ಗುಂಡಿನ ಮತ್ತೇ ಆಪತ್ತು...
3248972922.jpg

- ಅರ್ಶದ್ ಹುಸೇನ್ ಎಂ.ಹೆಚ್.


 ದಕ್ಷಿಣ ಕನ್ನಡದ ಆಟ (ಯಕ್ಷಗಾನ) ಬಂದರೆ ಮಲೆನಾಡಿನವರಿಗೊಂದು ನಿದ್ದೆಯಿಲ್ಲದ ರಾತ್ರಿ. ಆಟ ಉಂಟು ಎಂದು ಸುದ್ದಿ ಸಿಕ್ಕಾಕ್ಷಣ ಆಟ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಪಟ್ಟಣಕ್ಕೆ ಸಂಜೆಯಾಗುತ್ತಿದ್ದಂತೆ ಜಮಾಯಿಸಿ ಸರಿರಾತ್ರಿಯವರೆಗೂ ಆಟ ನೋಡಿ ಬಳಿಕ ನಡೆದೇ ಹಿಂತಿರುಗಿ ಹೋಗಿ ಒಂದು ಇಡೀ ದಿನ ಗಡದ್ದು ನಿದ್ದೆ ತೆಗೆಯುವುದು ಹಳೆಯ ಸಂಪ್ರದಾಯ.

 ಸಾಧಾರಣ ಆಟದ ಬಗ್ಗೆ ಸಂತೆಯಲ್ಲಿ ಸುದ್ದಿ ಸಿಗುವುದರಿಂದ ಹೆಚ್ಚಿನ ಆಟದವರು ಸಂತೆಯ ಮರುದಿನ ಅಥವಾ ಅದರಮರುದಿನವಿಡುವುದು ವಾಡಿಕೆ. ಆಟದ ಮರುದಿನ ಹಲವಾರು ಗದ್ದೆ ತೋಟಗಳಲ್ಲಿ ಕೂಲಿಗಳ ಹಾಜರಿ ಅರ್ಧಕ್ಕಿಂತಲೂ ಕಡಿಮೆ.

 ಒಮ್ಮೆ ಹೀಗೇ ನಮ್ಮೂರಲ್ಲೊಂದು ದಕ್ಷಿಣ ಕನ್ನಡದ ಆಟ ಬಂದಿತ್ತಂತೆ. (ನಮ್ಮ ನಾಗಪ್ಪಣ್ಣ ಹೇಳಿದ್ದ ವಿಷಯ ಇದು) ಕೊಪ್ಪದಿಂದ ಸುಮಾರು ಹತ್ತು ಮೈಲಿ ದೂರದ ಹಳ್ಳಿಯಿಂದ ಇಬ್ಬರು ಆಟ ನೋಡಲು ಬಂದಿದ್ದರು. ದಾರಿಯಲ್ಲಿ ತಿನ್ನುವಾ ಅಂತ ಒಂದಿಷ್ಟು ಗೆಣಸು ಜೊತೆಯಲ್ಲಿಯೇ ತಂದಿದ್ದರು. ಪೇಟೆ ಹತ್ತಿರ ಬರುತ್ತಿದ್ದಂತೆ ಕೆಲವರು ರಾತ್ರಿ ಚಳಿಗೆ ಒಂದಿಷ್ಟು ಕುಂಟೆಗೆ ಬೆಂಕಿಹಾಕಿ ಚಳಿ ಕಾಯಿಸುತ್ತಾ ಕುಳಿತಿದ್ದರು. ತಾವೂ ಒಂಚೂರು ಚಳಿ ಕಾಸಿಕೊಂಡು ಮುಂದೆ ಹೋಗುವಾ ಎಂದು ತಾವೂ ಬೆಂಕಿಯ ಬಳಿ ಕುಳಿತರು. ಅವರಲ್ಲೊಬ್ಬನಿಗೆ ಗೆಣಸನ್ನು ಬೆಂಕಿಯಲ್ಲಿ ಸುಟ್ಟು ತಿಂದರೆ ಹೇಗೆ ಎಂದು ಉಪಾಯ ಬಂದಿತ್ತು. ಸರಿ, ಇಬ್ಬರೂ ಈಗ ಗೆಣಸನ್ನು ಕುಂಟೆಗಳ ಅಡಿಯಲ್ಲಿಟ್ಟು ಹೋಗುವಾ, ಆಟ ನೋಡಿ ಹಿಂತಿರುಗಿ ಬರುವಾಗ ಚೆನ್ನಾಗಿ ಬೆಂದಿರುತ್ತದೆ, ಆಗ ಆರಾಮವಾಗಿ ತಿನ್ನಬಹುದೆಂದು ಎಣಿಸಿ ಕುಂಟೆಗಳ ಅಡಿಯಲ್ಲಿ ಬಿಟ್ಟು ಕೊಪ್ಪಕ್ಕೆ ಹೋದರು.

