_ಗೋಪೀನಾಥ ರಾವ್
ಹುಡುಗಿಯ ಕಡೆಯವರು ಮಾತುಕತೆಗೆ ಬರುತ್ತಾರೆ ಎನ್ನುವುದು ಹಿಂದಿನಷ್ಟು ಸಂಭ್ರಮದ ಸುದ್ದಿಯಲ್ಲ ಬಿಡಿ. ಹಿಂದೆಯಾದರೋ ಇದು ಬಹಳಷ್ಟು ಸಂಭ್ರಮದ ಸುದ್ದಿಯೇ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ ನೋಡಿ!
ನಮ್ಮ ಸಂಬಂಧದ ಹುಡುಗನೊಬ್ಬನ ಮದುವೆಯ ಮಾತುಕತೆಗಳು ನಡೆಯುತ್ತಿದ್ದವು. ಒಂದೆರಡು ಕಡೆಯಿಂದ ಮೇಳಾಮೇಳಿ ಕೇಳಿನೋಡಿದಾಗ ಧನಾತ್ಮಕ ಉತ್ತರವೂ ಸಿಕ್ಕಿತ್ತು. ಸರಿ ಮುಂದುವರೆಯೋಣ ಎಂದು ಹುಡುಗನ ತಂದೆ ತಾಯಿ ಹುಡುಗಿಯ ಕಡೆಯವರಿಗೆ ಪತ್ರ ಬರೆಯುವಂತೆ "ನಡುಬೀದಿ ನಾರಾಯಣ"ನಿಗೆ (ಬ್ರೋಕರ್ ಅಂದಿರೀ ಜೋಕೆ, ಸಂಬಂಧ ಮುರಿದು ಬೀಳುವುದು ಖಂಡಿತ) ಸೂಚಿಸಿದರು.
ವಾರ ಕಳೆದರೂ ಆತನಿಂದ ಉತ್ತರವಿಲ್ಲ. ಹುಡುಗನ ತಂದೆ ಕೇಳಿದಾಗ "ಅಯ್ಯೋ ಆಗಲ್ಲ ಸಾರ್.. ರಾಹು ಕೇತು ದೋಷ ಇದೆ ಅಂದು ಬಿಟ್ರು ಸಾರ್" ಅಂದ.
ಹುಡುಗನ ತಂದೆಗೆ ಎದೆ ಧಸಕ್ ಎಂದಿತು. ತಮ್ಮ ಪರಿಚಯದ ಜೋತಿಷಿಯವರಲ್ಲಿಗೆ ಹೋಗಿ " ನಮ್ಮ ಹುಡುಗನ ಜಾತಕ ಸಾರ್.. ಯಾರೋ ರಾಹು ಕೇತು ದೋಷ ಇದೆ ಅಂದ್ರಂತೆ. ಹುಡುಗನ ಅಮ್ಮನಿಗೆ ಚಿಂತೆಗಿಟ್ಟುಕೊಂಡಿದೆ. ಸ್ವಲ್ಪ ನೋಡಿ ಪರಿಹಾರ ಸೂಚಿಸಿ"ಅಂದ್ರು.
ನಕ್ಕರು ಜೋತಿಷಿಗಳು." ಸಾರ್ ರಾಹು ಎದುರಲ್ಲೇ ಇದೆ ಕೇತು ಮನೇಲಿದೆ ಅಂದ್ರಲ್ಲ ಸಾರ್ ಜಾತಕ ನೋಡಬೇಕಾಗಿಲ್ಲ" ಎಂದಾಗ ಹುಡುಗನ ತಂದೆಗೆ ಗಲಿಬಿಲಿ!
ಜೋತಿಷಿಗಳು ವಿವರಿಸಿದರು" ಇದು ಕೋಡು ವರ್ಡು ಸಾರ್.. ಹುಡುಗನ ಅಪ್ಪ ಅಂದ್ರೆ ರಾಹು, ಅಮ್ಮ ಕೇತು. ಒಟ್ಟಿಗಿರ್ತಾರಾ ಅನ್ನುವುದು ರಾಹು ಕೇತು ದೋಷ, ಈಗ ಬಹು ಮುಖ್ಯವಾದ ಪ್ರಶ್ನೆ. ಹುಡುಗಿ ಮನೆಯವರು ಇದಕ್ಕೆ ಗೌರವದಿಂದ ಹೀಗೆ ನಾಮಕರಣ ಮಾಡಿದ್ದಾರೆ ಅಷ್ಟೆ! ಎಂದು ನಕ್ಕರು.
