- ಗೋಪೀನಾಥ ರಾವ್
"ಪಾಡ್ಯ ಬಿದಿಗೆ ತದಿಗೆ" ಓದಿದ ದಿನದಿಂದಲೂ ಡುಂಡಿರಾಜ್ ಅವರನ್ನು ಕಂಡು ಮಾತಾಡಿಸಬೇಕು ಎನ್ನುವ ನನ್ನೊಳಗಿನ ತುಡಿತ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಕಾರಣಗಳು ಹಲವಾರು. ಸಿಗುವ ಇಪ್ಪತ್ತೋ ಇಪ್ಪತ್ತೆರಡೋ ದಿನದ ರಜೆಗಳಲ್ಲಿ ನಾನೆಣಿಸಿದಂತೆ ವ್ಯವಹಾರಗಳು ನಡೆದದ್ದೇ ಕಡಿಮೆ. ಎದುರಿಗೆ ಸಿಕ್ಕಿದವನೇ ಆತ್ಮೀಯ, ಮಾಡಿ ಮುಗಿಸಿದ್ದೇ ಆಗಬೇಕಾಗಿದ್ದ ಕೆಲಸ ಎಂದು ಕೊಂಡು ಹೋದ ದಾರಿಗೇ ದನ ಹೊಡೆಯುತ್ತಾ ರಜೆ ಪೂರೈಸಿ ಬರುತ್ತಿದ್ದ ವರ್ಷಗಳಲ್ಲಿ ನಡುವೆ ಒಮ್ಮೆ ಸಿಕ್ಕಿದ ಸಮಯದಲ್ಲಿ ಡುಂಡಿರಾಜರ ಬಗೆಗೆ ವಿಚಾರಿಸಿದಾಗ "ಅವರೀಗ ಬೆಳಗಾವಿಯೋ ಬಿಜಾಪುರವೋ ಅಂತ ಕಾಣುತ್ತೆ" ಎಂಬ ಉತ್ತರ ಸಿಕ್ಕಿತ್ತು. ಈ ಬಾರಿ ರಜೆಯ ಸಿದ್ಧತೆಯಾಗುತ್ತಿದ್ದಂತೆ ಅವರು ಮಂಗಳೂರಿನಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಶ್ರೀವತ್ಸ ಜೋಶಿಯವರನ್ನು ಕೇಳಿ ತಿಳಿದುಕೊಂಡಿದ್ದೆ. ಮಂಗಳೂರಲ್ಲಿ ಅವರ ಸದ್ಯದ ಟೆಲಿಫೋನ್ ನಂಬ್ರ ನಾ ದಾ ಶೆಟ್ಟಿಯವರಲ್ಲಿ ಸಿಕ್ಕಿತು. ನಾಳೆ ಬನ್ನಿ ಎಂದರೆ ಪರವಾ ಇಲ್ಲ, ನಾಳದು ಬನ್ನಿ ಎಂದರೆ ಆಗುವುದಿಲ್ಲ, ಬರುವ ವಾರ ಬೆಂಗಳೂರಿಗೆ ಹೋಗಬೇಕು ಎಂಬಿತ್ಯಾದಿ ಕಟ್ಟುಪಾಡುಗಳ ನಡುವೆ ಅವರಿಗೆ ಫೋನ್ ಮಾಡಿದೆ. ಯಾವಾಗ ಬೇಕಿದ್ದರೂ ಬನ್ನಿ ಎನ್ನುವ ಡುಂಡಿರಾಜರ ಉತ್ತರ ಬಹಳಷ್ಟು ನೆಮ್ಮದಿ ನೀಡಿತ್ತು.
ಮೊದಲ ಭೇಟಿ ಬ್ಯಾಂಕಿನಲ್ಲಾಯಿತು. ಅಲ್ಲಿ ಸುಲಭವಾಗಿ ಮುಕ್ತವಾಗಿ ಮಾತನಾಡುವ ಅವಕಾಶ ಸಿಗಲಾರದು ಎಂದು ಭಾವಿಸಿದ ನಾನು ಬ್ಯಾಂಕಿನಲ್ಲಿ ಉಭಯ ಕುಶಲೋಪರಿ ಮಾತ್ರ ಮುಗಿಸಿ ಎರಡು ದಿನಗಳ ಬಳಿಕ ಅವರ ಮನೆಯಲ್ಲಿ ಪುನ: ಭೇಟಿಯಾಗುವ ಆಹ್ವಾನ ಪಡೆದು ಮರಳಿದೆ.
