- ಅರ್ಶದ್ ಹುಸೇನ್ ಎಂ.ಹೆಚ್.
ದೆವ್ವ, ಭೂತ, ಪಿಶಾಚಿ ಇನ್ನೇನೇನೋ ಹೆಸರುಗಳಿಂದ ಕರೆಯಬಹುದಾದ ಈ ಪ್ರಾಣಿ(?)ಗಳ ಉಪಟಳಗಳ ಬಗ್ಗೆ ಸುಮ್ಮನೇ ಒಂದು ಮಾತು ವಿಚಾರಿಸಿದರೆ ಅಕ್ಕ ಪಕ್ಕದವರಿಂದ ವಿಭಿನ್ನ ಪ್ರತಿಕ್ರಿಯೆ ದೊರೆಯಬಹುದು. ಬೆಂಕಿ ಉಗುಳುವ ಕೊಳ್ಳಿದೆವ್ವ, ರಾತ್ರಿ ಶಬ್ದ ತೆಗೆಯುವ, ನಿದ್ದೆ ಕೆಡಿಸುವ, ಆರೋಗ್ಯ ಹಾಳು ಮಾಡುವ, ಬೆಳೆಗಳಿಗೆ ಕಾಟ ಕೊಡುವ, ಸುಗಮ ಕೆಲಸ ನಡೆಯಲು ಅಡ್ಡಿಪಡಿಸುವ ಇನ್ನೂ ಹಲವಾರು ತರಹದ ದೆವ್ವಗಳ ಕೀಟಲೆ ಉಪಟಳಗಳ ಬಗ್ಗೆ ಜನರು ಇನ್ನೂ ಹೆಚ್ಚಿನ ವಿವರಗಳನ್ನು ನೀಡಬಹುದು. ಆದರೆ ಸೆಗಣಿ ಎಸೆಯುವ ದೆವ್ವ?? ಇದೇನೋ ವಿಚಿತ್ರವಾಗಿದೆಯೆಲ್ಲಾ, ಈ ಬಗ್ಗೆ ಕೇಳಿರಲಿಕ್ಕಿಲ್ಲ ಅಲ್ಲವೇ, ಏನೆಂದು ತಿಳಿದುಕೊಳ್ಳುವ ಕುತೂಹಲವಿದೆಯೇ?
ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ವಿಷಯ. ಮನೆಯ ಹಿರಿಯರಾಗಿ ನಮ್ಮ ಅಜ್ಜಿಯೇ ಕುಟುಂಬ ನಿರ್ವಹಿಸುತ್ತಿದ್ದ ಕಾಲ. ಅಡುಗೆಗೆ ಏನಾಗಬೇಕೆಂಬುದರಿಂದ ಹಿಡಿದು ಯಾವ ಯಾವ ಕರ್ತವ್ಯಗಳನ್ನು ಯಾರು ಯಾರು ನಿರ್ವಹಿಸಬೇಕೆಂಬ ಮತ್ತು ಹಣಕಾಸಿನ ಸಕಲ ಉಸ್ತುವಾರಿ ಅವರದ್ದೇ ಆಗಿತ್ತು. ಪ್ರತಿದಿನದ ಐದೂ ನಮಾಜು(ಪ್ರಾರ್ಥನೆ)ಗಳನ್ನು ತಡಮಾಡದೇ ನಿರ್ವಹಿಸುತ್ತಿದ್ದರು. ದಿನದ ಪ್ರಥಮ ನಮಾಜು ಬೆಳ್ಳಂಬೆಳಿಗ್ಗೆ ಐದು ಘಂಟೆಗೇ ಬರುತ್ತಿದ್ದುದರಿಂದ ಅಜ್ಜಿ ಎಲ್ಲರಿಗಿಂತಲೂ ಮೊದಲೇ ಎದ್ದು ನಂತರ ನಮ್ಮನ್ನೆಲ್ಲಾ ಎಬ್ಬಿಸಿ ನಮಾಜಿಗೆ ಮಸೀದಿಗೆ ಅಟ್ಟುತ್ತಿದ್ದರು. ನಾವು ಸಕ್ಕರೆ ನಿದ್ದೆಯಿಂದ ಎದ್ದು ಗೊಣಗುತ್ತಲೇ ನಮಾಜಿಗೆ ಹೋಗಿ ಬಂದು ಮತ್ತೆ ಮಲಗುತ್ತಿದ್ದೆವು.
