ಎ.ಪಿ.ಜೆ. ಅಬ್ದುಲ್ ಕಲಾಂ ಅವರ -ಭಾರತ ೨೦೨೦ರ ದೂರದೃಷ್ಟಿಯಲ್ಲಿ-
kalam.jpg

- ಅರ್ಶದ್ ಹುಸೇನ್ ಎಂ.ಹೆಚ್.  

(ನಿಕಟಪೂರ್ವ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ -ಭಾರತ ೨೦೨೦ರ ದೂರದೃಷ್ಟಿಯಲ್ಲಿ- ಕೃತಿಯಿಂದ ಆಯ್ದ ಭಾಗದ ಕನ್ನಡ ಅನುವಾದ)

ಸುಭದ್ರ ಭಾರತಕ್ಕೆ ಮೂರು ಸೂತ್ರಗಳು

ಸೂತ್ರ ೧: ಸುಮಾರು ಮೂರು ಸಾವಿರ ವರ್ಷಗಳಿಂದ ವಿಶ್ವದ ಎಲ್ಲೆಡೆಗಳಿಂದ ಅತಿಕ್ರಮಣಕಾರರು ಭಾರತಕ್ಕೆ ಧಾಳಿಯಿಟ್ಟು ನಮ್ಮ ಖಜಾನೆಯನ್ನು ಕೊಳ್ಳೆ ಹೊಡೆದಿದ್ದಾರೆ. ಗ್ರೀಕರು, ತುರ್ಕಿಯರು, ಮೊಗಲರು, ಪೋರ್ಚುಗೀಸರು, ಬ್ರಿಟಿಷರು, ಫ್ರೆಂಚರು, ಡಚ್ಚರು ಇನ್ನೂ ಹಲವಾರು ರಾಷ್ಟ್ರೀಯರು ಬಂದು ನಮ್ಮನ್ನುಲೂಟಿ ಮಾಡಿದರೂ ಭಾರತದ ಇತಿಹಾಸದಲ್ಲಿಯೇ ನಾವು ಯಾವುದೇ ರಾಷ್ಟ್ರವನ್ನು ಲೂಟಿ ಮಾಡಲಿಲ್ಲ. ಯಾವುದೇ ರಾಷ್ಟ್ರವನ್ನು ನಾವು ಆಕ್ರಮಿಸಿಕೊಳ್ಳಲಿಲ್ಲ. ಯಾವುದೇ ರಾಷ್ಟ್ರದ ಸಂಪತ್ತನ್ನು ಕೊಳ್ಳೆ ಹೊಡೆಯಲಿಲ್ಲ ಅಥವಾ ಆ ಸಂಸ್ಕೃತಿಯನ್ನು ನಾಶಪಡಿಸಲಿಲ್ಲ ಅಥವಾ ನಮ್ಮ ಸಂಸ್ಕೃತಿಯನ್ನು ಅವರ ಮೇಲೆ ಹೇರಲು ಒತ್ತಡ ತರಲಿಲ್ಲ.

ಏಕೆ?

ಏಕೆಂದರೆ ಭಾರತೀಯರಾದ ನಾವು ನಮ್ಮ ಸ್ವಾತಂತ್ರ್ಯದಷ್ಟೇ ಇತರರ ಸ್ವಾತಂತ್ರ್ಯವನ್ನೂ ಗೌರವಿಸುತ್ತೇವೆ.  ಆದುದರಿಂದ ಸ್ವಾತಂತ್ರವೇ ನನ್ನ ಮೊದಲ ದೂರದೃಷ್ಟಿಯಾಗಿದೆ.

