-ಇರ್ಶಾದ್ ಮೂಡಬಿದ್ರಿ
ಮುಹಮ್ಮದ್ ಕುಳಾಯಿ ನನ್ನ ಕಾಲೇಜು ದಿನಗಳ ಮೆಚ್ಚಿನ ಕಥೆಗಾರ. ನಾನು ಹೆಚ್ಚಾಗಿ ಅವರ ಕಥೆಗಳನ್ನು ಉದಯವಾಣಿ ಸಾಪ್ತಾಹಿಕ ಹಾಗೂ ಸನ್ಮಾರ್ಗದಲ್ಲಿ ಓದುತ್ತಿದ್ದೆ. ಅದಕ್ಕೀಗ ಪ್ರತಿಕ್ರಿಯೆಗಳನ್ನು ಬರೆಯುತ್ತಿದ್ದೇನೆ.
ಇದೀಗ ಬೊಳುವಾರು ಮೊಹಮ್ಮದ್ ಕುಞ್ಞಿ ವರುಷಕ್ಕೆ ಎರೆಡು-ಮೂರು ಕಥೆಗಳನ್ನು ಬರೆದರೆ ಅದೇ ಹೆಚ್ಚು. ಅವರ ಕಥೆಗಳಲ್ಲಿ ಬ್ಯಾರಿ ಜನಾಂಗದ ಸಂಸ್ಕೃತಿಯ ಜೊತೆಗೆ ಅವರ ಮುಗ್ಧತೆ, ಕಂದಾಚಾರ, ವಂಚನೆ, ಅನ್ಯಾಯಗಳು ತೆರೆದುಕೊಳ್ಳುತ್ತಿದ್ದವು. ಧರ್ಮಗುರುಗಳು (ಮುಲ್ಲಾ) ಮತ್ತು ಮಸೀದಿಯ ಆಡಳಿತಗಾರರು ವರ್ತಿಸುವ ಮೋಸಗಳು ಬಿಚ್ಚಿಡುತ್ತಿದ್ದವು. ಇವರ ಖಾರ-ನೇರ ಬರಹ ಕೆಲವರಿಗೆ ಇಷ್ಟವಾಗುತ್ತಿರಲಿಲ್ಲ. ಇವರ ಕಥೆಯಲ್ಲಿ ಚಿತ್ರಣಗಳು ವಾಸ್ತವಕ್ಕಿಂತ ಕಲ್ಪನೆಯೇ ಹೆಚ್ಚೆಂದು ದೂರಿಕೊಳ್ಳುವವರೂ ಇದ್ದರು. ಇನ್ನೋರ್ವ ಕಥೆಗಾರರಾದ ಫಕೀರ್ ಮಹಮ್ಮದ್ ಕಟ್ಪಾಡಿ ಇಂತಹ ಮೋಸ ವಂಚನೆಗಳನ್ನು ಹದವಾದ ಲೇಖನಿಯಲ್ಲಿ ಸಮತೋಲನ ಕಾಯ್ದುಕೊಂಡು ಬಂದವರು. ಹೀಗಾಗಿ ತಮ್ಮ ಜನಾಂಗದ ವಸ್ತುಸ್ಥಿತಿಗಳಿದ್ದರೂ ಅವು ನೋವಿಗೆ ಕಾರಣವಾಗುತ್ತಿರಲಿಲ್ಲ. ಈ ಕಾರಣದಿಂದಾಗಿ ಕಟಪಾಡಿ ಅವರ ಕಥೆಗಳನ್ನು ಬಹುತೇಕ ಮುಸ್ಲಿಮರು ಇಷ್ಟಪಡುತ್ತಾರೆ.
ಇವರಿಬ್ಬರಿಗಿಂತ ಭಿನ್ನವಾಗಿ ಕಥೆ ಹೆಣೆಯಲು ಆರಂಭಿಸಿದವರು ಮುಹಮ್ಮದ್ ಕುಳಾಯಿ. ಅವರು ಧರ್ಮದ ಕಟ್ಟುಪಾಡುಗಳನ್ನು ಮೀರದೆ, ಯಾರಿಗೂ ನೋವು ತರಿಸದೆ, ಅಪಮಾನಕ್ಕೆ ಒಳಪಡಿಸದೇ ತಮ್ಮದೇ ಶೈಲಿಯಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳುವ ವಸ್ತುವಿನ ಮೇಲೆಯೇ ಕಥೆ ಬರೆದವರು. ಹೀಗಾಗಿ ಇವರ ಕಥೆಗಳನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. 'ಕುಚ್ಚಿಕಾಡಿನ ಕಪ್ಪು ಹುಡುಗ' ಕುಳಾಯಿ ಅವರ ಮೊದಲ ಕಥಾ ಸಂಕಲನ. ಈ ಕಥಾ ಸಂಕಲನದೊಂದಿಗೆ ತುಂಬು ಭರವಸೆ ಮೂಡಿಸಿದ ಅವರು ನಂತರದ ಸಂಕಲನವಾದ 'ಕದನ ಕುತೂಹಲ' ದಲ್ಲಿ ಎಲ್ಲರ ಅಚ್ಚುಮೆಚ್ಚಿನವರಾದರು. ಆ ಕೃತಿಯು 'ಲಂಕೇಶ್ ಪ್ರಶಸ್ತಿ' ಮತ್ತು 'ನಿರತ ಸಾಹಿತ್ಯ ಪ್ರಶಸ್ತಿ'ಗಳನ್ನು ಗೆದ್ದುಕೊಂಡಿತು.
