- ನಿಶಿ (nishi)
ಭಾವನೆಗಳ ಉನ್ಮಾದ
ಶಿಖರಕ್ಕೇರಿ ಮುಗಿಲಿಗೆಟುಕುತ್ತವೆ
ಒಮ್ಮೊಮ್ಮೆ ನನ್ನಾತ್ಮ ಸಖನಿಗೆ
ಹೀಗಾಗಿತ್ತು ಮತ್ತೊಮ್ಮೆ
ಮೊನ್ನೆ ತಾನೆ ಕಳೆದ ವ್ಯಾಲೆಂಟೈನ್ಸ್ ದಿನದಂದು
"ಮತ್ತೆ ಯೌವನ ಬಂದಂತೆನ್ನಿಸುತ್ತದೇನು ನಿನಗೆ" ?
ಕೇಳಿದಾತ ನನ್ನನು
ಹೇಳಬೇಕೆನಿಸಿತೆನಗಾಗ
"ಬೇಡ ಮಹಾರಾಯ -- ನನಗಾದಿನಗಳು,
ಕೊಂಡೊಯ್ಯಬೇಡ ನನ್ನಾ ದಿನಗಳಿಗೆ
ಬಗೆ ಹರಿಯದ ತೊಳಲಾಟ
ನಿರಂತರ ತಕಲಾಟ
ನನಗೀಗ ಹಿತ, ಈ ಬೆಚ್ಚನೆ ಸುರಕ್ಷತೆ--"
ಗುಂಯಂಗುಟ್ಟುವ ವಿಚಾರಗಳು ತಲೆಯಲಿ
ಬಾಯ್ತೆರೆದು ಹೇಳಲಿಲ್ಲ ಮಾತ್ರ
ಅಂತರಿಕ್ಷದಿಂದವನ ಧರೆಗೆಳೆಯಲು
ಮನಬಾರದಾಯಿತಾಗ.









