- ಅರ್ಶದ್ ಹುಸೇನ್ ಎಂ.ಹೆಚ್. ಶಾರ್ಜಾ
ನೆಲ ಕೆದಕಿ ಮೂಳೆ ಹುಡುಕುವುದು ನಾಯಿಯ ಜನ್ಮಸಿದ್ಧ ಹಕ್ಕು. ನೆಲದೊಳಕ್ಕೆ ಅವಿತಿರುವ ಮೂಳೆಗಳನ್ನು ಮಾತ್ರ ಅಗೆಯುತ್ತಿರುತ್ತದೆ ಎಂದು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ಅಮೇರಿಕಾದ ವರ್ಸೆಲ್ಲೀಸ್ ಎಂಬಲ್ಲಿ ಅದು ನೆಲ ಅಗೆದು ನೈಸರ್ಗಿಕ ಅನಿಲದ ಬಾವಿಯ ತುದಿಯನ್ನು ತನ್ನ ಮಾಲಿಕನಿಗೆ ತೋರಿಸಿಕೊಟ್ಟಿದೆ.
ಅಮೇರಿಕದ ಪಿಟ್ಸ್ ಬರ್ಗ್ ನಿಂದ ಸುಮಾರು ಇಪ್ಪತ್ತೈದು ಮೈಲಿ ದೂರದಲ್ಲಿರುವ ವರ್ಸೆಲ್ಲೀಸ್ ಎಂಬ ಊರು ಸುಮಾರು ೧,೭೦೦ ಜನವಸತಿಯಿರುವ ಪ್ರದೇಶ. ಇದೇ ಊರಿನ ಆಡಂ ಬೋರೋಲ್ಲಿ ಎಂಬುವರ ನಾಯಿಯೊಂದು ನೆಲ ಅಗಿದು ಹೊಂಡ ಮಾಡಿಟ್ಟಿತ್ತು. ಕೊಂಚ ಕಾಲ ಕಳೆದ ಬಳಿಕ ಅದರಲ್ಲಿ ನೀರು ತುಂಬಿಕೊಂಡಿದ್ದು ನೆಲದಾಳದಿಂದ ಗಾಳಿಯ ಗುಳ್ಳೆಗಳು ಮೇಲಕ್ಕೇರುತ್ತಿದ್ದವು. ಕುತೂಹಲದಿಂದ ಗಾಳಿಯ ವಾಸನೆ ಆಘ್ರಾಣಿಸಿದಾಗ ಯಾವುದೋ ಸೀಮೆಯೆಣ್ಣೆಯಂತಹ ವಾಸನೆಯಂತಿತ್ತು. ಅವಾಕ್ಕಾಗಿ ಲೈಟರ್ ಹಚ್ಚಿ ನೋಡಿದರೆ ಆ ಅನಿಲ ಹತ್ತಿ ಉರಿಯುತ್ತಿತ್ತು.
ಇದೇನೋ ಅಪಾಯಕಾರಿಯಾಗಿರಬಹುದೆಂದು ಆಡಂ ಅವರು ಕೂಡಲೇ ಗ್ಯಾಸ್ ಕಂಪನಿಯೊಂದನ್ನು ಸಂಪರ್ಕಿಸಿ ಇದರ ವಿಶ್ಲೇಷಣೆ ನಡೆಸಬೇಕೆಂದು ಕೋರಿಕೊಂಡರು. ಗ್ಯಾಸ್ ಕಂಪನಿಯ ತಜ್ಞರು ಬಂದು ಅನಿಲದ ತಪಾಸಣೆ ನಡೆಸಿದಾಗ ದೊರಕಿದ ಫಲಿತಾಂಶ ಕುತೂಹಲಕಾರಿಯಾಗಿತ್ತು. ನೆಲದಾಳದಿಂದ ಹೊರಹೊಮ್ಮುತ್ತಿರುವುದು ಅಪ್ಪಟ ಮೀಥೇನ್ ಅನಿ ಎಂದು ಅದು ಸ್ಪಷ್ಟಪಡಿಸಿತು. ಬಳಿಕ ವಿಷಯವನ್ನು ಯು.ಎಸ್. ಪರ್ಯಾವರಣ ಸಂರಕ್ಷಣಾ ಇಲಾಖೆಗೆ ತಿಳಿಸಲಾಯಿತು. ಇಲಾಖೆಯು ಈ ವಿಷಯದ ಕೂಲಂಕುಶ ತನಿಖೆ ನಡೆಸಲು ಇಕ್ವಿಟೆಬಲ್ ಗ್ಯಾಸ್ ಎಂಬ ಸಂಸ್ಥೆಯ ತಜ್ಞರ ತಂಡವೊಂದನ್ನು ವರ್ಸೇಲಿಸ್ ಊರಿಗೆ ಕಳುಹಿಸಿತು. ತಂಡ ತನಿಖೆ ನಡೆಸಿದಾಗ ಹೊರಬಿದ್ದ ವಿಷಯಗಳು ಇನ್ನಷ್ಟು ಕುತೂಹಲಕಾರಿಯಾಗಿವೆ.
