-ಅರ್ಶದ್ ಹುಸೇನ್ ಎಂ ಹೆಚ್.
ಶೀರ್ಷಿಕೆ ನೋಡಿ ಕನ್ನಡ ನಟ ಉಪೇಂದ್ರ ಮಹಾತ್ಮೆ ಎಂದು ತಪ್ಪಾಗಿ ತಿಳಿದುಕೊಳ್ಳಬೇಡಿ. ವಿಷಯ ನಮ್ಮ ಸಂಬಳದ್ದು. ಸಂಬಳ ಅಂದರೆ ಸ್ಯಾಲೇರಿಯಮ್ - ಅಂದರೆ ಅದೇ ವೇತನವೆಂದು ಮುಂಚೆ ಕೊಡುತ್ತಿದ್ದರಲ್ಲಾ, ಸಾಮಾನ್ಯ ಉಪ್ಪು.
ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬುದೊಂದು ಗಾದೆ. ಅಡುಗೆ ಕೆಲಸಗಳಿಗೆ ಅಗತ್ಯವಾಗಿ ಬೇಕಾಗಿರುವ ಉಪ್ಪಿನ ಉಪಯೋಗಗಳು ಹಲವಾರು. ಇವುಗಳ ಬಗ್ಗೆ ನನಗಂತೂ ಗೊತ್ತೇ ಇರಲಿಲ್ಲ. ತಮಗೂ ಇದು ಹೊಸತೆಂದು ಅನ್ನಿಸಿದರೆ ಅನಿಸಿಕೆಗಳನ್ನು ಕನ್ನಡಧ್ವನಿಯೊಂದಿಗೆ ಹಂಚಿಕೊಳ್ಳುವಿರಲ್ಲ.
1)ಒಂದು ವೇಳೆ ನೆಲದ ಮೇಲೆ ಮೊಟ್ಟೆ ಬಿದ್ದು ಕಲೆಯಾದರೆ ಕೊಂಚ ಉಪ್ಪನ್ನು ಆ ಕಲೆಯ ಮೇಲೆ ಉದುರಿಸಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಬಿಡಿ. ಬಳಿಕ ಈ ಕಲೆ ಸುಲಭವಾಗಿ ತೆಗೆಯಲು ಬರುತ್ತದೆ.
2)ದುಂಬಿ ಕಡಿದು ಉರಿಯುತ್ತಿದ್ದರೆ ಕೊಂಚ ಉಪ್ಪು ಸವರಿದರೆ ಶಮನ ದೊರೆಯುತ್ತದೆ.
3)ಗ್ರೀಸ್ ಅಥವಾ ತೈಲಕ್ಕೆ ಬೆಂಕಿಹತ್ತಿ ಉರಿಯುತ್ತಿದ್ದರೆ ನೀರು ಹಾಕಿ ನಂದಿಸಲು ಹೋಗಬೇಡಿ. ತೈಲ ನೀರಿನ ಮೇಲೆ ತೇಲುವುದರಿಂದ ಬೆಂಕಿ ಇನ್ನಷ್ಟು ಉಲ್ಪಣಗೊಳ್ಳುವ ಸಾಧ್ಯತೆಯಿದೆ. ಬೆಂಕಿಯ ಮೇಲೆ ಉಪ್ಪನ್ನು ಸುರಿದು ನಂದಿಸುವುದು ಸುಲಭ.
4)ಒಂದು ವೇಳೆ ಓವನ್ ಒಳಗೆ ಆಹಾರವುಕ್ಕಿ ಒಳಭಾಗ ಕಲೆಯಾಗಿ ಹೊಗೆಯುಕ್ಕುತ್ತಿದ್ದರೆ ಆ ಭಾಗದ ಮೇಲೆ ಉಪ್ಪು ಸುರುವಿ ಕೊಂಚ ಕಾಲ ಹಾಗೇ ಬಿಡಬೇಕು. ಒಳಭಾಗ ತಣ್ಣಗಾದ ಬಳಿಕ ಈ ಕಲೆಯನ್ನು ಸುಲಭವಾಗಿ ತೆಗೆಯಬಹುದು.