ಅವರ ಮನೆಗೆ ಹೋದಾಗ ಡುಂಡಿರಾಜ್ ಕಾದು ಕುಳಿತಿದ್ದರು. ತಾಜಾ ಹಲಸಿನಹಣ್ಣಿನ ಸೋಳೆಗಳ ಮೆಲ್ಲುವಿಕೆಯ ನಡುವೆ ನಮ್ಮ ಮಾತುಕತೆ ಸಾಗಿತ್ತು.
ಬಾಲ್ಯದಲ್ಲಿ ಸಣಕಲು ಕಾಯದ (ಈಗಲೂ ಹಾಗೆಯೇ!)ಬಾಲಕ ಡುಂಡಿರಾಜರನ್ನು ಯಾವ ಆಟದಲ್ಲೂ ಇತರ ಮಕ್ಕಳು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿದ್ದಿರಲಿಲ್ಲ. ಹಾಗಾಗಿ ಆಟಕ್ಕಿಂತ ಓದಲ್ಲಿ ಅಭಿರುಚಿ ಹತ್ತಿತ್ತು. ತಂದೆ ಸಂಸ್ಕೃತ ಪಂಡಿತರಾಗಿದ್ದುದರಿಂದ ಮನೆಯಲ್ಲೇ ಬೇಕಾದಷ್ಟು ಪುಸ್ತಕಗಳಿದ್ದವು. ಶಾಲೆ ಕಾಲೇಜು ಲೈಬ್ರರಿಗಳಿಂದಲೂ ಬೇಕಾದಷ್ಟು ಪುಸ್ತಕಗಳನ್ನು ತಂದು ಓದುತ್ತಿದ್ದರು. ಭಾಷೆ ಮತ್ತು ಬರವಣಿಗೆಯಲ್ಲಿ ಆಸಕ್ತಿ ಹೀಗೆ ಸಹಜವಾಗಿ ಮೈಗೂಡಿ ಬಂದಿತ್ತು.
ಡುಂಡಿರಾಜರು ಬರವಣಿಗೆ ಶುರು ಮಾಡಿದ್ದು ಪ್ರೈಮರಿ ಶಾಲೆಯಲ್ಲಿರುವಾಗ. ಬರೆದದ್ದು ಮಕ್ಕಳ ಕವಿತೆಗಳು. ಬೆಳೆಯುತ್ತಿದ್ದಂತೆ ಹೊರಳಿದ್ದು ನಾಟಕಗಳ ಬರವಣಿಗೆಗೆ. ಮೊದಲ ಪ್ರಕಟಿತ ಪುಸ್ತಕ ಕೂಡ ಒಂದು ನಾಟಕ. ಇಂದಿಗೂ ನಾಟಕಗಳಲ್ಲಿ ಅವರಿಗೆ ವಿಶೇಷ ಆಸಕ್ತಿ. ರಂಗಕಮ್ಮಟವೊಂದರಲ್ಲಿ ಭಾಗವಹಿಸಿ ಅವರು ಬರೆದ ನಾಟಕ ಇನ್ನೇನು ರಂಗಕ್ಕೇರಲಿದೆ. ರಂಗಮಂದಿರವನ್ನು ಮನಸ್ಸಿನೊಳಗೇ ನಿರ್ಮಿಸಿಕೊಂಡು ತನ್ನ ಪಾತ್ರಗಳನ್ನು ಚಿತ್ರಿಸಿಕೊಂಡು ನಾಟಕಗಳನ್ನು ಬರೆಯುವುದು ಚಿಕ್ಕಂದಿನಿಂದಲೂ ಬೆಳೆದು ಬಂದ ಹವ್ಯಾಸ. ಯೌವನದ ಕಾಲದಲ್ಲಿ ತಾನು ಬರೆದ ನಾಟಕಗಳನ್ನು ತನ್ನ ಮಿತ್ರವರ್ಗದವರ ಮುಖಾಂತರ ಪ್ರೇಕ್ಷಕರನ್ನೂ ತಲುಪಿಸಿದ್ದಾರೆ. ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾಗ ನಾ ದಾ ಶೆಟ್ಟಿಯವರ ನೇತೃತ್ವದ ಭೂಮಿಕಾದ ಮೂಲಕ ಇವರ ನಾಟಕಗಳು ಮಂಗಳೂರಿನ ಜನತೆಗೆ ಚಿರ ಪರಿಚಿತವಾಗಿವೆ.
