ಆ ಮನೆ...
- ದತ್ತಾ ಹೆಗಡೆ
ಆ ಮನೆಯ ಬಾಗಿಲಲಿ ಚೆ೦ದದ ಚಿತ್ತಾರ,
ರ೦ಗೋಲಿಯೋ, ಜಲವರ್ಣಚಿತ್ರವೋ
ಅರಿಯೆನು ನಾ, ಅದು ನನ್ನ ಅಜ್ಞಾನ!
ಹೆಬ್ಬಾಗಿಲು, ಹಿ೦ಬಾಗಿಲು ನಡುವೆ
ಎರಡೋ, ಮೂರೋ ಕೋಣೆಗಳು..
ಕತ್ತಲ ನಡುವೆ ಅಲ್ಲಲ್ಲಿ ಬೆಳಕು ತೂರುವ ತಾಣ
ಹಿ೦ದೊ೦ದು ಅ೦ಗಳ, ಬದಿಗೊ೦ದು ಕೊಟ್ಟಿಗೆ,
ಮಕ್ಕಳ, ಆಕಳ, ಕೇಕೆ ಆಟದಾಣ
ತಣ್ಣನೆ ಖುಷಿ ನೀಡುವ ಸಿ೦ಚನ
ಮು೦ದೊ೦ದು ದೊಡ್ಡ ತೋಟ,
ಕನ್ನಡದ ಮೇರು ಕವಿಗಳ ಕಾವ್ಯಗಳಲಿ ಸುಳಿವ-
- ಹಸಿರು ಹಾಗು ಎಲ್ಲ ಬಣ್ಣ ಅಲ್ಲಿ
ಬಹುಶ: ನನ್ನ ಜೀವಕೆ ತು೦ಬಿದ
ಉಸಿರಿನ ಹುಟ್ಟಿನ ತಾಣ
ಹೊಟ್ಟೆ ಪಾಡು ಹುಡುಕಿ ನಡೆವ ನಮ್ಮ,
ಆಗೀಗ ಹಿ೦ತಿರುಗಿ ನೋಡುವ ನಮ್ಮೂರು, ನಮ್ಮ ಮನೆ,
ಅದೇ ದೃಶ್ಯಕಾವ್ಯ ಇನ್ನೊಮ್ಮೆ ನೋಡಿದ೦ತೆ!
ಋಣ ಮಾತ್ರ ಬದುಕಿನೊ೦ದಿಗೇ ಮುಗಿಯಬೇಕೇನೋ!!!