ಹುಡುಗನ ತಂದೆಗೆ ಸುಸ್ತೋ ಸುಸ್ತು.
"ಇದು ನಿಮಗೆ ಹೊಸತು ಅಂತ ಕಾಣುತ್ತೆ ಅಲ್ಲವಾ?" ಕೇಳಿದರು ಜೋತಿಷಿ.
ತಲೆಯಲ್ಲಾಡಿಸಿದರು ಹುಡುಗನ ತಂದೆ.
"ಇನ್ನೂ ತುಂಬಾ ಇದೆ, ಮುಂದೆ ಮುಂದೆ ನಿಮ್ಮ ಅನುಭವಕ್ಕೆ ಬರ್ತದೆ ನೋಡಿ" ಅಂದರು ಜೋತಿಷಿಗಳು.
"ಈಗಲೇ ಹೇಳಿಬಿಡಿ ಸ್ವಾಮಿ, ಮುಜುಗರ ತಪ್ಪತ್ತದೆ" ಅಂದರು ಹುಡುಗನ ತಂದೆ.
"ಬನ್ನಿ, ಚಹಾ ಕುಡಿಯುವಿರಂತೆ, ಆಮೇಲೆ ಆರಾಮಾಗಿ ಮಾತನಾಡೋಣ" ಅನ್ನುತ್ತ ಮನೆಯೊಳಗೆ ಕುಳ್ಳಿರಿಸಿದರು.
ಅಷ್ಟರಲ್ಲಿ ಇನ್ನೊಬ್ಬರು ಮಹನೀಯರು ಬಂದರು. "ಒಂದು ಪ್ರಸ್ತಾಪ ಮುಂದುವರೆಸಲು ಬಂದ ಹುಡುಗಿ ಕಡೆಯ ನಡುಬೀದಿ ನಾರಾಯಣರು. ಅವರ ಡಯಲಾಗು ಕೇಳಿ" ಅಂದರು ಜೋತಿಷಿ.
"ಸಾರ್ ನಿನ್ನೆ ಕೊಟ್ಟ ಮೇಳಾಮೇಳಿ ಸರಿಯಿದೆಯಾ?"
"ಹೌದು ಚೆನ್ನಾಗಿ ಕೂಡಿ ಬರುತ್ತದೆ ಅಂತ ಹೇಳಿ"
"ನಾನೂ ಮೇಲಿಂದ ಮೇಲೆ ನೋಡಿದ್ದೆ, ಕೂಡಿ ಬರುತ್ತೆ ಅಂತ ಎಣಿಸಿದ್ದೆ. ಆದರೆ ಕಷ್ಟ ಸಾರ್.."
"ಯಾಕೆ ಹುಡುಗಿ ಚೆನ್ನಾಗಿಲ್ವಾ?"
"ಇಲ್ಲಾ ಸಾರ್ ಒಳ್ಳೇ ಗೊಂಬೆ ಹಾಗಿದ್ದಾಳೆ"
"ಮತ್ತೆ? ಹುಡುಗನಿಗೆ ಕೆಲಸ ಒಳ್ಳೇದಿಲ್ವಾ?"
"ಐಟೀ ಕೆಲಸ ಸಾರ್...ಅಯ್ಯೋ ಅದೆಲ್ಲಾ ಸರಿ ಇದೆ ಸಾರ್.. ಆದರೆ ಹಳೇ ಫರ್ನಿಚರಿದ್ದೇ ಪ್ರಾಬ್ಲೆಮ್ಮು. ನೋಡೋಣ ಬರ್ತೀನಿ" ಎನ್ನುತ್ತಾ ಹೊರಟರು.
"ಏನ್ಸಾರ್.. ಮದುವೆ ಕೂಡಿ ಬರುತ್ತಾ ಇದೆ ಅಂತಾರೆ ಹಳೇ ಫರ್ನಿಚರ್ ಪ್ರಾಬ್ಲೆಮ್ಮು ಅಂತಾರೆ ಕೊಟ್ಟು ಹೊಸದು ತೆಗೆದುಕೊಳ್ಳಬಾರದಾ? ಈಗಿನ ಯುವಕರು ತಾನೇ.. ಹಳೇ ಫರ್ನಿಚರ್ ಹಿಡಿಸಲಿಲ್ಲವೇನೋ.." ಎಂದರು ಹುಡುಗನ ತಂದೆ.. ಇಷ್ಟು ಸಣ್ಣ ವಿಷಯಕ್ಕೆ ಸಂಬಂಧ ತಪ್ಪಿಹೋಗೋದು ಅಂದರೆ!
