೇ ಸಿಗುತ್ತದೆ. ಕಳೆದ ವಾರ ನನಗನಿಸಿದ್ದು ಹೀಗೆ.

ರಮೇಶ್ ಪವಾರ್ ಮತ್ತು ಅಗರ್ಕರ್ ಮತ್ತೂ ಮತ್ತೂ ಆಯ್ಕೆಯಾಗುತ್ತಿದ್ದ ದಿನಗಳವು. ಕ್ರಿಕೆಟ್ ಮಂಡಳಿ ಅಧ್ಯಕ್ಷ ಶರದ್ ಪವಾರ್ ಕ್ರಿಕೆಟಿಗರ ಅಯ್ಕೆಯಲ್ಲಿ ಮೂಗು ತೂರಿಸುತ್ತಿದ್ದಾರೆಯೇ ಎಂದು ಸಂದೇಹ ಬಂದಿತ್ತು. ಆಯ್ಕೆ ಸಮಿತಿ ಪ್ರಮುಖ ವೆಂಗ್ ಸರ್ಕಾರ್ ಕೂಡ ಮುಂಬೈ ಕಾರ್ ಆಗಿದ್ದೇ ಕಾರಣ ಇರಬಹುದು ಎಂದುಕೊಂಡಿದ್ದೆ. ಈಗ ವಿಷಯ ಜಗಜ್ಜಾಹೀರಾಗಿದೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಆಡುತ್ತಿದ್ದ ಸಮಯ. ಏಕದಿನ ಸರಣಿಗೆ ಟೀಮಿನ ಘೋಷಣೆಯಾಗಿತ್ತು. ಎಲ್ಲ ಹಿರಿಯರನ್ನು ಕೈಬಿಟ್ಟರೂ ಸಚಿನ್ ಹೆಸರು ಮಾತ್ರ ಪಟ್ಟಿಯ ಆರಂಭದಲ್ಲೇ ಇದ್ದು ಅಣಕಿಸುತ್ತಿತ್ತು. ಮನಸ್ಸಿನ ಕಠಿಣತೆ ಮಾನದಂಡವಾಗಿದ್ದಲ್ಲಿ ಗಾಂಗುಲಿ ಸಚಿನ್ ಗಿಂತ ಎಷ್ಟೋ ವಾಸಿ ಎಂದೂ ಟೆಕ್ನಿಕ್ ಮಾನದಂಡವಾಗಿದ್ದರೆ ದ್ರಾವಿಡ್ ಸಚಿನ್ ಗಿಂತ ಮುಂದೆ ಎಂದು ಭಾವಿಸಿದ್ದ ನನಗೆ, ವಯಸ್ಸು ಇವರಿಬ್ಬರನ್ನು ಹೊರಗಿಟ್ಟಿದ್ದರೆ ಸಚಿನ್ ಮಾತ್ರ ಹೇಗೆ ಒಳಗೇ ಇದ್ದಾರೆ ಎಂಬುದು ಪ್ರಶ್ನೆಯಾಗಿ ಕಾಡಿತ್ತು.

ಇದೀಗ ಅದಕ್ಕೆ ಉತ್ತರ ಸಿಕ್ಕಿದೆ!