ಅಷ್ಟು ಕಟ್ಟುನಿಟ್ಟಾದ ಅಜ್ಜೆ ಒಮ್ಮೆ ನಮಗೆ ಏಕಾಏಕಿ ನಾಳೆಯಿಂದ ಮನೆಯಲ್ಲಿಯೇ ನಮಾಜು ಮಾಡಿ ಎಂದೂ ಮಸೀದಿಗೆ ಹೋಗುವುದು ಬೇಡವೆಂದೂ ಅಪ್ಪಣೆ ಕೊಟ್ಟರು. ಬೆಳಗಿನ ಚುಮುಚುಮು ಚಳಿಯಲ್ಲಿ, ಬೀದಿ ದೀಪದ ನೂರು ವ್ಯಾಟಿನ ಬಲ್ಬಿನ ಪ್ರಖರ ಬೆಳಕನ್ನು ಗಾಢ ಮಂಜು ಕವಿದು ಹಣತೆಯನ್ನಾಗಿಸಿದ್ದರಿಂದ ಕವಿದ ಕತ್ತಲಲ್ಲಿ ನಡುಗುತ್ತಾ ಸುಮಾರು ದೂರದವರೆಗೆ ನಡೆಯುವ ಕಷ್ಟ ಒಂದು ತಪ್ಪಿತೆಂದು ಒಳಗೊಳಗೇ ಖುಷಿಯಾದರೂ ಏಕಾಏಕಿ ಹೋಗಬೇಡಿರೆಂದು ಏಕೆ ಹೇಳಿದರೆಂಬುದು ರಹಸ್ಯವಾಗಿಯೇ ಉಳಿದಿತ್ತು. ನಾವು ಕಾರಣ ಕೇಳಿದರೂ ಅಜ್ಜಿ "ನಿಮಗೇಕೆ ಮಕ್ಕಳಿಗೆ ಬೇಡದ ಉಸಾಬರಿ? ದೊಡ್ಡವರು ಹೇಳಿದಷ್ಟು ಕೇಳಿ" ಎಂದು ನಮ್ಮ ಬಾಯಿ ಮುಚ್ಚಿಸಿದ್ದರು. ಒಮ್ಮೆ ಸಂಜೆ ನಮ್ಮ ಅಜ್ಜಿಯ ಹರಟೆ ಗೆಳತಿ ಹವ್ವಾಬಿ ಖಾಲಾ ಬಂದಾಗ ಅಜ್ಜಿ ಲೋಕಾಭಿರಾಮವಾಗಿ ಮಾತನಾಡುತ್ತಾ ಸೆಗಣಿ ಎಸೆಯುವ ದೆವ್ವದ ಬಗ್ಗೆ ಹೇಳುತ್ತಿದ್ದುದು ನಮ್ಮ ಕಿವಿಗೆ ಬಿತ್ತು. ಅಜ್ಜಿ ಹೇಳಿದ ವಿವರಗಳ ಪ್ರಕಾರ ಪ್ರತಿದಿನ ಅಜ್ಜಿ ಬೆಳಿಗ್ಗೆ ನಾಲ್ಕು ಮುಕ್ಕಾಲಿಗೆ ಅಲಾರಾಂ ಇಟ್ಟು ಎದ್ದು ಐದು ಘಂಟೆಗೆ ಮೊಳಗುವ ಬಾಂಗ್ ಆಲಿಸಲೆಂದು ಕಿಟಕಿ ಹೊರಗೆ ಇಣುಕಿ ನೋಡಿದರೆ ಬಿಳಿ ಬಟ್ಟೆ ಧರಿಸಿದ ದೆವ್ವವೊಂದು ರಸ್ತೆಯಲ್ಲಿ ನಡೆಯುತ್ತಾ ಬರುತ್ತದೆ. ಅತ್ತ ಇತ್ತ ನೋಡುತ್ತಿದ್ದಂತೆ ಫ಼ಕ್ಕನೆ ಮಾಯವಾಗುತ್ತದೆ. ಮರುಕ್ಷಣ ಇನ್ನೊಂದು ಪಕ್ಕದಿಂದ ಗೋಚರವಾಗುತ್ತದೆ. ನಂತರ ರಸ್ತೆಯಲ್ಲಿಯೇ ನಡೆಯುತ್ತಾ ಮುಂದುವರೆದು ಕಾಣೆಯಾಗುತ್ತದೆ. ಇದರ ಬಗ್ಗೆ ಅಜ್ಜಿ ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ ಆಚೆಮನೆ ಕಮಲಮ್ಮನವರೂ, ಅದರಾಚೆ ಮನೆಯ ಬಾಯಮ್ಮ ಹಾಗೂ ಇನ್ನೊಂದಿಬ್ಬರು ಹೆಂಗಸರು ತಾವೂ ಬೆಳಿಗ್ಗೆ ನೀರು ತರಲು ರಸ್ತೆಯಲ್ಲಿ ಬರುತ್ತಿರುವಾಗ ಈ ಭೂತವನ್ನು ನೋಡಿದ್ದೇವೆಂದು ಹೇಳಿದ್ದರು. ಯಾರೋ ಇನ್ನೊಬ್ಬರು ತಾವು ಭೂತವನ್ನು ಹತ್ತಿರದಿಂದ ನೋಡಿದ್ದಾಗಿಯೂ, ಯಾರೋ ಮನುಷ್ಯರಿರಬಹುದೆಂದು ಹತ್ತಿರ ಹೋದರೆ ತಮ್ಮ ಮೇಲೆ ಸೆಗಣಿ ಎಸೆಯಿತೆಂದೂ ಹೆದರಿ ಓಡಿ ಬಂದ ತಮಗೆ ಚಳಿಜ್ವರ ಬಂದು ನಡುಕ ಶುರುವಾಗಿ ಸುಧಾರಿಸಿಕೊಳ್ಳಲು ಒಂದು ವಾರ ಹಿಡಿಯಿತೆಂದೂ ಸುದ್ದಿ ಹಬ್ಬಿತ್ತು. ಗಾಳಿ ಸುದ್ದಿಗೆ ಹೆಚ್ಚಿನ ಮಹತ್ವ ಕೊಡದಿದ್ದ ಅಜ್ಜಿ ದೆವ್ವದಿಂದ ಸೆಗಣಿಯಿಂದ ಹೊಡೆಸಿಕೊಂಡಾತನೊಬ್ಬ ನಮ್ಮ ಮನೆಗೊಮ್ಮೆ ಕಟ್ಟಿಗೆ ಒಡೆಯಲು ಬಂದಿದ್ದಾಗ ತನ್ನ ಮನೆದೇವರಾದ ಜಟ್ಟಪ್ಪನ ಮೇಲೆ ಆಣೆ ಹಾಕಿ ದೆವ್ವ ತನ್ನ ಮೇಲೆ ಸೆಗಣಿ ಎಸೆದದ್ದನ್ನು ಕೇಳಿದ ಮೇಲೆ ಅಜ್ಜಿ ಆ ದೆವ್ವ ನಮಗೆಲ್ಲಾದರೂ ಅಪಾಯ ಕೊಟ್ಟೀತೆಂದು ಎಚ್ಚರ ವಹಿಸಿ ನಮಗೆ ಬೆಳಗಿನ ಜಾವ ನಮಾಜಿಗೆ ಮನೆಯಿಂದ ಹೊರಗೆ ಹೋಗುವುದನ್ನು ನಿರ್ಬಂಧಿಸಿದ್ದರು.
