ಕುಹಕವಾರ್ತೆ
arshad.jpg

- ಅರ್ಶದ್ ಹುಸೇನ್ ಶಾರ್ಜಾ. 

ಓದುತ್ತಿರುವವರು ಅಪರಿಚಿತ.

ಮುಖ್ಯಾಂಶಗಳು: ಆಯಾ ಸಂಸ್ಥಾನದಲ್ಲಿ ಕೆಲಸ ಮಾಡುತ್ತಿರುವವರು ಆಯಾ ಸಂಸ್ಥಾನದಲ್ಲಿಯೇ ಮನೆ ಮಾಡಬೇಕಿರುವುದು ಕಡ್ಡಾಯ, ಹೊಸ ಕಾನೂನು ಜಾರಿಗೆ ಬಂದ ಮೇಲೆ ದುಬೈ-ಶಾರ್ಜಾ ಸಹಿತ ಎಲ್ಲಾ ಸಂಸ್ಥಾನಗಳಲ್ಲಿ ಬಾಡಿಗೆಗಳಲ್ಲಿ ಧಿಡಿರನೆ ಕುಸಿತ

ಬಿಕೋ ಎನ್ನುತ್ತಿರುವ ದುಬೈ-ಶಾರ್ಜಾ ಹೈವೇ, ಕಾರುಗಳನ್ನು ರಸ್ತೆಗೆ ವಾರಕ್ಕೊಮ್ಮೆಯಾದರೂ ಹೊರತರುವಂತೆ ಜನರಲ್ಲಿ ಮದ್ದಾರ್ ಮನವಿ

ಕರ್ನಾಟಕದಲ್ಲಿ ಜಿಡಿ‌ಎಸ್-ಬಿಜಿಪಿ ಮರುಡೈವೋರ್ಸ್, ಡಿ.ವಿ. ಗೌಡರನ್ನು ಮನೆಮುರುಕ-೦೮ ಪ್ರಶಸ್ತಿಗೆ ಆಯ್ಕೆ

ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ ೫-೦ ಅಂತರದಲ್ಲಿ ಜಯ, ಕಂಬಳಿಗೆ ೫೦ ವಿಕೆಟ್

ವಿಶ್ವದಲ್ಲಿಯೇ ಅತ್ಯಂತ ಉತ್ತಮ ಸೇವೆ ಒದಗಿಸುವ ವಿಮಾನ ಸಂಸ್ಥೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಗೆ ನಂ. ೧ ಪಟ್ಟ

ಮದ್ಯಪಾನ ತ್ಯಜಿಸುವತ್ತ ಕರ್ನಾಟಕದ ಜನತೆ ಒಲವು, ದಿವಾಳಿಯೆದ್ದ ಮದ್ಯದಂಗಡಿಗಳು, ಮಹಿಳೆಯರ ಜಯ

ಕಡಿಮೆಯಾದ ವಾಹನದಟ್ಟಣೆ, ಸ್ವಚ್ಛವಾದ ಪರಿಸರ, ಹೀಗೇ ಮುಂದುವರಿದರೆ ಬೇಸಿಗೆಯಲ್ಲಿ ೩೬ ಕ್ಕೇರದ ತಾಪಮಾನ, ದುಬೈ ಹವಾಮಾನ ವೀಕ್ಷಣಾಲಯ

ಇಂಟರ್ನೆಟ್ ಮೂಲಕ ನೇರ ಶಿಕ್ಷಣ, ಮಕ್ಕಳು ಶಾಲೆಗೆ ಬರುವ ಅಗತ್ಯವಿಲ್ಲದೆ ಶಾಲಾ ಕಟ್ಟಡಗಳ ತೆರವು.

