- ಶ್ರೀನಾಥ್ ಭಲ್ಲೆ
(ಹೋಟಲ್ ಸನ್ನಿವೇಶ. ಯಜಮಾನ ಒಬ್ಬನೇ ಕುಳಿತಿದ್ದಾನೆ. ಒಬ್ಬ ಗಿರಾಕಿಯೂ ಇಲ್ಲ)
ಯಜಮಾನ: {ಸುತ್ತಲೂ ನೋಡುತ್ತಾ} ಯಾಕೋ ಒಬ್ಬರೂ ಇಲ್ಲ. ಈ ಆಂಜನೇಯಂದು ಏನಾದ್ರೂ ಕಿತಾಪತೀನಾ? ಇವನ ಹೆಸರು ಆಂಜನೇಯ ಆದರೂ ನಾರದನ ಕೆಲಸ ಚೆನ್ನಾಗಿ ಮಾಡ್ತಾನೆ {ಆಂಜನೇಯನನ್ನು ಕೂಗಿ ಕರೆಯುತ್ತಾನೆ} ಲೋ! ಆಂಜನೇಯಾ... ಬೇಗ ಬಾ ಇಲ್ಲಿ
(ಆಂಜನೇಯ ಸ್ಲೋ ಮೋಶನ್'ನಲ್ಲಿ ಬರುತ್ತಾ, ಹೆಗಲ ಮೇಲೆ ಸೌಟು ಇಟ್ಟುಕೊಂಡು ಮೂತಿ ಉಬ್ಬರಿಸಿ ಆಂಜನೇಯನ ಶೈಲಿಯಲ್ಲಿ ನಿಲ್ಲುತ್ತಾನೆ)
ಯಜಮಾನ: ಇದೊಂದು ಬೇರೇ ಕೇಡು
ಆಂಜನೇಯ: ಏನು ವಿಷಯ ಯಜಮಾನ್ರೇ?
ಯಜಮಾನ: ನಿನ್ನ ಹೆಸರಿಗೆ ಸರಿಯಾಗಿ ನಿನಗೆ ಎಲ್ಲ ಇದೆ... ಬಾಲ ಒಂದು ಇಲ್ಲ ಅಷ್ಟೇ!
ಆಂಜನೇಯ: ನಾಳೆಯಿಂದ ನಾನು ಒಂದು ಅಂಟಿಸಿಕೊಂಡು ನಿಮಗೂ ಒಂದು ತಂದು ಬಿಡ್ಲಾ.. ಯಜಮಾನ್ರೇ?
ಯಜಮಾನ: ಆಗ ನಾನು ಇಲ್ಲಿ ಚೇರ್ ಬದಲು ಮರ ನೆಡಬೇಕಾಗುತ್ತೆ.
(ಆ ಕಡೆ ಈ ಕಡೆ ನೋಡಿ)
ಯಜಮಾನ: ಅದು ಸರಿ, ಯಾಕೆ ಒಬ್ಬ ಗಿರಾಕೀನೂ ಇಲ್ಲ. ನೀನೇನಾದ್ರೂ ಕಿತಾಪತಿ ಮಾಡಿದ್ಯಾ ಹೇಗೇ?
ಆಂಜನೇಯ: (ತನಗೇನೂ ಗೊತ್ತಿಲ್ಲ ಎಂಬಂತೆ) ನಾನೇನೂ ಮಾಡ್ಲಿಲ್ಲಪ್ಪ !
ಯಜಮಾನ: (ಅನುಮಾನದಿಂದ) ಆಗ್ಲೇ, ಯಾರೋ ಇಲ್ಲಿ ಒಳಗೆ ಬಂದು ಹಾಗೇ ಹೊರಗೆ ಹೋದ್ರು ಮತ್ತೆ?
ಆಂಜನೇಯ: (ನೆನಪಿಸಿಕೊಳ್ಳುವಂತೆ) ಓ! ಅವರಾ, ಪಾಪ ಸುಮ್ಮನೆ ಬಂದಿದ್ರು
ಯಜಮಾನ: (ಗದರುತ್ತ) ಸುಳ್ಳು. ಸುಮ್ಮನೆ ಯಾಕೆ ಬರ್ತಾರೆ?
