- ಅರ್ಶದ್ ಹುಸೇನ್, ಶಾರ್ಜಾ
ಶಾರ್ಜಾ ಕರ್ನಾಟಕ ಸಂಘದ ಐದನೆಯ ವಾರ್ಷಿಕೋತ್ಸವ ಕಳೆದ ಶುಕ್ರವಾರ ರಾತ್ರಿ ವಿಭಿನ್ನ ರೀತಿಯಲ್ಲಿ ನಡೆದು ಅಭೂತಪೂರ್ವ ಯಶಸ್ಸು ಕಂಡಿತು. ಯು.ಎ.ಇ.ಯಲ್ಲಿ ಪ್ರಥಮ ಬಾರಿಗೆ ಕನ್ನಡಪರ ಕಾರ್ಯಕ್ರಮವೊಂದನ್ನು ತೆರೆದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಪ್ರಖರ ಹೊನಲು ಬೆಳಕು, ಸುಸಜ್ಜಿತ ವೇದಿಕೆ, ಸ್ವಾದಿಷ್ಟ ಉಪಾಹಾರ ಸಹಿತ ಹಚ್ಚಹಸುರಿನ ಶಾರ್ಜಾ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಸಮಾರಂಭ ನೆರೆದ ಐನೂರಕ್ಕೂ ಹೆಚ್ಚಿನ ಕನ್ನಡಿಗರಲ್ಲಿ ರೋಮಾಂಚನ ಮೂಡಿಸಿತ್ತು.
ಈ ಕಾರ್ಯಕ್ರಮಕ್ಕೆಂದೇ ವಿಶೇಷವಾಗಿ ಆಗಮಿಸಿದ್ದ ಕನ್ನಡದ ಖ್ಯಾತ ಗಾಯಕಿ ಶ್ರೀಮತಿ ಬಿ.ಆರ್. ಛಾಯಾ ಹಾಗೂ ಖ್ಯಾತ ರಂಗಕಲಾವಿದ ಶ್ರೀ ಕಾಸರಗೋಡು ಚಿನ್ನಾ ಅವರು ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕಾರ್ಯಕ್ರಮವನ್ನು ಅವಿಸ್ಮರಣೀಯವನ್ನಾಗಿಸುವಲ್ಲಿ ತಮ್ಮ ಕಾಣಿಕೆ ನೀಡಿದರು. ಕುಮಾರಿ ಪ್ರಶೋಭಿತ ವೇದಿಕೆಯಲ್ಲಿ ಸ್ಪಷ್ಟಕನ್ನಡದಲ್ಲಿ ನಿರೂಪಣೆ ನೀಡುವ ಮೂಲಕ ಮುಂದೆ ಸಮರ್ಥವಾಗಿ ಕಾರ್ಯಕ್ರಮ ನಿರೂಪಿಸುವ ಎಲ್ಲಾ ಭರವಸೆಗಳನ್ನು ನೀಡಿದ್ದಾಳೆ. ನವಪೀಳಿಗೆಗೆ ಕನ್ನಡ ಕಲಿಸಿ ಎಂಬ ಸಂದೇಶವನ್ನು ಹೊತ್ತ ಸುಂದರವೇದಿಕೆ ವಿದೇಶೀ ಕನ್ನಡಿಗರ ಕಳಕಳಿಯನ್ನು ಸಾರಿ ಹೇಳುತ್ತಿತ್ತು.
ಪ್ರಶೋಭಿತಾ ಮತ್ತು ಅಶ್ವಿನ್ ಸುಬ್ರಹ್ಮಣ್ಯ ಹಾಡಿದ ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.
ಮನಸೂರೆಗೊಂಡ ನೃತ್ಯಗಳು, ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಅಂಬಲ್ತೆರೆ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈ ಯವರ ಭಾಷಣಗಳು, ಕಿರುನಾಟಕಗಳು, ವಿಶೇಷವಾಗಿ ರೂಪಾ ಹಾಗೂ ದಿವ್ಯಾ ನಡೆಸಿಕೊಟ್ಟ ಭಾಗ್ಯದ ಬಳೆಗಾರ ನೃತ್ಯ ಮತ್ತು ಕಾಸರಗೋಡು ಚಿನ್ನಾ ಮತ್ತು ಸ್ಥಳೀಯ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ಮೂಕಾಭಿನಯ ಜನಮನ ರಂಜಿಸಿದ್ದವು.
