- ಗೋಪೀನಾಥ ರಾವ್
೨೦೦೮ರಲ್ಲಿ ಕನ್ನಡಧ್ವನಿಯಲ್ಲಿ ಏನು ಹೊಸತು?" ಅಂತ ಒಬ್ಬರು ಹಿರಿಯರು ಕೇಳಿದರು. ಪ್ರಾಮಾಣಿಕವಾಗಿ ಹೇಳುವುದಾದರೆ ನಾವು ಏನೂ ಹೊಸ ಯೋಜನೆಗಳನ್ನು ಹಾಕಿಕೊಂಡಿಲ್ಲ. ಆದರೂ ಏನೂ ಹೊಸತಿಲ್ಲ ಅನ್ನಲಿಕ್ಕಾಗುತ್ತದೆಯೇ? "ಓದುಗರಲ್ಲಿ ಈ ಪ್ರಶ್ನೆ ಹಾಕಿ ಮುಂದೆ ಉತ್ತಮ ಯೋಜನೆ ಸಿಕ್ಕಿದರೆ ಕೈಗೆತ್ತಿಕೊಳ್ಳುತ್ತೇವೆ" ಎಂದು ಸುತ್ತು ಬಳಸಿ ಉತ್ತರ ಹೇಳಿದೆ. ಅವರಿಗೆ ನನ್ನ ಸಂದಿಗ್ಧತೆ, ಆಶಯ ತಿಳಿದು ಹೋಯಿತು. "ಸುಮ್ಮನೆ ಕುಳಿತಿರಬಾರದು, ಕನ್ನಡಧ್ವನಿ ಒಂದು ಮೂವ್ ಮೆಂಟ್ ಆಗಬೇಕು" ಎಂದರು!
ಜಗತ್ತು ನಾವೆಣಿಸಿದಷ್ಟು ಹೊಲಸಾಗಿಲ್ಲ. ಜನರು ಇಂದಿಗೂ ಪ್ರಾಮಾಣಿಕ ಪ್ರಯತ್ನವನ್ನು ಮೆಚ್ಚಿಕೊಳ್ಳುತ್ತಾರೆ. ಹೊಗಳುತ್ತಾರೆ. ಇವರಿಂದ ಇನ್ನೂ ಹೆಚ್ಚಿನದ್ದನ್ನು ಪಡೆಯಬಹುದು ಎಂದು ನಿರೀಕ್ಷಿಸುತ್ತಾರೆ ಕೂಡ. ಆ ಹಿರಿಯ ಕನ್ನಡಿಗರು ಸೂಚಿಸಿದ್ದು "ಪುಸ್ತಕ ಪ್ರಕಾಶನ ಕೈಗೆತ್ತಿಕೊಳ್ಳಿ. ಅಂತರ್ಜಾಲದ ಹೊರಗಿನವರಿಗೂ ನಮ್ಮ ಹೊರನಾಡಿನ ಕನ್ನಡದ ಕಂಪು ಸಿಗುವಂತಾಗಬೇಕು. ಮಾಡೋ ಹಾಗಿದ್ದರೆ ಹೇಳಿ, ಹಣಕಾಸು ಹೊಂದಿಸಿಕೊಡಬಲ್ಲೆ" ಅಂತಲೂ ಸೇರಿಸಿದರು!
ಆಶಯವೇನೋ ಸರಿ. ಇದನ್ನು ಆರಂಭಿಸಬೇಕಿದ್ದರೆ ನಮ್ಮಲ್ಲಿ ಉತ್ಸಾಹಿ ಕಾರ್ಯಕರ್ತರ ಕೊರತೆ ಇದೆ. ಒಂದೋ ಎರಡೋ ಪುಸ್ತಕವಾದರೆ ಸಣ್ಣ ಮಟ್ಟಿನಲ್ಲಿ ನಮ್ಮ ಲೇಖಕವೃಂದದವರೇ ಈ ಕೆಲಸ ಮಾಡಬಹುದು. ನಿರಂತರ ಪ್ರಕ್ರಿಯೆಯಾಗಬೇಕಿದ್ದರೆ ಅದಕ್ಕೊಬ್ಬರು ಪೂರ್ಣಕಾಲಿಕ ಕಾರ್ಯಕರ್ತರು ಬೇಕಾಗುತ್ತಾರೆ. ಪುಸ್ತಕ ಪ್ರಕಟಣೆಯೆಂದರೆ ಬರೇ ಪ್ರಕಟಣೆ ಮಾತ್ರವಲ್ಲವಲ್ಲ - ಪ್ರಕಟಣೆ, ಮಾರಾಟ, ಲೆಕ್ಕ ಪತ್ರ ಹೀಗೆ ಹಲವಾರು ಕೆಲಸವಿದ್ದೇ ಇರುತ್ತದೆ.