ಸೇಕ್ರ ನಮ್ಮ ಬಾಲ್ಯ ಸ್ನೇಹಿತ. ಸ್ವಲ್ಪ ಕಾಡು ಮೇಡು, ಕಟ್ಟಿಗೆ, ಶಿಕಾರಿ ಎಂದು ಕಾಡಿನಲ್ಲಿ ತಿರುಗಾಡಿದ್ದರಿಂದ ಕಾಡು-ಮರಗಳ, ದೆವ್ವ - ಭೂತಗಳ ಬಗ್ಗೆ ನಮಗಿಂತ ಹೆಚ್ಚು ತಿಳಿದುಕೊಂಡಿದ್ದ. ಅದೂ ಅಲ್ಲದೆ ಅವನ ಅಜ್ಜಿಮನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪ ಇದ್ದುದರಿಂದಲೂ ಅಲ್ಲಿನ ಹಳ್ಳಿಗಳಲ್ಲಿ ಕೋಲ, ಪಂಜುರ್ಲಿ, ಗಣ ಇತ್ಯಾದಿಗಳು ಮಲೆನಾಡಿಗಿಂತ ಹೆಚ್ಚಿದ್ದುದರಿಂದಲೂ ನಾವು ತಿಳಿದಿರುವುದಕ್ಕಿಂತಲೂ ಹೆಚ್ಚು ದೆವ್ವಗಳ ಬಗ್ಗೆ ಅವನಿಗೆ ಗೊತ್ತಿತ್ತು, ಮತ್ತು ಇದರ ಬಗ್ಗೆ ಅವನಿಗೆ ಅಭಿಮಾನವೂ ಇತ್ತು. ಆ ದಿನಗಳಲ್ಲಿ ಸೇಕ್ರ ಅಜ್ಜಿಮನೆಗೆ ಹೋಗಿದ್ದ. ಅವನು ಬಂದ ಮೇಲೆ ಒಂದು ದಿನ ಸಾಯಂಕಾಲ ಆಟವಾಡುವಾಗ ಸಿಕ್ಕಾಗ ಸೆಗಣಿ ಎಸೆಯುವ ದೆವ್ವದ ಬಗ್ಗೆ ಹೇಳಿದೆವು. ಇದಕ್ಕಿಂತ ಮೊದಲು ಅವನು ದಕ್ಷಿಣ ಕನ್ನಡದ ಭೂತಗಳ ಬಗ್ಗೆ ಹಲವಾರು ರೋಚಕ ಕಥೆಗಳನ್ನು ಹೇಳಿ ಅಂತಹ ಕಥೆಗಳು ಮಲೆನಾಡಿನಲ್ಲಿ ವಿರಳವೆಂದು ಮಲೆನಾಡನ್ನು ಕಂಡೆಮ್ ಮಾಡಿದ್ದರ ಸೇಡು ತೀರಿಸಿಕೊಳ್ಳಲು ನಮ್ಮ ಮಲೆನಾಡಿನಲ್ಲಿಯೂ ಭೂತಗಳಿಗೇನೂ ಕೊರತೆಯಿಲ್ಲ, ಭೂತಗಳ ಕಥೆಗಳಿಗೂ ಕೊರತೆಯಿಲ್ಲ, ಬೇಕೆದ್ದರೆ ದಕ್ಷಿಣ ಕನ್ನಡಕ್ಕೂ ಸಡ್ಡು ಹೊಡೆಯಬಲ್ಲೆವು ಎಂಬ ಒಂದು ಪ್ರತೀಕಾರದ ಮನೋಭಾವದಿಂದ ಇದ್ದ ಕಥೆಗೆ ಇನ್ನಷ್ಟು ಉಪ್ಪುಖಾರ ಸೇರಿಸಿಯೇ ಹೇಳಿದೆವು. ಸೇಕ್ರನೂ ಅನೇಕ ಭೂತಗಳ ಕಥೆಗಳನ್ನೂ ಕೇಳಿದ್ದನಾದರೂ ಸೆಗಣಿ ಎಸೆಯುವ ದೆವ್ವ ಅವನಿಗೆ ಹೊಸತು. ಅಂದರೆ ದಕ್ಷಿಣ ಕನ್ನಡದಲ್ಲಿಲ್ಲದ ಅಪೂರ್ವ ಭೂತವೊಂದು ಮಲೆನಾಡಿನಲ್ಲಿದೆ ಎಂಬ ಒಂದು ವಿಷಯದಲ್ಲಾದರೂ ನಾವು ಸೇಕ್ರನನ್ನು ಸೋಲಿಸಿದೆವೆನ್ನುವ ಸಂಭ್ರಮ ನಮ್ಮದಾಗಿತ್ತು.