ಈಗ ವಾರ್ತೆಗಳು ವಿವರವಾಗಿ:
ಹೋದ ತಿಂಗಳಲ್ಲಿ ಜಾರಿಯಾಗಿದ್ದ ಕಾನೂನಿನ ಪ್ರಕಾರ ಆಯಾ ಸಂಸ್ತಾನದ ನಿವಾಸಿಗಳು ಆಯಾ ಸಂಸ್ಥಾನದಲ್ಲಿಯೇ ಕಡ್ಡಾಯವಾಗಿ ಮನೆ ಮಾಡಬೇಕಿದ್ದು ಬಾಡಿಗೆಗಳನ್ನು ಹಿಂದಿನ ದರಗಳಿಗಿಂತ ೭೫% ಇಳಿಸುವಂತೆ ನೀಡಿದ ಆದೇಶದ ಬಳಿಕ ದುಬೈ-ಶಾರ್ಜಾ, ಅಬುಧಾಬಿ ಸಹಿತ ಎಲ್ಲಾ ಸಂಸ್ಥಾನಗಳಲ್ಲಿ ಬಾಡಿಗೆಗಳು ಧಿಡೀರನೇ ಕುಸಿದಿವೆ.  ದುಬೈ ಶಾರ್ಜಾಗಳಲ್ಲಿ ಕಳೆದ ತಿಂಗಳು ೪೦-೫೦ ಸಾವಿರ ಕೊಟ್ಟರೂ ಸಿಗದ ಮನೆಗಳು ಇಂದು ೧೦-೧೨ ಸಾವಿರ ದಿರ್ಹಾಂ ಬಾಡಿಗೆಯಲ್ಲಿ ಸುಲಭವಾಗಿ ಸಿಗುತ್ತಿವೆ.  ಸುಮಾರು ೩೫,೦೦೦ ಮನೆಗಳು ಪ್ರವೇಶಕ್ಕೆ ಸಿದ್ಧವಿದ್ದು ಗ್ರಾಹಕರಿಗಾಗಿ ಹುಡುಕಾಟ ನಡೆಸಿವೆ.  ಗ್ರಾಹಕ ಬರುತ್ತಿದ್ದಂತೆ ರಿಯಲ್ ಎಸ್ಟೇಟ್ ಏಜೆಂಟರು ನಾಮುಂದು ತಾಮುಂದು ಎಂದು ಮುನ್ನುಗ್ಗಿ ಗ್ರಾಹಕರಿಗೆ ಉಚಿತ ಟೀವಿ, ಉಚಿತ ವಾಶಿಂಗ್ ಮಶೀನ್ ಇತ್ಯಾದಿಗಳ ಆಮಿಶ ತೋರಿಸುತ್ತಿದ್ದಾರೆ.

ಹೊಸ ಕಾನೂನು ಜಾರಿಗೆ ಬಂದ ಮೇಲೆ ದುಬೈ ಶಾರ್ಜಾ ನಡುವೆ ಓಡಾಡುವ ವಾಹನಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡುಬಂದಿದ್ದು ರಸ್ತೆಯ ಎರೆಡೂ ಬದಿಯಿಂದ ಅಪರೂಪಕ್ಕೊಂದು ಕಾರು ಓಡಾಡುತ್ತಿದೆ.  ಸಾಲಿಕ್ ವ್ಯವಸ್ಥೆಯಲ್ಲಿ ವಾಹನಗಳು ಒಂದೂ ಓಡಾಡದೇ ಸಾಲಿಕ್ ಸುಂಕ ವ್ಯವಸ್ಥೆಗೆ ಕತ್ತರಿ ಬಿದ್ದಿದೆ.  ತಮ್ಮ ವಾಹನಗಳನ್ನು ಕನಿಷ್ಠ ವಾರಕ್ಕೊಂದು ಬಾರಿಯಾದರೂ ರಸ್ತೆಗಿಳಿಸಿ ಎಂದು ಆರ್.ಡಿ.ಏ ನಿರ್ದೇಶಕರಾದ ಮದ್ದಾರ್ ಅಲ್ ದಾಯರ್ ಅವರು ಜನರಲ್ಲಿ ವಿನಂತಿಸಿಕೊಂಡಿದ್ದಾರೆ.

