- ನಸೀಮ್ ಎಂ.ಎಸ್. ಮಂಗಳೂರು
"ಕನ್ನಡವೇ ಸತ್ಯ, ಕನ್ನಡವೇ ನಿತ್ಯ" ಇದು ಕನ್ನಡಿಗರಿಗೆ ಕವಿಗಳು ಬೋಧಿಸಿಕೊಟ್ಟ ಕಿರುಮಂತ್ರ. "ಎಲ್ಲಾದರೂ ಇರು, ಎಲ್ಲಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎಂಬುದೊಂದು ಕವಿವಾಣಿ
ನಮ್ಮ ಕನ್ನಡ ನಡೆ, ನುಡಿ, ಕಲೆ, ಸಂಸ್ಕೃತಿಗೆ ಎಲ್ಲಿಲ್ಲದ ಗೌರವ. ಅದರ ಸಾಹಿತ್ಯದಲ್ಲಿ ಮೈಸೂರು ಮಲ್ಲಿಗೆಯಂತಹ ಘಮಘಮ ಪರಿಮಳ. ಅದರ ನುಡಿಯ ಲಹರಿಯಲ್ಲಿ ಕೋಗಿಲೆಯ ಇಂಪು. ಹೀಗಾಗಿ ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳ ಮನ್ನಣೆ. ಈ ದಾಖಲೆಯನ್ನು ಇನ್ನಾವ ಭಾಷೆಯೂ ಪಡೆದಿಲ್ಲ.
ವಿಜಯನಗರದ ಬಲಿಷ್ಠ ಸಾಮ್ರಾಜ್ಯವಾಗಲಿ, ಮೈಸೂರು ಅರಸರ ವೈಭವವಾಗಲಿ, ಟಿಪ್ಪೂ ಸುಲ್ತಾನನ ಶೌರ್ಯವಾಗಲಿ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ರವರ ವೀರಾವೇಶದ ಹೋರಾಟವಾಗಲಿ, ಕೋಟಿ-ಚೆನ್ನಯರ ಧರ್ಮಯುದ್ಧವಾಗಲಿ, ಕನ್ನಡಿಗರ ಮಟ್ಟಿಗೆ ಹೆಮ್ಮೆಯ ಸಂಗತಿಗಳು.
ಹಿಂದಿನಿಂದಲೂ ಸಿರಿಗಂಧದ ನಾಡಾದ ಕರ್ನಾಟಕ ಚೆಲುವಿನ ಬೀಡು, ಪಶ್ಚಿಮಘಟ್ಟಗಳ ಮಲೆ-ಪರ್ವತ-ಕಾಡುಗಳು ಸೊಗಸಿನ ಖನಿ. ಇಲ್ಲಿ ಧುಮುಕುವ ಜಲಪಾತಗಳ ಝರಿ, ಹಕ್ಕಿಗಳ ಇಂಚರ, ಬಳುಕುತ್ತಾ ಸಾಗುವ ನದಿಗಳ ವೈಯಾರ, ಸಾಲು ಸಾಲು ಭತ್ತದ ಗದ್ದೆಗಳ ವಿಹಂಗಮ ನೋಟ, ಅದರಲ್ಲಿ ರೈತರ ಹಾಡು, ಮಳೆ-ಗುಡುಗುಗಳ ಅಬ್ಬರ, ಕಂಬಳ ಕೋಣಗಳ ಓಟ, ತುಂಗಾ-ಕಾವೇರಿ ನದಿಗಳ ನೋಟ, ಸಹ್ಯಾದ್ರಿ ಪರ್ವತಗಳ ಸಾಲು, ಅಬ್ಬಬ್ಬಾ, ಅದು ಹೇಳಿ ಮುಗಿಯದಷ್ಟು ನಿರಂತರ.
ಕೆಂಪೇಗೌಡನ ಬೆಂಗಳೂರು, ಕುಮಾರವ್ಯಾಸನ ಧಾರವಾಡ, ಚಿತ್ರದುರ್ಗದ ಕಲ್ಲಿನ ಕೋಟೆ, ಸಕ್ಕರೆ ಸೀಮೆಯ ಮಂಡ್ಯ, ಪ್ರಕೃತಿಗೆ ತಲೆದೂಗುವ ಮಡಿಕೇರಿ, ಸುಲ್ತಾನರ ಬಿಜಾಪುರ, ಬಿಸಿಲಿಗೆ ಬೆದರದ ಬಳ್ಳಾರಿ, ಮೀನಿಗೆ ಹೆಸರುವಾಸಿಯಾದ ಕರಾವಳಿ ಹೇಳಿದಷ್ಟೂ ಮುಗಿಯದ ಕರ್ನಾಟಕ ವಿಶಿಷ್ಟ, ವೈವಿಧ್ಯಮಯ.
