- ಇರ್ಶಾದ್ ಮೂಡಬಿದ್ರಿ
ನಾನು ಶಾಲಾ ಕಾಲೇಜು ದಿನಗಳಲ್ಲಿ ತುಂಬಾ ಸಿನೇಮಾಗಳನ್ನು ವೀಕ್ಷಿಸುತ್ತಿದ್ದೆ. ಹಿಂದಿ ಚಿತ್ರಗಳಲ್ಲಿ ಅಮಿತಾಭ್, ಅಮೀರ್ ಖಾನ್ ಪ್ರಿಯನಟರಾದರೆ ಕನ್ನಡದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನ್ ಪ್ರಿಯನಟರು. ಊರಿನಲ್ಲಿ ನಮ್ಮ ಸಂಬಧಿಕರೊಬ್ಬರದ್ದೇ ಚಿತ್ರಮಂದಿರವೊಂದಿದ್ದಿದ್ದರಿಂದ ನನಗೆ ಕಾಸು ನೀಡುವ ಅಗತ್ಯವಿರಲಿಲ್ಲ. ಪುಕ್ಕಟೆಯಾಗಿ ಸಿಗುತ್ತಿದ್ದ ಅವಕಾಶಗಳಲ್ಲಿ ಅರ್ಧ ಒಮ್ಮೆ, ಇನ್ನರ್ಧ ಮತ್ತೊಮ್ಮೆ ನೋಡಿದ್ದೂ ಇತ್ತು.
ಕಾಲ ಚಕ್ರ ಉರುಳಿದಂತೆ ಉದ್ಯೋಗನಿಮಿತ್ತ ದುಬೈಗೆ ಬರಬೇಕಾಯ್ತು. ಸಮಯವೆನ್ನುವುದು ಮರುಭೂಮಿಯ ಮರೀಚಿಕೆಯಂತೆನ್ನುವುದು ಮನದಟ್ಟಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಸಿನೇಮಾ, ಅಧ್ಯಯನ, ಬರವಣಿಗೆ ಇತ್ಯಾದಿಗಳಿಗೆಲ್ಲಾ ಒತ್ತಡದಲ್ಲಿಯೇ ಸಮಯ ಕಷ್ಟಪಟ್ಟು ಹೊಂದಿಸಬೇಕಾಯ್ತು. ನನ್ನನ್ನೂ ಸೇರಿಸಿ ಜಾಹೀರಾತು ಸಂಸ್ಥೆಗಳಲ್ಲಿ ಉದ್ಯೋಗ ನಡೆಸುತ್ತಿರುವ ಎಲ್ಲರ ವ್ಯಥೆ ಇದು.
ಬೆಳಿಗ್ಗೆ ಮನೆಬಿಟ್ಟರೆ ರಾತ್ರಿ ಮರಳುವಾಗ ಈ ಟ್ರಾಫಿಕ್ ಜಾಮ್ ಎನ್ನುವ ಚಕ್ರವ್ಯೂಹದಲ್ಲಿ ಸಿಕ್ಕಿ ಅರ್ಧಜೀವವಾಗಿರುತ್ತೇವೆ. ಬೇರಾವ ಕೆಲಸ ಮಾಡಲು ಸ್ವಲ್ಪವೂ ಉತ್ಸಾಹ ಉಳಿದಿರುವುದಿಲ್ಲ. ಕಛೇರಿಯಂತೂ ದಿನದ ಇಪ್ಪತ್ತನಾಲ್ಕು ತಾಸು ಕಾರ್ಯನಿರ್ವಹಿಸುತ್ತಲೇ ಇರುವುದರಿಂದ ಆಗಾಗ್ಯೆ ಅವರಿವರಿಂದ ಮೊಬೈಲು ಹೊಡೆದುಕೊಳ್ಳುತ್ತಲೇ ಇರುತ್ತದೆ. ಅಷ್ಟೇ ಅಲ್ಲದೆ ಇಂದಿನ ಕೆಲಸ ಇನ್ಯಾರದ್ದೋ ಹೆಗಲ ಮೇಲೆ ವರ್ಗಾಯಿಸಿ ಬಂದ ಚಿಂತೆ ಕೊರೆಯುತ್ತಲೇ ಇರುತ್ತದೆ.