ಆಂಜನೇಯ: ಅವರೂ, ಒಳ್ಳೇ ಮಸಾಲದೋಸೆ ಕೊಡು ಅಂದ್ರು.
ಯಜಮಾನ: ಸರಿ. ಆಮೇಲೆ?
ಆಂಜನೇಯ: ನಾನು ಹೇಳಿದೆ, ಮಸಾಲ ದೋಸೆ ಇದೆ, ಆದರೆ, ಒಳ್ಳೇ ಮಸಾಲೆ ಬೇಕೂ ಅಂದರೆ ಪಕ್ಕ ಹೋಟೆಲ್ಲಿಗೆ ಹೋಗಿ ಅಂದೆ..
(ಕೈ ಬೀಸಿ ತೋರುತ್ತಾ) ಅವರು ಹೊರಟುಹೋದ್ರು
ಯಜಮಾನ: (ಕೋಪದಿಂದ) ನನಗೆ ಗೊತ್ತು ಇದೆಲ್ಲಾ ನಿಂದೆ ಕಿತಾಪತಿ ಅಂತ. (ಹೊಡೆಯಲು ಹೋದಂತೆ ಮಾಡುತ್ತಾ) ನಿನ್ನಾ.. (ಯಾರೋ ಒಳಗೆ ಬರುವುದು ಕಂಡು)
ಯಜಮಾನ: ಸರಿ ಸರಿ.. ಹೋಗು. ಯಾರೋ ಗಿರಾಕಿ ಬರ್ತಿದ್ದಾರೆ. ನಿನ್ನನ್ನ ಆಮೇಲೆ ನೋಡ್ಕೋತೀನಿ.
(ಯಾರೋ ಒಳಗೆ ಬಂದು ಕುಳಿತುಕೊಳ್ತಾರೆ. ಸುಮ್ಮನೆ ಕುಳಿತುಕೊಳ್ತಾರೆ. ಆಂಜನೇಯ ಅವರಿಗೆ ಗಾಳಿ ಬೀಸ್ತಾನೆ. ನೀರು ತಂದುಕೊಡ್ತಾನೆ. ಅವರು ಅದನ್ನು ಕುಡಿದು ಹೊರಡಲು ಸಿದ್ದ ಆಗ್ತಾರೆ)
ಯಜಮಾನ: (ಅರ್ಥವಾಗದಂತೆ) ರ್ರೀ! ಸ್ವಾಮಿ. ನಿಮಗೆ ಏನೂ ಬೇಡ್ವಾ ತಿನ್ನೋಕೆ?
ಗಿರಾಕಿ ೧: ಖಂಡಿತ ಬೇಡ. ಹೋದ್ಸಾರೀ ನಿಮ್ಮ ಹೋಟಲ್ ನಲ್ಲಿ ೧ ಬಜ್ಜಿ ತಿಂದಿದಕ್ಕೆ ೩ ದಿನ ಟಾಯ್ಲೆಟ್'ನಲ್ಲೇ ಮಲಗಿದ್ದೆ.
ಯಜಮಾನ: (ಸಮಾಧಾನ ಮಾಡುವಂತೆ) ಅದೂ ಹಿಟ್ಟಿನ ಮಿಸ್ಟೇಕೂ... (ಹಲ್ಲು ಗಿಂಜುತ್ತ) ಈ ಸಾರಿ ಒಳ್ಳೇ ಹಿಟ್ಟು ಬಂದಿದೆ. ಧೈರ್ಯವಾಗಿ ತಿನ್ನಿ
ಆಂಜನೇಯ: (ಸಲೀಸಾಗಿ) ಹಿಟ್ಟು ಹೊಸಾದು. ಎಣ್ಣೆ ಅವತ್ತಿಂದೇ !.