ಈ ಕಾಲಘಟ್ಟದಲ್ಲಿಯೇ ಆರಂಭವಾದದ್ದು ಹಾಸ್ಯ ಹನಿಗವನಗಳ ಸರಮಾಲೆ. ಶಬ್ದಗಳನ್ನು ಕಸರತ್ತು ಮಾಡಿಸಿ ಹೊಸ ಹೊಸ ಅರ್ಥಗಳೆಡೆಗೆ ಓದುಗರನ್ನು ಸೆಳೆದೊಯ್ಯುವ ಹಾಸ್ಯ ಹನಿಗವನಗಳು ಕ್ರಮೇಣ ಇವರ ಹೆಸರನ್ನು ಮನೆಮನೆಗೂ ಒಯ್ದವು. ಡುಂಡಿರಾಜರ ಹೆಸರು ಹನಿಗವನಗಳಿಗೆ ಬ್ರಾಂಡ್ ಆಗಿಬಿಟ್ಟಿತು. ನಾಲ್ಕೈದು ಸಾಲುಗಳಲ್ಲಿ, ಕೆಲವೊಮ್ಮೆ ಅದಕ್ಕಿಂತಲೂ ಕಡಿಮೆ ಸಾಲುಗಳಲ್ಲಿ ವಿಶಿಷ್ಟ ಅರ್ಥ ಕೊಡುವ ಡುಂಡಿರಾಜರ ಶೈಲಿ ಅನ್ನಿಸಿಕೊಂಡಿತು ಹಾಗೂ ಇವರನ್ನು ಅನುಸರಿಸುವ ಅನೇಕ ಶಿಷ್ಯರೂ ಹುಟ್ಟಿಕೊಂಡರು. ಕನ್ನಡ ನಿಯತಕಾಲಿಕಗಳಲ್ಲಿ ಅದುವರೆಗೂ ದಿನಕರ ದೇಸಾಯಿಯವರ ಶೈಲಿಯ ಅರ್ಥಗರ್ಭಿತ ಚೌಪದಿಗಳ ಜಾಗವನ್ನು ಈ ತೆರದ ಡುಂಡಿಶೈಲಿಯ ಕವನಗಳು ಆವರಿಸಿಕೊಂಡವು.
ಇದೀಗ ಅಂಕಣ ಸಾಹಿತ್ಯ ಡುಂಡಿರಾಜರ ವಿರಾಮ ಸಮಯವನ್ನೆಲ್ಲ ಉಪಯೋಗಿಸಿಕೊಳ್ಳುತ್ತಿದೆ. 'ವಾರ ವಾರ ನಿಯತಕಾಲಿಕಗಳಲ್ಲಿ ಬರೆಯುವಾಗ ಸಿಗುವ ಓದುಗರ ಸಾಮಿಪ್ಯ ಹೊಸ ಸವಾಲುಗಳನ್ನೊಡ್ಡುತ್ತದೆ. ನಾವು ವರ್ತಮಾನದಲ್ಲಿರಬೇಕಾಗುತ್ತದೆ, ಪ್ರಚಲಿತ ವಿಷಯಗಳ ಮಾಹಿತಿ ಅತ್ಯಗತ್ಯವಾಗುತ್ತದೆ. ಬಹಳಷ್ಟು ವಿವರಗಳನ್ನು ಕಲೆಹಾಕಿಕೊಳ್ಳಬೇಕಾಗುತ್ತದೆ. ಆದರೂ ಇದು ತೃಪ್ತಿ ನೀಡುವ ಸವಾಲು' ಎನ್ನುತ್ತಾರೆ ಡುಂಡಿರಾಜ್. ಅಂಕಣ ಸಾಹಿತ್ಯ ಒಬ್ಬ ಲೇಖಕನ ಮನಸ್ಸನ್ನು ತೆರೆದಿಡಲು ಸಹಾಯಮಾಡುತ್ತದೆ. ನನ್ನ ಅಂಕಣದಲ್ಲಿ ನನ್ನದೇ ಬರವಣಿಗೆ ಆಗಬೇಕೆಂಬುದೂ ಅಗತ್ಯವಿಲ್ಲ- ಇತರರು ಬರೆದ ನನಗೆ ಮೆಚ್ಚಿಗೆಯಾದ ವಿಷಯಗಳನ್ನು, ಬಾಲ್ಯದ ನೆನಪುಗಳನ್ನೂ ಯಥೇಚ್ಛವಾಗಿ ಬಳಸಿಕೊಳ್ಳುತ್ತಿದ್ದೇನೆ. ಅಂಕಣ ಜನಾಕರ್ಷಣೆ ಕಳೆದುಕೊಳ್ಳದಂತೆ ಬರೆಯುವುದು ಒಂದು ದೊಡ್ಡ ಸವಾಲು ಎನ್ನುತ್ತಾರೆ ಡುಂಡಿರಾಜ್. ಹಾಗಾಗಿ ಹನಿಗವನಗಳು ಕಡಿಮೆಯಾಗಿವೆ ಎಂದು ಅವರೂ ಒಪ್ಪಿಕೊಳ್ಳುತ್ತಾರೆ!