ಇಂಟರ್ನೆಟ್ ಮುಖಾಂತರ ಮಕ್ಕಳನ್ನು ಮನೆಯಲ್ಲಿಯೇ ಓದಿಸುವ ಹೊಸ ವ್ಯವಸ್ಥೆಯೊಂದು ಜಾರಿಗೆ  ಬರಲಿದ್ದು ಶಿಕ್ಷಕರು ತಮ್ಮ ಮನೆಗಳಿಂದ ಪಾಠ ಹೇಳುವ ಹಾಗೂ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಂದಲೇ ಇಂಟರ್ನೆಟ್ ಹೊಂದಿರುವ ಕಂಪ್ಯೂಟರ್ ಹಾಗೂ ವೆಬ್ ಕ್ಯಾಮ್ ಮೂಲಕ ಪಾಠ ಕಲಿಯುವ ಪ್ರಕ್ರಿಯೆಗೆ ಒಳಗಾಗಲಿದ್ದಾರೆ. ಇದರಿಂದ ಮಕ್ಕಳು ಇನ್ನುಮೇಲೆ ಶಾಲೆಗೆ ಹೋಗುವ ಅಗತ್ಯವಿಲ್ಲವಾಗಿದ್ದು ಹಲವು ಶಾಲಾ ಕಟ್ಟಡಗಳು ಖಾಲಿ ಬೀಳಲಿವೆ.  ಶಾಲಾ ಬಸ್ಸುಗಳಿಗೆ ವಿದಾಯ ಹೇಳಲಿದ್ದು ಮಕ್ಕಳಿಗೆ ಯೂನಿಫಾರಂ ಸಹಾ ಅಗತ್ಯವಿಲ್ಲವಾಗಿದೆ. ಪರೀಕ್ಷೆಗಳನ್ನು ಸಹಾ ಇಂಟರ್ನೆಟ್ ಮುಖಾಂತರವೇ ನಡೆಸಲು ಶಿಕ್ಷಣ ಸಚಿವಾಲಯ ನಿರ್ಧರಿಸಿದೆ.
ಈ ಬಗ್ಗೆ ಗೃಹಿಣಿಯೊಬ್ಬರು ಈ ರೀತಿ ಪ್ರತಿಕ್ರಯಿಸಿದ್ದಾರೆ: ಇಂಟರ್ನೆಟ್ ಮೂಲಕ ಪಾಠ ಹೇಳುವುದೇನೋ ಒಳ್ಳೆಯದೇ ಆದರೆ ಇಡೀ ದಿನ ಮನೆಯಲ್ಲಿಯೇ ಕಳೆಯುವ ಮಕ್ಕಳ ಉಪಟಳ ತಡೆಯುವುದು ಹೇಗೆ? ಆದರೂ ಮಕ್ಕಳು ಮನೆಯಲ್ಲಿಯೇ ಕಲಿಯುವಂತಾದರೆ ಬಹಳ ಒಳ್ಳೆಯದು.

ಅಂತೆಯೇ ವಿದ್ಯಾರ್ಥಿಯೊಬ್ಬರು ಈ ರೀತಿ ಪ್ರತಿಕ್ರಯಿಸಿದ್ದಾರೆ: ವ್ಹಾ ರೆ ವ್ಹಾ. ಇನ್ನು ಶಾಲೆಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಪಾಠ ಪಡೆದುಕೊಳ್ಳಬಹುದು ಮದ್ಯಾಹ್ನ ಸಾಯಂಕಾಲ ಕ್ರಿಕೆಟ್ ಆಡಲು ಬಹಳ ಸಮಯ ಸಿಗುತ್ತದೆ. ನಮಗಂತೂ ಬಹಳ ಸಂತೋಷವಾಗಿದೆ.

ದುಬೈ ಹಾಗೂ ಇತರ ಸಂಸ್ಥಾನಗಳಲ್ಲಿ ವಾಹನದಟ್ಟಣೆ ಕಡಿಮೆಯಾಗಿ ಪರಿಸರ ಸ್ವಚ್ಛಗೊಳ್ಳುತ್ತಿರುವುದರಿಂದ ಬರುವ ವರ್ಷಗಳಲ್ಲಿ ತಾಪಮಾನ ಕ್ರಮೇಣ ಕಡಿಮೆಯಾಗುತ್ತಾ ಬಂದು ಇನ್ನು ಹತ್ತು ವರ್ಷಗಳಲ್ಲಿ ೩೫ ಡಿಗ್ರಿಗಳಿಗೆ ಇಳಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಒಂದು ವೇಳೆ ಹೀಗಾದರೆ ಯು.ಎ.ಇ.ಯಲ್ಲಿ ಏಸಿಗಳ ಅಗತ್ಯವಿಲ್ಲದಾಗಿದ್ದು ತಮ್ಮ ವ್ಯಾಪಾರಕ್ಕೆ ಕೊಡಲಿ ಬೀಳಬಹುದೆಂದು ಏಸಿ ತಯಾರಕರು ಚಿಂತಾಕ್ರಾಂತರಾಗಿದ್ದಾರೆ.

