- ಗುರು ಬಬ್ಬಿಗದ್ದೆ
ನಾ ನಡೆವ ಹಾದಿಯಲಿ ಕಲ್ಲು ಮುಳ್ಳುಗಳಿರದಿರಲಿ
ಸೃಷ್ಟಿ ಸೊಬಗಿನ ಚೆಲುವೆ ಆಡುತಿರಲಿ
ಸಂತೋಷದಿ ಹೂವು ಬಿರಿಯುತಿರಲಿ ೧ ನಾ ನಡೆವ ಹಾದಿಯಲಿತೆಂಗು ಕಂಗುಗಳೆಲ್ಲ ಕಂಗೊಳಿಸುತಿರಲಿ
ಗಿಡವೆಲ್ಲ ಮರವಾಗಿ ಹಸುರಾಗಲಿ
ಸಜ್ಜನರ ಪಾಲಿಗದು ಉಸಿರಾಗಲಿ ೨
ನಾ ನಡೆವ ಹಾದಿಯಲಿಪ್ರೀತಿ ಪಸರಿಸಲಿ
ವಾತ್ಸಲ್ಯದ ಮೂರ್ತಿ ಎಚ್ಚೆತ್ತು ಬರಲಿ
ಭ್ರಾತೃತ್ವದ ಕಂಪು ಇಂಪಾಗಿ ಹರಡಲಿ ೩
ನಾ ನಡೆವ ಹಾದಿಯಲಿಬಡತನವು ಇರದಿರಲಿ
ಸಿರಿತನವು ತನ್ನ ಮಿತಿ ಮೀರದಿರಲಿ
ಸಮಾನತೆಯ ಬದುಕು ಮೂಡಿ ಬರಲಿ ೪
ನಾ ನಡೆವ ಹಾದಿಯಲಿಹಿಂಸೆಗಳು ಅಳಿಯಲಿ
ದ್ವೇಷಕ್ಕೆ ಶಾಂತಿಯು ಬೆಳಕಾಗಲಿ
ಮನಸುಗಳ ಬೆಸೆಯುವ ಸರಪಳಿಯಾಗಲಿ ೫
ನಾ ನಡೆವ ಹಾದಿಯಲಿಸಾಹಿತ್ಯದ ಧ್ವನಿಯು ಕೇಳಿ ಬರಲಿ
ಕವಿ ಪುಂಗವರ ಕವನ ಹಾಡಾಗಲಿ
ನನ್ನ ಉನ್ನತಿಗೆ ಮಾರ್ಗದರ್ಶನವಾಗಲಿ ೬
ನಾ ನಡೆವ ಹಾದಿಯಲಿಎಲ್ಲರೂ ಬರಲಿ
ಅದು ಮನುಜ ಪಥವಾಗಲಿ
ವಿಶ್ವ ಮಾನವ ಪಥಕೆ ನುಡಿಯಾಗಲಿ ೭