ಈ ಬಗ್ಗೆ ವಿವರವಾದ ಯೋಜನೆ ಸಿದ್ಧ ಪಡಿಸಿ ನಿಮ್ಮ ಬಳಿಗೆ ಬರುತ್ತೇನೆ ಅಂತ ಹೇಳಿ ಬಂದಿದ್ದೇನೆ. ಏನೆಲ್ಲ ಮಾಡಬಹುದು ಅನ್ನುವ ಬಗ್ಗೆ ನಿಮ್ಮೆಲ್ಲರ ಅಭಿಪ್ರಾಯ ಬೇಕು. ಜೊತೆಗೆ ಯಾವ ರೀತಿಯಲ್ಲಿ ಹೊರನಾಡಿಗರ ಕನ್ನಡದ ಕಂಪು ಪಸರಿಸಬೇಕು ಅನ್ನುವ ಧೋರಣಾತ್ಮಕ ನಿಲುವನ್ನೂ ನಿಶ್ಚೈಸಿಕೊಳ್ಳಬೇಕು. ಸೂಕ್ತವಾದ ಪ್ರೆಸ್, ಮಾರಾಟಗಾರರು, ಮುಖಪುಟ ರಚಿಸಬಲ್ಲ ಕಲಾವಿದರು ಇತ್ಯಾದಿ ವಿವರಗಳೂ ಸಿದ್ಧವಾಗಬೇಕು. ಇದೆಲ್ಲವನ್ನೂ ಕರಡು ಯೋಜನೆಯಾಗಿ ಮಾರ್ಪಡಿಸಿ ಚರ್ಚಿಸಿ ನಿರ್ಧರಿಸಿಕೊಳ್ಳಬೇಕು.
ಈ ಹಂತದಲ್ಲಿ ಆ ಹಿರಿಯರನ್ನೂ ಮಾತುಕತೆಯಲ್ಲಿ ಸೇರಿಸಿಕೊಳ್ಳಬೇಕು...
ಸ್ಥೂಲವಾದ ಹೊಸವರ್ಷದ ಕರಡು ಯೋಜನೆ ಅದಾಗಲೇ ಸಿದ್ಧವಾಯಿತು ನೋಡಿ!
೨೦೦೮ರಲ್ಲಿ ಕನ್ನಡಧ್ವನಿ ಪ್ರಕಾಶನದ ಹೆಜ್ಜೆ ಇಡಲು ಸಾಧ್ಯವೋ ನೋಡೋಣ - ಇದು ನನ್ನ ಅಭಿಪ್ರಾಯ. ಇನ್ನು ನಿಮ್ಮ ಅಭಿಪ್ರಾಯ ತಿಳಿಸಿ.
ಇತೀ ನಿಮ್ಮ ಸಂಗಾತಿ,
ಗೋಪೀನಾಥ ರಾವ್









ಹೊಸ ವರ್ಷದ
ಹೊಸ ವರ್ಷದ ಹೊಸ ಯೋಜನೆ ಉತ್ತಮ ಭವಿಷ್ಯದತ್ತ ಮತ್ತೊ೦ದು ಹೆಜ್ಜೆಯಾಗಲಿ. ಕರ್ನಾಟಕದಲ್ಲಿರುವ ಲೇಖಕ, ಪ್ರಕಾಶಕ ವೃ೦ದದವರು ಸಹಕರಿಸಿದಲ್ಲಿ ಈ ಯೋಜನೆ ಯಶಸ್ವಿಯಾಗುವುದರಲ್ಲಿ ಸ೦ದೇಹವಿಲ್ಲ.
ಮೃಣಾಲಿನಿ