ಗಿರಾಕಿ ೧: (ಹೆದರಿ ಕೈ ಮುಗಿದು) ನೀವೂ ಬೇಡ ನಿಮ್ಮ ಹೋಟಲ್ಲೂ ಬೇಡ. ನೀರು ಕೊಟ್ಟಿದಕ್ಕೆ ಥ್ಯಾಂಕ್ಸ್. ನಾನು ಬರ್ತೀನಿ.. ಅಲ್ಲ ಅಲ್ಲಾ
ಹೋಗ್ತೀನಿ
ಆಂಜನೇಯ: (ಹೆಗಲ ಮೇಲ ಟವಲ್ ಕೊಡವುತ್ತ) ಸುಮ್ಮನೆ ಗಾಳಿ ವೇಸ್ಟ್ ಆಯಿತು ಅಷ್ಟೇ!
(ಗಿರಾಕಿ ಹೊರಟು ಹೋಗ್ತಾನೆ)
ಯಜಮಾನ: ನಿನ್ನಿಂದ ಬಂದ ಒಬ್ಬ ಗಿರಾಕೀನೂ ಹೊರಟು ಹೋದ. ಥತ್ ಕರ್ಮ ಕರ್ಮ!
ಆಂಜನೇಯ: ಯಜಮಾನ್ರೆ, ನಾನು ಪಕ್ಕದ ಹೋಟಲ್ಲಿಗೆ ಹೋಗಿ ತಿಂಡಿ ತಿನ್ಕೊಂಡು ಬರ್ತೀನಿ. (ಸೌಟು, ಟವಲ್ಲು ಕೈಗೆ ಕೊಡುತ್ತಾ) ಇದನ್ನು ಇಟ್ಟುಕೊಳ್ಳಿ.
ಯಜಮಾನ: (ಏನೂ ಮಾಡಲು ತೋರದೆ) ನೀನೊಬ್ಬ ಹಿತಶತ್ರು ನನಗೆ. ತೊಲಗು.
(ಆಂಜನೇಯ ಹೊರಗೆ ಹೋಗ್ತಾನೆ. ಯಾಜಮಾನ ಹಾಗೆ ಚೇರಿಗೆ ಒರಗುತ್ತಾನೆ. ಗಿರಾಕಿ ೨ ಒಳಗೆ ಬರ್ತಾನೆ)
ಗಿರಾಕಿ ೨: (ಮಲಗಿರುವ ಯಜಮಾನನ ಬಳಿ ಬಂದು) ರ್ರೀ ಸ್ವಾಮಿ ! ರ್ರೀ
ಯಜಮಾನ: (ಧಿಗ್ಗನೆ ಎದ್ದು ಕುಳಿತು) ಓ! ಬನ್ನಿ ಬನ್ನಿ..
ಗಿರಾಕಿ ೨: ಮಾರ್ಕೆಟ್'ಗೆ ಹೋಗೋ ಬಸ್ಸು ಎಷ್ಟು ಹೊತ್ತಿಗೆ ಬರುತ್ತೆ?
ಯಜಮಾನ: (ರೇಗುತ್ತ) ಬೇರೆ ಯಾರನ್ನಾದರೂ ಕೇಳ್ರೀ. ನನ್ಯಾಕೆ ಎಬ್ಬಿಸ್ತೀರಾ?
ಗಿರಾಕಿ ೨: (ಆಂಜನೇಯ ಹೋದ ದಾರಿಗೆ ಕೈ ತೋರಿ) ಅಲ್ಲಿ ಒಬ್ಬನ್ನ ಕೇಳಿದೆ. ಅವನು ನಿಮ್ಮನ್ನು ಎಬ್ಬಿಸಿ ಕೇಳಿ ಅಂದರು
ಯಜಮಾನ: (ಪ್ರೇಕ್ಷಕರ ಕಡೆ ನೋಡುತ್ತ) ಓ! ಇದೆಲ್ಲ ಆ ಆಂಜನೇಯಂದೇ ತಲೆಹರಟೆ. (ಗಿರಾಕಿ ಕಡೆ ತಿರುಗಿ) ನನಗೆ ಗೊತ್ತಿಲ್ಲ... ನಿಮಗೇನು ಬೇಕು?
ಗಿರಾಕಿ ೨: ಚಿಕನ್ ಇದೆಯಾ?
ಯಜಮಾನ: ಅವೆಲ್ಲ ಇಲ್ಲ.