ಅವರ ವರದಿಯ ಪ್ರಕಾರ ಈ ಊರಿನಲ್ಲಿ ಹಿಂದೆ ಸುಮಾರು ೧೯೧೯ ರಿಂದ ೧೯೨೧ ರ ಅವಧಿಯಲ್ಲಿ ತೈ ಸಿಗುತ್ತದೆಯೋ ಎಂದು ಹಲವಾರು ಕಡೆಗಳಲ್ಲಿ ನೇರ ಕೊಳವೆ ಬಾವಿಗಳನ್ನು ಕೊರೆದು ಪರೀಕ್ಷೆ ಮಾಡಲಾಗಿತ್ತು. ಸುಮಾರು ೧೭೫ ಕಡೆಗಳಲ್ಲಿ ಕೊರೆದು ಪರೀಕ್ಷಿಸಿದ್ದರೂ ಯಾವುದೇ ಫಲಿತಾಂಶ ದೊರಯದಿರುವುದರಿಂದ ಇದು ಬಂಜೆ ಭೂಮಿಯೇ ಎಂದು ತೀರ್ಮಾನಿಸಿ ಹಾಗೇ ಬಿಟ್ಟು ಹೋಗಿದ್ದರು. ಕಾಲಕ್ರಮೇಣ ಈ ಕೊಳವೆಬಾವಿಗಳ ತುದಿ ಮಳೆ, ಮರಳು, ಮಣ್ಣಿನಿಂದ ಮುಚ್ಚಿಹೋದವು. ಊರು ಬೆಳೆದಂತೆ ಹಲವು ಮನೆಗಳು ಈ ಸ್ಥಳಗಳ ಮೇಲೆಯೇ ಕಟ್ಟಲ್ಪಟ್ಟವು. ಆಡಂ ಅವರ ಮನೆಯೂ ಅಂತಹದ್ದೇ ಮನೆಯಲ್ಲೊಂದು.
ಭೂಮಿಗೆ ತನ್ನನ್ನು ಬಂಜೆಯೆಂದು ಕರೆದಿದ್ದು ಸರಿಕಾಣಲಿಲ್ಲವೋ ಏನೋ, ತನ್ನೊಡಲಿನಿಂದ ನೈಸರ್ಗಿಕ ಅನಿಲವನ್ನು ಸರಾಗವಾಗಿ ಹರಿಯಬಿಟ್ಟಳು. ಆದರೆ ಕೊಳವೆಗಳ ತುದಿಗಳು ಬಂದ್ ಆಗಿದ್ದರಿಂದ ಹಾಗೆಯೇ ಉಳಿದುಬಿಟ್ಟಿತ್ತು. ಸುಮಾರು ಎಂಭತ್ತೊಂಭತ್ತು ವರ್ಷಗಳ ಬಳಿಕ ಆಡಂ ಅವರ ನಾಯಿ ಇಂತಹ ಒಂದು ಕೊಳವೆಯ ತುದಿಯನ್ನು ಅನಾವರಣಗೊಳಿಸಿತ್ತು. ಆಡಂ ಅವರು ಈ ಸ್ಥಳವನ್ನು ತನ್ನ ಸಹೋದರಿಯಿಂದ ೨೦೦೧ ರಲ್ಲಿ ಪಡೆದುಕೊಂಡಿದ್ದಾಗ ಸಮೀಕ್ಷೆ ನಡೆಸಿದ್ದ ಸಂಸ್ಥೆ ಈ ಪ್ರದೇಶ ಯಾವುದೇ ರೀತಿಯ ವಾಯುಮಾಲಿನ್ಯದಿಂದ ಮುಕ್ತವಾಗಿದೆ ಎಂದು ಘೋಷಿಸಿತ್ತು.
ಬಳಿಕ ಯು.ಎಸ್. ಪರ್ಯಾವರಣ ಸಂರಕ್ಷಣಾ ಇಲಾಖೆ ಆಧುನಿಕ ಉಪಕರಣಗಳ ಸಹಾಯದಿಂದ ಈ ಪ್ರದೇಶದ ಒಡಲಿನ ಸಮೀಕ್ಷೆ ನಡೆಸಿ ಇಲ್ಲಿ ನೈಸರ್ಗಿಕ ಅನಿಲದ ಭಂಡಾರವಿದೆ ಎಂದು ಸ್ಪಷ್ಟಪಡಿಸಿತು. ಅಂದು ಕೊರೆದಿದ್ದ ಹಲವಾರು ಬಾವಿಗಳನ್ನೂ ಪತ್ತೆ ಹಚ್ಚಿ ಒಂದು ಪೈಪು ಅಳವಡಿಸಿ ಮುಚ್ಚಳ ಮುಚ್ಚಿ ಬಂದೋಬಸ್ತು ಮಾಡಿದೆ.
ನಾಯಿಯ ಕೆದಕುವಿಕೆಯಿಂದ ಆಡಂ ಸಹಿತ ಊರಿನವರೆಲ್ಲಾ ಧಿಡೀರ್ ಶ್ರೀಮಂತರಾಗಿದ್ದಾರೆ. ನಿಮ್ ಹಿತ್ತಲಲ್ಲೂ ನಾಯಿ ಏನಾದರೂ ಕೆದಕುತ್ತಿದ್ದರೆ ಇನ್ನು ಮೇಲೆ ಉಪೇಕ್ಷೆ ಬೇಡ, ಯಾರಿಗೆ ಗೊತ್ತು, ಹಿಂದಿನವರು ಹೂತಿದ್ದ ಖಜಾನೆ ದೊರಕಿದರೂ ದೊರಕೀತು. ಗುಟ್ಟು ಹೇಳಿದ ನನಗೆ ಮಾತ್ರ ಒಂದು ಪಾಲು ನೀಡಲು ಮರೆಯದಿರಿ.
ಆಧಾರ: ಪೋಸ್ಟ್ ಗೆಜೆಟ್. ಕಾಮ್