ಸುಲಭದಲ್ಲಿ ಸೋಲೊಪ್ಪಿಕೊಳ್ಳಲು ಸೇಕ್ರ ತಯಾರಿರಲಿಲ್ಲ. ಸೆಗಣಿ ಎಸೆಯುವ ದೆವ್ವದ ಬಗ್ಗೆ ಅವನು ಅವನ ಚಿಕ್ಕಪ್ಪ, ಮಾವ ಮುಂತಾದವರ ಹತ್ತಿರ ವಿಚಾರಿಸಿದಾಗ ಅವರಿಂದ ಯಾವ ಪ್ರೋತ್ಸಾವವೂ, ಹೆಚ್ಚಿನ ವಿವರವೂ ದೊರೆಯಲಿಲ್ಲ. ಬದಲಿಗೆ ಆ ಭೂತದ ತಂಟೆಗೇ ಹೋಗಬೇಡವೆಂಬ ಎಚ್ಚರಿಕೆ ಸಿಕ್ಕಿತ್ತು. ದೆವ್ವ ಸೆಗಣಿ ಏಕೆ ಎಸೆಯುತ್ತದೆ ಎಂಬ ಪ್ರಶ್ನೆಯಿಂದ ತಲೆ ಕೆಡಿಸಿಕೊಂಡ ಸೇಕ್ರ ಒಮ್ಮೆ ಸಿದ್ರಮಠಕ್ಕೆ ಹೋದಾಗ ಈ ಬಗ್ಗೆ ವಿಚಾರಿಸಿದಾಗ ಭೂತದ ಬಗ್ಗೆ ಗೊತ್ತಿದ್ದವರೊಬ್ಬರು ಯಾರೋ ಕುಡಿತದ ಅಮಲಿನಲ್ಲಿದ್ದಾಗ ಗೊಬ್ಬರದ ಗುಂಡಿಗೆ ಬಿದ್ದಿರಬೇಕೆಂದೂ, ಮೇಲೇಳಲು ಸಾಧ್ಯವಾಗದೇ ಗೊಬ್ಬರದೊಳಗೇ ಉಸಿರುಕಟ್ಟಿ ಸತ್ತಿರಬಹುದೆಂದೂ, ಸತ್ತ ಮೇಲೆ ದೆವ್ವವಾಗಿ ಹೋಗಿ ಬರುವವರ ಮೇಲೆ ಸೆಗಣಿ ಎಸೆಯುತ್ತಿರಬಹುದೆಂದೂ ಹೇಳಿದರಂತೆ. ಆದರೆ ಅಕ್ಕಪಕ್ಕದಲ್ಲಿ ಯಾರೂ ಸತ್ತಿದ್ದಾಗಲೀ ಕಾಣೆಯಾಗಿದ್ದಾಗಲೀ ಸುದ್ದಿ ಇರಲಿಲ್ಲ. ಅದರಲ್ಲೂ ಯಾರೂ ಸಗಣಿ ಗುಂಡಿಯಲ್ಲಿ ಬಿದ್ದು ಸತ್ತಿದ್ದರೆಂಬ ಸುದ್ದಿಯೇ ಇರಲಿಲ್ಲ. ಇದರ ಬಗ್ಗೆ ಒಂದು ಪತ್ತೇದಾರಿ ನಡೆಸಿ ಈ ರಹಸ್ಯ ಭೇದಿಸಬೇಕೆಂದು ಸೇಕ್ರ ಪಣತೊಟ್ಟ. ಸೇಕ್ರನ ಕಥೆಗಳ ಪ್ರಕಾರ ಭೂತಗಳು ಇರತ್ತವಾದರೂ ಕಾರಣವಿಲ್ಲದೆ ಕಾಟ ಕೊಡುವ ದೆವ್ವಗಳು ವಿರಳ. ಅದರಲ್ಲೂ ಈ ದೆವ್ವಗಳ ಹೆಸರು ಹೇಳಿ ಅದರ ಮರೆಯಲ್ಲಿ ಅಡ್ಡ ಕಸುಬು ಮಾಡುವವರೇ ಹೆಚ್ಚು. ರಾತ್ರೆ ಗಂಧದ ಮರ ಕಡಿದು ಕಳ್ಳಸಾಗಣೆ ಮಾಡುವ ಹೊತ್ತಿನಲ್ಲಿ ಯಾರಾದರೂ ಬಂದರೆ ಅವರನ್ನು ಹೆದರಿಸಲು ಬಾಯಿತುಂಬಾ ಸೀಮೆಯೆಣ್ಣೆ ತುಂಬಿಕೊಂಡು ಕೆಂಡ ಮಾಡಿಕೊಂಡ ಒಂದು ಉದ್ದ ಕೋಲಿನ ತುದಿಗೆ ಪಿಚಕಾರಿಯಂತೆ ಊದಿ ಕ್ಷಣದಲ್ಲಿ ಬೆಂಕಿಯ ಒಂದು ಜ್ವಾಲೆ ಬರುವಂತೆ ಮಾಡಿ 'ಕೊಳ್ಳಿ ದೆವ್ವದ' ಹೆದರಿಕೆ ಹುಟ್ಟಿಸಿ ಓಡಿಸಲು ಕಳ್ಳರು ಕಂಡುಕೊಂಡ ಒಂದು