ಇತ್ತೀಚೆಗೆ ಪ್ರಕಟಗೊಂಡಿರುವ 'ನನ್ನ ಇನ್ನಷ್ಟು ಕಥೆಗಳು' ಅವರಿಗೆ ಕಥಾಲೋಕದಲ್ಲಿ ಗಟ್ಟಿಯಾದ ಸ್ಥಾನವನು ದೊರಕಿಸಿಕೊಟ್ಟಿದೆ.
ಈ ಸಂಕಲನದಲ್ಲಿ ಒಟ್ಟು ಒಂಭತ್ತು ಕಥೆಗಳಿವೆ. ಇದರಲ್ಲಿ ನನಗೆ ಇಷ್ಟವಾದ ನಾಲ್ಕು ಕಥೆಗಳು - ಆಯೆಷಾ, ಐದು ಪವನ್ ಚಿನ್ನ, ದನ ಕರು ಹಾಕಿತು ಮತ್ತು ಪ್ರೀತಿ. ಆಯೆಷಾ ಕಥೆಯು ಪತಿ ಪತ್ನಿಯರ ತಪ್ಪು-ಒಪ್ಪುಗಳು, ಮನೆಮಂದಿಯ ಸ್ವಾರ್ಥ ಹಾಗೂ ಪ್ರೀತಿಸುವ ಎರಡು ಹೃದಯಗಳ ಮಿಡಿತವನ್ನು ಚೆನ್ನಾಗಿ ಬಿಂಬಿಸಿದೆ. ಆರಂಭದಿಂದ ಅಂತ್ಯದವರೆಗೂ ಕುತೂಹಲ ಉಳಿಸಿಕೊಂಡು ಬರುವ ಕಥಾ ಶೈಲಿಯು ಕೊನೆಗೆ ಹೃದಯವನ್ನು ಗೆದ್ದು ಬಿಡುತ್ತದೆ.
'ಐದು ಪವನ್ ಚಿನ್ನ' ಕಥೆಯಲ್ಲಿ ಲಗ್ನವಾಗಿ ಹಲವು ವರ್ಷ ಕಳೆದರೂ ಅತ್ತೆ ಮನೆಯವರು ವರದಕ್ಷಿಣೆಯ ಮೊತ್ತವನ್ನು ನೀಡದೇ ಬಾಕಿ ಉಳಿಸುತ್ತಾರೆ. ನಾಯಕ ಇದನ್ನು ಪಡೆಯಲು ಹಪಹಪಿಸುವುದು, ತನ್ನ ಸಣ್ಣತನ ತೋರಿಸುವುದು ಪತ್ನಿಯ ತವರಿನ ಕುರಿತು ಅಸಹ್ಯ ಪಡುವುದು ಇತ್ಯಾದಿಗಳನ್ನು ಮಹಮ್ಮದ್ ಕುಳಾಯಿ ಸುಂದರ ಶೈಲಿಯಲ್ಲಿ ವಿವರಿಸಿದ್ದಾರೆ. ಕಡೆಗೆ ಆತನ ಆಸೆಬುರುಕತನ, ಆಶ್ಚರ್ಯದಲ್ಲಿ ಬದಲಾಗುವುದು ಕಥೆಗೆ ಹೊಸ ಹುರುಪು ನೀಡುತ್ತದೆ.
ದನ ಕರು ಹಾಕಿತು ಕಥೆಯಲ್ಲಿ ನಮ್ಮ ಕರಾವಳಿ ಪ್ರದೇಶದ ಜಾತೀಯತೆ ವಿವಾದವೇ ಮುಖ್ಯ ವಸ್ತು. ಕಳೆದ ಬಾರಿಯ ಕಥಾಸಂಕಲನದಲ್ಲಿ 'ಮೂಸಜ್ಜ ಮತ್ತು ಬೀದಿನಾಯಿ' ಕಥೆಯಲ್ಲಿ ನಾಯಿಯೇ ಪ್ರಧಾನ ಪಾತ್ರ ವಹಿಸಿದ್ದರೆ ಈ ಬಾರಿ ದನ ಮುಖ್ಯ ಪಾತ್ರ ವಹಿಸಿದೆ. ಒಂದು ದನವು ಕರು ಹಾಕುವ ಪ್ರಸಂಗವು ಇಲ್ಲಿಯ ಹಿಂದೂ, ಕ್ರೈಸ್ತ ಹಾಗೂ ಮುಸಲ್ಮಾನರ ಸಹಜ ಸ್ವಭಾವವನ್ನು ಬಿಂಬಿಸುತ್ತದೆ. ತಮ್ಮ ಆಸುಪಾಸಿನಲ್ಲಿ ಇವರು ಸಣ್ಣ - ಪುಟ್ಟ ವ್ಯಾಪಾರದೊಂದಿಗೆ ಜೀವನ ಸಾಗಿಸಿದರೂ ಒಂದು ಮೂಕ ಪ್ರಾಣಿಯ ವೇದನೆಗೆ ಹೇಗೆ ಜೊತೆಯಾಗುತ್ತಾರೆ ಅನ್ನುವುದನ್ನು ಕಥೆ ಹೇಳುತ್ತದೆ. ಇಲ್ಲಿ ದಯೆಗೆ ಜಾತಿ-ಧರ್ಮ ಅಡ್ಡಿಯಲ್ಲವೆಂದು ಹೇಳುವ ಮೊಹಮ್ಮದ್ ಕುಳಾಯಿ ಕೊನೆಗೆ ಗೋವೈದ್ಯನ ಕರಾಳ ಮುಖ ತೋರಿಸಿ ಕಥೆಯನ್ನು ಅಂತ್ಯಗೊಳಿಸುತ್ತಾರೆ.