5)ಬಟ್ಟೆಯಲ್ಲಿ ಬಣ್ಣ ಹೋಗುತ್ತದೆಂಬ ಅನುಮಾನವಿದ್ದರೆ ಅರ್ಧ ಗ್ಯಾಲನ್ ನೀರಿಗೆ ಅರ್ಧ ಕಪ್ ವಿನೆಗರ್ ಮತ್ತು ಅರ್ಧ ಕಪ್ ಉಪ್ಪನ್ನು ಸೇರಿಸಿ ದ್ರಾವಣವನ್ನು ತಯಾರಿಸಿ. ಬಟ್ಟೆಯನ್ನು ಈ ನೀರಿನಲ್ಲಿ ಅದ್ದಿದಾಗ ಬಣ್ಣ ಬಿಟ್ಟರೆ ಬಟ್ಟೆ ಹೆಚ್ಚು ಬಣ್ಣ ಬಿಡುತ್ತಿತ್ತೆಂದು ಅರ್ಥ. ಇನ್ನೂ ಕೊಂಚ ಹೆಚ್ಚು ಕಾಲ ಮುಳುಗಿಸಿ ಹಿಂಡಿ. ನಂತರದ ಒಗೆತಗಳಲ್ಲಿ ಹೆಚ್ಚು ಬಣ್ಣ ಹೋಗದೇ ಹೆಚ್ಚು ಬಾಳಿಕೆ ಬರುತ್ತದೆ. ಈ ಕ್ರಮ ಅನುಸರಿಸದೇ ಇದ್ದರೆ ಪ್ರತಿ ಒಗೆತದಲ್ಲೂ ಬಣ್ಣ ಬಿಡುವುದೇ ಅಲ್ಲದೇ ಇತರ ಬಟ್ಟೆಗಳಿಗೂ ಬಣ್ಣ ಹಬ್ಬಿಸುತ್ತದೆ.
6)ಗಿಡಗಳಿಗೆ ಹಬ್ಬುವ ಕೀಟಗಳನ್ನು ದೂರವಿರಿಸಲು ಒಂದು ಗ್ಯಾಲನ್ ನೀರಿಗೆ ಕೊಂಚ ಸೋಪು ಮತ್ತು ಉಪ್ಪನ್ನು ಸೇರಿಸಿ ಗಿಡಗಳ ಕಾಂಡ ಹಾಗೂ ಎಲೆಗಳ ಮೇಲೆ ಸಿಂಪಡಿಸಬೇಕು. ಆಗ ಗಿಡಗಳ ಮೇಲೆ ಕೀಟಗಳು ಹತ್ತುವುದಿಲ್ಲ
7)ಒಂದು ಚಿಕ್ಕ ಪಾತ್ರೆಯಲ್ಲಿ ಮುಕ್ಕಲು ಪಾಲು ನೀರು ತುಂಬಿಸಿ ಎರೆಡು ಟೀಚಮಚ ಉಪ್ಪು ಸೇರಿಸಿ. ಈ ನೀರಿನಲ್ಲಿ ತಾಜಾ ಮೊಟ್ಟೆ ಮುಳುಗುತ್ತದೆ. ಅದೇ ಕೊಳೆತ ಅಥವಾ ಕೊಳೆಯಲು ಪ್ರಾರಂಭವಾಗಿರುವ ಮೊಟ್ಟೆ ತೇಲುತ್ತದೆ ಅಥವಾ ಅರ್ಧಮಟ್ಟದಲ್ಲಿರುತ್ತದೆ.
8)ಮನೆಯ ಗೋಡೆಗಳ ಬಿರುಕು ಅಥವಾ ಸಂದಿಗಳಲ್ಲಿ ಹುಲ್ಲು ಬೆಳೆದು ಸೌಂದರ್ಯ ಕೆಡಿಸುತ್ತಿದ್ದರೆ ತೆಗೆದಷ್ಟೂ ಬೆಳೆಯುವುದರಿಂದ ಆ ಬಿರುಕಿನಲ್ಲಿ ಕೊಂಚ ಉಪ್ಪು ತುಂಬಿಸಿ ಕೊಂಚ ಬಿಸಿನೀರು ಸುರುವಿದರೆ ಮತ್ತೆ ಆ ಬಿರುಕಿನಲ್ಲಿ ಹುಲ್ಲು ಅಥವಾ ಕಳೆ ಬೆಳೆಯುವುದಿಲ್ಲ.
9)ವಾಶಿಂಗ್ ಮಶೀನ್ ಮೇಲ್ಭಾಗದಲ್ಲಿ ಸಾಬೂನಿನ ನೊರೆ ಒಣಗಿ ಗಟ್ಟಿಯಾಗಿ ಉಳಿದುಕೊಂಡಿದ್ದರೆ ಚಾಕು ಅಥವಾ ಚಮಚದಲ್ಲಿ ಕೆರೆದರೆ ಹೋಗುತ್ತದಾದರೂ ಗೆರೆಗಳು ಬೀಳುವ ಸಂಭವವಿರುತ್ತದೆ. ಅದರ ಬದಲಿಗೆ ಕೊಂಚ ಉಪ್ಪುನೀರನ್ನು ಚಿಮುಕಿಸಿ ಸ್ವಲ್ಪ ಕಾಲದ ಬಳಿಕ ಬಟ್ಟೆಯಲ್ಲಿ ಒರೆಸಿದರೆ ಗೆರೆಗಳಿಲ್ಲದೇ ಸ್ವಚ್ಛಪಡಿಸಬಹುದಾಗಿದೆ.