ಶಾರ್ಜಾ ಕರ್ನಾಟಕ ಸಂಘದ ಪ್ರತಿವರ್ಷ ಕೊಡಮಾಡಿಕೊಂಡು ಬರುತ್ತಿರುವ ಪ್ರತಿಷ್ಠಿತ "ಮಯೂರ ಪ್ರಶಸ್ತಿ"ಯನ್ನು ಶ್ರೀ ಬಿ.ಜಿ.ಮೋಹನದಾಸ್ ಅವರಿಗೆ ಅರ್ಹವಾಗಿ ಪ್ರದಾನಿಸಲಾಯಿತು. ಬೀಜಿ ಎಂದೇ ಆತ್ಮೀಯರಿಂದ ಕರೆಸಿಕೊಳ್ಳುವಆಗಿರುವ ಶ್ರೀ ಮೋಹನದಾಸ್ ಅವರ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಕನ್ನಡ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗಾಗಿ ಅವಿರೋಧವಾಗಿ ಅವರ ಆಯ್ಕೆಯಾಗಿತ್ತು. ಶ್ರೀ ಮೋಹನದಾಸ್ ದಂಪತಿಗಳಿಗೆ ಸಂಘದ ಪೋಷಕರಾದ ಶ್ರೀ ಮಾರ್ಕ್ ಡೆನ್ನಿಸ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಶ್ರೀ ಶೇಖರ್ ಬಾಬು ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ ಹಾಗೂ ಇನ್ನಿತರ ಗಣ್ಯರ ಸಮಕ್ಷಮದಲ್ಲಿ ಪ್ರದಾನಿಸಲಾಯಿತು. ಶ್ರೀ ಮಾರ್ಕ್ ಡೆನ್ನಿಸ್ ಅವರು ಪ್ರಶಸ್ತಿ ವಿಜೇತರಿಗೆ ಕನ್ನಡದ ಪೇಟ ತೊಡಿಸಿದರು. ಸನ್ಮಾನಿಸಿದರು. ಶ್ರೀ ಸರ್ವೋತ್ತಮ ಶೆಟ್ಟಿಯವರು ಶಾಲು, ಶ್ರೀ ಸುಜಯ್ ಬೆಂದೂರ್ ದಂಪತಿಗಳು ಹಾರ ತೊಡಿಸಿದರೆ, ಕಾರ್ಯದರ್ಶಿ ಶ್ರೀ ಶಾಂತಾರಾಮ್ ಆಚಾರ್ ಅವರು ಸನ್ಮಾನ ಪತ್ರ ವಾಚಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಅಂಬಲ್ತೆರೆಯವರು "ಮಯೂರ ಪ್ರಶಸ್ತಿ ಫಲಕ"ವನ್ನು ಪ್ರದಾನಿಸಿದರು.
ಮಯೂರ ಪ್ರಶಸ್ತಿ ವಿಜೇತರಾದ ಶ್ರೀ ಬಿ.ಜಿ.ಮೋಹನದಾಸ್ ಅವರು ಸನ್ಮಾನಕ್ಕೆ ಉತ್ತರಿಸುತ್ತಾ ತಮಗೆ ಸಿಕ್ಕ ಈ ಪ್ರಶಸ್ತಿ ತಮಗೆ ಮಾತ್ರವಲ್ಲದೆ ತಮ್ಮ ಕೆಲಸಗಳಿಗೆ ಸರಿಸಮನಾಗಿ ಹೆಗಲುಕೊಟ್ಟು ಸಹಕರಿಸಿದ ಅರ್ಧಾಂಗಿಯವರಿಗೂ ಸಲ್ಲಬೇಕೆಂದು ಭಾವುಕರಾಗಿ ನುಡಿದರು.