ಕರ್ನಾಟಕದ ಪ್ರತಿ ನೆಲಕ್ಕೂ, ಪ್ರತಿ ಹೆಜ್ಜೆಗೂ ಅದರದ್ದೇ ಆದ ಇತಿಹಾಸವಿದೆ. ಅದರ ಸುತ್ತ ಹರಡಿರುವ ಭವ್ಯ ಶಿಲ್ಪವಾಗಲಿ, ಮಂದಿರ, ಮಸೀದಿ ಚರ್ಚುಗಳಾಗಲಿ, ಅದರದ್ದೇ ಆದ ಹಿನ್ನೆಲೆ ಹೊಂದಿವೆ. ಸಾಮರಸ್ಯದ ಸಂಸ್ಕೃತಿಯಿದೆ. ಈ ಕಾರಣಕ್ಕಾಗಿಯೇ ರಾಷ್ಟ್ರಕವಿ ಕುವೆಂಪು ಹೆಮ್ಮೆಯಿಂದ ನುಡಿದಿದ್ದಾರೆ - ನೀ ಮುಟ್ಟುವ ನೆಲೆ - ಅದೇ ಕರ್ನಾಟಕ.
ಇಂತಹ ಭವ್ಯ ಇತಿಹಾಸದ, ಕನ್ನಡನಾಡು ನಮ್ಮದು ಅನ್ನಲು ನಮಗೆ ಹೆಮ್ಮೆ. ಹಳೆಗನ್ನಡ, ನಡುಗನ್ನಡ, ವಚನಸಾಹಿತ್ಯದಿಂದಿಅ ಹರಿದುಬಂದ ಇಲ್ಲಿಯ ತೇರು. ಇವತ್ತು ನವ್ಯ, ಬಂಡಾಯಸಾಹಿತ್ಯದಿಂದ ಮುಂದುವರೆದು ಚುಟುದು, ಹನಿಗವನದವರೆಗೂ ಸಾಗಿದೆ. ಈ ಭಾಷೆಯ ಸಾಹಿತ್ಯ ನಿಂತ ನೀರಾಗದೆ, ಇತರ ಭಾಷೆಗಳಿಗೂ ಅನುವಾದಗೊಂಡು ಅನ್ಯಭಾಷೀಯರಿಗೂ ಸಾಹಿತ್ಯದ ರಸದೌತಣ ಬಡಿಸಿದೆ. ಪಂಪ, ರನ್ನ, ಪೊನ್ನ, ಜನ್ನ, ಸರ್ವಜ್ಞ, ಬಸವಣ್ಣ ಮುಂತಾದವರ ವಿಚಾರಧಾರೆಗಳು ಇವತ್ತು ಕನ್ನಡ ಭಾಷೆಯನ್ನು ಮೀರಿ ವ್ಯಾಪಿಸಿಕೊಂಡಿವೆ.
ನಮ್ಮ ಸುತ್ತ ಮುತ್ತ ಪರಭಾಷೆಗಳ ಧಾಳಿ, ಇಂಗ್ಲಿಷ್ ಭಾಷೆಯ ವ್ಯಾಮೋಹ, ಕಂಪ್ಯೂಟರ್, ಇಂಟರ್ನೆಟ್‌ಗಳ ಧಾಳಿಯ ನಡುವೆಯೂ ಕನ್ನಡ ಬೆಳೆದು ನಿಂತಿದೆ. ನಮ್ಮ ರಾಜಕೀಯ ನಾಯಕರ ಸ್ವಾರ್ಥದಿಂದಾಗಿ ಬೆಳಗಾವಿಯಾಗಲಿ ಕಾಸರಗೋಡಾಗಲಿ ವಿವಾದಕ್ಕೆ ಸಿಲುಕಿ ಈಗಲೂ ಚರ್ಚೆಯ ವಿಷಯವಾಗಿ ಉಳಿದುಕೊಂಡಿದೆ. ಆದರೂ ನಮ್ಮ ಕನ್ನಡ ನೆಲ, ಜಲ, ಗಡಿ, ಸೀಮೆ ದಾಟಿಕೊಂಡು ಹಬ್ಬಿದೆ. ಇಲ್ಲಿಯ ಕನ್ನಡಿಗರು ಪ್ರಪಂಚದ ಮೂಲೆಮೂಲೆಗಳಲ್ಲಿ ಚದುರಿ ಕನ್ನಡ ಶ್ರೀಗಂಧದ ಕಂಪು ಹರಡಿದ್ದಾರೆ. ಅವರ ಪ್ರತಿಭೆ-ಸಾಧನೆಗಳಿಗೆ ತಲೆಬಾಗಿರುವ ನಮಗೆ ಅವರು ಕನ್ನಡಿಗರೆಂಬುದೇ ಹೆಮ್ಮೆಯ ವಿಷಯವಾಗಿದೆ.
ಕನ್ನಡಕ್ಕೆ ನಮ್ಮದು ಅಳಿಲ ಸೇವೆಯೇ ಇರಲಿ, ಆದರೆ ಈ ಭಾಷೆಯನ್ನು ಜೀವಂತವಾಗಿರಿಸಿ ಎಲ್ಲೆಡೆ ಅಭಿಮಾನದಲ್ಲಿ ಮಾತನಾಡುತ್ತಿರುವುದು ಕನ್ನಡಕ್ಕೆ ಸಲ್ಲಿಸುವ ನಿಜವಾದ ಗೌರವ. ನಮಗೆ ಇನ್ನೊಂದು ಭಾಷೆಯ ಉದ್ಯೋಗ, ಅಂತಸ್ತು, ಪ್ರತಿಷ್ಠೆ ಏನೇ ಇರಲಿ ಆದರೆ ಕನ್ನಡ ಭಾಷೆಯ ಪ್ರೀತಿ ಅಳಿಯದಿರಲಿ. ಜನ್ಮ ನೀಡಿದ ಮಾತೆಯನ್ನು ಹೇಗೆ ಮರೆಯಲು ಅಸಾಧ್ಯವೋ, ಅದೇ ರೀತಿ ಮಾತೃಭಾಷೆಯನ್ನೂ ಮರೆಯುವುದು ಅಸಾಧ್ಯ. ಕನ್ನಡದ ನುಡಿ-ನಮನ ಈ ಸುವರ್ಣ ಸಂಭ್ರಮದಲ್ಲಿ ಎಲ್ಲೆಡೆ ಕೇಳಿಬರಲಿ. ದಶದಿಕ್ಕುಗಳಲ್ಲಿ ಪ್ರತಿಧ್ವನಿಸಲಿ. ನಮ್ಮ ಕನ್ನಡ ಭಾಷೆ ಸದಾ ಉಜ್ವಲವಾಗಿ ಬೆಳಗಲಿ.
ಜಯ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ.









ಕರ್ನಾಟಕ,
ಕರ್ನಾಟಕ, ಕನ್ನಡ, ಕನ್ನಡಿಗರ ವೈಭವದ ಬಗ್ಗೆ ನಸೀಮ್ ಎಂ.ಎಸ್ ಅವರು ಬರೆದಿರುವ ಲೇಖನ ಚೆನ್ನಾಗಿದೆ.
ಬಹುಶಃ ಒಂದು ’ಟೈಪೊ’ ತಪ್ಪು.
"ಈ ಭಾಷೆಯ ಸಾಹಿತ್ಯ ನಿಂತ ನೀರಾಗಿದೆ. ಇತರ ಭಾಷೆಗಳಿಗೂ ಅನುವಾದಗೊಂಡು ಅನ್ಯಭಾಷೀಯರಿಗೂ ಸಾಹಿತ್ಯದ ರಸದೌತಣ ಬಡಿಸಿದೆ."
ಇದು, "ಈ ಭಾಷೆಯ ಸಾಹಿತ್ಯ ನಿಂತ ನೀರಾಗದೆ ಇತರ ಭಾಷೆಗಳಿಗೂ ಅನುವಾದಗೊಂಡು ಅನ್ಯಭಾಷೀಯರಿಗೂ ಸಾಹಿತ್ಯದ ರಸದೌತಣ ಬಡಿಸಿದೆ." ಎಂದಿರಬೇಕಿತ್ತು.
ಯಾರಿಟ್ಟರೀ ಚುಕ್ಕಿ... ಯಾಕಿಟ್ಟರೀ ಚುಕ್ಕಿ...?
:-)
ಬರೆದದ್ದು
ಬರೆದದ್ದು ಒಬ್ಬರು, ಟೈಪಿಸಿದ್ದು ಇನ್ನೊಬ್ಬರು. ಪ್ರಮಾದಕ್ಕೆ ವಿಷಾದಿಸುತ್ತಿದ್ದೇವೆ. ಗಮನಕ್ಕೆ ತಂದ ಜೋಷಿಯವರಿಗೆ ಥಾಂಕ್ಸ್. ತಪ್ಪನ್ನು ಸರಿಪಡಿಸುತ್ತಿದ್ದೇವೆ.