ನಕ್ಕರು ಜೋತಿಷಿಗಳು.. "ನೀವೂ ಸ್ವಲ್ಪ ಹುಷಾರಾಗಿರಿ, ಇದು ಇನ್ನೊಂದು ಕೋಡ್ ವರ್ಡು.. ನಿಮ್ಮನೇಲಿ ನೀವು ಮತ್ತು ನಿಮ್ಮ ಹೆಂಡತಿ ಹಳೇ ಫರ್ನಿಚರ್ರು!
ಕಾಲ ಬದಲಾಗಿದೆ ಸಾರ್.. ಹೊಸ ಫರ್ನಿಚರುಗಳಿಗೆ ತಾವು ಹೊಸದು ಎನ್ನುವ ಭ್ರಮೆ... ಹೀಗೆ ಇವತ್ತಿನ ಮಾರ್ಕೆಟು ಸಾರ್...
ಕುಸಿದು ಕುಳಿತರು ಹುಡುಗನ ತಂದೆ...









ಹಾಸ್ಯ
ಹಾಸ್ಯ ಲೇಖನ ಉತ್ತಮವಾಗಿದೆ. ಮದುವೆ ಮಾರ್ಕೆಟ್ ನಲ್ಲಿ ಬದಲಾದ ಮೌಲ್ಯಗಳ ಬಗ್ಗೆ ನವಿರಾಗಿ ತಿಳಿಸಿದೆ. ಇದನ್ನು ಓದಿದಾಗ ಇತ್ತೀಚೆಗೆ ತಮ್ಮ ಮಗಳಿಗಾಗಿ ವರಾನ್ವೇಷಣೆ ಮಾಡುತ್ತಿದ್ದ ನನ್ನ ಪರಿಚಯದವರೊಬ್ಬರು ಹೇಳಿದ ಮಾತು ನೆನಪಾಯಿತು. ಅಯ್ಯೋ ಹುಡುಗನ ತ೦ದೆ-ತಾಯಿ ಇಬ್ಬರಿಗೂ ಡಯಾಬಿಟೀಸ್ ಇದೆಯ೦ತೆ, ಯಾವಾಗಲೂ ಮದ್ದು ತೆಗೊಳ್ಲೇಬೇಕ೦ತೆ. ಅದಕ್ಕೇ ಹುಡುಗನಿಗೆ ಉತ್ತಮ ವಿದ್ಯೆ, ಉದ್ಯೋಗ ಇದ್ದರೂ ನಮಗೆ ಈ ಸ೦ಬ೦ಧ ಮಾಡಬೇಕೋ ಬೇಡವೋ ಅನ್ನೋ ಚಿ೦ತೆ ಎ೦ದಾಗ ನನಗೆ ನಗು ಬ೦ದಿತ್ತು. ಹಾಸ್ಯದ ವಿಷಯವೆ೦ದರೆ ಹೀಗೆ ಹೇಳಿದ ಹೆ೦ಗಸಿನ ಆರೋಗ್ಯ ಅದಕ್ಕಿ೦ತ ಕೆಟ್ಟದಿತ್ತು. ಒ೦ದೇ ವ್ಯತ್ಯಾಸವೆ೦ದರೆ ಅವರಿಗೆ ಮದುವೆಗೆ ಬ೦ದ ಮಗನಿರಲಿಲ್ಲ. ಹೆಣ್ಣು ಕೊಡುವ ಮೊದಲೇ ಇ೦ತಹ ವಿಪರೀತ ಕಲ್ಪನೆಗಳನ್ನು ಹೆತ್ತವರೇ ಮಾಡಿಕೊ೦ಡರೆ, ಅವರ ಹೆಣ್ಮಕ್ಕಳಿಗೆ ಎಷ್ಟು ಹೊ೦ದಿಕೊಳ್ಳುವ ಗುಣವಿದ್ದೀತು?ಹಿರಿಯರಿದ್ದರೆ ಮನೆಗೆ ಶೋಭೆ ಅನ್ನುವ ಕಾಲ ಬದಲಾದದ್ದು ನಿಜ.
ಮೃಣಾಲಿನಿ ಉದಯ ಕುಮಾರ್