ಯಾರಿಗೂ ಹೇಳಬೇಡಿ... ಆಯ್ತಾ?
srinath.jpg

 - ಶ್ರೀನಾಥ್ ಭಲ್ಲೆ

ನಮ್ಮ ಬೀದಿ ಕೊನೆ ಅನಸೂಯಾಬಾಯಿಗೆ ವಿಷಯಗಳು ಎಲ್ಲೆಲ್ಲಿಂದಲೋ ಹ್ಯಾಗ್ಯಾಗೋ ತಿಳಿಯುತ್ತದೆ. ನನಗೆ ಎಷ್ಟೋ ಸಾರಿ ಅನ್ನಿಸುತ್ತೆ, ಇಂತಹವರು ನಮ್ಮ ದೇಶದ ಇಂಟೆಲ್ಲಿಜನ್ಸ್ ಡಿಪಾರ್ಟ್ ಮೆಂಟ್’ನಲ್ಲಿ ಇರಬೇಕಿತ್ತು ಅಂತ. ಕುತಂತ್ರಿಗಳ ವಿಷಯಗಳನ್ನು ಅರಿತು ಎಷ್ಟೋ ಜನರ ಜೀವ ಉಳಿಸಬಹುದಿತ್ತು. ಇರಲಿ ಬಿಡಿ ನಾವು ಅದರ ಬಗ್ಗೆ ಈಗ ತಲೆ ಕೆಡಿಸಿಕೊಳ್ಳುವುದು ಬೇಡ. ಸದ್ಯಕ್ಕೆ ಕೇವಲ ಅನಸೂಯಾಬಾಯಿಯ ’ಬಾಯಿಯ’ ವಿಷಯಕ್ಕೆ ಮಾತ್ರ ಸೀಮಿತಗೊಳಿಸೋಣ. ತಮಗೆ ತಿಳಿದ ವಿಷಯವನ್ನು ಇನ್ನೊಬ್ಬರ ಬಳಿ ರಂಗುರಂಗಾಗಿ ಹಂಚಿಕೊಳ್ಳುವುದರಲ್ಲಿ ಎತ್ತಿದ ಕೈ.... ಐ ಮೀನ್.. ಎತ್ತಿದ ಬಾಯಿ. ಚಿಕ್ಕ ವಿಷಯಕ್ಕೆ ಉಪ್ಪು-ಖಾರ ಸೇರಿಸಿ ಅದನ್ನು ವಿಸ್ತರಿಸಿ ಎಷ್ಟು ಚೆನ್ನಾಗಿ ಹೇಳ್ತಾರೆ ಅಂದರೆ, ಇವರೇನಾದರೂ ಟೀವಿಗಾಗಿ ಸೀರಿಯಲ್ಲು ತೆಗೆದರೆ ’ಏಕ್ತ ಕಪೂರ್’ ತನ್ನ ಬ್ಯಾನರ್’ನ ನಿಲ್ಲಿಸೋದು ಗ್ಯಾರಂಟಿ. ಇವರ ಹೆಸರು ಅನಸೂಯಾಬಾಯಿ ಅನ್ನೋ ಬದಲು ’ರೀಲ್ ರಂಗೂಬಾಯಿ’ ಎಂದಿಡಬೇಕಿತ್ತು. ಇವರ ರೂಢಿ ಏನಪ್ಪಾ ಅಂದರೆ ವಿಷಯವನ್ನು ಗುಟ್ಟಾಗಿ ಹೇಳಿ ಕೊನೆಗೆ ’ಈ ವಿಷಯ ನಾ ಹೇಳ್ದೇ ಅಂತ ಯಾರಿಗೂ ಹೇಳಬೇಡಿ ... ಆಯ್ತಾ’ ಅಂತ ಸೇರಿಸೋದು. ಇವರೇನಾದರೂ ಧಡಗುಟ್ಟಿಕೊಂಡು ಬಂದರೆಂದರೆ ಅದು ಗುಟ್ಟನ್ನು ಹಂಚಿಕೊಳ್ಳಲು ಅಂತಲೇ ಸರಿ.