ತಂತ್ರವಾಗಿತ್ತು. ನದಿದಡದ ಮರಳನ್ನು ಕದ್ದು ಲಾರಿಗೆ ಲೋಡು ಮಾಡುತ್ತಿರುವಾಗ ಯಾರಾದರೂ ಸೇತುವೆ ಮೇಲೆ ಬಂದರೆ ಸೇತುವೆಯ ತಳದಲ್ಲಿ ಅಡಗಿ ಕುಳಿತಾತ ಮೊದಲೇ ತನ್ನೊಂದಿಗೆ ಹೊತ್ತು ತಂದ್ದಿದ್ದ ದೊಡ್ಡ ದೊಡ್ಡ ಕಲ್ಲುಗಳನ್ನು ಒಂದೊಂದಾಗಿ ನೀರಿಗೆಸೆದು 'ದುಡುಂ' ಎಂದು ಶಬ್ದ ಬರುವಂತೆ ಮಾಡಿ ದೆವ್ವವೇ ನೀರಿಗೆ ಹಾರಿತೆಂಬ ಕಥೆ ಹಬ್ಬಿಸಿ ಆ ಕಡೆ ಯಾರೂ ಬರದಂತೆ ಮಾಡಿ ತಮ್ಮ ಕಳ್ಳ ಕೆಲಸಗಳನ್ನು ಸರಾಗವಾಗಿ ನಡೆಸಿಕೊಂಡು ಹೋಗುತ್ತಿದ್ದರು.
ಸೇಕ್ರನಿಗೆ ಈ ಸೆಗಣಿ ಎಸೆಯುವ ದೆವ್ವದ್ದೂ ಇಂತಹದ್ದೇ ಒಂದು ಕಳ್ಳಾಟವಿರಬೇಕೆಂಬ ಒಂದು ಅನುಮಾನ ಬಂದಿತ್ತು. ಈ ದೆವ್ವದ ಉಚ್ಛಾಟನೆಗಾಗಿ ಸೇಕ್ರ ಭೂತಗಳ ಬಗ್ಗೆ ಇನ್ನಷ್ಟು ಮಾಹಿತಿಯಿರುವ ತನ್ನ ಸ್ನೇಹಿತನಾದ ಬೊಮ್ಮನನ್ನು ಮೂಲ್ಕಿಯಿಂದ ಕರೆತಂದ. ಇಬ್ಬರೂ ಸೇರಿ ಭೂತವನ್ನು ಓಡಿಸುವ ಪಲಾನು ಹಾಕಿಕೊಂಡರು. ಪಲಾನು ಸರಿಯಾಗಿ ನಿರ್ವಹಿಸಲು ನಮ್ಮ ಮನೆಗೆ ಪಕ್ಕದ ಕಾಲುದಾರಿ ಅವರಿಗೆ ಅನುಕೂಲಕರವಾಗಿತ್ತು. ಒಂದು ದಿನ ರಾತ್ರಿ ಇಬ್ಬರೂ ಸಕಲ ಸಾಮಗ್ರಿ ಸಹಿತ ಸನ್ನದ್ಧರಾಗಿ ಬಂದಿದ್ದರು. ಏನೇನು ತಯಾರಿ ಮಾಡಿಕೊಂಡಿದ್ದೀರಿ ಎಂದಿದ್ದಕ್ಕೆ ಬೊಮ್ಮ ಒಂದು ಬಾವಿ ಹಗ್ಗ, ಜಬ್ಬು ಜಬ್ಬಾಗಿ
ಹೋಗಿದ್ದ, ಹತ್ತಾರು ಬಾರಿ ಕುಟ್ಟಿದರೆ ಯಾವಾಗಲೋ ಒಂದು ಬಾರಿ ಹತ್ತುವಂತಹ ಒಂದು ಹಳೆ ಎವರೆಡಿ ಟಾರ್ಚು, ಮುಖ್ಯವಾಗಿ ಕುತ್ತಿಗೆಯಲ್ಲಿ ಮತ್ತು ತೋಳಿನಲ್ಲಿ ಮುಲ್ಕಿಯಿಂದ ಕಟ್ಟಿಸಿಕೊಂಡು ಬಂದಿದ್ದ ಎರೆಡು ತಾಯತಗಳು ಇತ್ಯಾದಿ ತೋರಿಸಿದ. ಈ ತಾಯತಗಳು ಎಲ್ಲಿಯವರೆಗೆ ತಮ್ಮ ಮೈಮೇಲಿರುವುದೋ ಅಲ್ಲಿಯವರೆಗೂ ಭೂತ ತಮ್ಮನ್ನೇನೂ ಮಾಡದೆಂದೂ, ಎಲ್ಲಿದ್ದರೂ ಬಂದು ತಮ್ಮ ಕಾಲಿಗೆ ಬೀಳುವುದೆಂದೂ ಇಬ್ಬರೂ ಬಲವಾಗಿ ನಂಬಿದ್ದರು. ಈ ನಂಬಿಕೆಯ ಮೇಲೆಯೇ ಇಬ್ಬರೂ ಇಂತಹ ಅಪಾಯಕಾರಿ ಕೆಲಸಕ್ಕೆ ಕೈಹಾಕಿದ್ದರು.
