ನಿರೀಕ್ಷೆ

- ಮೃಣಾಲಿನಿ ಉದಯ್ ಕುಮಾರ್, ನ್ಯೂಜಿಲೇಂಡ್

ವರ್ಷವಿಡೀ ಸಭೆಯೊಳಗೆ ಬೆತ್ತಲಾದವಳಿಗೆ
ಇಂದು ಜರತಾರಿಯುಡಿಸಿ ಮೆರವಣಿಗೆ
ನಿತ್ಯ ಕಣ್ಣೀರಲೆ ಕೈತೊಳೆಯುವವಳಿಗೆ
ಬೇಕೆ ಈ ದಿನ ಹುಟ್ಟುಹಬ್ಬದ ಕೊಡುಗೆ?

ಕರ್ನಾಟಕ ಹೆಸರಾಗಿತ್ತು ಗಂಡೆದೆಯ ಕಲಿಗಳಿಗೆ
ಇಂದು ಕುತಂತ್ರವೆ ಆಯುಧ ರಾಜಕಾರಣಿಗಳಿಗೆ
ದಿನನಿತ್ಯ ಕುರುಕ್ಷೇತ್ರ ಕದನ ನಡೆದಿದೆ ಕುರ್ಚಿಗೆ
ಮನೆಯೆ ಮಸಣವಾಗಿರಲು ಹಬ್ಬ ಬೇಕೆ ತಾಯಿಗೆ?

ಚಿನ್ನ, ಬೆಳ್ಳಿಯ ವ್ಯಾಪಾರವಿತ್ತು ಹಾದಿ, ಬೀದಿಗೆ
ಇಂದು ತತ್ವಾರ ಹಸಿದವನಿಗೆ ತುತ್ತುಕೂಳಿಗೆ
ಸಾಲುಮರಗಳ ಬೆಳೆಸಿದ್ದರಂದು ತಂಪೀವ ನೆರಳಿಗೆ
ಕಾಂಕ್ರೀಟ್ ಕಾಡಿನಲ್ಲಿಂದು ಬರ ಬಂದಿದೆ ಹಸಿರಿಗೆ

ತತ್ವ, ಆದರ್ಶಗಳೆಂದೋ ಸೇರಿದವು ಮೂಲೆಗೆ
ಮಾರುಹೋಗಿಹರು ಕೊಳ್ಳುಬಾಕತನದ ಸಂಸ್ಕೃತಿಗೆ
ಬರಿದೆ ಬೆಡಗಿನ ಪರಭಾಷೆಯಬ್ಬರದ ಧಾಳಿಗೆ
ಸರಳ ಕನ್ನಡವೇ ಸೋತು ಸರಿದಿಹುದು ಮರೆಗೆ

ತಾಯ್ನೆಲವನ್ನೆ ನಡುಬೀದಿಯಲ್ಲಿಟ್ಟಿಹರು ಏಲಂಗೆ
ಸ್ವಾಭಿಮಾನ ತೊರೆದು ಸಾಲುಗಟ್ಟಿಹರು ಭಿಕ್ಷೆಗೆ
ಹಣದ ಝಣತ್ಕಾರವೊಂದೆ ಕೇಳುವುದು ಕಿವಿಗೆ
ಓಗೊಡುವರಾರು ಕನ್ನಡಮ್ಮನ ಕರುಳಿನ ಕರೆಗೆ?

ನೊಂದ ತಾಯ್ನೆಲವಿಂದು ಕಾದಿದೆ ಹೊಸಕ್ರಾಂತಿಗೆ
ಅಯೋಗ್ಯರನು ಧಿಕ್ಕರಿಸುವ ದಿಟ್ಟತನದ ಛಾತಿಗೆ
ಸ್ವಂತಿಕೆಯ ಸಮಾಜವ ನಿರ್ಮಿಸುವ ಕುಶಲಕರ್ಮಿಗೆ
ಕನ್ನಡಮ್ಮನನ್ನು ಪಟ್ಟಕ್ಕೇರಿಸುವ ಶುಭಘಳಿಗೆಗೆ.

 

Syndicate

Syndicate content