 

ಒಂದು ಶನಿವಾರ ಹೀಗೇ ಆಯಿತು. ವಿಶಾಲೂ ಒಳಗಿದ್ದಳು. ನಾನು ಅರ್ಥಾತ್ ರಾಮಣ್ಣಿ ಹಜಾರದ ಬಳಿ ಕುಳಿತು ಪೇಪರ್ ಓದುವುದರಲ್ಲಿ ತಲ್ಲೀನನಾಗಿದ್ದೆ. ಒಮ್ಮೆಲೆ ಜೋರಾಗಿ ಗಾಳಿ ಬೀಸಿ ಪೇಪರ್ ಮುದುಡಿತು. ಏನಾಯ್ತು ಎಂದು ನೋಡಿದರೆ ನನ್ನ ಮುಂದಿನಿಂದ ಅನಸೂಯಾಬಾಯಿಯ ಸವಾರಿ ಸಾಗಿತ್ತು. ಅವರು ಬಂದ ಮೇಲೆ ಈ ಪೇಪರ್’ಗೇನು ಕೆಲಸ ಎಂದು, ಮೊದಲೇ ಮುದುಡಿದ್ದ ಅದನ್ನು ಇನ್ನೂ ಮುದುಡಿ, ಮೂಲೆಗೆ ಹಾಕಿ, ಕಣ್ಣು ಮುಚ್ಚಿ ಒರಗಿ, ಕಿವಿಯನ್ನು ಹಿರಿದಾಗಿ ಇರಿಸಿಕೊಂಡೆ. ಗುಟ್ಟು ಕೇಳಿಸಬೇಕಲ್ಲ ಅಂತ.

 

"ಅದೇನಾಯ್ತು ಗೊತ್ತಾ ವಿಶಾಲೂ... ಆ ಸುಂದ್ರಮ್ಮನ ಮಗ ಶ್ರೀನಿವಾಸ, ಮಾವಿನಕೆರೆ ಹತ್ತಿರ, ಚೀಪಾಗಿ ಸಿಕ್ತು ಅಂತ ಸೈಟು ತೊಗೊಂಡಿದ್ನಂತಲ್ಲ, ಅದು ಮೋಸ ಅಂತೆ!! ಆ ಮನೆಹಾಳ ದಳ್ಳಾಳಿ ಈ ಸೈಟನ್ನ ಮೂರು ಜನಕ್ಕೆ ಮಾರಿದ್ದನಂತೆ. ಈ ಶ್ರೀನಿವಾಸ ನಾಲ್ಕನೆಯವನು. ಸುಮ್ಮನೆ ಎಲ್ಲರ ಮುಂದೂ ಜಂಬ ಕೊಚ್ಚಿಕೊಂಡರು ಆ ಸುಂದ್ರಮ್ಮ. ಈಗ ನೋಡು ಏನಾಯ್ತು ಅಂತ. ಅದಕ್ಕೇ ಹೇಳೋದು ಎಲ್ಲ ನಮ್ಮ ಕೈಯಲ್ಲಿದೇ ಅಂತ ಆಡಬಾರದು. ಸರಿ, ನಾನಿನ್ನು ಬರಲಾ. ಮಗಳು ಕಾಯ್ತಿದ್ದಾಳೆ. ಸ್ಕೂಲಿಗೆ ಲೇಟಾಗುತ್ತೆ. ಒಳ್ಳೆ ಟೀಚರ್ ಅಂತ ಹೆಸರು ತೊಗೊಂಡಿದ್ದಾಳೆ, ಅವಳೇ ಲೇಟಾಗಿ ಹೋದರೆ ಚೆನ್ನಾಗಿರೋಲ್ಲ ನೋಡು ! ಸರಿ, ನಾನು ಬರ್ತೀನಿ... ಹೇಳಿದ ವಿಷಯ ನಾ ಹೇಳ್ದೇ ಅಂತ ಯಾರಿಗೂ ಹೇಳಬೇಡಾ.. ಆಯ್ತಾ?"