ಗಿರಾಕಿ ೨: ನಾನೂ ತಿನ್ನಲ್ಲ, ಕೇಳ್ದೆ ಅಷ್ಟೇ! ಇಡ್ಲಿ ಇದೆಯಾ?
ಯಜಮಾನ: ಇದೆ ಇದೆ. ಬನ್ನಿ ಕೂತ್ಕೊಳ್ಳಿ
ಗಿರಾಕಿ ೨: (ಕುಳಿತುಕೊಂಡು) ಒಂದು ಪ್ಲೇಟಿಗೆ ಎಷ್ಟು?
ಯಜಮಾನ: ಐದು ರುಪಾಯಿ
ಗಿರಾಕಿ ೨: ಇಡ್ಲಿ ಜೊತೆ ಚಟ್ನಿ ಕೊಡ್ತೀರಾ?
ಯಜಮಾನ: ಕೊಡ್ತೀವಿ
ಗಿರಾಕಿ ೨: ಓ! ಚಟ್ನಿಗೆ ಎಷ್ಟು?
ಯಜಮಾನ: ಚಟ್ನಿ ಫ಼್ರೀ
ಗಿರಾಕಿ ೨: ನನಗೆ ಇಡ್ಲಿ ಬೇಡ. (ಕೈಗಳನ್ನು ಬೊಗಸೆಯಂತೆ ತೋರಿಸಿ) ಒಂದು ಬಟ್ಟಲು ಚಟ್ನಿ ತೊಗೊಂಡು ಬರ್ತೀರಾ?
ಯಜಮಾನ: (ರೋಸಿ ಹೋಗಿ) ನಿಮ್ಮಂತಹ ಗಿರಾಕಿಗಳು ಇರೋದ್ರಿಂದಾನೇ ನಾನು ಪಾಪರ್ ಆಗ್ತಿರೋದು. ರ್ರೀ, ಹೋಗ್ರೀ ಆಚೆ
ಗಿರಾಕಿ ೨: ಥತ್! (ಎಂದು ಹೊರಗೆ ಹೋಗ್ತಾನೆ)
(ಆಂಜನೇಯ ಒಳಗೆ ಬರ್ತಾನೆ. ಹಿಂದೇನೇ ಇನ್ನೊಬ್ಬ ಗಿರಾಕಿ ಬರ್ತಾನೆ)
ಗಿರಾಕಿ ೩: (ಒಳಗೆ ಬಂದು ಯಜಮಾನನಿಗೆ ಕೇಳ್ತಾನೆ) ಇಲ್ಲಿ ಒಳ್ಳೆ ಹೋಟಲ್ ಎಲ್ಲಿದೆ?
ಯಜಮಾನ: (ಸ್ವಪ್ರಶಂಸೆ ತೋರುತ್ತ) ಇಡೀ ಊರಿಗೆ ನಂದೇ ಬೆಸ್ಟ್ ಹೋಟಲ್, ಬನ್ನಿ ಒಳಗೆ
ಗಿರಾಕಿ ೩: ಏನ್ರೀ ಇವತ್ತಿನ ಸ್ಪೆಶಲ್ಲೂ?
ಯಜಮಾನ: (ಹೊರಗಡೆ ಬೋರ್ಡ್ ತೋರಿಸುತ್ತ) ಹೊರಗಡೇನೇ ಬೋರ್ಡ್ ಮೇಲೆ ಬರೆದಿದ್ದೀವಿ, ನೋಡಿ
ಗಿರಾಕಿ ೩: (ಕಣ್ಣನ್ನು ತೋರುತ್ತ) ಕನ್ನಡಕ ಮರೆತುಬಿಟ್ಟೆ, ಸ್ವಲ್ಪ ನೀವೇ ಹೇಳಿ...
ಯಜಮಾನ: ಲೋ! ಆಂಜನೇಯಾ... ಏನೋ ಬರೆದಿದ್ದೀಯಾ ಓದಿ ಹೇಳೊ !
ಆಂಜನೇಯ: (ರಾಗವಾಗಿ) ಚಿತ್ರಾ....ನ್ನ
ಗಿರಾಕಿ ೩: (ಅನುಮಾನದಿಂದ) ಅಲ್ರೀ, ನೆನ್ನೇನೂ ಅದೇ ಸ್ಪೆಶಲ್ ಅಲ್ವಾ?
