ಫುಟ್ ಪಾತಿನಲ್ಲಿ ನಾನು
-ಗುರು ಬಬ್ಬಿಗದ್ದೆ
ಮಲಗಿದ್ದೆ ಫುಟಪಾತಿನಲ್ಲಿ ಇದ್ದ ಹಾಗೆ ಮಣ್ಣು
ನಿದ್ರೆಗೆ ಜಾರಿತ್ತು ಮುಚ್ಚಿತ್ತು ಕಣ್ಣು
ಆ ದಿನ ರಾತ್ರಿಯಲಿ ನಾ ಕನಸಿನಲ್ಲಿದ್ದೆ
ಎಲ್ಲಿದ್ದೆ ಹೇಗಿದ್ದೆ ನಾನರಿಯದಾಗಿದ್ದೆ ೧
ಹೋಗಿದ್ದೆ ಇಂದ್ರನ ಅರಮನೆಯ ಕಡೆಗೆ
ಸಪ್ತರ್ಷಿಗಳೆಲ್ಲ ಬಂದರು ನನ್ನೆಡೆಗೆ
ಕಟ್ಟಿದರು ಇಂದ್ರನಿಗೆ ಸ್ವರ್ಗದಿಂದಲೇ ಚಟ್ಟ
ಮಾಡಿದರು ನನ್ನನ್ನೇ ಇಂದ್ರನ ಪಟ್ಟ ೨
ಸಾಗಿತ್ತು ದಿನ ದಿನವೂ ಸಂತೋಷದಲ್ಲಿ
ರಂಭೆ ಉರ್ವಶಿಯರ ನವಿಲ ನಾಟ್ಯದಲ್ಲಿ
ದಿನವೊಂದು ಮುರ್ನಾಲ್ಕು ವರ್ಷಗಳೇ ಸರಿಯೆ
ರಾಕ್ಷಸರ ಆಗಮನ ಎಂದು ನಾನರಿಯೆ ೩
ಶುರುವಾಯಿತು ಯುದ್ಧದ ಕಹಳೆಯ ಛಾಯೆ
ಸ್ವರ್ಗಕ್ಕೆ ಬಂದದ್ದು ಇದಕಾಗಿಯೇ
ನಿರ್ಧರಿಸಿದೆ ಮನದಲ್ಲಿ ನನ್ನಯಾ ಜನ್ಮ
ಎಲ್ಲಕಿಂತ ಭೂಮಿಯಲ್ಲಿಯೇ ಚೆನ್ನ ೪
ವಾಹನಗಳ ಕಿರುಚಾಟಕೆ ಬಂದಿದ್ದೆ ವಾಸ್ತವಕೆ
ಅನಿಸಿತ್ತು ನನಗೆ ನಾನೊಂದು ಕಸಪೊರಕೆ |