 

ಬರುವಾಗ ಇದ್ದ ಬಿರುಸು ಹೋಗುವಾಗ ಇರಲಿಲ್ಲ. ’ಗುಟ್ಟು’ ಇನ್ನೊಬ್ಬರ ಮುಂದೆ ಹೇಳಿದ ಮೇಲೆ ದೇಹ ಹಗುರವಾಗಿರಬೇಕು... ಹಾಯಾಗಿ ನೆಡೆದುಕೊಂಡು ಹೋದರು... ಆದರೆ ’ಬೇಗ ಹೋಗಬೇಕು’ ಅಂದ್ರಲ್ಲಾ ಮತ್ತೆ ? ಈ ವಿಷಯಗಳೇ ನನಗೆ ಅರ್ಥ ಆಗಲ್ಲ. ವಿಶಾಲೂನ್ನ ಕೇಳಿಯೇ ಬಿಡಬೇಕು. ಅವಳ ಹತ್ತಿರ ಹೋಗಿ ಕೇಳಿದಕ್ಕೆ ’ಅವೆಲ್ಲ ನಿಮಗೆ ಅರ್ಥ ಆಗಲ್ಲ.... ಅವರು ಬೇಗ ಹೋಗಬೇಕು ಅಂತ ಹೇಳಿದ್ದು ಹೋಗಲಿಕ್ಕೆ ಅಲ್ಲ. ತಮ್ಮ ಮಗಳ ಬಗ್ಗೆ ಹೇಳಿಕೊಳ್ಳೋಕ್ಕೆ’ ಅಂದಳು.... ವಾಹ್ ! ಎತ್ತಣದ ಮಾಮರವೋ ಎತ್ತಣದ ಕೋಗಿಲೆಯೋ.... ನನಗೇಕೆ ಈ ಸೂಕ್ಷ್ಮ ಅರ್ಥ ಆಗಲಿಲ್ಲ ? ನನಗೋ ನೇರವಾಗಿ ಹೇಳಿದರೇ ಅರ್ಥ ಆಗಲ್ಲ ... ಇನ್ನು ಸೂಕ್ಷ್ಮ ಬಿಡಿ, ದೂರದ ಮಾತು.

 

ಪಾಪ, ಏನೋ ಒಂದು ಮನೆ ಮಾಡಿಕೊಳ್ಳೋಣ ಅಂತ ಅವರು ಸೈಟಿಗೆ ದುಡ್ಡು ಹಾಕಿದರು ನಿಜ. ಆಸೆ ಪಡುವುದು ತಪ್ಪೇ? ಅದು ಕಳ್ಳ ವ್ಯವಹಾರದ ಸೈಟು ಅಂತ ಇವರಿಗೆ ಗೊತ್ತಿದ್ದರೆ ಯಾಕೆ ದುಡ್ಡು ಸುರೀತಿದ್ರು ? ದುಡ್ಡು ಕಳ್ಕೊಂಡಿದ್ದು ಒಂದಾದರೆ, ಇಂತಹವರ ಬಾಯಿಗೆ ಬೀಳುವುದು ಅದಕ್ಕಿಂತಲೂ ಕೇಡು.

ಇನ್ನೆರಡೇ ದಿನಗಳಲ್ಲಿ ಮತ್ತೊಮ್ಮೆ ಬಿರುಗಾಳಿ ಮನೆಗೆ ಬಂದಿತ್ತು. ಕೆಲಸ ಮುಗಿಸಿ ಆಗ ತಾನೆ ಬಂದು ವಿಶಾಲೂ ಜೊತೆ ಕೂತು ಕುಳಿತು ಕಾಫಿ ಹೀರುತ್ತಿದ್ದೆ. ಒಳಗೆ ನುಗ್ಗಿದವರೇ "ವಿಶಾಲೂ, ನಿನಗೆ ವಿಷಯ ಗೊತ್ತಾ" ಅಂದರು. ನಾನು "ಅಲ್ಲಾ ಅನಸೂಯಾಬಾಯಿಯವರೇ, ಇನ್ನೂ ನೀವು ಹೇಳೇ ಇಲ್ಲ. ಅವಳಿಗೆ ಹೇಗೇ ತಿಳಿಯುತ್ತೆ" ಅಂದೆ. ನನ್ನವಳು ಅದಕ್ಕೆ ಏನೂ ಹೇಳದೆ ಇದ್ದರೂ ಆಕೆ ತಾನಾಡುವ ಮಾತಿನ ಓಘವನ್ನು ಕಡಿಮೆ ಮಾಡಿದ ನನ್ನನ್ನು ಒಬ್ಬ ಶತೃವನ್ನು ನೋಡುವಂತೆ ನೋಡಿದರು. ದೃಷ್ಟಿಯಲ್ಲಿದ್ದುದನ್ನು ಭಾಷಾಂತರ ಮಾಡಿದರೆ "ಇಲ್ಲಿಂದ ಎದ್ದು ಹೋಗ್ತೀಯ ಇಲ್ವಾ?" ಅನ್ನೋ ರೀತಿಯಲ್ಲಿ. ಕಾಫಿ ಸಮೇತ ನಾನು ಜಾಗ ಖಾಲಿ ಮಾಡಿದೆ.