ಊಟದ ಬಳಿಕ ಮನೆಗೆ ಬಂದಿರುವ ಕನ್ನಡ ಪತ್ರಿಕೆ, ಮ್ಯಾಗಜಿನ್‌ಗಳ ಪುಟಗಳಲ್ಲಿ ಕೆಲವನ್ನು ತಿರುವಿ ಹಾಕಿದಂತೆ, ಟೀವಿಯಲ್ಲಿನ ಮುಖ್ಯ ವಾರ್ತೆಗಳಿಗೆ ಕಿವಿ ಕೊಡುತ್ತಲೇ ನಿದ್ದೆ ಆವರಿಸಿರುತ್ತದೆ. ಈಯೆಲ್ಲ ಕಷ್ಟಗಳ ನಡುವೆ ಎಲ್ಲರೂ ಹೇಳುತ್ತಿದ್ದಾರೆ ಈ ಚಿತ್ರ ಒಳ್ಳೆಯದಿದೆಯಂತೆ ಎಂದು ಮನೆಯವರಿಂದ ಬಂದ ಈ ವಿಶೇಷ ಕೋರಿಕೆಯನ್ನು ಮನ್ನಿಸದಿರಲಾಗಲಿಲ್ಲ. ಸಮಯದ ಅಭಾವವನ್ನು ಛಲದಿಂದ ಬದಿಗಿಟ್ಟು ತಾರೇ ಜಮೀನ್ ಪರ್ ಚಿತ್ರ ನೋಡಲು ತೆಗೆದುಕೊಂಡ ನಿರ್ಧಾರ ವ್ಯರ್ಥವಾಗಲಿಲ್ಲ.
ನಟ ಆಮಿರ್ ಖಾನ್ ಈ ಚಿತ್ರದ ಮೂಲಕ ತಮ್ಮ ಮನೆಯೊಳಗಿನ ಚಿತ್ರಣಗಳನ್ನು ತೆರೆದಿಟ್ಟಿದ್ದಾರೆ. ಶಾಲೆಗೆ ಹೋಗುವ ನಮ್ಮ ಮಕ್ಕಳು ನಮ್ಮಿಂದ ಯಾವ ರೀತಿಯ ಬೈಗಳು, ನಿರ್ಲಕ್ಷ್ಯ, ಅಪಮಾನ ಹಾಗೂ ಶಾಲೆಯ ಶಿಕ್ಷಕರಿಂದ ಚಿತ್ರಹಿಂಸೆ ಅನುಭವಿಸುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಚಿತ್ರಿಸಿದ್ದಾರೆ. ಆಮಿರ್ ಖಾನ್ ಈ ಚಿತ್ರದ ನಿರ್ದೇಶಕ, ನಿರ್ಮಾಪಕರಾದರೂ ನಾಯಕರಲ್ಲ. ಅವರ ಪ್ರವೇಶವಾಗುವುದೇ ಮಧ್ಯಂತರದ ಬಳಿಕ. ಇಲ್ಲಿ ಪುಟ್ಟ ಬಾಲಕ ದರ್ಶಿಲ್ ನೇ ನಿಜವಾದ ಹೀರೋ. ಆತ ಪರದೆಯ ಮೇಲೆ ಮೂಡಿಸಿದ ಆ ತುಂಟಾಟ, ದಡ್ಡತನ, ದುಃಖಗಳ ಅಭಿನಯವಂತೂ ಯಾವ ಪ್ರಬುದ್ಧ ನಟನಿಗೂ ಕಡಿಮೆಯಿಲ್ಲ.