ಆಂಜನೇಯ: ಹೌದು ಮೇಡಮ್, ನೆನ್ನೇದು ಇನ್ನೂ ಮಿಕ್ಕಿದೆ ಅದಕ್ಕೆ ಚೇಂಜ್ ಮಾಡಬೇಡ ಅಂದ್ರೂ (ಅಂತ ಯಜಮಾನನ ಕಡೆ ಕೈ ತೋರಿಸುತ್ತಾನೆ)
ಗಿರಾಕಿ ೩: (ಅಸಹ್ಯ ತೋರುತ್ತ) ದುಡ್ಡು ಕೊಟ್ಟು ಹಳಸಿದ್ದು ತಿನ್ಬೇಕಾ?
ಯಜಮಾನ: ಇಲ್ಲಾ, ಬಿಸಿ ಮಾಡಿ ಕೊಡ್ತೀವಿ... ಅಮೇರಿಕದಲ್ಲೂ ಹಾಗೇ ತಿನ್ನೋದು
ಗಿರಾಕಿ ೩: ಅದು ಬೇಡ ನನಗೆ, ಊಟ ಇದೆಯಾ?
ಆಂಜನೇಯ: ಇದೆ, ಬನ್ನಿ.
ಗಿರಾಕಿ ೩: ಒಂದು ಊಟ ತಂದು ಕೊಡಿ.
(ಆಂಜನೇಯ ಊಟ ತಂದುಕೊಡ್ತಾನೆ)
ಗಿರಾಕಿ ೩: (ತಟ್ಟೆಯಲ್ಲಿದ್ದ ಊಟ ಕೆದಕಿ ನೋಡಿ) ಲೋ!, ಏನೋ ಇದು? ಊಟದಲ್ಲಿ ಇರುವೇ?
ಆಂಜನೇಯ: ಆನೆ ಹಾಕೋಣ ಅಂದರೆ ತಟ್ಟೆ ಚಿಕ್ಕದು !
ಗಿರಾಕಿ ೩: ತಲೆಹರಟೆ...(ಅನ್ನ ಹಿಸುಕಿ ನೋಡಿ)... ಇದೇನೋ ಅಕ್ಕೀನೇ ಬೆಂದಿಲ್ಲ?
ಯಜಮಾನ: ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ.
ಆಂಜನೇಯ: ಇದುವರೆಗೂ ನಮ್ಮ ಹೋಟಲ್ಲಿನಲ್ಲಿ ಒಂದೇ ಸಾರಿ ಅಕ್ಕಿ ಬೆಂದಿರೋದು.
ಗಿರಾಕಿ ೩: (ಪ್ರಶ್ನಾರ್ಥಕವಾಗಿ) ಯಾವಾಗ?
ಆಂಜನೇಯ: ಅದೇ, (ಕೈ ಹಿಂದೆ ಓರುತ್ತ) ಹೋದ ವರ್ಷಾ ಹೋಟಲ್'ಗೆ ಬೆಂಕಿ ಬಿದ್ದಾಗ.
ಗಿರಾಕಿ ೩: ಈ ಊಟ ಮಾಡಿ ಬಿಟ್ರೆ, ನಾಲ್ಕು ದಿನ ಆಸ್ಪತ್ರೆ ಅಡ್ಮಿಟ್ ಆಗಬೇಕಾಗುತ್ತೆ. ನಿಮ್ಮ ಊಟ ನೀವೇ ಇಟ್ಟುಕೊಳ್ಳಿ (ತಟ್ಟೆ ಕುಕ್ಕಿ ಹೊರ ನೆಡೆಯುತ್ತಾನೆ)
(ಗಿರಾಕಿ ೩ ಹೊರಟುಹೋಗುತ್ತಾನೆ)
ಯಜಮಾನ: ಬಂದ ಮೂರೂ ಜನ ಹಾಗೇ ಹೋದ್ರು. ಯಾಕೋ ನನ್ನ ಟೈಮೇ ಸರಿಯಾಗಿಲ್ಲ.