10)ಕೃತಕ ಹೂವುಗಳನ್ನು ಸ್ವಚ್ಛಗೊಳಿಸಲು ಒಂದು ಪಾಲಿಥೀನ್ ಚೀಲದೊಳಕ್ಕೆ ಉಪ್ಪಿನ ಪುಡಿಯನ್ನು ತುಂಬಿಸಿ ಕೃತಕ ಹೂವುಗಳನ್ನು ತಲೆಕೆಳಗಾಗಿ ತುಂಬಿಸಿ ಚೀಲವನ್ನು ಒಂದು ದಾರದ ಮೂಲಕ ಕಟ್ಟಬೇಕು. ಬಳಿಕ ಉಪ್ಪು ಎಲ್ಲಾ ಹೂವುಗಳ ಮೇಲೆ ಹಾದುಹೋಗುವಂತೆ ಚೆನ್ನಾಗಿ ಅಲುಗಾಡಿಸಬೇಕು. ಬಳಿಕ ತೆರೆದು ನೋಡಿದರೆ ಕೃತಕ ಹೂವಿನ ದಳಗಳ ಮೇಲಿನ ಧೂಳನ್ನು ಉಪ್ಪು ಮೆತ್ತಿಕೊಂಡು ಕೆಳಕ್ಕೆ ಬಿದ್ದಿರುವುದು ಕಂಡುಬರುತ್ತದೆ. ಕೃತಕ ಹೂವು ಕೊಂಡಾಗ ಇದ್ದಷ್ಟೇ ಹೊಸತಾಗಿ ಕಾಣುವುದು
11) ತಾಮ್ರದ ಪಾತ್ರೆಗಳನ್ನು ಹೊಳೆಯುವಂತೆ ಮಾಡಲು ಒಂದು ಲೀಟರ್ ಬಿಸಿನೀರಿಗೆ ಒಂದು ಚಮಚ ವಿನೆಗರ್ ಮತ್ತು ಮೂರು ಟೇಬಲ್ ಚಮಚ ಉಪ್ಪನ್ನು ಸೇರಿಸಿ ಮಾಡಿದ ದ್ರಾವಣವನ್ನು ಸಿಂಪಡಿಸಬೇಕು. ಕೊಂಚ ಕಾಲ ಕಳೆದ ನಂತರ ಒಣಗಿದ ಲೇಪನವನ್ನು ಹತ್ತಿ ಅಥವಾ ಹತ್ತಿಯ ಬಟ್ಟೆಯಿಂದ ಒರೆಸಿ ತೆಗೆದರೂ ಸ್ವಾಭಾವಿಕ ಹೊಳಪು ಬರುತ್ತದೆ. ಆದರೆ ಈ ವಿಧಾನ ತಾಮ್ರದ ಲೇಪನ ಮಾಡಿರುವ ಇತರ ಲೋಹಗಳಿಗೆ ಒಳ್ಳೆಯದಲ್ಲ
12)ಮನೆಯ ಕೈತೋಟದಲ್ಲಿ ಕ್ಯಾರೆಟ್ (ಗಜ್ಜರಿ) ಬೆಳೆಯುವ ಯೋಚನೆಯಿದ್ದರೆ ಗಜ್ಜರಿಯ ಗಡ್ಡೆಗಳನ್ನು ನೆಡುವ ಮುನ್ನ ಉಪ್ಪಿನ ಪುಡಿಯನ್ನು ಎಲ್ಲಾ ಕಡೆ ತಗಲಿಸಿ ನೆಟ್ಟರೆ ಗಡ್ಡೆಗಳನ್ನು ಹುಳಗಳು ತಿನ್ನುವುದಿಲ್ಲ.
13) ಸಿರಾಮಿಕ್ ಕಪ್ ಸಾಸರ್ ಗಳು ಕಾಫಿ ಕಲೆಯಿಂದ ಕಪ್ಪಾಗಿದ್ದರೆ ಉಪ್ಪಿನಿಂದ ಉಜ್ಜಿದರೆ ಕಲೆಗಳು ಗೆರೆ ಉಳಿಸದೇ ಮಾಯವಾಗುತ್ತವೆ.