ಕಾರ್ಯಕ್ರಮದಲ್ಲಿ ಇನ್ನೂ ಹಲವಾರು ಕನ್ನಡಿಗರನ್ನು ಅವರ ಸಾಧನೆಗಳಿಗಾಗಿ ಸನ್ಮಾನಿಸಲಾಯಿತು. ಪ್ರಮುಖವಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಶೇಖರ್ ಬಾಬು ಶೆಟ್ಟಿ, ರೋಟೇರಿಯನ್ ಪಿ.ಎಚ್.ಎಫ್ ಹಾಗೂ ಖ್ಯಾತ ಪತ್ರಕರ್ತ ಶ್ರೀ ಪುಂಡಲೀಕ ಮರಾಠೆ, ಗಲ್ಫ್ ಯಕ್ಷಗಾನ ಕಲಾವಿದ ಚಿದಾನಂದ ಪೂಜಾರಿ ದಂಪತಿಗಳು, ಬ್ಯಾರಿ ಕವಿ ಹನೀಫ್ ಪರ್ಲಿಯಾರ್, ಕರ್ನಾಟಕದಿಂದ ಆಗಮಿಸಿರುವ ಕಲಾವಿದರಾದ ಶ್ರೀ ಕಾಸರಗೋಡು ಚಿನ್ನಾ ಮತ್ತು ಶ್ರೀಮತಿ ಬಿ.ಆರ್. ಛಾಯಾ ಮತ್ತು ಪದ್ಮಪಾಣಿ ದಂಪತಿಗಳಿಗೆ ಸಂಘದ ಸಂಪ್ರದಾಯದಂತೆ ಫಲ, ಪುಷ್ಪ, ಸನ್ಮಾನಪತ್ರ, ಹಾಗೂ ಫಲಕಗಳೊಂದಿಗೆ ಸನ್ಮಾನಿಸಲಾಯಿತು.
ತಮ್ಮ ಅಧ್ಯಕ್ಷಭಾಷಣದಲ್ಲಿ ಶ್ರೀ ಪ್ರಭಾಕರ ಅಂಬಲ್ತೆರೆಯವರು ಯು.ಎ.ಇ.ಯಲ್ಲಿರುವ ಎಲ್ಲಾ ಕನ್ನಡ ಸಂಘಗಳು ಜೊತೆಗೂಡಿ ಒಂದಾಗಿ ಕಾರ್ಯನಿರ್ವಹಿಸುವಂತೆ ಕರೆನೀಡಿದರು. ಅನಿವಾಸಿ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ನೀಡಬೇಕಾದ ಸವಲತ್ತುಗಳಿಗೆ ಆದ್ಯತೆ ನೀಡುವಲ್ಲಿ ಸರ್ಕಾರದ ಗಮನ ಸೆಳೆಯಬೇಕು ಎಂದು ಭಾವುಕರಾಗಿ ನುಡಿದರು.
ಎಂದಿನ ತಮ್ಮ ಆತ್ಮೀಯ ಶೈಲಿಯಲ್ಲಿ ಸಂಘದ ಕಾರ್ಯದರ್ಶಿಯಾಗಿರುವ ಶ್ರೀ ಶಾಂತಾರಾಮ್ ಆಚಾರ್ ರವರು ವಾರ್ಷಿಕ ಕಲಾಪಗಳ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದು ಪ್ರಮುಖವಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಹಿರಿಯ ಕೊಂಕಣಿ ನಾಯಕ ಬಸ್ತಿ ವಾಮನ ಶಣೈ, ಉದ್ಯಮಿ ಶ್ರೀ ಅಶೋಕ್ ಶೆಟ್ಟಿ, ಡಾ. ಶ್ಯಾಮ್ ಸುಂದರ್, ಹೋಟೆಲ್ ಉದ್ಯಮಿ ಪ್ರವೀಣ್ ಕುಮಾರ್ ಹಾಗೂ ಮೈಸೂರ್ ಪ್ಯಾಲೇಸ್ ರೆಸ್ಟೋರೆಂಟ್ ಮಾಲಿಕರಾದ ಶ್ರೀ ಎಸ್.ಎಸ್.ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಥಳೀಯ ಕಲಾವಿದರು ಹಾಗೂ ಕಾಸರಗೋಡು ಚಿನ್ನಾ ಅವರ ಅನುಭವೀ ನಿರ್ದೇಶನ ಸೇರಿದರೆ ಏನಾಗಬಹುದೆಂಬುದಕ್ಕೆ ನಡೆದ ಮನರಂಜನಾ ಕಾರ್ಯಕ್ರಮಗಳೇ ಸಾಕ್ಷಿ. ಕಾಸರಗೋಡು ಚಿನ್ನಾ ಅವರ ಅಲ್ಪಕಾಲದ ತರಬೇತಿಯಿಂದ ಸ್ಥಳೀಯ ಕಲಾವಿದರು ಪ್ರದರ್ಶಿದ ಮೂಕಾಭಿನಯ ಎಲ್ಲರ ಮನಸೆಳೆಯಿತು. ಸುಮಧುರವಾಗಿ ಹಾಡಬಲ್ಲ ಸ್ಥಳೀಯ ಶ್ರೀ ರವಿರಾಜ್ ತಂತ್ರಿಯವರು ಅನೇಕ ಹಾಡುಗಳನ್ನು ಹಾಡಿ ರಂಜಿಸಿದರು.