ಆಂಜನೇಯ: ಹೌದು ಯಜಮಾನ್ರೆ. ನಿಮ್ಮ ಟೈಮು ಚೆನ್ನಾಗಿಲ್ಲ ಅದಕ್ಕೇ ಆ ಚೇರ್ ಮೇಲೆ ನಾನು ಕೂತ್ ಕೊಳ್ಳಾ?
ಯಜಮಾನ: ಲೋ! ದ್ರೋಹಿ !! ನನ್ನ ಸೀಟಿನ ಮೇಲೇ ನಿನಗೆ ಕಣ್ಣು. ಬೇರೇ ಐಡಿಯಾ ಹೇಳೋ!
ಆಂಜನೇಯ: ಯಜಮಾನ್ರೆ! ನೀವು ಹಳೇ ಐಟಮ್ಸ್'ನಲ್ಲೇ ಅಡ್ಜಸ್ಟ್ ಮಾಡ್ತೀರಾ. ಹಾಗೆಲ್ಲ ಮೋಸ ಮಾಡಬೇಡಿ.
ಯಜಮಾನ: ಲೇಯ್! ಒಳಗೆ ಹೋಗೋ. ನಿನಗೆ ಇವೆಲ್ಲ ಅರ್ಥ ಆಗಲ್ಲ. ನೋಡು ಯಾರೋ ಬರ್ತಾ ಇರೋ ಹಾಗೆ ಇದೆ.
(ಗಿರಾಕಿ ೪ ಒಳಗೆ ಬರುತ್ತಾನೆ. ಸುತ್ತಲೂ ನೋಡುತ್ತಾನೆ. ಕುಳಿತುಕೊಳ್ಳುತ್ತಾನೆ)
ಯಜಮಾನ: ಲೋ! ಆಂಜನೇಯ. ನೀರು ತಂದಿಡೋ! ನಿಮಗೆ ಏನು ಕೊಡಲಿ
ಗಿರಾಕಿ ೪: I dont know kannada. can u get 1 masala dosa and 1 coffee please
(ಆಂಜನೇಯ ನೀರು ತಂದಿಟ್ಟು ಜೋರಾಗಿ ಕೂಗುತ್ತಾನೆ... ಮಸಾಲೆ ಒಂದು )
ಯಜಮಾನ: (ಜೋರಾಗಿ) ಲೋ ಆಂಜನೇಯ! ಮೂಲೆಯಲ್ಲಿರೋ ಹಳೇ ಹಿಟ್ಟು ಹಾಕು. ಪಲ್ಯಕ್ಕೆ ಕೊತ್ತಂಬರಿ ಜಾಸ್ತಿ ಹಾಕು. ಆಗ ವಾಸನೆ ಬರಲ್ಲ
ಆಂಜನೇಯ: (ಯಜಮಾನನನ್ನು ತಡೆಯುವವನಂತೆ) ಯಜಮಾನ್ರೆ ಇದು ಮೋಸ.
ಯಜಮಾನ: ಹಾಗೇ, ಬೆಳಿಗ್ಗೆ ಮಾಡಿಟ್ಟ ಕಾಫ಼ಿ ಬಿಸಿ ಮಾಡಿ ತಂದುಕೊಡು, ಸಾಕು
ಆಂಜನೇಯ: ಇದಂತೂ ಸಿಕ್ಕಾಪಟ್ಟೆ ಮೋಸ
ಯಜಮಾನ: ಸುಮ್ಮನೆ ಹೋಗೋ ಒಳಗೆ! (ಗಿರಾಕಿ ಕಡೆ ನೋಡುತ್ತಾ) ಆಹಾ... ಎದುರಿಗೇ ಮೋಸ ಮಾಡ್ತಿದ್ರೂ ಏನೂ ಅರ್ಥ
ಆಗ್ತಿಲ್ಲ ಇವರಿಗೆ
(ಆಂಜನೇಯ ದೋಸೆ, ಕಾಫ಼ಿ ತಂದು ಇಡ್ತಾನೆ)
ಗಿರಾಕಿ ೪: (ಸಿಟ್ಟುಗೊಂಡು)why is the dosa size small? and this cofee smells?