14)ಆಲುಗೆಡ್ಡೆ ಮತ್ತು ಸೇಬುಹಣ್ಣು ಕತ್ತರಿಸಿದ ಕೊಂಚಕಾಲದಲ್ಲೇ ಕಪ್ಪಾಗುತ್ತವೆ. ಅತಿಥಿಗಳು ಅವುಗಳನ್ನು ಸ್ವೀಕರಿಸಲು ಕೊಂಚ ತಡಮಾಡಿದರೂ ಕಪ್ಪಾಗುವುದು ಹೆಚ್ಚಾಗಿ ಮುಜುಗರ ಉಂಟಾಗುವುದನ್ನು ತಡೆಯಲು ತಣ್ಣೀರಿನಲ್ಲಿ ಕೊಂಚ ಉಪ್ಪು ಸೇರಿಸಿ ಆ ನೀರಿನಲ್ಲಿ ಸೇಬು ಅಥವಾ ಆಲುಗೆಡ್ಡೆಗಳನ್ನು ಅದ್ದಿ ತೆಗೆದರೆ ತುಂಬಾ ಹೊತ್ತು ಕಪ್ಪಾಗದೇ ಉಳಿಯುತ್ತದೆ. ರುಚಿಯಲ್ಲೂ ಬದಲಾವಣೆ ಕಂಡುಬರುವುದಿಲ್ಲ.
15)ಆಹಾರ ಕತ್ತರಿಸುವ ಹಲಗೆ (ಚಾಪಿಂಗ್ ಬೋರ್ಡ್) ಅತಿಹೆಚ್ಚು ಕಲೆಯಾಗಿದ್ದರೆ ಬ್ಲೀಚಿಂಗ್ ಪೌಡರ್ ಮತ್ತು ಉಪ್ಪಿನ ಮಿಶ್ರಣವನ್ನು ಅದಕ್ಕೆ ಲೇಪಿಸಿ ಒಂದು ಘಂಟೆ ಕಾಲ ಇಡಬೇಕು. ಬಳಿಕ ಗಟ್ಟಿ ಬ್ರಶ್ ಬಳಸಿ ಉಜ್ಜಿ ಬಿಸಿನೀರಿನಲ್ಲಿ ತೊಳೆದರೆ ಕಲೆಗಳು ಮಾಯವಾಗುತ್ತವೆ.
ಕೊನೆಯದಾಗಿ ಒಂದು ಮ್ಯಾಜಿಕ್
ನೂಲಿನಿಂದ ಎತ್ತಬಹುದಾದ ಮಂಜು ಗಡ್ಡೆ
ಒಂದು ಮಂಜುಗಡ್ಡೆಯನ್ನು ತಟ್ಟೆಯಲ್ಲಿರಿಸಿ. ಸುಮಾರು ಒಂದು ಅಡಿ ಉದ್ದದ ನೂಲೊಂದನ್ನು ಮಂಜುಗಡ್ಡೆಯ ಮೇಲಿರಿಸಿ ಮಂತ್ರ ಪಠಿಸಿ ಎತ್ತಿದರೆ ಮಂಜುಗಡ್ಡೆ ನೂಲಿಗೆ ಅಂಟಿಕೊಂಡು ಮೇಲೆದ್ದು ಬರುತ್ತದೆ.
ಟ್ರಿಕ್: ಮಂತ್ರ ಹೇಳುವ ನೆಪದಲ್ಲಿ ಕೈಯಲ್ಲಿ ಅಡಗಿಸಿದ್ದ ಉಪ್ಪಿನ ಪುಡಿಯನ್ನು ನೂಲು ಮಂಜುಗಡ್ಡೆಗೆ ತಾಕಿರುವ ಸ್ಥಳದಲ್ಲಿ ಸಿಂಪಡಿಸಿ. ಸುಮಾರು 15-20 ಸೆಕೆಂಡ್ ಬಿಟ್ಟರೆ ಉಪ್ಪು ಮುಂಜುಗಡ್ಡೆಯಲ್ಲಿ ಕರಗಿ ಧೃಢವಾಗುತ್ತದೆ. ತನ್ನೊಂದಿಗೆ ನೂಲನ್ನೂ ಅಂಟಿಸಿಕೊಂಡುಬಿಡುತ್ತದೆ.









Shriyuta Arshadravarige
Shriyuta Arshadravarige Vandanegalu. Uppiginta ruchi-illa lekhana bahala chennnagi barediddiri. oodida pratiyobbareegu upayoogavaguva vishayavannu tilisiddiri.