ಕಳೆದ ವರ್ಷ ನಿಗದಿಪಡಿಸಿದ್ದ ಕ್ಷಮಾದಾನದ ಬಳಿಕವೂ ಯು.ಎ.ಇ.ಯಲ್ಲಿ ಉಳಿದಿದ್ದ ಅಕ್ರಮ ನಿವಾಸಿಗಳು ಕಳೆದ ತಿಂಗಳ
ಮೂವತ್ತೊಂದನೆಯ ತಾರೀಖಿನ ಒಳಗೇ ಸ್ವದೇಶಗಳಿಗೆ ವಾಪಾಸಾಗಿದ್ದಾರೆ. ಈಗ ಯಾರೂ ಅಕ್ರಮ ನಿವಾಸಿಗಳು ಉಳಿದಿರುವ ಸಾಧ್ಯತೆಗಳಿಲ್ಲವೆಂದು ವಸತಿ ಸಚಿವಾಲಯ ತಿಳಿಸಿದೆ.  ವೀಸಾ ಪ್ರಕ್ರಿಯೆ ಬದಲಾದ ಬಳಿಕ ಯಾರೂ ಯು.ಎ.ಇ. ಯಲ್ಲಿ ಅಕ್ರಮವಾಗಿ ಪ್ರವೇಶಿಸುವ ಪ್ರಯತ್ನ ನಡೆಸುತ್ತಿಲ್ಲವೆಂದು ನಿರ್ದೇಶಕರು ತಿಳಿಸಿದ್ದಾರೆ.  ಒಂದು ವೇಳೆ ಅಂಥಹವರು ಯಾರಾದರೂ ಇದ್ದರೆ ಸುಳಿವು ನೀಡಿದವರಿಗೆ ಹತ್ತು ಸಾವಿರ ದಿರ್ಹಾಂಗಳ ಬಹುಮಾನವನ್ನೂ ಘೋಷಿಸಿದ್ದಾರೆ. ಸುಳಿವನ್ನು ದೂರವಾಣಿ ಸಂಖ್ಯೆ ೦೫೦-೪೨೦ ೪೪೨೦ ಗೆ ನೀಡಬಹುದಾಗಿದೆ.


ನಿನ್ನೆ ನಡೆದ ಅಧಿವೇಶನದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಉತ್ತಮ ಸೇವೆ ಸಲ್ಲಿಸುವ ವಿಮಾನಸಂಸ್ಥೆಯೆಂದು ಏರ್ ಇಂಡಿಯಾ ಸಂಸ್ಥೆ ಅವಿರೋಧವಾಗಿ ಆಯ್ಕೆಯಾಗಿದೆ.  ಐವತ್ತು ವರ್ಷಗಳ ಉತ್ತಮ ಸೇವೆಯ ಅನುಭವವಿರುವ ಏರ್ ಇಂಡಿಯಾದ ಸೇವೆಯ ಬಗ್ಗೆ ಎರಡನೆಯ ಮಾತಿಲ್ಲವಾಗಿದ್ದು ಇದುವರೆಗೆ ಒಂದೂ ಪ್ರಯಾಣವನ್ನೂ ರದ್ದುಗೊಳಿಸದೇ, ಮುಂದೂಡದೇ, ಪ್ರಯಾಣಿಕರಿಂದ ಒಂದೂ ದೂರನ್ನು ಪಡೆಯದೇ ಸಮರ್ಥವಾಗಿ ಕಾರ್ಯವೆಸಗಿರುವುದನ್ನು ಪರಿಗಣಿಸಿ ಏರ್ ಇಂಡಿಯಾ ಸಂಸ್ಥೆಗೆ ಶ್ರೇಷ್ಠ ಸಂಸ್ಥೆ-೦೮ ಪ್ರಶಸ್ತಿ ನೀಡಲಾಗಿದೆ.

