- ಆಸು ಹೆಗ್ಡೆ, ಬೆಂಗಳೂರು
ಚರಿತ್ರೆಯಾಯಿತು ಕಾಲ ಗರ್ಭದಲಿ ಸೇರಿ, ಮತ್ತೊಂದು ವರುಷ,
ಕೆಲವರಿಗೆ ನೀಡಿತ್ತು ನೋವು, ಇನ್ನು ಹಲವರಿಗೆ ತಂದಿತ್ತು ಹರುಷ;
ಹರುಷದಿಂದ ನಲಿವವನಿಗಿಲ್ಲ, ಸುತ್ತಲಿನ ಅಭಾಗ್ಯರ ನೋವಿನ ಪರಿವೆ,
ಅವನನ್ನುತ್ತಾನೆ ಅನ್ಯರು ಹೇಗಿದ್ದರೇನು, ನಾ ಮಾತ್ರ ಹೀಗೆ ಇರುವೆ;
ಉಳ್ಳವರಿಗೆ ಕಾರಣಗಳೇ ಬೇಕಿಲ್ಲ, ತಮ್ಮ ಹರುಷದ ಪ್ರದರ್ಶನಕ್ಕೆ,
ಇಲ್ಲದವರಿಗೆ ಕಾರಣಗಳಿಲ್ಲ, ತಮ್ಮ ನೋವುಗಳ ಮರೆಯುವುದಕ್ಕೆ;
ನಡೆಯಲಾಗದವರಿಗೆ ಊರುಗೋಲಾಗಿ, ನಾವೇ ನಡೆಸೋಣ ಮುಂದೆ,
ಅಳುವವರ ಕಣ್ಣೀರ ಒರೆಸಿ, ಒಂದರೆ ಕ್ಷಣವಾದರೂ ನಗಿಸೋಣ ಇಂದೆ;
ನಮ್ಮ ಪಾಪದ ಕೊಡ ತುಂಬುತ್ತಲೇ ಸಾಗಿದೆ, ನಮಗರಿವಿಲ್ಲದಂತೆಯೇ,
ತುಂಬಲಾದಷ್ಟು ತುಂಬೋಣ ಪುಣ್ಯದ ಕೊಡವ, ನಮ್ಮ ಕೈಲಾದಂತೆಯೇ;
ನಮ್ಮೊಂದಿಗೆ ನಗುವವರ ಸಂಖ್ಯೆ, ಹೆಚ್ಚುತ್ತಾ ಬರಲಿ ದಿನದಿಂದ ದಿನಕ್ಕೆ,
ಅಳುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಗಲಿ, ದಿನದಿಂದ ದಿನಕ್ಕೆ;
ನಿನ್ನೆಯವರೆಗೆ ನಗದವರು, ಈ ಹೊಸ ವರುಷದಲಿ ನಗುವಂತವರಾಗಲಿ,
ನಿನ್ನೆಯವರೆಗೆ ನಡೆಯದವರು, ಇನ್ನು ಮುಂದೆ ಎದ್ದು ಓಡುವವರಂತಾಗಲಿ.
*-*-*-*