ಹಾಸ್ಯ ಸಾಹಿತಿಗಳಿಗೆ ಉಳಿದ ಸಾಹಿತಿಗಳ ಮನ್ನಣೆ ದೊರಕುವುದಿಲ್ಲ, ಹಾಸ್ಯವನ್ನು ಗಂಭೀರ ಸಾಹಿತ್ಯವಾಗಿ ವಿಮರ್ಶಕರು ಪರಿಗಣಿಸುವುದಿಲ್ಲ ಎಂಬುದು ಡುಂಡಿರಾಜ್ ಕಂಡುಕೊಂಡ ಸತ್ಯ. ಹಾಗಾಗಿ ಚೆನ್ನಾಗಿ ಹಾಸ್ಯ ಬರೆಯಬಲ್ಲವರು ಕೂಡ ಇತರ ಪ್ರಕಾರಗಳಿಗೆ ಶರಣು ಹೋಗುತ್ತಿದ್ದಾರೆ. 'ಬೀಚಿ, ಕೈಲಾಸಂ ಅಂಥವರಿಂದ ಶ್ರೀಮಂತವಾಗಿದ್ದ ಕನ್ನಡ ಹಾಸ್ಯ ಸಾಹಿತಿಗಳ ಪಟ್ಟಿ ಇವತ್ತು ಅ ರಾ ಮಿತ್ರರ ಹೆಸರಿನೊಂದಿಗೆ ಮುಗಿದುಹೋಗುತ್ತಿದೆ. ಆಮೇಲೆ ಬಂದ ಭರವಸೆ ಹುಟ್ಟಿಸುವ ಬರಹಗಾರರೆಲ್ಲ ಇತರ ಪ್ರಕಾರಗಳಲ್ಲಿ ಯಶಸ್ಸು ಹೆಚ್ಚು ಎಂದು ಅಲ್ಲಿಗೆ ಹೋಗುತ್ತಿದ್ದಾರೆ. ಉತ್ತಮ ಹಾಸ್ಯ ಇರಬೇಕಾದ ಕಡೆ ನಕಲು ಹಾಸ್ಯ ಅಪಹಾಸ್ಯ ಇತ್ಯಾದಿಗಳೇ ಕಂಡು ಬರುತ್ತಿವೆ. ನಮ್ಮ ಟೀವಿಯಲ್ಲೇ ನೋಡಿ.. ಹಾಸ್ಯ ಧಾರಾವಾಹಿಗಳನ್ನು ನೋಡುವಾಗ ಅಳು ಬರುತ್ತದೆ. ಇನ್ನೊಂದು ಕಡೆ ಕಾರಣವಿಲ್ಲದೆ ನಗುವವರ ತಂಡಗಳು ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿವೆ. ಕೃತಕವಾಗಿ ಬರಿಸುವ ಹಾ ಹಾ ಹೋಹೋ ಎನ್ನುವ ನಗು ಮನಸ್ಸನ್ನು ಹೇಗೆ ತಿಳಿಗೊಳಿಸಬಲ್ಲುದು? ನಗುವವರು ಮನಸಾರೆ ನಗಬೇಕು, ತುಟಿಯಂಚಿನಲ್ಲಿ ಸಣ್ಣಗೆ ಬಂದುಹೋದ ನಗು ಕೂಡ ಮನಸ್ಸಿಗೆ ಬಹಳಷ್ಟು ಸಮಾಧಾನ ತರಬಲ್ಲುದು' ಎಂದರು ಡುಂಡಿರಾಜ್.