ಈಗ ರಾಜ್ಯದ ವರದಿಗಳು:

ಕರ್ನಾಟಕದಲ್ಲಿ ಬಿಜಿಪಿ-ಜಿಡಿ‌ಎಸ್ ಮತ್ತೊಮ್ಮೆ ಡೈವೋರ್ಸ್ ಪಡೆದಿದೆ. ಈ ಪ್ರಕರಣದಲ್ಲಿ ಡಿ.ವಿ. ಗೌಡರು ಕ್ರಿಮಿನಲ್ ಲಾಯರ್ ಪಾತ್ರ ವಹಿಸಿದ್ದು ಜಿಡಿ‌ಎಸ್ ಪರ ವಹಿಸಿ ಗಂಡ ಹೆಂಡಿರ ನಡುವೆ ಹುಳಿ ಹಿಂಡಿ ಬೇರ್ಪಡುವಂತೆ ನೋಡಿಕೊಂಡಿದ್ದಾರೆ. ಈ ವರ್ಷದ ಪ್ರತಿಷ್ಠಿತ ವರ್ಷದ ಮನೆಮುರುಕ-೨೦೦೮ ಪ್ರಶಸ್ತಿಗೆ ಇವರ ಹೆಸರನ್ನು ಸೂಚಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಜನತೆ ಮದ್ಯವ್ಯಸನದಿಂದ ದೂರ ಸರಿಯುತ್ತಿದ್ದು ಕಳೆದ ವರ್ಷಕ್ಕಿಂತ ಮದ್ಯಪಾನ ಮಾಡುವವರ ಸಂಖ್ಯೆಯಲ್ಲಿ ಶೇಖಡಾ ೯೦ ಕಡಿತ ಕಂಡು ಬಂದಿದೆ.  ಇದರ ಪರಿಣಾಮವಾಗಿ ರಾಜ್ಯಾದ್ಯಂತ ಎಲ್ಲಾ ಮದ್ಯದಂಗಡಿಗಳ ವ್ಯಾಪಾರಕ್ಕೆ ಪೆಟ್ಟು ಬಿದ್ದಿದ್ದು ಮುಕ್ಕಾಲುವಾಸಿ ಅಂಗಡಿಗಳು ಮುಚ್ಚಿವೆ.  ಅಳಿದುಳಿದ ವ್ಯಸನಿಗಳೂ ಈ ವರ್ಷ ಮದ್ಯಪಾನ ತೊರೆಯುವ ಶಪಥ ಹಾಕಿದ್ದು ಉದ್ಯಮ ಇನ್ನಷ್ಟು ಅವನತಿಯತ್ತ ಸಾಗುವ ಅಪಾಯವಿದೆ. ತಮ್ಮ ಗಂಡಂದಿರನ್ನು ಹಾಗೂ ಸಹೋದರರನ್ನು ಮದ್ಯವ್ಯಸನದಿಂದ ಪಾರು ಮಾಡಲು ಮಹಿಳೆಯರು ಪಣತೊಟ್ಟು ಯಶಸ್ವಿಯಾಗಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ.
ಈ ಬಗ್ಗೆ ಮಹಿಳೆಯೊಬ್ಬರನ್ನು ನಮ್ಮ ಪ್ರತಿನಿಧಿ ಮಾತನಾಡಿಸಿದಾಗ ಅವರು:
ನಮ್ ಗಂಡಸ್ರು ಮುಂಚೆ ಕುಂಡ್ಕಂಡ್ ಬರ್ತೀದ್ರೀ. ಕೂಲಿ ದುಡ್ಡು ಎಲ್ಲಾ ಹೆಂಡದಂಗ್ಡಿಗೆ ಹೋಗ್ತಿತ್ರೀ, ಅದ್ಕೇ ನಾನು ಆಣೆ ಹಾಕಿಸ್ಕೋಂಡಿವ್ನಿ. ಇನ್ಮ್ಯಾಕೆ ಕುಡಿಯಾಕಿಲ್ಲ ಅಂತ ಮಗೀನ ಮೇಲೆ ಆಣೆ ಮಾಡಿ ಹೇಳ್ಯಾಣ್ರಿ ನಂಗೆ ಬಾಳ ಸಂತೋಸಾಗೈತ್ರಿ