 

ಮತ್ತೊಮ್ಮೆ ಆರಂಭವಾಯ್ತು "ವಿಷಯ ಏನು ಗೊತ್ತಾ. ನಾನು ಮೊನ್ನೆ ಆ ದಳ್ಳಾಲಿ ವಿಷಯ ಹೇಳಿದ್ನಲ್ಲ. ಆ ಮನೆಹಾಳ ಸೈಟನ್ನ ನಾಲ್ಕು ಜನಕ್ಕೆ ಮಾರೋದಿರಲಿ ತನ್ನ ಮಗನನ್ನೂ ಮಾರಿದ್ದಾನೆ. ನನ್ನ ಮಗನಿಗೆ ನಿಮ್ಮ ಮಗಳನ್ನು ತೋಗೋತೀನಿ ಅಂತ ಹೇಳಿ, ನಾಲ್ಕು ಜನರ ಹತ್ತಿರ ಅಡ್ವಾನ್ಸ್ ವರದಕ್ಷಿಣೆ ತೆಗೆದುಕೊಂಡು ಐದನೆ ಸಂಬಂದಕ್ಕೆ ಮದುವೆ ಮಾಡಿಕೊಟ್ನಂತೆ !!! ಪಾಪಿ". ವಿಶಾಲೂ ಕೇಳಿದಳು "ಅಂದರೇ ಆ ನಾಲ್ಕು ಜನರ ದುಡ್ಡು ಗೋವಿಂದಾನಾ? ಪೋಲೀಸಿನವರಿಗೆ ಕಂಪ್ಲೈಂಟ್ ಕೊಡೋದು ತಾನೆ ?" ಅದಕ್ಕೆ ಅವರು "ಪೋಲೀಸಿನವರ ಮುಂದೆ ಹೋದರೇ ಇವರನ್ನೇ ಮೊದಲು ಒಳಗೆ ಹಾಕೋದು. ನೀವ್ಯಾಕೆ ವರದಕ್ಷಿಣೆ ಕೊಟ್ರಿ ಅಂತ. ಅಲ್ಲಾ, ನಾನು ಕೇಳೊದು, ಇವನು ಇಂತಹವನು ಅಂತ ತಿಳಿದೂ ಸಂಬಂಧ ಬೆಳಸೋದೆ? ನಮ್ಮ ಬುದ್ದಿ ನಮ್ಮ ಕೈಯಲ್ಲಿ ಇರಬೇಕು. ಇರುಳು ಕಂಡ ಭಾವೀಲಿ ಹಗಲು ಬಿದ್ರೂ ಅಂತಾರಲ್ಲ, ಹಾಗೆ ಆಯ್ತು. ನಾ ಬರಲಾ. ಮಗಳು ಟ್ಯೂಶನ್ ಹೇಳಿಕೊಡ್ತಿದ್ಲು. ನಾನು ಹಾಗೇ ಹೊರಗೆ ಬಂದೆ. ವಿಷಯ ನಾ ಹೇಳ್ದೇ ಅಂತ ಯಾರಿಗೂ ಹೇಳಬೇಡ... ಆಯ್ತಾ?" ಅಂದು ತಮ್ಮ ಕೆಲಸ ಮುಗಿಸಿ ಹೊರಟುಹೋದರು.

