- ಬಿ. ಆರ್ ಸತ್ಯನಾರಾಯಣ
ಮೂಲಭೂತವಾದ
ಮುಸ್ಲಿಂ ಮೂಲಭೂತವಾದದ ದೆಸೆಯಿಂದ ಉದ್ದೀಪನಗೊಳ್ಳುತ್ತಿರುವ ಹಿಂದೂ ಮೂಲಭೂತವಾದ, ಅದರ ಪರಿಣಾಮವಾಗಿ ಭಾರತದ ಸಕ್ಯೂಲರ್ ಆಂದೋಳನ ಶಿಥಿಲವಾಗುತ್ತಿರುವುದು ಇವುಗಳ ಬಗ್ಗೆ ತೇಜಸ್ವಿ ಮಾತನಾಡಿದ್ದಾರೆ. ಮುಸ್ಲಿಂ ಮೂಲಭೂತವಾದವನ್ನು ಹತ್ತಿಕ್ಕಲು ಹಿಂದೂ ಮೂಲಭೂತವಾದಿಗಳು ಬಳಸಿಕೊಳ್ಳುತ್ತಿರುವುದು ಭಾರತದ ಸೆಕ್ಯೂಲರ್ ಪರಿಸರವನ್ನು. ‘ಮೂಲಭೂತವಾದಿ ಸಾಬರ ಮೇಲಿನ ಸಿಟ್ಟನ್ನು ಉಪಯೋಗಿಸಿಕೊಂಡು ಹಿಂದೂ ಮತಾಂಧರು ಭಾರತದ ಸೆಕ್ಯುಲರ್ ಅಂದೋಳವನ್ನು ದಾರಿ ತಪ್ಪಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಶೂದ್ರರು ದಲಿತರು ಮತ್ತೆ ಪುರೋಹಿತಶಾಹಿಯ ಅನಿಷ್ಟ ಸಂಕೋಲೆಯೊಳಗೆ ಸಿಕ್ಕಿಕೊಳ್ಳಬೇಕಾಗುತ್ತದೆ. ಇದರ ಬಗ್ಗೆ ಅರಿವಿದ್ದೂ ಮೃದುವಾಗಿರುವವರು ಬಡಪಾಯಿ ಶೂದ್ರರನ್ನೂ ದಲಿತರನ್ನು ಇನ್ನೂ ದಾರಿ ತಪ್ಪಿಸುತ್ತಿದ್ದಾರೆ’ ಎಂದು ತೇಜಸ್ವಿಯವರು ತುಂಬಾ ಗಂಭೀರವಾಗಿ ಮಾತನಾಡಿದ್ದಾರೆ. ಇವೆಲ್ಲದರ ಒಟ್ಟು ಪರಿಣಾಮ ಭಾರತ ಧರ್ಮನಿರಪೇಕ್ಷ ಜಾತ್ಯಾತೀತ ರಾಷ್ಟ್ರ ಎಂಬ ಕಲ್ಪನೆಯೇ ಹಾಸ್ಯಾಸ್ಪದವಾಗುವ ಅಪಾಯ ಸೃಷ್ಟಿಯಾಗುವುದು. ‘ಕೃಷ್ಣೇಗೌಡನ ಆನೆ’ ಕಥೆಯಲ್ಲಿ ಬರುವ ಪುರಸಭೆ ಅಧ್ಯಕ್ಷ ಖಾನ್ ಸಾಹೇಬನ ಪರಿಸ್ಥಿತಿ ನೋಡಿ. ಅಧಿಕಾರವಿದ್ದರೂ, ವಿಷಯ ತಿಳಿದಿದ್ದರೂ ಏನೂ ಮಾಡಲಾಗದ ಸ್ಥಿತಿ. ಆತ ಕೇವಲ ಮುಸ್ಲಿಂ ಎನ್ನುವ ಕಾರಣಕ್ಕೆ ತನ್ನ ಕೈಗಳನ್ನು ತಾನೇ ಕಟ್ಟಿಕೊಳ್ಳಬೇಕಾಗಿದೆ. ‘ಇದು ಭಾಳ ಸೆನ್ಸಿಟೀವ್ ಮ್ಯಾಟರು. ನಾನು ಮುಸಲ್ಮಾನ್ ಆಗಿದ್ದುಕೊಂಡು ಧರ್ಮಸ್ಥಳದ ವಿರುದ್ಧ ಹೇಳಿಕೆ ಕೊಟ್ಟರೆ ತುಂಬಾ ಅಪಾರ್ಥ ಬಂದು ಬಿಡುತ್ತೆ.’ ‘ಧರ್ಮಸ್ಥಳದ ಮೇಲೆ ಸುಳ್ಳು ಆಪಾದನೆ ಮಾಡ್ತಿದಾನೆ ಅಂದು ಬಿಡ್ತಾರೆ ಸಲೀಸಾಗಿ. ಎಷ್ಟು ನಾಯಿ ಕೊಂದರೂ ಮತ್ತೆ ಹೊಸಾ ನಾಯಿಗಳು ಎಲ್ಲಿಂದ ಬರ್‍ತಿವೆ ಅಂತ ಚೂರು ಯೋಚನೆ ಮಾಡೋಲ್ಲ.’ ಎಂಬ ಪುರಸಭೆಯ ಅಧ್ಯಕ್ಷ, ಖಾನ್ ಸಾಹೇಬರ ಮಾತುಗಳು ಮುಸ್ಲಿಮರನ್ನು ನಾವು ನಮ್ಮೊಳಗಿದ್ದು ನಮ್ಮಂತಾಗಲು ಬಿಟ್ಟೇ ಇಲ್ಲವೋ ಅಥವಾ ಅವರೇ ನಮ್ಮಂತಾಗಿಲ್ಲವೋ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಂತಹ ಸನ್ನಿವೇಶ ಸೃಷ್ಟಿಗೆ ಕಾರಣರಾರು? ಹಿಂದೂಗಳನ್ನು ಕೇಳಿದರೆ ‘ಮುಸ್ಲಿಮರೇ’ ಎನ್ನುತ್ತಾರೆ. ಮುಸ್ಲಿಮರನ್ನು ಕೇಳಿದರೆ ‘ನಾವು ಅಲ್ಪಸಂಖ್ಯಾತರು ಏನೂ ಮಾಡಿದರೂ ಇಲ್ಲಿ ತಪ್ಪು ಎನ್ನುತ್ತಾರೆ. ಅದಕ್ಕೆ ಹಿಂದೂಗಳೇ ಕಾರಣ’ ಎಂದುಬಿಡುತ್ತಾರೆ.ಇಲ್ಲಿಯೇ ಇನ್ನೊಂದು ಪ್ರಶ್ನೆಯನ್ನು ಹಾಕಿಕೊಳ್ಳಬಹುದು. ಮುಸ್ಲಿಂ ಮೂಲಭೂತವಾದಿಗಳ ವಿರುದ್ಧ ಅಂದರೆ ಭಾರತೀಯ ಸಂಸ್ಕೃತಿ ಮತ್ತು ಹಿಂದೂರಾಷ್ಟ್ರ ಸಂರಕ್ಷಣೆಗೆ ನಿಲ್ಲುವುದು ತಪ್ಪೆ? ಎಂಬುದೇ ಆ ಪ್ರಶ್ನೆ. ಯಾವುದೇ ಮೂಲಭೂತವಾದದಿಂದ ನಮ್ಮನ್ನು ನಾವು, ನಮ್ಮ ಸ್ವಂತಿಕೆಯನ್ನು ನಾವು ರಕ್ಷಿಸಿಕೊಳ್ಳಬೇಕಾದ್ದೆ. ಇಂದು ಭಾರತೀಯ ಸೆಕ್ಯುಲರ್ ಮನಸ್ಥಿತಿಯು ಎದುರಿಸುತ್ತಿರುವ ಸಮಸ್ಯೆ ಕೇವಲ ಮುಸ್ಲಿಂ ಮೂಲಭೂತವಾದದ್ದಲ್ಲ. ಅದು ಹಿಂದೂ ಮೂಲಭೂತವಾದದ್ದೂ ಹೌದು. ಆದರೆ, ಅದಕ್ಕಾಗಿ ಅಮಾಯಕ ಮುಸ್ಲಿಮರನ್ನು ಕೊಲ್ಲುವುದು, ಅವರನ್ನು ಕೊಲ್ಲಲು ಅಮಾಯಕ ಹಿಂದೂಜನರನ್ನು ಬಳಸಿಕೊಳ್ಳುವುದು ಎಷ್ಟು ಸರಿ? ಎಂಬ ಪ್ರಶ್ನೆ ಬರುತ್ತದೆ. ಮುಸ್ಲಿಂ ಮೂಲಭೂತವಾದಿಗಳ ಹಾಗೂ ಅವರ ಉಗ್ರವಾದಿತ್ವದಿಂದ ಪ್ರತಿಯೊಬ್ಬ ಮುಸ್ಲಿಮನನ್ನು ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವೊಮ್ಮೆ ಅದಕ್ಕೆ ತಕ್ಕಂತೆ ಭಾರತೀಯ ಮುಸ್ಲಿಮರೂ ತಾಳ ಹಾಕುವುದುಂಟು. ಅದನ್ನು ನೋಡಿಯೇ ತೇಜಸ್ವಿ ಮುಸ್ಲಿಮರಿಗೆ ನೇರವಾಗಿಯೇ ಹೇಳುತ್ತಾರೆ. ‘ಮುಸ್ಲಿಮರು ನಿಜವಾಗಿಯೂ ಮರ್ಯಾದೆಯಾಗಿ ಬದುಕಬೇಕೆಂದಿದ್ದರೆ, ಅವರಿಗೆ ಭವಿಷ್ಯ ಇರುವುದು ಭಾರತೀಯ ಸೆಕ್ಯುಲರ್ ಸಮುದಾಯದೊಡನೆ ಹೊರತು, ಮುಸ್ಲಿಂ ಮೂಲಭೂತವಾದದೊಡನೆ ಅಲ್ಲ’ ಎಂದು. ಇಂದು, ಸದೃಢ ಹಾಗೂ ಶಾಂತಿಯುತ ಭಾರತದ ನಿರ್ಮಾಣಕ್ಕಾಗಿ ನಮ್ಮೆದುರಿಗೆ ಇರುವ ತುರ್ತು ಏನೆಂದರೆ, ಅಂತಹ ಸೆಕ್ಯುಲರ್ ಸಮುದಾಯವನ್ನು ಬಲಪಡಿಸುವುದೇ ಆಗಿದೆ.