ಈಗ ಕ್ರೀಡಾ ಸುದ್ದಿ:
ಇಂದು ಕೊನೆಗೊಂಡ ಭಾರತ ಆಸ್ಟ್ರೇಲಿಯಾ ತಂಡಗಳ ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಯ ಐದನೆಯ ಪಂದ್ಯದ ಐದನೆಯ ದಿನದಾಟ ಕೊನೆಗೊಂಡಾಗ ಭಾರತ ಆಸ್ಟ್ರೇಲಿಯಾವನ್ನು ೪೨೦ ರನ್ನುಗಳಿಂದ ಸೋಲಿಸಿ ೫-೦ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಐದು ಪಂದ್ಯಗಳಿಂದ ಐವತ್ತು ವಿಕೆಟ್ ಪಡೆದ ನಾಯಕ ಕಂಬಳಿಯವರು ಸರಣಿಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಭಾರತ ತಂಡ ಯುವ ದಾಂಡಿಗರಾದ ವೃದ್ಧರಾಜ್ ಸಿಂದ್, ಅಲ್ಪೇಂದ್ರ ಸಿಂಗ್ ಸೋನಿ, ಚಸಿನ್ ಬೆಂಡುಲ್ಕರ್ ಶತಕ ಬಾರಿಸಿದರೆ ಬೌಲರುಗಳಾದ ಭರ್‌ಹಜನ್ ಸಿಂಗ್, ಶ್ರೀಸಂತರು ಉಳಿದ ಪ್ರಮುಖ ವಿಕೆಟ್ಟುಗಳನ್ನು ಕಬಳಿಸಿದ್ದಾರೆ. ಪೂರ್ವ ನಾಯಕರಾದ ರೌರವ ಗಂಗೊಳ್ಳಿಯವರೂ ಶತಕ ಬಾರಿಸಿ ಮಿಂಚಿದ್ದಾರೆ.  ಕಳೆದ ಬಾರಿ ಕಳಪೆ ಅಂಪೈರಿಂಗ್ ನಡೆಸಿದ ಬಳಿಕ ತಾವು ಪರಾಭವಗೊಂಡಿದ್ದು ಈಗ ಅಂಪೈರಿಂಗ್ ಸುಧಾರಿಸಿರುವುದರಿಂದ ತಾವು ಗೆದ್ದಿದ್ದೇವೆ ಎಂದು ಕಂಬಳಿಯವರು ತಿಳಿಸಿದ್ದಾರೆ.

ಇಲ್ಲಿಗೆ ಕುಹಕವಾರ್ತೆ ಮುಕ್ತಾಯವಾಯಿತು, ವಂದನೆಗಳು.

ಕುಹಕ

ಕುಹಕ ವಾರ್ತೆ ಯು.ಎ.ಇ ಹಾಗೂ ಭಾರತದಲ್ಲಿನ ಶ್ರೀಸಾಮಾನ್ಯನ ಕನಸುಗಳಿಗೆ ಹಿಡಿದ ಕನ್ನಡಿ.  ಇದರಲ್ಲಿ ಕೆಲವಾದರೂ ನನಸಾದರೆ ಬದುಕು ಒ೦ದಿಷ್ಟು ಸರಳವಾದೀತು.ಅದುವರೆಗೆ ಇ೦ತಹ ತಿಳಿಹಾಸ್ಯದ ಲೇಖನಗಳ ಮೂಲಕ ನಿತ್ಯ ಭವಣೆಯಲ್ಲೂ ಒ೦ದಿಷ್ಟು ನಗುವನ್ನು ಹ೦ಚುತ್ತಿರುವ ಅರ್ಶದ್ ರಿಗೆ ಧನ್ಯವಾದಗಳು. 

ಮೃಣಾಲಿನಿ ಉದಯ ಕುಮಾರ್

Syndicate

Syndicate content