ಮಾತು ಪುಸ್ತಕ ಪ್ರಕಟಣೆಯ ಕಡೆ ಹೊರಳಿತು. ನನ್ನ ಕೆಲವು ಚುಟುಕುಗಳನ್ನು ಅವರಿಗೆ ತೋರಿಸಲು ಹೊತ್ತುಕೊಂಡು ಹೋಗಿದ್ದೆ. 'ಇವು ಪುಸ್ತಕ ಮಾಡುವ ಮಟ್ಟದಲ್ಲಿವೆಯಾ' ಎನ್ನುವ ನನ್ನ ನಾಲ್ಕು ಶಬ್ದಗಳ ಸವಾಲಿಗೆ ದೀರ್ಘ ಉತ್ತರ ನೀಡಿದರು ಡುಂಡಿರಾಜ್. ಹವ್ಯಾಸೀ ಬರಹಗಾರನೊಬ್ಬನನ್ನು ಅಟ್ಟಕ್ಕೇರಿಸದೆ ಜಾಗರೂಕನಾಗಿ ಪ್ರೋತ್ಸಾಹಿಸಲು ಅವರು ತೋರಿಸಿದ ಎಚ್ಚರ ಅನುಕರಣೀಯ. ಬರಹಗಾರನೊಬ್ಬನನ್ನು ಸಾಹಿತ್ಯ ವಲಯದಲ್ಲಿ ಗುರ್ತಿಸಬೇಕಿದ್ದರೆ ಆತ ತನ್ನ ಬರಹಗಳನ್ನು ಪುಸ್ತಕ ರೂಪದಲ್ಲಿ ತರಬೇಕಾದ್ದು ಇವತ್ತು ಬಹುತೇಕ ಅನಿವಾರ್ಯವಾಗಿದೆ ಎಂಬುದನ್ನು ಡುಂಡಿರಾಜ್ ಕೂಡ ಒಪ್ಪಿಕೊಳ್ಳುತ್ತಾರೆ. ಭಾರತೀಯ ಭಾಷೆಗಳಲ್ಲಿ ಅತ್ಯಂತ ಹೆಚ್ಚು ಪುಸ್ತಕ ಪ್ರಕಟವಾಗುತ್ತಿರುವುದು ಕನ್ನಡದಲ್ಲಿ ಎಂದು ನಾನೆಲ್ಲೋ ಓದಿದ್ದನ್ನು ಹೇಳಿದಾಗ 'ಅಂಕಿ ಅಂಶ ಗೊತ್ತಿಲ್ಲದೆ ಆ ಬಗ್ಗೆ ನಾನೇನೂ ಹೇಳಲಾರೆ. ಒಳ್ಳೆಯ ಪುಸ್ತಕಗಳಿಗೆ ಬೇಡಿಕೆ ಇರುವುದು ನನ್ನ ಗಮನಕ್ಕೂ ಬಂದಿದೆ. ನನ್ನ ಪುಸ್ತಕಗಳ ಪ್ರಕಾಶಕರೂ ಕೂಡ ಪುಸ್ತಕ ಮಾರಿ ಹೊಗಿಲ್ಲ ಅಂತ ಯಾವತ್ತೂ ಹೇಳಿಲ್ಲ' ಎನ್ನುತ್ತಾ ಡುಂಡಿರಾಜ್ ಪುಸ್ತಕ ವಿಮರ್ಶೆಗಳ ಬಗೆಗೆ ತಮ್ಮ ಅಸಮಾಧಾನ ಹೇಳಿಕೊಂಡರು. 'ತುಂಬಾ ಪುಸ್ತಕಗಳು ಬರುತ್ತವೆ. ಈಗಿನ ಪುಸ್ತಕ ಸಮೀಕ್ಷೆಗಳ ಆಧಾರದಲ್ಲಿ ಪುಸ್ತಕಗಳ ಖರೀದಿ ಸಾಧ್ಯವಿಲ್ಲ. ಒಳ್ಳೆಯ ಪ್ರಯತ್ನ ಅಂತ ನಾಲ್ಕಾರು ವಿಮರ್ಶೆ ಓದಿಕೊಳ್ಳಬೇಕು ಇಲ್ಲದಿದ್ದರೆ ವೃಥಾ ಹಣ ಖರ್ಚು ಮತ್ತು ಅದಕ್ಕೂ ಮಿಗಿಲಾಗಿ ಸಮಯ ಹಾಳು' ಅಂದರು ಡುಂಡಿರಾಜ್. 