ಇನ್ನೋರ್ವ ಸ್ಥಳೀಯ ಗಾಯಕರಾದ ಶ್ರೀ ಡೋನಾಲ್ಡ್ ಅವರೂ ತಮ್ಮ ಪ್ರತಿಭೆ ಮೆರೆದರು. ಬಿ.ಆರ್. ಛಾಯಾ ಅವರೊಡನೊಡಗೂಡಿ ನೀಡಿದ ಸುಗಮ ಸಂಗೀತ, ಹಾಗೂ ಇನ್ನಿತರ ಹಾಡುಗಳು ವೀಕ್ಷಕರ ಮನಸೂರೆಗೊಂಡವು. ಭಾಗ್ಯದ ಬಳೆಗಾರ ಹಾಡನ್ನು ನೃತ್ಯರೂಪಕ ನೀಡಿದ ರೂಪಾ ಹಾಗೂ ದಿವ್ಯಾ ಅವರೂ ತಮ್ಮ ಪ್ರತಿಭೆ ಮೆರೆದರು. ಕಿಶೋರರಾದ ಜತಿನ್, ತನ್ವಿ, ಕೃತಿ ಹಾಗೂ ಖುಷಿ ಯವರಿಂದ ನಡೆದ ಚಂದಾಮಾಮಾ ಬಾ ನೃತ್ಯರೂಪಕವೂ ಜನಮನಸೆಳೆಯಿತು. ಶೈಲಜಾ ಯಾದವ ಕೋಟ್ಯಾನ್, ರಕ್ಷಾ ಶಿವಚಂದ್ರ, ಸುಪ್ರಿಯಾ ವಿನೋದ ಕಾಂಚನ್, ನಂದಿತಾ ಸುನಿಲ್, ಸುಚೇತಾ ದೀಪಕ್ ಆಮೀನ್ ಹಾಗೂ ಶಶಿಕಲಾ ಸುಂದರ್ ಕಾಂಚನ್ ಅವರ ತಂಡವು ಲವಲವಿಕೆಯಿಂದ ನರ್ತಿಸಿದ ತೇರು ನೃತ್ಯರೂಪಕ ಅತ್ಯಂತ ಸುಂದರವಾಗಿ ಮೂಡಿಬಂದಿತು.
ಕಾರ್ಯಕ್ರಮದ ನಿರೂಪಣೆ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈ ಯವರು ನಡೆಸಿಕೊಟ್ಟರು. ಇವರಿಗೆ ನಿರೂಪಣೆಯಲ್ಲಿ ಪ್ರಶೋಭಿತಾ ಅಂಬಲ್ತೆರೆ, ಪ್ರಭಾಕರ ಶೆಣೈ ಹಾಗೂ ಸ್ವರ್ಣ ಸತೀಶ್ ಪೂಜಾರಿಯವರು ಬೆಂಬಲ ನೀಡಿದರು. ಶ್ರೀ ಪ್ರಭಾಕರ ಶೆಣೈಯವರು ವಂದನಾರ್ಪಣೆ ಸಲ್ಲಿಸಿದರು.