ಇವರ ಸಾಹಸ ಕಥೆಯ ಇತ್ಯರ್ಥ ಏನಾಯಿತೆಂದು ಮರುದಿನ ವಿಚಾರಿಸಿದಾಗ ಇವರು ಭೂತವನ್ನು ನೋಡಿದ್ದರೆಂದೂ ಹಿಡಿಯಲು ಹತ್ತಿರ ಹೋದಾಗ ಯಥಾಪ್ರಕಾರ ಸೆಗಣಿ ಎಸೆದು ಪರಾರಿಯಾಯ್ತೆಂದೂ ಸೇಕ್ರ ಹೇಳಿದ. ಅಂದರೆ ಭೂತಕ್ಕೆ ಇವರ ತಾಯತ ನೋಡಿ ಹೆದರಿಕೆಯಾಯ್ತೆಂದೂ ನಾಳೆ ಮತ್ತೊಮ್ಮೆ ಹೋಗುತ್ತೇವೆಂದೂ ಹೇಳಿದ.
ಮರುದಿನ ಬೆಳ್ಳಂಬೆಳಗ್ಗೆ ಮನೆಯೆದುರು ಏನೋ ಗಲಾಟೆಯಾಗುತ್ತಿದ್ದ ಶಬ್ದದಿಂದ ನಮಗೆ ಎಚ್ಚರಾಯಿತು. ವಿಷಯ ಏನೆಂದು ತಿಳಿಯಲು ವಾವು ಒಂದೇ ಓಟಕ್ಕೆ ಬೀದಿಗೆ ಓಡಿದೆವು. ಅಲ್ಲಿ ನೋಡಿದರೆ ಸೇಕ್ರನೂ ಬೊಮ್ಮನೂ ದೊಡ್ಡ ಹೀರೋಗಳಾಗಿ ನಿಂತಿದ್ದರು. ಬಾವಿ ಹಗ್ಗದಿಂದ ಒಬ್ಬಾತನನ್ನು ಕೈ ಕಾಲು ಕಟ್ಟಿ ನಿಲ್ಲಿಸಿದ್ದರು. ಇಬ್ಬರ ಮುಖದ ಮೇಲೆ ವಿಜಯೋತ್ಸವವಿತ್ತು. ನೋಡುನೋಡುತ್ತಿದ್ದಂತೆ ಅಕ್ಕಪಕ್ಕದವರೆಲ್ಲಾ ಜಮಾಯಿಸಿ ಒಂದು ಚಿಕ್ಕ ಗುಂಪೇ 'ದೆವ್ವ'ವನ್ನು ನೋಡಲು ನೆರೆದುಬಿಟ್ಟಿತ್ತು. ಹಿರಿಯರಾದ ಕೃಷ್ಣಮೂರ್ತಿ ಮಾಸ್ತರರು ಕೇಸನ್ನು ಕೈಗೆತ್ತಿಕೊಂಡು ಬಂಧಿಸಲ್ಪಟ್ಟವ ಯಾರು? ಏಕೆ ಹೀಗೆ ಮಾಡುತ್ತಿದ್ದಾನೆ ಎಂದೆಲ್ಲಾ ವಿಚಾರಿಸಿದರು. 'ಭೂತ' ಬೇರಾರೂ ಆಗಿರದೆ ನಮ್ಮ ಬೀದಿಯವನೇ ಆದ ಷಣ್ಮುಖನಾಗಿದ್ದ. 'ಷ' ಅಕ್ಷರವನ್ನು ಸರಿಯಾಗಿ ಉಚ್ಛರಿಸಲಾಗದ ಜನರ ಬಾಯಲ್ಲಿ ಸಣ್ಮುಕನಾಗಿದ್ದ. ಮಲೆನಾಡಿನಲ್ಲಿ ಹೆಚ್ಚಿನವರು ಯಾರೂ ಗುಡ್ಡಗಳನ್ನು (ಗಂಡು ಕರು) ತಮ್ಮ ಕೊಟ್ಟಿಗೆಯಲ್ಲಿ ಕಟ್ಟುವುದಿಲ್ಲ. ಅವು ಉಂಡಾಡಿಗುಂಡರಂತೆ ದಿನವಿಡೀ ತಿರುಗಿ, ತಿಂದು ರಾತ್ರಿ ಎಲ್ಲಿ ಬೆಚ್ಚಗಿದೆಯೋ ಅಲ್ಲಿ ಮಲಗಿಬಿಡುತ್ತಿದ್ದವು. ಕಲ್ಲು ಚಪ್ಪಡಿ, ಟಾರು ರಸ್ತೆ ಇತ್ಯಾದಿಗಳು ಹಗಲಿನ ಬಿಸಿಲಿನ ಕಾವಿಗೆ ಬಿಸಿಯಾಗಿ ರಾತ್ರಿ ಚಳಿಗೆ ಬೆಚ್ಚಗಿರುತ್ತಿದ್ದುದರಿಂದ ತಣ್ಣಗಿನ ಹುಲ್ಲಿಗಿಂತ ಚಪ್ಪಡಿ ಕಲ್ಲೇ ಅವುಗಳಿಗೆ ಬೆಚ್ಚಗೆ ಆರಾಮವೆನಿಸುತ್ತಿತ್ತೋ ಏನೋ. ರಸ್ತೆಯುದ್ದಕ್ಕೂ ಹಲವು ದನಗಳೂ ಗುಡ್ಡಗಳೂ ಮಲಗಿರುವುದು