 

ಯಾರಿಗೆ ದುಡ್ಡು ಹೆಚ್ಚಾಗಿದೆ ಅಂತ ನಾನು ಕೇಳೋದು. ಈ ದಳ್ಳಾಳಿ ಮನೆಹಾಳ ಅಂತ ಗೊತ್ತಿದ್ದರೆ ಯಾರು ತಾನೇ ದುಡ್ಡು ತೆಗೆದುಕೊಂಡು ಹೋಗಿ ಅವನ ಕೈಲಿ ಇಡ್ತಾರೆ ? ದುಡ್ಡು ಕಳೆದುಕೊಂಡ ಸಂಕಟ ಅವರದು. ಇಂತಹವರು, ಒಬ್ಬರಿಂದ ಇನ್ನೊಬ್ಬರಿಗೆ ವಿಷಯ ಹರಡಿ ಒಳಗೊಳಗೇ ಖುಷಿ ಪಡ್ತಾರೆ.

 

ಮುಂದಿನ ಕೆಲವು ದಿನಗಳು ಅನಸೂಯಾಬಾಯಿಯವರ ದರ್ಶನವೇ ಆಗಲಿಲ್ಲ. ಬ್ಯುಸಿ ಇರಬೇಕು ಅಂದುಕೊಂಡೆ. ಒಂದು ರೀತಿಯ ಮಧುಕರ ವೃತ್ತಿ ಇವರದು. ಒಂದು ಸಂಜೆ ಮನೆಗೆ ಬಂದ ಕೂಡಲೆ ವಿಶಾಲೂ ಕೇಳಿದಳು "ನಿಮಗೆ ವಿಷಯ ಗೊತ್ತಾ" ಅಂತ. "ನಿನಗೂ ಬಂತಾ ಈ ಸಿಂಡ್ರೋಮು?" ಅಂತ ಕೇಳಿದ್ದಕ್ಕೆ ಅವಳು ಅದನ್ನು ಲೆಕ್ಕಿಸದೆ ಹೇಳಿದಳು "ರಮಣಮೂರ್ತಿಯವರನ್ನು ಜೈಲಿಗೆ ಹಾಕಿದ್ರಂತೆ !". ಸಾಧು ಪ್ರಾಣಿ ರಮಣಮೂರ್ತಿ ಅನಸೂಯಾಬಾಯಿಯವರ ಪತಿ. ನಾನು "ಅಲ್ಲಾ, ಇದೊಳ್ಳೇ ಗ್ರಹಚಾರ ಆಯ್ತಲ್ಲ. ಹೆಂಡತಿಯು ಒಂದು ಕಡೆಯ ವಿಷಯ ಇನ್ನೊಂದು ಕಡೆ ಹೇಳಿದರೆ, ಗಂಡನಿಗೆ ಜೈಲೇ? ಏನು ಅನ್ಯಾಯ ಇದು" ಅಂತ ಪೆದ್ದು ಪೆದ್ದಾಗಿ ಕೇಳಿದ್ದಕ್ಕೆ ಬೈಸಿಕೊಂಡೆ.

 