'ಇನ್ನೊಬ್ಬರ ಪುಸ್ತಕಗಳನ್ನು ಓದುವ ಸಾಹಿತಿಗಳೇ ಕಡಿಮೆಯಾಗಿದ್ದಾರೆ, ಹಾಗಾಗಿ ಒಳ್ಳೆಯ ವಿಮರ್ಶೆಯೇ ಇಲ್ಲವಾಗಿದೆ' ಅಂತಲೂ ಸೇರಿಸಿದರು. ಕನ್ನಡದ ಮಟ್ಟಿಗೆ ಹೇಳುವುದಾದರೆ ಪುಸ್ತಕಗಳು ವ್ಯಾಪಕವಾಗಿ ದೊರೆಯದಿರುವುದೂ ಪುಸ್ತಕಗಳು ಮಾರಿಹೋಗದಿರುವುದಕ್ಕೆ ಒಂದು ಮುಖ್ಯ ಕಾರಣ. ಪುಸ್ತಕಗಳ ಮಾರಾಟ ಮತ್ತು ಅವುಗಳಲ್ಲಿ ಅಡಕವಾಗಿರುವ ಸಾಹಿತ್ಯಿಕ ಗುಣಮಟ್ಟಕ್ಕೆ ನೇರ ಸಂಬಂಧ ಉಂಟು ಅನ್ನುವ ಹಾಗೂ ಇಲ್ಲ ಎನ್ನುವುದು ಡುಂಡಿರಾಜರ ಖಚಿತ ಅಭಿಪ್ರಾಯ.
ನನಗೆ ಉತ್ತಮ ಅನ್ನಿಸಿದ್ದು ಓದುಗರೆಲ್ಲರಿಗೆ ಒಳ್ಳೆಯದು ಅನ್ನಿಸಬೇಕೆಂದೇನೂ ಇಲ್ಲ. ನಾನು ಮೆಚ್ಚಿಕೊಳ್ಳದ ಕೆಲವನ್ನು ಇತರರು ಬಹುವಾಗಿ ಮೆಚ್ಚಿಕೊಳ್ಳಬಹುದು.
ಎಲ್ಲರಿಗೆ ಮೆಚ್ಚಿಗೆಯಾಗುವಂಥಾದ್ದು ಯಾವುದೂ ಇಲ್ಲ. ನಿಮ್ಮ ಚುಟುಕುಗಳಲ್ಲಿ ನನಗೆ ಇಷ್ಟವಾದುದನ್ನು ಗುರ್ತಿಸಿಕೊಡಬಲ್ಲೆ, ಅದರರ್ಥ ಉಳಿದವು ಒಳ್ಳೆಯದಿಲ್ಲವೆಂದಲ್ಲ. ಪುಸ್ತಕ ಮಾಡಬೇಕೋ ಎಂಬುದರ ನಿರ್ಣಯ ಮಾಡಬೇಕಾದವರು ನೀವು. ನನ್ನ ಸಹಕಾರ ಯಾವತ್ತೂ ಇದೆ ಎನ್ನುತ್ತ ಬೀಳ್ಕೊಟ್ಟರು ಡುಂಡಿರಾಜ್. ನೇರಮಾತು ಅಂದರೆ ಹೀಗೆ!
ಅವರು ಗುರ್ತಿಸಿದ ನನ್ನ ಚುಟುಕುಗಳನ್ನು ಇನ್ನೊಂದು ಬಾರಿ ಓದುತ್ತಾ, ಅವರ ಜೊತೆಯ ಮಾತುಕತೆ ಮೆಲುಕು ಹಾಕುತ್ತಾ ಮನೆಗೆ ಹಿಂತಿರುಗಿದಾಗ ನನಗನ್ನಿಸಿದ್ದು ಹೀಗೆ:
ಡುಂಡಿರಾಜ್ ಕೂಡ ಅವರ ಚುಟುಕುಗಳ ಹಾಗೆ ಅನನ್ಯ,
ಹೃದಯ ಕಿಂಡಿ ತಟ್ಟುವ ಮಾನ್ಯರಲ್ಲಿ ಶ್ರೀಸಾಮಾನ್ಯ"