ಸಾಮಾನ್ಯ ಸಂಗತಿ. ಮಲೆನಾಡಿನಲ್ಲಿ ಆಗಲೂ ಗೋರ್ಮೆಂಟ್ ಗೊಬ್ಬರಕ್ಕಿಂತಲೂ (ರಾಸಾಯನಿಕ) ದನದ ಗೊಬ್ಬರಕ್ಕೇ ಹೆಚ್ಚಿನ ಬೇಡಿಕೆ ಇತ್ತು. ಹಲವರು ಮುಂಜಾನೆ ಬೇಗ ಎದ್ದು ಒಂದು ಬುಟ್ಟಿಯನ್ನೋ, ಮಂಕರಿಯನ್ನೋ ತಲೆಯ ಮೇಲೆ ಹೊತ್ತು ರಸ್ತೆ ಬದಿಯಲ್ಲಿ ದನಗಳು ಹಾಕಿರುವ ಸಗಣಿಯನ್ನು ಬಾಚಿ ಮನೆ ಹಿತ್ತಲಲ್ಲಿರುವ ಗೊಬ್ಬರದ ಗುಂಡಿಯಲ್ಲಿ ಸಂಗ್ರಹಿಸಿ ಸ್ವಲ್ಪ ಜಮಾ ಆದ ಮೇಲೆ ಯಾರಿಗಾದರೂ 'ಬುಟ್ಟಿಗಿಷ್ಟು' ಎಂದು ಮಾರಿ ಹೆಚ್ಚುವರಿ ಸಂಪಾದನೆ ಮಾಡಿಕೊಳ್ಳುವುದು ಎಲ್ಲರಿಗೂ ಗೊತ್ತಿದ್ದ ವಿಷಯ. ಈ ಸಣ್ಮುಕನೂ ಇದೇ ರೀತಿಯ ಒಬ್ಬ ಪಾರ್ಟ್ ಟೈಂ ಸಗಣಿ ಸಂಗ್ರಹಕಾರನಾಗಿದ್ದ. ತಾನೇ ಅತಿ ಹೆಚ್ಚು ಸಗಣಿ ಬಾಚಬೇಕೆಂಬ ದುರಾಸೆಯಿಂದ ಬೆಳಗ್ಗೆ ನಾಲ್ಕುವರೆ-ನಾಲ್ಕು ಮುಕ್ಕಾಲಿಗೇ ಎದ್ದು ಹೊರಡುತ್ತಿದ್ದ. ಹೊರಗಡೆ ಚಳಿ. ಅದಕ್ಕೆ ಒಂದು ಬೆಳ್ಳಗಿನ ಛದ್ದರವನ್ನು ತಲೆಯಿಂದ ಪಾದದವರೆಗೂ ಸುತ್ತಿಕೊಂಡು ಹೊರಡುತ್ತಿದ್ದ. ಅಜ್ಜಿ ನೋಡಿದ 'ಭೂತ' ಇದೇ. ಮಳೆಗಾಲ ಕಳೆದು ಕಾಂಗ್ರೆಸ್ ಗಿಡಗಳೆಲ್ಲಾ ಆಳೆತ್ತರಕ್ಕೆ ಬೆಳೆದು ರಸ್ತೆಯ ಇಕ್ಕೆಲಗಳಲ್ಲಿ ಚಾಚಿದ್ದುದರಿಂದ ಅದರ ಹಿಂದೆ ಬಿದ್ದಿರಬಹುದಾದ ಸಗಣಿ ಹೆರಕಲು ಅತ್ತ ನುಸುಳುತ್ತಿದ್ದ. ಭೂತ ಫಕ್ಕನೆ ಮಾಯವಾಗುತ್ತಿದ್ದುದರ ಗುಟ್ಟು ಇದು. ನಂತರ ಗಿಡಗಳ ಸಂದಿಯಿಂದ ಇನ್ನೆಲ್ಲೋ ನುಸುಳಿ ಇನ್ನೆಲ್ಲಿಂದಲೋ ರಸ್ತೆಗೆ ಬರುತ್ತಿದ್ದ. ದನಗಳೆಲ್ಲಾದರೂ ಮಲಗಿದ್ದರೆ ಅವುಗಳ ಬೆನ್ನು ತಟ್ಟಿ ಎಬ್ಬಿಸುತ್ತಿದ್ದ. ಎದ್ದು ನಿಂತ ದನಗಳು ಮಾಡುವ ಮೊದಲ ಕೆಲಸ ಸಗಣಿ ಹಾಕುವುದು. ನೆಲತಾಗುವ ಮುನ್ನವೇ ಬುಟ್ಟಿ ಹಿಡಿದು ಸೆಗಣಿ ಸಂಗ್ರಹಿಸುತ್ತಿದ್ದ ಸಣ್ಮುಕ. ಈ ಗುಟ್ಟು ಗೊತ್ತಾದರೆ ಬೇರೆಯವರು ಬಿಟ್ಟಾರೆಯೇ? ಅವರೂ ಬಂದರೆ ಇವನಿಗೆ ಸಿಗುತ್ತಿದ್ದ ಸಗಣಿಯನ್ನು ಅವರೊಂದಿಗೆ ಪಾಲು ಮಾಡಿಕೊಳ್ಳಬೇಕಲ್ಲಾ, ಅದಕ್ಕೇ ಯಾರಾದರೂ ಹತ್ತಿರ ಬಂದರೆ ಅವರ ಮೇಲೆ ಸೆಗಣಿ ಎಸೆಯುತ್ತಿದ್ದ.