 ಅವರು ಆಚೆ ಹೋದ ಬಳಿಕ ಅಲ್ಲಿಯೇ ಯಾರದ್ದೋ ಮನೆಯಲ್ಲಿ ಹಾವೊಂದು ನುಗ್ಗಿತ್ತು. ಕೆಲವು ವೀರಾಗ್ರಣಿಗಳು ಧೈರ್ಯವಹಿಸಿ ಮನೆಯೊಳಕ್ಕೆ ನುಗ್ಗಿ ದೊಣ್ಣೆಯಿಂದ ಹಾವನ್ನು ಹೊಡೆದು ಹೊರತಂದಿದ್ದರು. ಹಾವನ್ನು ಹಾಗೆಯೇ ಬಿಸಾಡುವುದಕ್ಕಿಂತ ಕೊಂಚದೂರದಲ್ಲಿ ಕೆಲವು ದಾರಿಹೋಕರು  ಕುಂಟೆಗಳಿಗೆ ಬೆಂಕಿ ಹಾಕಿ ಚಳಿ ಕಾಯಿಸುತ್ತಿದ್ದುದನ್ನು ಕಂಡು ಹಾವನ್ನು ಅಲ್ಲಿ ಸುಟ್ಟರೇ ಒಳಿತು ಎಂದುಕೊಂಡು ಕೋಲಿನ ತುದಿಯಲ್ಲಿ ಎತ್ತಿಕೊಂಡು ತಂದಿದ್ದರು. ಬೆಂಕಿಯ ಬಳಿ ಬಂದಾಗ  ಹಾವು ಇನ್ನೂ ಮಿಸುಕಾಡುತ್ತಿದ್ದುದನ್ನು ಕಂಡ ದಾರಿಹೋಕನೊಬ್ಬ ಒಡ್ಯಾಣದಲ್ಲಿದ್ದ ಕತ್ತಿಯಿಂದ ಹಾವನ್ನು ಕತ್ತರಿಸಿ ಕತ್ತರಿಸಿ ಬೆಂಕಿಗೆಸೆದ. ಅಲ್ಲಿಗೆ ಹಾವಿನ ಇತಿಶ್ರೀ ಆಯಿತೆಂದು ಎಲ್ಲರೂ ನಿರಾಳವಾದರು.