ಯಜಮಾನ: (ಸಮಜಾಯಿಶಿ ಕೊಡುವವನಂತೆ) ಇಲ್ಲ.. ಇಲ್ಲ... ಹೊರಗಡೆ ಮೋರಿ ವಾಸನೆ ಇರಬೇಕು ಅಷ್ಟೇ !
ಗಿರಾಕಿ ೪: ಏನ್ರೀ, ಮೋಸ ಮಾಡ್ತೀರಾ? ನನಗೆ ಕನ್ನಡ ಬರುತ್ತೆ. ನಾನು ಯಾರು ಗೊತ್ತಾ?
ಯಜಮಾನ: ಆ! ನೀವು ಯಾರು?
ಗಿರಾಕಿ ೪: (ಜೇಬಿನಿಂದ ಕಾರ್ಡ್ ತೆಗೆದು ತೋರಿಸಿ) ನಾನು food inspector !. ನಿಮ್ಮ ಬಗ್ಗೆ ನಮಗೆ ಕಂಪ್ಲೈಂಟ್ ಬಂದಿದೆ. ನೀವು ಮೋಸ ಮಾಡ್ತಿದ್ದೀರ. ನಿಮ್ಮನ್ನ ಜೈಲಿಗೆ ಹಾಕ್ತೀನಿ.
ಯಜಮಾನ: (ಕುಸಿದು ಕುಳಿತು) ಅಯ್ಯೋ! ನನ್ನ ಬಿಟ್ಟು ಬಿಡಿ. ಇನ್ನೊಂದು ಸಾರಿ ಈ ತಪ್ಪು ಮಾಡಲ್ಲ.
ಆಂಜನೇಯ: (ದೈನ್ಯತೆಯಿಂದ) ಸಾರ್, ಅವರನ್ನು ಬಿಟ್ಟು ಬಿಡಿ, ಅವರು ಸ್ವಲ್ಪ ಮೋಸ ಮಾಡ್ತಾರೆ ಆದರೆ ಒಳ್ಳೆಯವರು.
ಗಿರಾಕಿ ೪: (ಸಮಾಧಾನದಿಂದ) you are good !. ನೀನೇ ಯಜಮಾನ ಆಗು. (ಆಂಜನೇಯನ ಕೈಗೆ ಕಾರ್ಡ್ ಕೊಟ್ಟು) ಇವನು ತೊಂದರೆ ಕೊಟ್ರೆ ನನಗೆ ಫ಼ೋನ್ ಮಾಡು. (ಯಜಮಾನನ ಕಡೆ ತಿರುಗಿ) ನೀನು ಒಳಗೆ ಹೋಗಿ ದೋಸೆ ಹಿಟ್ಟು ರುಬ್ಬು.
(ಇನ್ಸ್ ಪೆಕ್ಟರ್ ಹೊರಟು ಹೋಗುತ್ತಾನೆ. ಆಂಜನೇಯ ನಿಂತಲ್ಲೇ ಡ್ಯಾನ್ಸ್ ಮಾಡುತ್ತಾನೆ. ಯಜಮಾನ ಸಪ್ಪಗೆ ಅಡಿಗೆ ಮನೆಯ ಕಡೆ ಹೋಗುತ್ತಾನೆ)
ಆಂಜನೇಯ: (ಜೋರಾಗಿ) ಯಜಮಾನ್ರೇ, ಹೊಸ ಯಜಮಾನರಿಗೆ ಒಂದು ಕಾಫ಼ಿ
(ಯಜಮಾನ ಸಿಟ್ಟಿನಿಂದ "ಆಂಜನೇಯಾ" ಎಂದು ಕೂಗುತ್ತ ಸೌಟು ಹಿಡಿದು ಆಂಜನೇಯನನ್ನು ಅಟ್ಟಿಸಿಕೊಂಡು ಹೋಗುತ್ತ ಇಬ್ಬರೂ ಹಾಗೇ ನಿರ್ಗಮಿಸುತ್ತಾರೆ)









fyi. This is a kids drama.
fyi. This is a kids drama. Kids from Richmond Kannada Sangha has enacted this drama successfully