ಅಂದು ಕೂಡಾ ಮಾಮೂಲಿಯಂತೆ ಸಣ್ಮುಕ ಸಗಣಿ ಹೆರಕುವುದರಲ್ಲಿ ಮಗ್ನನಾಗಿದ್ದ. ಸದ್ದು ಮಾಡದೇ ಹಿಂದಿನಿಂದ ಬಂದ ಸೇಕ್ರನೂ ಬೊಮ್ಮನೂ ಏಕಾಏಕಿ 'ಯಾರದು?' ಎಂದು ಕೇಳಿದರಂತೆ. ಕಕ್ಕಾಬಿಕ್ಕಿಯಾದ ಸಣ್ಮುಕನಿಗೆ ಒಂದು ಕ್ಷಣ ಏನು ಹೇಳಲೂ ತೋಚದೆ 'ನಾನು ನಾನು' ಎಂದು ತೊದಲಿದನಂತೆ. ಯಾವಾಗ ನಾನು ನಾನು ಎಂದು ತೊದಲಿದನೋ ಆಗಲೇ ಸೇಕ್ರನಿಗೆ ಇದು ದೆವ್ವವಲ್ಲವೆಂದು ಮನದಟ್ಟಾಯಿತಂತೆ. ಏಕೆಂದರೆ ದೆವ್ವ ಯಾವತ್ತೂ ತೊದಲುವುದಿಲ್ಲವಂತೆ. ಅದೂ ಅಲ್ಲದೇ ದೆವ್ವಕ್ಕೆ ಕಾಲು ಹಿಂದುಮುಂದಾಗಿರುತ್ತದಂತೆ. (ಪಾದ ಹಿಂದುಮುಂದಾಗಿದ್ದರೆ ಮುಂದೆ ಮುಂದೆ ನಡೆಯುತ್ತಿದ್ದುದು ಹೇಗೆ? ವೈಜ್ಞಾನಿಕವಾಗಿ ಅಸಾಧ್ಯವಾದ ಇದು ದೆವ್ವಗಳಿಗೆ ಮಾತ್ರ ಸಾಧ್ಯವಾಗುತ್ತಿದ್ದಿರಬೇಕು) ತಕ್ಷಣ ಇಬ್ಬರೂ ಬಾವಿ ಹಗ್ಗ ಎಸೆದು ಭೂತವನ್ನು ಬೀಳಿಸಿ ಹಗ್ಗದಿಂದ ಕೈಕಾಲು ಕಟ್ಟಿದರಂತೆ. ಪಾದ ಹಿಂದುಮುಂದಾಗಿಲ್ಲದೇ ಸರಿಯಾಗಿದ್ದುದರಿಂದ ಇದು ಮನುಷ್ಯನೇ ಎಂದು ದೃಢೀಕರಿಸಿಕೊಂಡರಂತೆ.
ಗುಂಪಿನಲ್ಲಿದ್ದವರು ತಲೆಗೊಂದು ಮಾತನಾಡಿ ಕಡೆಗೆ 'ಭೂತ'ವನ್ನು ಪೋಲೀಸರಿಗೆ ಕೊಟ್ಟು ಬಿಡೋಣವೆಂಬ ತೀರ್ಮಾನಕ್ಕೆ ಬಂದರೂ ಕೃಷ್ಣಮೂರ್ತಿ ಮಾಸ್ತರರು ಸಣ್ಮುಕನ ಮೇಲೆ ದಯೆ ತೋರಿ ಇನ್ನೆಂದೂ ಹೀಗೆ ಮಾಡಬಾರದೆಂದೂ, ದೇವಸ್ಥಾನಕ್ಕೆ ಹೋಗಿ ತಪ್ಪುದಂಡ ಕಟ್ಟಿ ಕ್ಷಮೆ ಕೇಳಬೇಕೆಂದೂ ಸಣ್ಮುಕನ ಬಿಡುಗಡೆ ಮಾಡಿದ್ದರು. ಮಾರನೆಯ ದಿನದಿಂದ ನಾವು ನಿರಾತಂಕವಾಗಿ ನಮಾಜಿಗೆ ಹೋಗಲು ತೊಡಗಿದೆವು.
(ಇತ್ತೀಚೆಗೆ ತುಷಾರದಲ್ಲಿ ಈ ಲೇಖನ ಪ್ರಕಟವಾಗಿದೆ)









Good One, keep it coming.
Good One, keep it coming.
good one.!
good one.!
Arshad avare, bahaLa
Arshad avare, bahaLa chennaagi vivarisiddeera... abhinaMdanegaLu
Well written 'ghost' story.
Well written 'ghost' story. It has been long since I stopped reading Kannada story books or articles for want of time and availability.
This thriller of an article is not only grippingly entertaining but also took me to a nostalgic trip. Having lived in Agumbe and Malnad during my school days, Arshad's vivid narrations of earlier village lifestyle brought back those fond memories.
Kudos to the Editor for providing this platform.