ಮಹಿಳಾ ಪರವಾದ ಧ್ವನಿ
ಬೆಂಗಳೂರಿನಲ್ಲಿ ನಡೆದ ವಿಚಾರ ಸಂಕಿರಣದ ಸಂವಾದದಲ್ಲಿ ಪ್ರೊ. ರಾಮದಾಸ್ ಅವರಿಗೆ ಮಹಿಳೆಯೊಬ್ಬರು ‘ತೇಜಸ್ವಿಯವರ ಮಹಿಳಾ ಪರವಾದ ನಿಲುವುಗಳೇನು?’ ಎಂಬ ಪ್ರಶ್ನೆ ಕೇಳಿದ್ದರು. ರಾಮ್‍ದಾಸ್ ಅವರು ‘ತೇಜಸ್ವಿಯವರ ಸಾಹಿತ್ಯವನ್ನು ಯಾವುದೇ ‘ಇಸಂ’ಗಳಿಂದಲೂ ಗುರುತಿಸುವುದು ಕಷ್ಟ. ಅವರ ಬರದಿದ್ದೆಲ್ಲವೂ ಒಂದು ರೀತಿಯಲ್ಲಿ ಅವರ ಆತ್ಮ ಕಥನವೇ. ಅದು ಪರಿಸರ ಸಾಹಿತ್ಯ, ಅನುವಾದ ಯಾವುದಾದರೂ ಅದು ತೇಜಸ್ವಿಯವರ ಅನುಭವದಿಂದಲೇ ಮೂಡಿ ಬಂದದ್ದಾಗಿರುತ್ತದೆ. ಅವರ ಒಟ್ಟು ಸಾಹಿತ್ಯದಲ್ಲಿ ಮಹಿಳಾಪರವಾದ ದ್ವನಿ ಗಟ್ಟಿಯಾಗಿಯೇ ಇದೆ. ಆದರೆ ತೇಜಸ್ವಿ ಎಲ್ಲೂ ‘ನಾನು ಮಹಿಳಾ ಪರವಾಗಿ ಮಾತನಾಡುತ್ತಿದ್ದೇನೆ’ ಎಂದು ಘೋಷಿಸುವುದಿಲ್ಲ ಅಷ್ಟೆ’ ಎಂದು ಹೇಳಿ ಸಾಕಷ್ಟು ಉದಾಹರಣೆಯನ್ನು ಕೊಟ್ಟಿದ್ದರು. ಮಾತುಕತೆಯ ನಡುವೆಯೂ ತೇಜಸ್ವಿ ಮಹಿಳಾ ಸಬಲೀಕರಣದ ಬಗ್ಗೆ ಗಂಭೀರವಾಗಿ ಮಾತನಾಡುತ್ತಿದ್ದುದ್ದನ್ನು ಹೇಳಿದ್ದರು. ಆದರೆ ಮೊನ್ನೆ ಮೊನ್ನೆ ನಡೆದ ಒಂದು ವಿಚಾರ ಸಂಕಿರಣದಲ್ಲಿ ಪ್ರಾಧ್ಯಾಪಕಿಯೊಬ್ಬರು ‘ಕಿರಗೂರಿನ ಗಯ್ಯಾಳಿಗಳು’ ಕಥೆಯನ್ನು ಮಹಿಳಾ ಪರವಾದ ಕಥೆಯಾಗಿಸುವಲ್ಲಿ ತೇಜಸ್ವಿ ಎಡವಿದ್ದಾರೆ. ಸ್ವಲ್ಪ ಮಟ್ಟಿನ ಸಂಯಮ ವಹಿಸಿದ್ದರೆ ಇದೊಂದು ಮಹಿಳಾ ಪರವಾದ ಧ್ವನಿಯೆತ್ತುವ ಒಳ್ಳೆಯ ಕಥೆಯಾಗಿ ಮೂಡಿ ಬರುತ್ತಿತ್ತು. ಅದರಲ್ಲಿ ಬರುವ ಎಲ್ಲಾ ಹೆಂಗಸರನ್ನು ಗಯ್ಯಾಳಿಗಳನ್ನಾಗಿ ಚಿತ್ರಿಸಿದ್ದಾರೆ’ ಎಂದು ಮುಂತಾಗಿ ಹೇಳಿದ್ದರು. ಇಲ್ಲಿ ನನಗಿರುವ ಸಮಸ್ಯೆಯಂದರೆ, ಒಬ್ಬ ಸಾಹಿತಿಯಿಂದ ನಾವು ಏನನ್ನು ನಿರೀಕ್ಷಿಸಬಹುದು. ಒಳ್ಳೆಯ ಸಾಹಿತ್ಯವನ್ನಷ್ಟೇ. ಆದರೆ ಅದು ಹಾಗಿರಬೇಕು, ಹೀಗಿರಬೇಕು. ಅದನ್ನು ಬರೆಯಬಾರದಿತ್ತು. ಅಲ್ಲಿ ಸಂಯಮ ವಹಿಸಬೇಕಿತ್ತು ಎಂದು ನಿರ್ದೇಶಿಸಲು ಓದುಗರಾದ ನಮಗೆ ಸಾಧ್ಯವೇ? ಇದನ್ನು ಒತ್ತಟ್ಟಿಗಿಟ್ಟು ನೋಡಿದರೂ ಮೇಲಿನ ಮಾತಿಗೆ ನನ್ನ ಆಕ್ಷೇಪಣೆಗಳಿವೆ. ತೇಜಸ್ವಿ ‘ಕಿರಗೂರಿನ ಗಯ್ಯಾಳಿಗಳು’ ಕಥೆಯಲ್ಲಿ ಸ್ತ್ರೀ ಪಾತ್ರಗಳ ಗಯ್ಯಾಳಿತನವನ್ನು ಚಿತ್ರಿಸಿರುವಂತೆಯೇ ಇತರ ಪುರುಷ ಪಾತ್ರಗಳ ಸೋಮಾರಿತನ, ಕೊಳಕು, ಅಸಹಾಯಕತೆ, ಕೇಡಿಗತನ, ಪೋಲಿತನ ಎಲ್ಲವನ್ನೂ ಚಿತ್ರಿಸಿದ್ದಾರೆ. ‘ಬಲೇ ಗಾಂಚಲಿ ಮುಂಡೇರು, ಮಲೆ ಬಂದೋರಿಗೆ ನೆಲಾ ಕಾಣದಿಲ್ಲಂತೆ, ಸೊಕ್ಕಿ ನೆಣಾ ಉಕ್ತದೆ ಅವರ ಮೈಯಾಗೆ, ಒಬ್ಬೊಬ್ರೂ ಹತ್ತು ಹತ್ತು ಹಡಿಯೋ ಹಂಗೆ ಮಾಡಬೇಕು, ಪುರುಸೊತ್ತೇ ಕೊಡಬಾರ್‍ದು. ಹಂಗಿದ್ರೆ ನೋಡಪ್ಪಾ ಈ ಹಾಳ್ಮುಂಡೇರನ್ನ ಹದ್‍ಬಸ್ತಿಗೆ ತರಬೌದು’ ಎನ್ನುವ ಮಾರನ ಮಾತಿಗೆ, ಸಿದ್ದನ ಉತ್ತರ ‘ಹಂಗೇ ಮಾಡನ ತಗಾ’ ಎನ್ನುವುದು. ಮಾರನ ಮಾತಿನಲ್ಲಿ ಪುರುಷನ ಅಹಂಕಾರ, ದೌರ್ಜನ್ಯ, ದೌರ್ಬಲ್ಯ ಮೊದಲಾದವುಗಳು ವ್ಯಕ್ತವಾಗಿದ್ದರೆ, ಸಿದ್ದ ಹೇಳುವ ಮೂರೇ ಪದದಲ್ಲಿ ಗಂಡಸರ ಅಸಾಹಯಕತೆ ಪರಿಣಾಮಕಾರಿಯಾಗಿ ವ್ಯಕ್ತವಾಗುತ್ತದೆ. ಇಷ್ಟರ ಮಟ್ಟಿಗೆ ಸ್ತ್ರೀ ಮತ್ತು ಪುರುಷರ ಸಹಜ ಗುಣಗಳನ್ನು ಚಿತ್ರಿಸಿದ್ದರೂ, ಕೇವಲ ಮಹಿಳಾ ಸಾಹಿತ್ಯದ ನೆಲೆಯಲ್ಲಿ ನಿಂತು ನೋಡಿದಾಗ ತೇಜಸ್ವಿ ನಮಗೆ ದಕ್ಕುವುದಿಲ್ಲ. ಜುಗಾರಿ ಕ್ರಾಸ್ ನ ಗೌರಿಯಂತಹ ವಿಚಾರವಂತ ಹಾಗೂ ಧಾನಮ್ಮನಂತಹ ಗ್ರಾಮೀಣ ಮನೋಸ್ಥಿತಿಯ ಮಹಿಳೆಯರು ತೇಜಸ್ವಿಯಿಂದ ಸೃಷ್ಟಿಯಾಗಿದ್ದಾರೆ. ಅವನತಿ ಕಥೆಯ ಗೌರಿ, ಚಿದಂಬರ ರಹಸ್ಯದ ಜಯಂತಿಯರ ಮುಗ್ಧತೆಯನ್ನು ತೇಜಸ್ವಿ ಚಿತ್ರಿಸಿದ್ದಾರೆ. ಎಲ್ಲವಕ್ಕಿಂತ ಹೆಚ್ಚಾಗಿ ‘ಕಿರಗೂರಿನ ಗಯ್ಯಾಳಿಗಳು’ ಕೃತಿಯನ್ನು ‘ತಮ್ಮ ಆತ್ಮಗೌರವಕ್ಕಾಗಿ ಅವಿರತ ಹೋರಾಡುತ್ತಿರುವ ಎಲ್ಲ ಮಹಿಳೆಯರಿಗೆ’ ಅರ್ಪಿಸಿಬಿಟ್ಟಿದ್ದಾರೆ. ಇದೊಂದೇ ಸಾಲು ಸಾಕು ಅವರ ಸಮಷ್ಟಿ ಪ್ರಜ್ಞೆಯ ಸಾಕ್ಷಿಗೆ. ಬ್ರಾಂಡ್ ಮಾಡಬಹುದಾದ ಮಹಿಳಾ ಸಾಹಿತ್ಯವನ್ನು ತೇಜಸ್ವಿ ಸೃಷ್ಟಿಸಿಲ್ಲ. ಹಾಗೆಯೇ ಪುರುಷ ಸಾಹಿತ್ಯವನ್ನೂ ಅವರು ಸೃಷ್ಟಿಸಿಲ್ಲ. ಒಟ್ಟಾರೆ ಅವರದು ಬದುಕಿನ ಪರವಾದ ಸಾಹಿತ್ಯ.
(ತೇಜಸ್ವಿಯವರ ವಿಚಾರಧಾರೆಯ ಬಗೆಗೆ ಸತ್ಯನಾರಾಯಣರ ಅವಲೋಕನ ಬರುವ ವಾರ ಕೂಡ ಮುಂದುವರೆಯಲಿದೆ)
ಸತ್ಯನಾರಾಯಣ ಬಿ.ಆರ್.ಗ್ರಂಥಪಾಲಕರು, ಸುರಾನ ಕಾಲೇಜುಸೌತ್ ಎಂಡ್ ರಸ್ತೆ, ಬಸವನಗುಡಿಬೆಂಗಳೂರು - 560 004ದೂರವಾಣಿ: 0 99645 90246ಈ-ಮೇಲ್: satya_nbr@yahoo.com









ಇಂತಹ
ಇಂತಹ ನಿಲುವುಗಳಿಂದಲೇ ತೇಜಸ್ವಿ ಪ್ರಶಸ್ತಿಗಳನ್ನು ಗೆಲ್ಲಲಿಲ್ಲ. ಮುಂದೆ ಬರಬಹುದಾದ ಟೀಕೆ, ಟಿಪ್ಪಣಿ, ವಿಮರ್ಶೆಗಳಿಗೆ ಹೆದರಿ ಅವರು ತಮಗೆ ಅನ್ನಿಸಿದ್ದನ್ನು ಬರೆಯದೇ ಕೂರಲಿಲ್ಲ. ಒಂಟಿ ಸಲಗದ ನಡೆ ನಡೆದು ತನ್ನಿಷ್ಟದಂತೆ ಬದುಕಿ ಅದನ್ನೇ ಬರೆದವರು ತೇಜಸ್ವಿ. ಸತ್ಯನಾರಾಯಣರವರು ತೇಜಸ್ವಿಯವರ ಮಾನವತಾವಾದವನ್ನು ಸರಿಯಾಗಿ ಗುರುತಿಸಿದ್ದಾರೆ.