"ನಿಮ್ಮದು ಯಾವಾಗ್ಲೂ ಹಾಸ್ಯ. ಸ್ವಲ್ಪ ಸೀರಿಯಸ್ಸಾಗಿ ಕೇಳಿ. ತಮ್ಮ ಮಗಳಿಗೆ ವರನನ್ನ ಬುಕ್ ಮಾಡಲು ದಳ್ಳಾಳಿಗೆ ಹಣ ಕೊಟ್ಟವರಲ್ಲಿ ಇವರೂ ಒಬ್ಬರು. ಪಾಪ ಇಷ್ಟು ದಿನ ಅನಸೂಯಾಬಾಯಿಯವರ ಬಾಯಿಗೆ ಹೆದರಿ ವಿಷಯ ಹೇಳಿರಲಿಲ್ಲ. ವಿಷಯ ಗೊತ್ತಾಗಿದ್ದೇ ತಡ ಯಜಮಾನರನ್ನು ಪೋಲೀಸ್ ಠಾಣೆಗೆ ಅಟ್ಟಿದರು. ವಿಚಾರಣೆ ಇರಲಿ, ವರದಕ್ಷಿಣೆ ಹಣ ಕೊಟ್ಟೆ ಅಂತ ಇವರು ಹೇಳಿದ್ದಕ್ಕೆ, ಮೊದಲು ನಿಮ್ಮನ್ನ ಒಳಗೆ ಹಾಕಬೇಕು ಅಂತ ಇವರನ್ನೇ ಒಳಗೆ ತಳ್ಳಿದರಂತೆ. ಆಮೇಲೆ ಅನಸೂಯಾಬಾಯಿ ಹೋಗಿ ಜಾಮೀನಿನ ಮೇಲೆ ಬಿಡಿಸಿಕೊಂಡು ಬಂದರಂತೆ".

 

ಅದಕ್ಕೇ ಕಳೆದ ಕೆಲವು ದಿನಗಳಿಂದ ಆಸಾಮಿ ಪತ್ತೆ ಇಲ್ಲ. "ಅದು ಸರಿ, ನಿನಗೆ ಈ ವಿಷಯ ಯಾರು ಹೇಳಿದರೂ?" ಅಂತ ಕೇಳಿದ್ದಕ್ಕೆ ವಿಶಾಲೂ ಅಂದಳು "ಅನಸೂಯಾಬಾಯೀನೇ ಖುದ್ದಾಗಿ ಹೇಳಿ, ನಾ ಹೇಳ್ದೇ ಅಂತ ಯಾರಿಗೂ ಹೇಳಬೇಡ.. ಆಯ್ತಾ, ಅಂದರೂ... ನೀವು ಯಾರಿಗೂ ಹೇಳಬೇಡಿ ... ಪ್ಲೀಸ್".

 

ಖಂಡಿತ ನಾನು ಹೇಳೋಲ್ಲ ಅಂತ ಹೇಳಿದ್ದೆ ನಿಜ... ಆದರೆ ಬರೆಯೋಲ್ಲ ಅಂತ ಅಲ್ವಲ್ಲಾ? ವಿಷಯ ಓದಿದರಿ ಅಲ್ವಾ ? ನಾ ಹೇಳ್ದೇ ಅಂತ ಯಾರಿಗೂ ಹೇಳಬೇಡಿ ... ಆಯ್ತಾ !!

 

 

 

ಹೆಚ್ಚಿನ

ಹೆಚ್ಚಿನ ಪಕ್ಷ ಇಂತಹ ’ಸೋರ್ಸ್’ ಗಳನ್ನು ಉತ್ಪ್ರೇಕ್ಷೆ ಮಾಡುವ ಹಾಗಿಲ್ಲ. ಯಾರಿಗೂ ಹೇಳಬೇಡಿ ಮತ್ತೆ, ಅಂದರೆ ಅದು ನಿಖರವಾದ ನ್ಯೂಸ್ ಅಂತ್ಲೇ ಅರ್ಥ. ಹೀಗೆ ಹೇಳಿದೆ ಅಂತ ಅನುಸೂಯಾ ಬಾಯಿಯ ಕಿವಿಗೆ ಹಾಕಬೇಡಿ ಮತ್ತೆ!

ನ್ಯೂಸ್

ನ್ಯೂಸ್ ಪೇಪರ್ ಅನಸೂಯಾಬಾಯಿಯ ಪಾತ್ರವನ್ನು ಚೆನ್ನಾಗಿ ವರ್ಣಿಸಿದ್ದಾರೆ. ಉತ್ತಮ ಹಾಸ್ಯ ಲೇಖನ ವೀಕೆ೦ಡ್ ಮನರ೦ಜನೆಗೆ ಹೇಳಿಮಾಡಿಸಿದ೦ತಿತ್ತು.

 ಮೃಣಾಲಿನಿ

Syndicate

Syndicate content