ಡಿಸೆಂಬರ್ ತಿಂಗಳ ಚುಮು ಚುಮು ಚಳಿಯಲ್ಲಿಯೂ ಆಗಮಿಸಿದ್ದ ಐನೂರಕ್ಕೂ ಹೆಚ್ಚಿನ ಸಂಖ್ಯೆಯ ಕನ್ನಡಿಗರು ಕಾರ್ಯಕ್ರಮದಲ್ಲಿ ಕಡೆಯವರೆಗೂ ಪ್ರಸ್ತುತರಿದ್ದು ಯಶಸ್ವಿಗೊಳಿಸಿದರು.
ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರ ಸಹಿತ ಪರೋಕ್ಷವಾಗಿ ನೆರವಾದ ಎಲ್ಲರೂ ಈ ಯಶಸ್ಸಿಗಾಗಿ ಅಭಿನಂದನಾರ್ಹರು. ಮನರಂಜನಾ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿದ್ದ ಶ್ರೀ ವಿಶ್ವನಾಥ ಶೆಟ್ಟಿಯವರು ಕಾಸರಗೋಡು ಚಿನ್ನಾ ಮೂಕಾಭಿನಯನದ ತಂಡದಲ್ಲಿಯೂ ಪಾತ್ರ ವಹಿಸಿ ತಮ್ಮ ಪ್ರತಿಭೆ ಮೆರೆದರು.
ಶ್ರೀಮತಿ ಬಿ.ಆರ್. ಛಾಯಾ ಅವರ ಅನೇಕ ಕನ್ನಡ ಹಾಡುಗಳು ನೆರೆದವರ ಮನಸೂರೆಗೊಂಡವು. ಶ್ರೀ ಕಾಸರಗೋಡು ಚಿನ್ನಾ ಅವರ ಹಾಸ್ಯಲಹರಿ ನೆರೆದವರನ್ನು ನಗೆಗಡಲಿನಲ್ಲಿ ಮುಳುಗಿಸಿದವು. ಇತ್ತೀಚೆಗೆ ಉಡುಪಿಯಲ್ಲಿ ನಡೆದ ೭೪ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀ ಪುಂಡಲೀಕ ಮರಾಠೆಯವರು ಉಡುಪಿಯಿಂದ ಆಗಮಿಸಿದ್ದು ಶಾರ್ಜಾ ಕನ್ನಡ ಸಂಘ ಈ ಹಿಂದೆ ಪ್ರಸ್ತಾವಿಸಿದ್ದ ಅನಿವಾಸಿ ಕನ್ನಡಿಗರ ಸಮಸ್ಯೆಗಳ ಪರಿಶೀಲನೆ ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸುವಭರವಸೆ ನೀಡಿದರು. ಉಡುಪಿಯಿಂದ ವಿಶೇಷವಾಗಿ ತನ್ನೊಂದಿಗೆ ತಂದಿದ್ದ ನೆನಪಿನ ಕಾಣಿಕೆಯನ್ನೂ ಅವರು ಶ್ರೀ ಶೇಖರಶೆಟ್ಟಿಯವರ ಮುಖಾಂತರ ಸಂಘದ ಅಧ್ಯಕ್ಷರಿಗೆ ನೀಡಿದರು.
ಶ್ರೀ ಗಣೇಶ್ ರೈಯವರು ತಮ್ಮ ಭಾಷಣದಲ್ಲಿ ತಿಳಿಸಿದಂತೆ ಚಳಿಯ ನೆಪ ಹೂಡಿ ಕಂಬಳಿ ಹೊದ್ದು ಮಲಗಿ ಈ ಕಾರ್ಯಕ್ರಮಕ್ಕೆ ಬರದೇ ಇದ್ದವರು ನತದೃಷ್ಟರು.
(ಮೇಲಿನ ಫೋಟೋ ಕ್ಲಿಕ್ಕಿಸಿದರೆ ಪೂರ್ಣಪ್ರಮಾಣದ ಫೋಟೋ ತೆರೆದುಕೊಳ್ಳುತ್ತದೆ)