ಭಾರತ ಸ್ವತಂತ್ರವಾಗುವತ್ತ ಮೊದಲ ಕನಸು ಕಂಡಿದ್ದು ೧೮೫೭ರ ಸ್ವಾತಂತ್ರ್ಯಸಮರದಲ್ಲಿ. ಬಳಿಕ ನಮಗೆ ಸಿಕ್ಕ ಸ್ವಾತಂತ್ಯವನ್ನು ನಾವು ಕಾಪಾಡಿಕೊಳ್ಳಬೇಕು ಹಾಗೂ ಅಭಿವೃದ್ಧಿ ಪಡೆಯಬೇಕು. ನಾವು ಸ್ವತಂತ್ರರಾಗದೇ ಇದ್ದಲ್ಲಿ ಯಾರೂ ನಮ್ಮನ್ನು ಗೌರವಿಸುವುದಿಲ್ಲ


ಸೂತ್ರ ೨: ಸುಭದ್ರ ಭಾರತಕ್ಕೆ ಬೇಕಿರುವುದು ಅಭಿವೃದ್ದಿ, ಇದೇ ನನ್ನ ಎರಡನೆಯ ದೂರದೃಷ್ಟಿ.  ಐವತ್ತು ವರ್ಷಗಳಿಂದಲೂ ನಾವು ಅಭಿವೃದ್ಧಿಹೊಂದುತ್ತಿರುವ ದೇಶವಾಗಿದ್ದೇವೆ. ಈಗ ನಾವು ಅಭಿವೃದ್ಧಿ ಹೊಂದಿರುವ ದೇಶವಾಗುವತ್ತ ಪ್ರಗತಿ ಕಾಣಬೇಕಾಗಿದೆ. ನಿವ್ವಳ ದೇಶೀಯ ಉತ್ಪನ್ನ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಪರಿಗಣನೆಯಲ್ಲಿ ನಾವು ವಿಶ್ವದಲ್ಲಿ ಐದನೆಯ ಸ್ಥಾನದಲ್ಲಿದ್ದೇವೆ. ದೇಶದ ಹೆಚ್ಚಿನ ಸ್ಥಳಗಳಲ್ಲಿ ನಮ್ಮ ಪ್ರಗತಿ ಶೇಖಡಾ ಹತ್ತರಷ್ಟಿದೆ. ಬಡತನದ ರೇಖೆ ಹಿಂದಿನ ದಿನಗಳಿಗಿಂತ ಕೆಳಕ್ಕಿಳಿಯುತ್ತಿದೆ.  ನಮ್ಮ ಸಾಧನೆಗಳು ವಿಶ್ವದ ಗಮನ ಸೆಳೆಯುತ್ತಿವೆ. ಆದರೂ ನಾವು ಅಭಿವೃದ್ಧಿ ಹೊಂದಿರುವ, ಸ್ವ-ಸಾಮರ್ಥ್ಯವುಳ್ಳ, ತನ್ನ ಮೇಲೆ ಭರವಸೆಯುಳ್ಳ  ದೇಶವೆಂದೂವೆಂದು ಅಂದುಕೊಳ್ಳಲು ನಮಗೆ ಸ್ವಾಭಿಮಾನದ ಕೊರತೆಯಿದೆ. 


ಸೂತ್ರ ೩: ನನ್ನ ಮೂರನೆಯ ದೂರದೃಷ್ಟಿ ಭಾರತ ವಿಶ್ವದ ಎದುರು ಸೆಟೆದು ನಿಲ್ಲುವುದು. ಭಾರತ ವಿಶ್ವದೆದುರು ಎಲ್ಲಿಯವರೆಗೆ ಎದೆತಟ್ಟಿ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ನಮ್ಮನ್ನು ಯಾರೂ ಗೌರವದಿಂದ ಕಾಣುವುದಿಲ್ಲ.  ಸಾಮರ್ಥ್ಯವೇ ಸಾಮರ್ಥ್ಯವನ್ನು ಗೌರವಿಸುತ್ತದೆ. ಕೇವಲ ಮಿಲಿಟರಿ ಶಕ್ತಿಯಲ್ಲಿ ಮಾತ್ರವಲ್ಲದೇ ನಾವು ಆರ್ಥಿಕವಾಗಿಯೂ ಬಲಶಾಲಿಯಾಗಬೇಕಾಗಿದೆ. ಎರೆಡೂ ಒಟ್ಟಿಗೆ ಸೇರಿದಾಗ ಮಾತ್ರ ನಿಜವಾದ ಸಾಮರ್ಥ್ಯ ಲಭ್ಯ.

Syndicate

Syndicate content