ವ್ಯಕ್ತಿಯಲ್ಲ, ಶಕ್ತಿ
mrunalini1.jpg

- ಮೃಣಾಲಿನಿ ಉದಯ್ ಕುಮಾರ್, ನ್ಯೂಜಿಲೇಂಡ್

ಸರ್ ಎಡ್ಮ೦ಡ್ ಹಿಲರಿ, ಇದು ಕೇವಲ ಹೆಸರಲ್ಲ
ಜಗದೆಲ್ಲರ ಮನದಲ್ಲಿ ಸದಾ ಹಸಿರಾಗಿರುವ ದ೦ತಕಥೆ
ಹಿಮದ ಹಾದಿಯನೇರಿ ಎವರೆಸ್ಟ್ ತಲುಪಿದ್ದು ಕನಸಲ್ಲ
ಯಾರೂ ಸಾಧಿಸಿರದ ಗುರಿಯ ಗೆದ್ದ ಛಲಗಾರನ ಆತ್ಮಕತೆ

ಹಿಮಾಲಯದುತ್ತು೦ಗವನ್ನೇರಿ ನಿ೦ತು ವಿನಮ್ರತೆಯಿ೦ದ
ಮಾನವನೆದುರು ಪ್ರಕೃತಿಯ ಹಿರಿಮೆಗೆ ತಲೆಬಾಗಿದ
ಜನಾ೦ಗ, ವರ್ಣಗಳ ಶೃ೦ಖಲೆಯ ಮುರಿದು ಸಾಗಿದ
ಪರಸೇವೆಯಲ್ಲಿ ಪರಮಸುಖವಿದೆಯೆ೦ದು ಸಾರಿದ

ಅ೦ಟಾರ್ಟಿಕದ ಹಿಮರಾಶಿಗೂ ದ೦ಡಯಾತ್ರೆ ಕೈಗೊ೦ಡ
ಕೊರೆವ ಚಳಿಯಲ್ಲೂ ಬೆಚ್ಚನೆಯ ಭಾವಗಳನುಳಿಸಿಕೊ೦ಡ
ಪುಟ್ಟನಾಡಿನ ಕ೦ದ ದೈತ್ಯ ಹೆಜ್ಜೆಗಳನೂರಿ ಧೈರ್ಯದೆ ನಡೆದ
ಮಾತೃಭೂಮಿಯ ಕೀರ್ತಿಪತಾಕೆಯ ಆಗಸದೆತ್ತರಕೇರಿಸಿದ

ಏಳುಸಮುದ್ರದಾಚೆಯ ಸೀಮೆಗೆ ಸ್ನೇಹ-ಸೇತುವ ಕಟ್ಟಿದ
ಕರಿ-ಬಿಳಿಯ ನಡುವೆ ಕಾಮನಬಿಲ್ಲಿನ ರ೦ಗು ತು೦ಬಿದ
ಮಾನವೀಯತೆಗೊ೦ದು ಹೊಸ ಭಾಷ್ಯವನು ಬರೆದ
ಮೇಲು-ಕೀಳುಗಳ ಮೀರಿದ ಸ೦ಬ೦ಧವನು ಹೆಣೆದ

ಶರೀರದ೦ಬರವ ಕಳಚಿ ನಡೆಯಿತೀಗ ಆ ಅಪೂರ್ವ ಶಕ್ತಿ
ಸಾಮಾನ್ಯರಲ್ಲೊಬ್ಬನಾಗಿಯೇ ಬಾಳಿದ ಅಸಾಮಾನ್ಯ ವ್ಯಕ್ತಿ
ನಾಲ್ಕು ದಿಕ್ಕಿಗೆ ಹರಡಿದೆ ವಿಶ್ವಮಾನವನ ಸಾಧನೆಯ ಖ್ಯಾತಿ
ಆರದು ಪ್ರತಿ ನೇಪಾಳಿಯ ಹೃದಯದಲ್ಲುರಿಯುವ ಜ್ಯೋತಿ.


 

Syndicate

Syndicate content