'ಧೋನಿಗೆ ನಾಯಕತ್ವ ಕೊಡಿ' ಎಂದು ಸಚಿನ್ ಪವಾರ್ ಕಿವಿಗೆ ಊದಿದ್ದಾರೆ. 'ಹೀಗೆ ಸಚಿನ್ ಹೇಳಿದ್ದಾರೆ' ಎಂದು ಪವಾರ್ ವೆಂಗ ಸರ್ಕಾರ್ ಕಿವಿಯೊಳಗೆ ಎರಕ ಹೊಯ್ದಿದ್ದಾರೆ. ಹೀಗೆಂದು ಪವಾರ್ ಅವರೇ ಸುದ್ದಿ ಬಹಿರಂಗ ಪಡಿಸಿದ್ದಾರೆ! ಅಧ್ಯಕ್ಷ ಶರದ್ ಪವಾರ್ ಆಯ್ಕೆ ಸಮಿತಿಗೆ ಸೂಚನೆ ನೀಡುತ್ತಾರೆ ಹಾಗೂ ಆಯ್ಕೆ ಸಮಿತಿ ಅದನ್ನು ಶಿರಸಾ ವಹಿಸುತ್ತದೆ! ಆಯ್ಕೆ ಸಮಿತಿ ಪವಾರ್ ಸೂಚನೆಯನ್ನು ಅರ್ಥಮಾಡಿಕೊಂಡು ಧೋನಿಗೆ ಪಟ್ಟ ಕಟ್ಟಿದ್ದಾರೆ! ಉಪಕಾರ ಸ್ಮರಣೆ ಮಾಡಿ ನಾಯಕತ್ವ ದೊರಕಿಸಿಕೊಟ್ಟ ಸಚಿನ್ ಇರಲಿ ಎನ್ನುವ ಧೋನಿಯಾಗಿದ್ದರೆ ಆತ ತನ್ನನ್ನು ಟೀಮಿನ ಒಳಕ್ಕೆ ಸೇರಿಸಿದ ಗಾಂಗುಲಿಯನ್ನೂ ಮರೆಯುತ್ತಿರಲಿಲ್ಲ. ವಿಷಯ ಹೀಗೆ- ಸಚಿನ್ ಹೆಸರು ಕೈಬಿಡುವುದು ನನಗೂ ನಿನಗೂ ಕ್ಷೇಮಕರ ಅಲ್ಲ ಎಂದು ವೆಂಗಸರ್ಕಾರ್ ಧೋನಿಗೆ ಹೇಳಿರಬೇಕು... ಅದನ್ನು ಧೋನಿ ಸ್ಪಷ್ಟವಾಗಿ ಅರಿತುಕೊಂಡಿರಬೇಕು...

ಗುಜರಾತ್ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ದೆಹಲಿಯಿಂದ 'ಬಿಜೆಪಿಯಿಂದ ಮುಂದಿನ ಪ್ರಧಾನಿಯಾಗಿ ಅದ್ವಾಣಿ ಹೆಸರು ಅನುಮೋದನೆ' ಎಂಬ ವಾರ್ತೆ ಹೊರಬಿದ್ದಿತ್ತು. ಚುನಾವಣೆಯ ಸುಳಿವೂ ಇಲ್ಲದೇ ಇರುವಾಗ ಏಕಾಏಕಿ ಹೀಗೊಂದು ಘೋಷಣೆ ಯಾಕೆ ಎಂದುಕೊಂಡಿದ್ದ ನನ್ನ ಪ್ರಶ್ನೆಗೂ ಇದೀಗ ಉತ್ತರ ಸಿಕ್ಕಿದೆ. ಅದ್ವಾಣಿ ತನ್ನ ಪುಸ್ತಕ ಬರೆದದ್ದೇ ನನ್ನ ಸಂದೇಹ ನಿವಾರಣೆಗೆ ಇರಬೇಕು! ಬಿಜೆಪಿಯಲ್ಲಿ ಮೋದಿ ತನ್ನ 'ನಂತರದ' ನಾಯಕ ಎಂದು ತನ್ನ ಪುಸ್ತಕದಲ್ಲಿ ಅದ್ವಾಣಿ ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ! ಗುಜರಾತಿನ ವಿಜಯದಲ್ಲಿ ಮೋದಿ ನಾಯಕತ್ವ ತನಗಿಂತಲೂ ಮುಂದೆ ಹೋಗಿ ನಿಲ್ಲುತ್ತಿದೆ ಎಂಬ ಸಂಶಯ ಖುದ್ದು ಅದ್ವಾಣಿಗೆ ಬಂದದ್ದೇ 'ಪ್ರಧಾನಿ ಪಟ್ಟಕ್ಕೆ ಅದ್ವಾಣಿ' ಎಂಬ ಘೋಷಣೆ ಆತುರಾತುರವಾಗಿ ಹೊರಬೀಳಲು ಕಾರಣವಾಗಿತ್ತು!

ಹೀಗೆ... ಪ್ರಶ್ನೆಗೆ ಕೂಡಲೇ ಉತ್ತರ ಸಿಗದಿದ್ದರೆ ಚಿಂತೆ ಬೇಡ.. ಸ್ವಲ್ಪ ಕಾಯಬೇಕು ಅಷ್ಟೆ. ಉತ್ತರ ನಮಗೆ ಸಿಗದೆಲ್ಲಿಗೆ ಹೋಗುತ್ತದೆ! 

ನಿಮ್ಮ ಸಂಗಾತಿ,
ಗೋಪೀನಾಥ ರಾವ್

Syndicate

Syndicate content