 ಕೊಪ್ಪಕ್ಕೆ ಹೋದವರಿಬ್ಬರು ಆಟ ನೋಡುವ ಮುನ್ನ ಗಡಂಗಿಗೆ ಹೋಗಿ ಒಂದೆರೆಡು ದರಾಮು ಏರಿಸಿಕೊಂಡೇ ಬಂದಿದ್ದರು. ಆಟ ಒಳ್ಳೆಯ ಮಜಲು ಪಡೆಯುತ್ತಿದ್ದಂತೆ ಮಧ್ಯೆ ಮಧ್ಯೆ ಗಡಂಗಿಗೆ ಹೋಗಿ ಪೆಟ್ರೋಲು ಹಾಕಿಕೊಂಡು ಬರುವುದು ನಡೆದೇ ಇತ್ತು. ರಾತ್ರಿ ಸುಮಾರು ಎರೆಡು ಘಂಟೆಗೆ ಆಟ ನೋಡಿದ್ದು ಸಾಕು, ಮನೆಗೆ ಹೋಗೋಣವೆಂದು ಇಬ್ಬರೂ ಎದ್ದು ನೆಟ್ಟಗೆ ಊರಿಗೆ ಹೊರಟರು. ಸುಮಾರು ದೂರ ಬಂದಾಗ ಬೆಂಕಿ ಹಾಕಿದ್ದಲ್ಲಿ ತಾವು ಗೆಣಸು ಬೆಂಕಿಯಲ್ಲಿಟ್ಟದ್ದು ನೆನಪಾಗಿ ಗುಂಡಿನ ಮತ್ತಿನಲ್ಲಿದ್ದ ಇಬ್ಬರೂ ಬೆಂಕಿಯಿಂದ ಗೆಣಸನ್ನು ತೆಗೆದುಕೊಂಡು ತಿನ್ನುತ್ತಾ ಮನೆ ತಲುಪಿದ್ದರು.

 ಮರುದಿನ ಮಧ್ಯಾಹ್ನ ಎದ್ದವರಿಗೆ ಅಕ್ಕ ಪಕ್ಕದ ಇತರರು ಆ ಬೆಂಕಿಯಲ್ಲಿ ಹಾವನ್ನು ಎಸೆದಿದ್ದುದನ್ನು ಮಾತನಾಡಿಕೊಳ್ಳುತ್ತಿದ್ದುದು ಕೇಳಿತ್ತು. ದಿಗ್ಭ್ರಾಂತರಾಗಿ ಇಬ್ಬರೂ ಬೆಂಕಿಯಿದ್ದಲ್ಲಿ ಓಡಿದರು. ಸರಿಯಾಗಿ ನೋಡಿದರೆ ಗೆಣಸುಗಳು ಇಟ್ಟಲ್ಲಿಯೇ ಕರಟಿ ಕಪ್ಪಾಗಿ ಹೋಗಿದ್ದವು. ಹಾಗಾದರೆ ತಾವು ಪೆಟ್ರೋಲಿನ ಅಮಲಿನಲ್ಲಿ ತಿಂದದ್ದು ಏನು? ಇಬ್ಬರಿಗೂ ಅಲ್ಲಿಯೇ ಚಳಿಜ್ವರ ವಾಂತಿ ಶುರುವಾಗಿ ಆಸ್ಪತ್ರೆಗೆ ದಾಖಲು ಮಾಡಬೇಕಾಯ್ತು.

 ತಾವು ಹಾವು ತಿಂದಿದ್ದರಿಂದ ಹಾವಿನ ವಿಷದಿಂದ ಸಾಯುತ್ತೇವೆನ್ನುವ ಭಯದಿಂದಲೇ ಇಬ್ಬರೂ ಮಾನಸಿಕ ರೋಗಿಗಳಾಗಿ ಬಿಟ್ಟಿದ್ದರು. ಆದರೆ ಯಾರಿಗೂ ಹೇಳದ ವಿಷಯವನ್ನು  ಡಾಕ್ಟರು ನಯವಾಗಿ ತಿಳಿದುಕೊಂಡು  ನಿಮ್ಮ ಹೊಟ್ಟೆಯಲ್ಲೇನೂ ವಿಷ ಇಲ್ಲವೆಂದೂ, ಇದ್ದುದಲ್ಲೆವನ್ನೂ ಹೊರೆಗೆ ತೆಗೆಯಲಾಯ್ತೆಂದ ಬಳಿಕವೇ ಇಬ್ಬರೂ ನಿರಾಳವಾಗಿದ್ದು.

Syndicate

Syndicate content