'ಪ್ರೀತಿ' ಕಥೆಯಲ್ಲಿ ಕಥೆ, ಸಂಭಾಷಣೆ, ನಿರೂಪಣೆ ಸೊಗಸಾಗಿ ಸಾಗಿದರೂ ಒಂದು ಸಂಶಯವಂತೂ ಕಥೆಯ ಅಂತ್ಯದಲ್ಲಿ ಉಳಿದುಕೊಳ್ಳುತ್ತದೆ. ಹಿಂದೆ ಅಬ್ಬುಕಾಕಾನ ಪತ್ನಿ ಪಾತು, ಆತನನ್ನು ಪ್ರೀತಿಸಿ ಮದುವೆಯಾಗಿರುತ್ತಾಳೆ. ಪತಿ ಬಡತನಕ್ಕೆ ಸಿಕ್ಕಿಕೊಂಡ ಬಳಿಕ ಆಕೆಯ ಸ್ವಭಾವವೇ ಬದಲಾಗುತ್ತದೆ. ಆತನನ್ನು ನಿಂದಿಸುವುದು, ಅಪಮಾನಗೊಳಿಸುವುದು, ನೋಯಿಸುವುದು ಆಕೆಯ ದಿನನಿತ್ಯದ ಪರಿಪಾಠವಾಗುತ್ತದೆ. ಆದರೆ ಪತಿ ಕಾಯಿಲೆ ಬಿದ್ದಾಗ ಮತ್ತೆ ಪಶ್ಚಾತ್ತಾಪದಲ್ಲಿ ಅಪರಿಮಿತವಾಗಿ ಪ್ರೀತಿಸುವ ಅವಳು ಆತನ ಸಾವಿನೊಂದಿಗೆ ಹೆಣವಾಗುತ್ತಾಳೆ. ಆದರೆ ಅಷ್ಟೊಂದು ಗಾಢವಾಗಿ ಪ್ರೀತಿಸುವ ಆಕೆ ಕಥೆಯುದ್ದಕ್ಕೂ ನಿಂದಿಸುತ್ತಲೇ ಬರುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ.
ಇಲ್ಲಿ ಮಹಮ್ಮದ್ ಕುಳಾಯಿಯವರ ಇತರ ಕಥೆಗಳೂ ಚೆನ್ನಾಗಿವೆ. ಆದರೆ ಆ ನಾಲ್ಕು ಕಥೆಗಳು ಸದಾ ಹಸಿರಾಗಿ ಉಳಿಯುವಂತಹವು. ಈ ಕಥೆಗಳಲ್ಲಿ ಅವರು ಬ್ಯಾರಿ ಮಿಶ್ರಿತ ಸಂಭಾಷಣೆಯನ್ನು ಬಳಸಿಕೊಂಡಿದ್ದರೆ ಅವು ಇನ್ನಷ್ಟು ಮೆರುಗು ಪಡೆದುಕೊಳ್ಳುತ್ತಿದ್ದುವೇನೋ. ಈ ಪ್ರಯತ್ನವನ್ನು ಅವರು ಮುಂದಿನ ಕಥೆಗಳಲ್ಲಿ ತೋರಿಸಲೆಂಬ ಆಶಯ.
ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಈ ಕೃತಿಯನ್ನು ಪ್ರಕಟಿಸಿದೆ. ಅವರ ಪ್ರೋತ್ಸಾಹಕ್ಕೆ ಅಭಿನಂದನೆಗಳನ್ನು ಹೇಳಲೇಬೇಕು. ನೂರು ರೂಪಾಯಿ ಬೆಲೆಯ ಈ ಕೃತಿಗೆ ಯಾವುದೇ ಮೋಸವಿಲ್ಲ. ಮಹಮ್ಮದ್ ಕುಳಾಯಿ ಅವರು 'ಇನ್ನಷ್ಟು ಕಥೆಗಳನ್ನು' ಬರೆಯಲಿ, ನಮಗೆ ಓದುವ ಅವಕಾಶ ಕೊಡಲಿ. ಅವರಿಗೆ ಶುಭ ಹಾರೈಕೆಗಳು.