ಇಲ್ಲಿ ಕಥೆ ಒಂದು ಮನೆಯ, ಒಂದು ಮನೆಯ ಏನು, ಹೆಚ್ಚಿನ ಎಲ್ಲಾ ಮನೆಗಳ ಕಥೆ. ಮನೆಯಲ್ಲಿರುವ ಮಕ್ಕಳಲ್ಲಿ ಒಬ್ಬನು ವಿದ್ಯಾಭ್ಯಾಸದಲ್ಲಿ ಹಿಂದಿದ್ದರೆ ಆತನ ಸಮಸ್ಯೆ, ಗೊಂದಲ, ನೋವು ಮನೆಯವರಿಗೆ ಅರ್ಥವೇ ಆಗುವುದಿಲ್ಲ. ಆತನನ್ನು ಇತರರೊಂದಿಗೆ ಹೋಲಿಸಿ ಪ್ರತಿನಿತ್ಯ ನೀಡುವ ಅವಮಾನ, ದುಃಖ ನೀಡುತ್ತಾ ಇರುತ್ತಾರೆ. ಅವನಲ್ಲಿ ಉತ್ತಮ ಪ್ರತಿಭೆಗಳಿದ್ದರೂ ಆದನ್ನು ಗಮನಿಸುವ ಗೋಜಿಗೇ ಹೋಗದೆ "ಮೊದಲು ಮಾರ್ಕ್ಸು ತಾ" ಎಂಬ ಬೇಡಿಕೆಯನ್ನು ದಿನನಿತ್ಯ ಹೇರುತ್ತಾರೆ.
ಈ ಚಿತ್ರದ ಹೀರೋಗೂ ಇದೇ ಸಮಸ್ಯೆ. ಆತನಿಗೆ ಅಕ್ಷರಗಳಲ್ಲಿ ವ್ಯತ್ಯಾಸವೇ ತಿಳಿಯುವುದಿಲ್ಲ.
ಗಣಿತವಂತೂ ಕಬ್ಬಿಣದ ಕಡಲೆ. ಪುಸ್ತಕ ತೆರೆದರೆ ಅಕ್ಷರಗಳು ಕುಣಿದಂತೆ ತೋರುತ್ತದೆ. ಹೆಚ್ಚಿನ ಅಂಕ ಗಳಿಸದ ಪರಿಣಾಮವಾಗಿ ಶಾಲೆ ಮಾತ್ರವಲ್ಲದೇ ಮನೆಯೂ ರಣರಂಗದಂತೆ ತೋರತೊಡಗುತ್ತದೆ.
ದಡ್ಡನೆಂದು ತೀರ್ಮಾನಿಸಿ ಹಿರಿಯರು ಆತನನ್ನು ವಸತಿ ಶಾಲೆಗೆ ಅಟ್ಟಿದ ಬಳಿಕ ಅವನ ಸರ್ವಸ್ವವೂ ಆಗಿದ್ದ 'ಪೇಂಟಿಂಗ್' ಲೋಕ ಮಂಕಾಗಿ ಬಿಡುತ್ತದೆ. ತನಗೆ ತಾನೇ ಶತದಡ್ಡ ಹಾಗೂ ಅನಾಥನೆಂದು ಕಲ್ಪಿಸಿಕೊಳ್ಳುತ್ತಾನೆ. ತಾಯಿಯ ಮಮತೆಯಲ್ಲಿ ಬೆಳೆದ ಆತನಿಗೆ ಕತ್ತಲೆಯೆಂದರೆ ಭಯ.
ಶೂ ಲೇಸ್ ಕಟ್ಟುವುದಾಗಲೀ, ಟೈ ಕಟ್ಟುವುದಾಗಲಿ ಆತ ಕಲಿಯಲಾರದೇ ಹೋಗುತ್ತಾನೆ. ಈ ಸಮಸ್ಯೆಗಳ ನಡುವೆ ಅಪಮಾನ ಭಯಗಳ ನಡುವೆ ತೀವ್ರವಾಗಿ ತೊಳಲಾಡುತ್ತಾನೆ.
