ಮಿತ್ರರೇ,
ಕನ್ನಡಧ್ವನಿಯ ಹೊಸ ರೂಪ ಪ್ರಾರಂಭವಾದ ಮೇಲೆ ಸುದ್ದಿ ಸಂಚಿಕೆಯ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಹಲವಾರು ಬಾರಿ ಯೋಚಿಸಿದ್ದೆ. ಮೊದಮೊದಲು ನೋಂದಾವಣೆ ಮಾಡಿಕೊಂಡ ಸದಸ್ಯರ ಸಂಖ್ಯೆ ಬೆಳೆಯಲಿ ಎಂದುಕೊಂಡಿದ್ದರೆ ಆ ಮೇಲೆ ಇತರ ಹಲವಾರು ಕಾರಣಗಳು. ಅಂತೂ ಇಂತೂ ಕಾಲ ಕೂಡಿ ಬಂದಿರಲಿಲ್ಲ. ಇವತ್ತು ಮೊದಲ ಸುದ್ದಿ ಸಂಚಿಕೆ ಹೊರಡಿಸಿಯೇ ಬಿಡೋಣ ಎಂದುಕೊಂಡಿದ್ದೇನೆ.
ಸತತವಾಗಿ ನಾಲ್ಕು ವರ್ಷಗಳಿಂದ ಪ್ರತೀ ಶುಕ್ರವಾರ ಪ್ರಕಟವಾದಾಗಲೂ ನಮ್ಮನ್ನು ಓದಿ ಪ್ರೋತ್ಸಾಹಿಸುವ ನಮ್ಮ ಓದುಗರ ಸಂಖ್ಯೆ ಹೆಚ್ಚಿದೆ. ಆದರೆ ಅವರ ಆಕಾಂಕ್ಷೆಯನ್ನು ಮೀರಿ ಬೆಳೆಯುವ ನಿಟ್ಟಿನಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಉತ್ತಮ ವೈವಿಧ್ಯದ ಲೇಖನಗಳನ್ನು ಕೊಡುವಲ್ಲಿ ಇತ್ತೀಚೆಗೆ ನಾವು ಯಶಸ್ವಿಯಾಗಿಲ್ಲ. ಕಳೆದ ಕೆಲವೊಂದು ವಾರಗಳಿಂದ ಬರೇ ನಾಲ್ಕೈದು ಜನರು ಬರೆಯುತ್ತಿದ್ದೇವೆ. ನೂರಕ್ಕೂ ಮಿಕ್ಕಿ ಲೇಖಕರಿರುವ ನಮ್ಮಂತಹ ವಾರ ಪತ್ರಿಕೆಗೆ ವಾರಕ್ಕೆ ಐದು ಅಥವಾ ಆರು ಉತ್ತಮ ವೈವಿಧ್ಯ ಲೇಖನಗಳನ್ನು ಕೊಡಲು ಸಾಧ್ಯವಾಗುತ್ತಿಲ್ಲ. ಇಂದಿಗೂ ಮೇಲಿಂದ ಮೇಲೆ ಬರೆಯುತ್ತಿರುವ ಮಿತ್ರರ ಬರವಣಿಗೆಯೂ ಓದುಗರಿಗೆ ಮಾಮೂಲಾಗಿ "ಸಪ್ಪೆ" ಎನಿಸುವ ದಿನಗಳೂ ಬರಬಹುದು. ಅದಕಾಗಿ ನಮ್ಮೆಲ್ಲರ ಲೇಖಕ ಮಿತ್ರರಿಗೆ ನನ್ನ ವಿನಂತಿ ಇಷ್ಟೇ - ಕನ್ನಡಧ್ವನಿಯ ವೈವಿಧ್ಯಕ್ಕೆ ನಿಮ್ಮ ಕೊಡುಗೆ ಬೇಕು.
ಕನ್ನಡಧ್ವನಿಯಲ್ಲಿ ಬರೆಯುವುದರಿಂದ ನಮಗೇನು ಪ್ರಯೋಜನ ಎಂದು ಕೇಳುವವರು ಸಾಚಾ ಆಗಿದ್ದರೆ ಉತ್ತರ ನನ್ನಲ್ಲಿದೆ. ಭಾಷೆಯ ಬಳಕೆಯಿಂದ ಮಾತ್ರ ನಮ್ಮಲ್ಲಿ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯ. ಇವತ್ತು ಎಲ್ಲೆಡೆ ಅವಗಣನೆಗೊಳಗಾಗುತ್ತಿರುವ ನಮ್ಮ ಸ್ವಂತ ಭಾಷೆಯನ್ನು ನಮ್ಮಲ್ಲಿ ಉಳಿಸಿಕೊಳ್ಳಬೇಕು ಎಂಬ ಹಂಬಲವಿದ್ದವರಿಗೆ ತಮಗೆ ಪ್ರಭುತ್ವ ಇರುವ ಯಾವುದೇ ವಿಷಯದ ಮೇಲೆ ಸ್ವತಂತ್ರವಾಗಿ ಬರೆಯುವ ಅವಕಾಶ ನಮ್ಮಲ್ಲಿದೆ. ಬರವಣಿಗೆ ಅಂದರೆ ಕಥೆ ಕವನ ಕಾದಂಬರಿ ಅನ್ನುವುದು ತಪ್ಪು ಕಲ್ಪನೆ. ವಿಭಿನ್ನ ವಿಷಯಗಳ ಮೇಲೆ ಪಾಂಡಿತ್ಯ ಪೂರ್ಣವಾದ ಲೇಖನಗಳೂ ಅಪಾರವಾದ ಓದುಗರನ್ನು ಆಕರ್ಷಿಸುತ್ತವೆ. ನಿಜ ಹೇಳಬೇಕಿದ್ದರೆ ಇಂತಹ ಲೇಖನಗಳೇ ಪತ್ರಿಕೆಯ ಶೋಭೆ ಹೆಚ್ಚಿಸುತ್ತವೆ!
ನಮ್ಮಲ್ಲಿ ಬರೆಯಲು ಆರಂಭಿಸಿ. ನಿಮ್ಮಿಷ್ಟದ ವಿಷಯದ ಮೇಲೆ ನಿಮಗಿಷ್ಟವಾದ ರೀತಿಯ ಲೇಖನ ಬರೆಯಿರಿ- ನಾವು ಅದನ್ನು ಪ್ರಕಟಿಸುತ್ತೇವೆ. ನಮ್ಮ ಓದುಗರೂ ಆ ಬಗ್ಗೆ ನಿಮ್ಮನ್ನು ಅಭಿನಂದಿಸುತ್ತಾರೆ.
ಎಲ್ಲಕ್ಕೂ ಮಿಗಿಲಾಗಿ ಬರೆಯುವ ಮತ್ತು ಓದುವ ನಮ್ಮೆಲ್ಲರ ಕನ್ನಡ ಮರೆತುಹೋಗುವುದಿಲ್ಲ!
ಇತಿ ವಂದನೆಗಳೊಂದಿಗೆ,
ಗೋಪೀನಾಥ ರಾವ್