ಇಂತಹ ಸಂದರ್ಭದಲ್ಲಿಯೇ ಆತನ ತರಗತಿಗೆ ಶಿಕ್ಷಕರೊಬ್ಬರ ಪ್ರವೇಶವಾಗುತ್ತದೆ. ಕೆಲಕಾಲದಲ್ಲಿಯೇ ಈ ಶಿಕ್ಷಕ ಮಗುವಿನ ತೊಳಲಾಟ ಹಾಗೂ ಮನಃಸ್ಥಿತಿಯನ್ನು ಅರಿತುಕೊಳ್ಳುತ್ತಾನೆ. ಮಗುವಿನ ಗೊಂದಲ, ಸಂಕಟಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಗುವನ್ನು ಒಲಿಸಿ ಮಗುವಿನ ಮನಸ್ಸನ್ನು ಗೆಲ್ಲುತ್ತಾನೆ. ಮಗುವಿನ ಮುಖದಲ್ಲಿ ಮಂದಹಾಸ ಮೂಡಿಸಿ ಮರೆದಿದ್ದ ಬಾಲ್ಯವನ್ನು ಮತ್ತೆ ಮೆರೆಸುತ್ತಾನೆ. ಶಿಕ್ಷಕನ ಪಾತ್ರವನ್ನು ಅತ್ಯಂತ ಸುಂದರ ಹಾಗೂ ದಕ್ಷವಾಗಿ ನಿಭಾಯಿಸಿ ಪಾತ್ರಕ್ಕೆ ಜೀವ ತುಂಬಿದ ಆಮೀರ್ ಖಾನ್ ಈ ಸಾಧನೆಯನ್ನು ಹೇಗೆ ಸಾಧಿಸಿದನೆಂಬುದನ್ನು ಇಲ್ಲಿ ಹೇಳಿದರೆ ಸ್ವಾರಸ್ಯ ಉಳಿಯುವುದಿಲ್ಲ. ಅದನ್ನು ಚಿತ್ರ ನೋಡಿಯೇ ಅನುಭವಿಸಬೇಕು. (ಚಿತ್ರವನ್ನು ಪೂರ್ತಿ ಆರಾಮವಾಗಿ ನೋಡಬೇಕೆಂದು ಮತ್ತೊಮ್ಮೆ ಹೇಳಬೇಕಾಗಿಲ್ಲವಷ್ಟೆ)
ಪೋಷಕರಾದ ನಾವು ಅರಿವಿರದೇ ತೋರುವ ನಿರ್ಲಕ್ಷದ ಬಗ್ಗೆ ಅರಿವು ಮೂಡಿಸುವಲ್ಲಿ ಈ ಚಿತ್ರ ಕೈಗನ್ನಡಿಯಾಗಿದೆ. ನಮ್ಮ ಸ್ವಾರ್ಥಕ್ಕೆ ಪಾಠವೂ ಹೌದು. ನಮ್ಮ ಲಾಭಕ್ಕೆ, ನಾಳೆಯ ಭವ್ಯ ಕನಸುಗಳಿಗೆ ಅವರ ಬಾಲ್ಯ, ಅವರ ಸಂತೋಷ, ಅವರ ಇಷ್ಟಗಳನ್ನು ಕೊಲ್ಲುವ ನಾವು ಇಲ್ಲಿ ತಿದ್ದಿಕೊಳ್ಳುವುದು ತುಂಬಾ ಇದೆ.
ಪಾಲಕರೂ ಪೋಷಕರೂ ತಪ್ಪದೇ ಒಮ್ಮೆ ವೀಕ್ಷಿಸಬೇಕಾದ ಚಿತ್ರ ಇದೆಂದು ನನ್ನ ಧೃಡ ನಂಬಿಕೆ. ಮಕ್ಕಳ ಬಗೆಗಿನ ಹೆತ್ತವರ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ ಈ ಚಿತ್ರ.








